
ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಬಾಯ್ ಮೇಲೆ ಹಲ್ಲೆ; ವೈರಲ್ ವಿಡಿಯೋ ಆಧರಿಸಿ ಪೊಲೀಸರಿಂದ ಎಫ್ಐಆರ್
ಘಟನೆಯ ವಿಡಿಯೋ ಜನವರಿ 9ರಂದು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬೆಂಗಳೂರಿನ ಕಗ್ಗದಾಸಪುರದಲ್ಲಿ ಜೆಪ್ಟೋ ಡೆಲಿವರಿ ಬಾಯ್ ಒಬ್ಬನ ಮೇಲೆ ಇಬ್ಬರು ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಹಲ್ಲೆಕೋರರ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಜನವರಿ 4ರಂದು ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಜೆಪ್ಟೋ ಸಂಸ್ಥೆಯ ಡೆಲಿವರಿ ಬಾಯ್ ದೀಪಕ್ ಕುಮಾರ್ ಎಂಬುವರು ಕಗ್ಗದಾಸಪುರದ 29ನೇ ಕ್ರಾಸ್ನಲ್ಲಿರುವ ಗೋಡೌನ್ನಿಂದ ಆರ್ಡರ್ ಪಡೆದು ಹೊರಬಂದಿದ್ದರು. ಜಂಕ್ಷನ್ ಬಳಿ ಅವರು ಬಲತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ, ಎದುರುಗಡೆಯಿಂದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸವಾರರು ತಕ್ಷಣ ಬ್ರೇಕ್ ಹಾಕಿದ ಪರಿಣಾಮ ರಸ್ತೆಗೆ ಬಿದ್ದಿದ್ದರು. ಈ ಅಪಘಾತಕ್ಕೆ ದೀಪಕ್ ಕುಮಾರ್ ಕಾರಣವೆಂದು ಆರೋಪಿಸಿದ ಸವಾರರು, ಅವರ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಲು ಆರಂಭಿಸಿದರು.
ಅಮಾನುಷ ಹಲ್ಲೆ
ರಸ್ತೆಗೆ ಬಿದ್ದಿದ್ದ ಇಬ್ಬರು ವ್ಯಕ್ತಿಗಳು ದೀಪಕ್ ಕುಮಾರ್ ಅವರ ಮುಖಕ್ಕೆ ಕೈಯಿಂದ ಗುದ್ದಿದ್ದಲ್ಲದೆ, ಅವರನ್ನು ರಸ್ತೆಗೆ ಕೆಡವಿ ಕಾಲಿನಿಂದ ಮನಬಂದಂತೆ ತುಳಿದಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದರೂ ಸಹ, ಹಲ್ಲೆಕೋರರು ಕೆಳಗೆ ಬಿದ್ದಿದ್ದ ಡೆಲಿವರಿ ಬಾಯ್ ಮೇಲೆ ಮತ್ತೆ ಕಾಲಿನಿಂದ ಒದ್ದು ಹಲ್ಲೆ ಮುಂದುವರಿಸಿದ್ದರು. ಈ ಮೂಲಕ ಆರೋಪಿಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿ ಶಾಂತಿ ಭಂಗ ಉಂಟುಮಾಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೈರಲ್ ವಿಡಿಯೋ ಮತ್ತು ಪೊಲೀಸ್ ಕ್ರಮ
ಈ ಇಡೀ ಘಟನೆಯ ವಿಡಿಯೋ ಜನವರಿ 9ರಂದು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ಹಲ್ಲೆ ನಡೆಸಿದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.

