ಪೀರಿಯಡ್ಸ್‌ ಅಂದ್ರೂ ಬಿಡಲ್ಲ...ಸತ್ರೂ ಕೇಳಲ್ಲ...ಇದು ಗಿಗ್‌ ನೌಕರರ ನೋವಿನ ಕಥೆ!
x
ಗಿಗ್‌ ಕಾರ್ಮಿಕರ ಮುಷ್ಕರ

ಪೀರಿಯಡ್ಸ್‌ ಅಂದ್ರೂ ಬಿಡಲ್ಲ...ಸತ್ರೂ ಕೇಳಲ್ಲ...ಇದು ಗಿಗ್‌ ನೌಕರರ ನೋವಿನ ಕಥೆ!

ದೇಶವ್ಯಾಪಿ ಹೊಸ ವರ್ಷದ ಮುನ್ನಾದಿನದಂದು ಗಿಗ್ ವರ್ಕರ್ಸ್ ಬೃಹತ್ ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮುಷ್ಕರದ ಕಾವು ಹೇಗಿದೆ? ಇಲ್ಲಿದೆ ʻದ ಫೆಡರಲ್‌ ಕರ್ನಾಟಕʼದ ರಿಯಾಲಿಟಿ ಚೆಕ್‌.


Click the Play button to hear this message in audio format

ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸ್ವಿಗ್ಗಿ, ಜೊಮ್ಯಾಟೊ, ಓಲಾ, ಜೆಪ್ಟೋ, ಬ್ಲಿಂಕ್ಲಿಟ್‌ ಮತ್ತು ಉಬರ್‌ನಂತಹ ಸಂಸ್ಥೆಗಳ ಗಿಗ್ ವರ್ಕರ್ಸ್ (Gig Workers) ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಗಿಗ್‌ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಸೂದೆಯೊಂದನ್ನು ಪರಿಚಯಿಸಿತ್ತು. ಈ ಮಸೂದೆ ಸದನದಲ್ಲಿ ಅಂಗೀಕಾರಗೊಂಡಿತ್ತು. ಇನ್ನು ರಾಜ್ಯಪಾಲದ ಸಹಿವೊಂದೇ ಬಾಕಿ ಉಳಿದಿರುವುದು. ಹೀಗಿರುವಾಗ ರಾಜ್ಯದಲ್ಲಿ ಗಿಗ್‌ ಕಾರ್ಮಿಕರ ಮುಷ್ಕರ ಹೇಗೆ ನಡೆಯುತ್ತಿದೆ? ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ಹೇಗಿದೆ? ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿರುವುದರಿಂದ ನಗರದ ಹಲವೆಡೆ ಡೆಲಿವರಿ ಸೇವೆಗಳಲ್ಲಿ ಯಾವ ರೀತಿಯ ವ್ಯತ್ಯಯ ಉಂಟಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ʻದ ಫೆಡರಲ್‌ ಕರ್ನಾಟಕʼ ರಿಯಾಟಿಲಿ ಚೆಕ್‌

ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗಿಗ್‌ ಕಾರ್ಮಿಕರ ಮುಷ್ಕರದ ಕಾವು ಹೇಗಿದೆ ಎಂಬ ಬಗ್ಗೆ ʻದ ಫೆಡರಲ್‌ ಕರ್ನಾಟಕʼ ರಿಯಾಲಿಟಿ ಚೆಕ್‌ ಮಾಡಿದೆ. ZEPTO ಆಪ್‌ನಲ್ಲಿ ಇಂದು ಬೆಳ್ಳಗ್ಗೆ ಮಾಡಲಾಗಿದ್ದ ಫುಡ್‌ ಆರ್ಡರ್‌ ಕೇವಲ ಹತ್ತೇ ನಿಮಿಷದಲ್ಲಿ ಡೆಲಿವರಿ ಆಗಿದೆ. ಹೀಗಾಗಿ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ಇರುವಂತೆ ಕಾಣುತ್ತಿದೆ.












ಗಿಗ್‌ ನೌಕರರ ಸಂಘ ಹೇಳಿದ್ದೇನು?

ಇನ್ನು ಈ ಮುಷ್ಕರದ ಬಗ್ಗೆ ಆಪ್‌ ಆಧರಿತ ನೌಕರರ ಸಂಘದ ಅಧ್ಯಕ್ಷ ಇನಾಯತ್‌ ಅಲಿ ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ್ದು, ಗಿಗ್‌ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟಿದ್ದೇವೆ. ನಮ್ಮದು ಬೀದಿಗಿಳಿದು ಹೋರಾಡುವ ಪ್ರತಿಭಟನೆ ಅಲ್ಲ. ಬದಲಾಗಿ ಇದು ಆಫ್‌ಲೈನ್‌ ಪ್ರತಿಭಟನೆ. ಮನೆಯಲ್ಲೇ ಕುಳಿತು ಸೇವೆ ಸ್ಥಗಿತಗೊಳಿಸಿ ಮುಷ್ಕರ ಮಾಡುತ್ತಿದ್ದೇವೆ. ನಮ್ಮ ಸರಳ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.

ಕಾರ್ಮಿಕರ ಕಷ್ಟ ಒಂದೆರಡಲ್ಲ

ಇನ್ನು ʻದ ಫೆಡರಲ್‌ ಕರ್ನಾಟಕʼದ ಜೊತೆ ಗಿಗ್‌ ಕಾರ್ಮಿಕರು ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಮ್ಮ ಗುರುತು ಬಯಲಾದರೆ ಕಂಪನಿ ತಮ್ಮ ಐಡಿಯನ್ನು ಬ್ಲಾಕ್‌ ಮಾಡುವ ಭೀತಿಯಿಂದಾಗಿ ಮಾಸ್ಕ್‌ ಹಾಕಿಕೊಂಡೇ ಕಾರ್ಮಿಕರು ಪ್ರತಿಕ್ರಿಯೆ ನೀಡಿದ್ದಾರೆ. ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ಮಹಿಳಾ ಕಾರ್ಮಿಕರು, ಕಂಪನಿಯವರು ಹಾಕುತ್ತಿರುವ ಒತ್ತಡದಿಂದಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿರುವುದಾಗಿ ಕಣ್ಣೀರಿಟ್ಟಿದ್ದಾರೆ. "ಋತುಚಕ್ರದ ಸಂದರ್ಭದಲ್ಲೂ 12-14 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೇ ಯಾವುದೇ ಸುರಕ್ಷತೆಯೂ ಇಲ್ಲ. ಕನಿಷ್ಠ ಸೌಲಭ್ಯಗಳೂ ಇಲ್ಲ. ಪ್ರಶ್ನಿಸಲು ಹೋದರೆ ಗೇಟ್‌ ಬಳಿಯೇ ಬೌನ್ಸರ್‌ಗಳು ತಡೆದು ಆವಾಜ್‌ ಹಾಕುತ್ತಾರೆ. ಅವರ ಮನೆಯ ಹೆಣ್ಣು ಮಕ್ಕಳನ್ನು ಹೀಗೆಯೇ ನಡೆಸಿಕೊಳ್ಳುತ್ತಾರೆಯೇ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿಗ್‌ ಕಾರ್ಮಿಕರ ಬೇಡಿಕೆ ಏನು?

ಕನಿಷ್ಠ ವೇತನ ನಿಗದಿ: ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದರೂ ಡೆಲಿವರಿ ದರಗಳಲ್ಲಿ ಹೆಚ್ಚಳವಾಗಿಲ್ಲ. ಆದ್ದರಿಂದ ಪ್ರತಿ ಆರ್ಡರ್‌ಗೆ ಕನಿಷ್ಠ ವೇತನ ನಿಗದಿಪಡಿಸಬೇಕು ಎಂಬುದು ಕಾರ್ಮಿಕರ ಮುಖ್ಯ ಬೇಡಿಕೆ.

ಸಾಮಾಜಿಕ ಭದ್ರತೆ: ಕೆಲಸದ ವೇಳೆ ಅಪಘಾತ ಸಂಭವಿಸಿದರೆ ವಿಮೆ ಸೌಲಭ್ಯ ಮತ್ತು ವೈದ್ಯಕೀಯ ನೆರವು ನೀಡಬೇಕು.

ಕೆಲಸದ ಅವಧಿ ಮತ್ತು ಒತ್ತಡ: ದಿನಕ್ಕೆ 12-14 ಗಂಟೆಗಳ ಕಾಲ ಕೆಲಸ ಮಾಡಿದರೂ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಕಂಪನಿಗಳು ಅನಗತ್ಯವಾಗಿ ಐಡಿ (ID) ಬ್ಲಾಕ್ ಮಾಡುವುದನ್ನು ನಿಲ್ಲಿಸಬೇಕು.

ಕಾನೂನು ರಕ್ಷಣೆ: ಕರ್ನಾಟಕ ಸರ್ಕಾರವು ಗಿಗ್ ವರ್ಕರ್ಸ್‌ಗಳ ರಕ್ಷಣೆಗಾಗಿ ತರಲು ಉದ್ದೇಶಿಸಿರುವ ವಿಶೇಷ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಗ್ರಾಹಕರ ಮೇಲೆ ಪರಿಣಾಮ?

ಮುಷ್ಕರದ ಹಿನ್ನೆಲೆಯಲ್ಲಿ ಕೋರಮಂಗಲ, ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊ ಸೇವೆಗಳು ವಿಳಂಬವಾಗುತ್ತಿವೆ. ಕೆಲವು ಕಡೆ ಡೆಲಿವರಿ ಪಾರ್ಟ್‌ನರ್‌ಗಳು ಲಭ್ಯವಿಲ್ಲ ಎಂಬ ಸಂದೇಶಗಳು ಆಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಗಿಗ್‌ ಕಾರ್ಮಿಕರು ಪ್ರತಿಭಟನೆಗೆ ಕರೆ ಕೊಟ್ಟಿರುವುದು ಹೊಸ ವರ್ಷದ ಸಂಭ್ರಮಕ್ಕೆ ಅಡ್ಡಿಯಾದಂತಿದೆ. ಹೊಸ ವರ್ಷದ ಮುನ್ನಾದಿನದಂದು (New Year’s Eve) ಆಹಾರ ವಿತರಣೆ, ದಿನಸಿ ಆರ್ಡರ್‌ಗಳು ಮತ್ತು ಕೊನೆಯ ಕ್ಷಣದ ಶಾಪಿಂಗ್‌ಗಳ ಮೇಲೆ ಈ ಮುಷ್ಕರವು ತೀವ್ರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಪುಣೆ, ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳು ಸೇರಿದಂತೆ ಹಲವು ಎರಡನೇ ಹಂತದ (Tier-2) ಮಾರುಕಟ್ಟೆಗಳಲ್ಲಿ ಈ ವ್ಯತ್ಯಯ ಉಂಟಾಗಲಿದೆ. ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯ ಹಾಗೂ ತಡರಾತ್ರಿಯಗಳಲ್ಲಿ ಆಪ್‌ಗಳಿಂದ ಲಾಗ್-ಆಫ್ ಆಗಲು ಅಥವಾ ಲಭ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಲು ನಿರ್ಧರಿಸಿದ್ದಾರೆ.

ಗಿಗ್‌ ಕಾರ್ಮಿಕರ ಪರ ಧ್ವನಿ ಎತ್ತಿದ್ದ ರಾಹುಲ್‌ ಗಾಂಧಿ
ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸ್ವಿಗ್ಗಿ, ಜೊಮ್ಯಾಟೊ, ಓಲಾ ಮತ್ತು ಉಬರ್‌ನಂತಹ ಸಂಸ್ಥೆಗಳ ಗಿಗ್ ಕಾರ್ಮಿಕರ (Gig Workers) ಪರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸತತವಾಗಿ ದನಿಯೆತ್ತುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಪ್ರವಾಸದ ಸಂದರ್ಭದಲ್ಲಿ ಅವರು ಡೆಲಿವರಿ ರೈಡರ್‌ಗಳ ಜೊತೆ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಾ ಅವರ ಸಮಸ್ಯೆಗಳನ್ನು ಆಲಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ರಾಹುಲ್ ಗಾಂಧಿ ವಾದವೇನಿತ್ತು?

ಕಾನೂನು ರಕ್ಷಣೆ: ಗಿಗ್ ವರ್ಕರ್ಸ್‌ಗಳನ್ನು ಕೇವಲ 'ಡೆಲಿವರಿ ಪಾರ್ಟ್‌ನರ್ಸ್‌' ಎಂದು ಕರೆಯುವ ಬದಲಿಗೆ ಅವರಿಗೆ 'ಕಾರ್ಮಿಕರ' ಸ್ಥಾನಮಾನ ನೀಡಿ, ಕಾನೂನು ರಕ್ಷಣೆ ಒದಗಿಸಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

ಸಾಮಾಜಿಕ ಭದ್ರತೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿಗೆ ತಂದಿದ್ದ 'ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆʼ ಮಾದರಿಯನ್ನು ದೇಶಾದ್ಯಂತ ಜಾರಿಗೆ ತರಬೇಕು. ಇದರಲ್ಲಿ ಪಿಂಚಣಿ, ವಿಮೆ ಮತ್ತು ಆರೋಗ್ಯ ಸೌಲಭ್ಯಗಳು ಒಳಗೊಂಡಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅನಿಶ್ಚಿತತೆ: "ಈ ಕಾರ್ಮಿಕರು ಮಳೆ, ಬಿಸಿಲೆನ್ನದೆ ದುಡಿಯುತ್ತಾರೆ, ಆದರೆ ಅವರ ಭವಿಷ್ಯಕ್ಕೆ ಯಾವುದೇ ಭದ್ರತೆ ಇಲ್ಲ. ಕಂಪನಿಗಳು ಲಕ್ಷಾಂತರ ಕೋಟಿ ಲಾಭ ಮಾಡುತ್ತಿವೆ, ಆದರೆ ಶ್ರಮಿಕರ ಸ್ಥಿತಿ ಚಿಂತಾಜನಕವಾಗಿದೆ" ಎಂದು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಂವಾದ

ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್‌ಗಳ ಜೊತೆ ಬೈಕ್‌ನಲ್ಲಿ ಸಂಚರಿಸಿದ್ದ ರಾಹುಲ್ ಗಾಂಧಿ, ಅವರ ವೇತನ ಕಡಿತ, ಪೆಟ್ರೋಲ್ ವೆಚ್ಚ ಮತ್ತು ಕಂಪನಿಗಳ ಕಠಿಣ ನಿಯಮಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗಿಗ್ ವರ್ಕರ್ಸ್‌ಗಳಿಗಾಗಿ ವಿಶೇಷ ವಿಮಾ ಯೋಜನೆ ಮತ್ತು ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವ ಭರವಸೆ ನೀಡಿತ್ತು.

ಗಿಗ್‌ ಕಾರ್ಮಿಕರಿಗಾಗಿಯೇ ಮಸೂದೆ

ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ (ಸ್ವಿಗ್ಗಿ, ಜೊಮ್ಯಾಟೊ, ಓಲಾ, ಉಬರ್ ಮುಂತಾದ ಆಪ್ ಆಧಾರಿತ ಕಾರ್ಮಿಕರು) ಹಿತರಕ್ಷಣೆಗಾಗಿ ಜಾರಿಗೆ ತರಲು ಉದ್ದೇಶಿಸಿರುವ "ಕರ್ನಾಟಕ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ" ಮಂಡಿಸಿದೆ. ಈ ಮಸೂದೆ ಈಗಾಗಲೇ ಸದನದಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿದೆ. ರಾಜ್ಯಪಾಲರ ಅಂಕಿತ ದೊರೆಯಬೇಕಿದೆ.

ಭಾರತದಲ್ಲೇ ಇಂತಹದೊಂದು ಕಾನೂನನ್ನು ರೂಪಿಸಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಶೋಷಣೆಯನ್ನು ತಡೆಯುವುದು ಮತ್ತು ಕಾರ್ಮಿಕರಿಗೆ ಘನತೆಯ ಬದುಕು ನೀಡುವುದು ಈ ಮಸೂದೆಯ ಮುಖ್ಯ ಉದ್ದೇಶ.

ಮಸೂದೆಯ ಪ್ರಮುಖ ಅಂಶಗಳು:

ಸಾಮಾಜಿಕ ಭದ್ರತಾ ನಿಧಿ: ಅಗ್ರಿಗೇಟರ್ ಕಂಪನಿಗಳಿಂದ (ಸ್ವಿಗ್ಗಿ, ಜೊಮ್ಯಾಟೊ ಇತ್ಯಾದಿ) ಪ್ರತಿ ವಹಿವಾಟಿನ ಮೇಲೆ ನಿರ್ದಿಷ್ಟ ಸೆಸ್ (Cess) ಸಂಗ್ರಹಿಸಿ, ಅದನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲು ಪ್ರತ್ಯೇಕ ನಿಧಿ ಸ್ಥಾಪನೆ.

ಕಲ್ಯಾಣ ಮಂಡಳಿ: ಗಿಗ್ ಕಾರ್ಮಿಕರ ದೂರುಗಳನ್ನು ಆಲಿಸಲು ಮತ್ತು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರದ ನೇತೃತ್ವದಲ್ಲಿ 'ಗಿಗ್ ವರ್ಕರ್ಸ್ ಕಲ್ಯಾಣ ಮಂಡಳಿ' ರಚನೆ.

ಅಪಘಾತ ಮತ್ತು ಆರೋಗ್ಯ ವಿಮೆ: ಕೆಲಸದ ಅವಧಿಯಲ್ಲಿ ಅಪಘಾತ ಸಂಭವಿಸಿದರೆ ವೈದ್ಯಕೀಯ ವೆಚ್ಚ ಮತ್ತು ಜೀವ ವಿಮಾ ಸೌಲಭ್ಯ ಒದಗಿಸುವುದು.

ಕಿರುಕುಳ ತಡೆ ಮತ್ತು ಪಾರದರ್ಶಕತೆ: ಕಂಪನಿಗಳು ಅನಿಯಂತ್ರಿತವಾಗಿ ಕಾರ್ಮಿಕರ ಐಡಿ (ID) ಬ್ಲಾಕ್ ಮಾಡುವಂತಿಲ್ಲ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಕಾರ್ಮಿಕರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು.

ಕನಿಷ್ಠ ವೇತನ ಮತ್ತು ಕೆಲಸದ ಪರಿಸ್ಥಿತಿ: ಕೆಲಸದ ಅವಧಿ ಮತ್ತು ಅವರಿಗೆ ನೀಡುವ ಸಂಭಾವನೆಯಲ್ಲಿ ಪಾರದರ್ಶಕತೆ ಇರಬೇಕು.

Read More
Next Story