Reality Check:  ಗಿಗ್ ವರ್ಕರ್ಸ್​ ಮುಷ್ಕರದ ನಡುವೆಯೂ 10 ನಿಮಿಷದಲ್ಲಿ ಫುಡ್ ಡೆಲಿವರಿ!
x

Reality Check: ಗಿಗ್ ವರ್ಕರ್ಸ್​ ಮುಷ್ಕರದ ನಡುವೆಯೂ 10 ನಿಮಿಷದಲ್ಲಿ ಫುಡ್ ಡೆಲಿವರಿ!

ಗಿಗ್‌ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವ ನಡುವೆಯೂ 'ದ ಫೆಡರಲ್ ಕರ್ನಾಟಕ' ಆಹಾರಕ್ಕೆ ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ (The federal Karnataka Reality Check) ಡೆಲಿವರಿ ಬಾಯ್​​ ತಲುಪಿಸಿಕೊಟ್ಟಿದ್ದಾರೆ.


Click the Play button to hear this message in audio format

ಹೊಸ ವರ್ಷದ ಸ್ವಾಗತಕ್ಕೆ ಇಡೀ ಸಿಲಿಕಾನ್ ಸಿಟಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ, ಇತ್ತ ಗಿಗ್ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ಸಹಜವಾಗಿಯೇ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಆತಂಕವನ್ನು ಮೂಡಿಸಿತ್ತು. ಆಹಾರ ಪೂರೈಕೆ, ದಿನಸಿ ಹಾಗೂ ಸಾರಿಗೆ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಈ ಮುಷ್ಕರದ ನಡುವೆಯೂ ಬೆಂಗಳೂರಿನ ರಸ್ತೆಗಳಲ್ಲಿ ಡೆಲಿವರಿ ಸೇವೆಗಳು ಸರಾಗವಾಗಿದೆ ಎಂಬುದು ದ ಫೆಡರಲ್​ ಕರ್ನಾಟಕ ಮಾಡಿರುವ ರಿಯಾಲಿಟಿ ಚೆಕ್​ನಲ್ಲಿ ಬಹಿರಂಗೊಂಡಿದೆ.

ಹತ್ತೇ ನಿಮಿಷದಲ್ಲಿ ತಲುಪಿದ ಆರ್ಡರ್: ಅಚ್ಚರಿಯ ರಿಯಾಲಿಟಿ ಚೆಕ್

ಈ ಮುಷ್ಕರದ ಕರೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಪರೀಕ್ಷಿಸಲು ‘ದ ಫೆಡರಲ್ ಕರ್ನಾಟಕ’ ತಂಡವು ಬುಧವಾರ ಬೆಳಿಗ್ಗೆ ಒಂದು ರಿಯಾಲಿಟಿ ಚೆಕ್ ನಡೆಸಿತು. ಡೆಲಿವರಿ ಆಪ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಮತ್ತು ಗ್ರಾಹಕರಿಗೆ ಸೇವೆ ವಿಳಂಬವಾಗುತ್ತಿದೆಯೇ ಎಂದು ತಿಳಿಯಲು ಜೆಪ್ಟೋ (Zepto) ಆಪ್ ಮೂಲಕ ಆಹಾರವನ್ನು ಆರ್ಡರ್ ಮಾಡಲಾಯಿತು. ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿರುವ ಈ ಸಂದರ್ಭದಲ್ಲಿ ಆರ್ಡರ್ ಸ್ವೀಕೃತವಾಗುವುದೇ ಅನುಮಾನ ಎನ್ನುವಂತಿತ್ತು. ಆದರೆ, ಎಲ್ಲರ ಅಚ್ಚರಿಗೆ ಎಂಬಂತೆ ಆರ್ಡರ್ ನೀಡಿದ ಕೇವಲ ಹತ್ತೇ ನಿಮಿಷಗಳಲ್ಲಿ ಡೆಲಿವರಿ ಪಾರ್ಟ್‌ನರ್ ‘ದ ಫೆಡರಲ್’ ಕಚೇರಿಯ ಬಾಗಿಲಿಗೆ ಆಹಾರ ತಲುಪಿಸಿದ್ದರು. ಮುಷ್ಕರದ ಬಿಸಿ ಡೆಲಿವರಿ ವೇಗಕ್ಕೆ ಕಿಂಚಿತ್ತೂ ಅಡ್ಡಿಯಾದಂತೆ ಕಾಣದಿರುವುದು ವಿಶೇಷವಾಗಿತ್ತು.

ಸಂಘಟನೆಗಳ ಹೋರಾಟ ಮತ್ತು ಆಫ್‌ಲೈನ್ ಪ್ರತಿಭಟನೆಯ ಸವಾಲು

ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೊ, ಜೆಪ್ಟೋ ಮತ್ತು ಬ್ಲಿಂಕ್ಲಿಟ್‌ನಂತಹ ಪ್ರಮುಖ ಸಂಸ್ಥೆಗಳ ಡೆಲಿವರಿ ಪಾರ್ಟ್‌ನರ್‌ಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.

ಆ್ಯಪ್ ಆಧಾರಿತ ನೌಕರರ ಸಂಘದ ಅಧ್ಯಕ್ಷ ಇನಾಯತ್ ಅಲಿ ಅವರು ಈ ಪರಿಸ್ಥಿತಿಯನ್ನು ವಿಭಿನ್ನವಾಗಿ ವಿವರಿಸುತ್ತಾರೆ. ಅವರ ಪ್ರಕಾರ, ಇದೊಂದು ‘ಆಫ್‌ಲೈನ್’ ಪ್ರತಿಭಟನೆಯಾಗಿದ್ದು, ಕಾರ್ಮಿಕರು ಬೀದಿಗಿಳಿದು ಗದ್ದಲ ಮಾಡುವ ಬದಲು ಮನೆಯಲ್ಲೇ ಉಳಿದು ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಳೆದಿದ್ದಾರೆ. ಬಹುತೇಕ ಕಾರ್ಮಿಕರು ಈ ಹೋರಾಟಕ್ಕೆ ಕೈಜೋಡಿಸಿದ್ದರೂ, ನಗರದ ಕೆಲವು ಭಾಗಗಳಲ್ಲಿ ಕೆಲವರು ಒಗ್ಗಟ್ಟು ಮೀರಿ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೇಡಿಕೆಗಳ ಹಿಂದಿದೆ ಸಂಕಟ

ಗಿಗ್ ಕಾರ್ಮಿಕರು ಇಂತಹ ನಿರ್ಣಾಯಕ ಸಮಯದಲ್ಲಿ ಮುಷ್ಕರಕ್ಕೆ ಮುಂದಾಗಿರುವುದರ ಹಿಂದೆ ದಶಕದ ನೋವು ಅಡಗಿದೆ. ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದರೂ ಕಂಪನಿಗಳು ನೀಡುವ ಡೆಲಿವರಿ ದರಗಳಲ್ಲಿ ಹೆಚ್ಚಳವಾಗಿಲ್ಲ ಎಂಬುದು ಅವರ ಪ್ರಮುಖ ಅಸಮಾಧಾನ. ಇದರೊಂದಿಗೆ ಕನಿಷ್ಠ ಆದಾಯದ ಭರವಸೆ, ಅಪಘಾತ ಸಂಭವಿಸಿದಾಗ ಸಿಗಬೇಕಾದ ವಿಮೆ ಹಾಗೂ ಯಾವುದೇ ಮುನ್ಸೂಚನೆ ನೀಡದೆ ಐಡಿಗಳನ್ನು ಬ್ಲಾಕ್ ಮಾಡುವ ಕಂಪನಿಗಳ ಧೋರಣೆಯ ವಿರುದ್ಧ ಕಾರ್ಮಿಕರು ಧ್ವನಿ ಎತ್ತಿದ್ದಾರೆ. ನಗರದ ವೇಗದ ಬದುಕಿಗೆ ಅನಿವಾರ್ಯವಾಗಿರುವ ಈ ಕಾರ್ಮಿಕರು, ತಮ್ಮ ಸಾಮಾಜಿಕ ಭದ್ರತೆಗಾಗಿ ಹೋರಾಟ ನಡೆಸುತ್ತಿದ್ದಾರೆ.

ಗಿಗ್ ಆರ್ಥಿಕತೆಯ ಮೇಲೆ ಹೊರೆ

ಭಾರತದ ಗಿಗ್ ಆರ್ಥಿಕತೆಯು ಒಂದು ಸಂಕೀರ್ಣ ಹಂತಕ್ಕೆ ಬಂದು ನಿಂತಿರುವುದು ಸ್ಪಷ್ಟ. ಒಂದೆಡೆ ತಂತ್ರಜ್ಞಾನದ ನೆರವಿನಿಂದ ಹತ್ತು ನಿಮಿಷದಲ್ಲಿ ಸೇವೆ ನೀಡುವ ‘ಕ್ವಿಕ್ ಕಾಮರ್ಸ್’ ಕ್ರಾಂತಿ ನಡೆಯುತ್ತಿದ್ದರೆ, ಇನ್ನೊಂದೆಡೆ ಆ ವೇಗದ ಹಿಂದಿರುವ ಮಾನವ ಸಂಪನ್ಮೂಲವು ಅಸುರಕ್ಷಿತ ಭಾವನೆಯಿಂದ ಬಳಲುತ್ತಿದೆ. ಕಾರ್ಮಿಕರ ಮೂಲಭೂತ ಬೇಡಿಕೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಕಂಪನಿಗಳು ಮತ್ತು ಕಾರ್ಮಿಕರ ನಡುವಿನ ಈ ಹಗ್ಗಜಗ್ಗಾಟವು ಮುಂದಿನ ದಿನಗಳಲ್ಲಿ ಗ್ರಾಹಕ ಸೇವೆಗ ವ್ಯತ್ಯಯಕ್ಕೆ ಕಾರಣವಾಗಲಿದೆ.

Read More
Next Story