ಗಿಗ್‌ ಕಾರ್ಮಿಕರ ಮಸೂದೆ ಅಂಗೀಕಾರ; ರಾಹುಲ್‌ ಗಾಂಧಿಗೆ‌ ಗಿಫ್ಟ್ ನೀಡಿದ‌ ಕಾಂಗ್ರೆಸ್ ಸರ್ಕಾರ
x

ಸಾಂದರ್ಭಿಕ ಚಿತ್ರ

ಗಿಗ್‌ ಕಾರ್ಮಿಕರ ಮಸೂದೆ ಅಂಗೀಕಾರ; ರಾಹುಲ್‌ ಗಾಂಧಿಗೆ‌ ಗಿಫ್ಟ್ ನೀಡಿದ‌ ಕಾಂಗ್ರೆಸ್ ಸರ್ಕಾರ

ರಾಹುಲ್‌ಗಾಂಧಿ ಹಿತಾಸಕ್ತಿಯ ಮೇಲೆ ರೋಹಿತ್‌ ವೇಮುಲ ಕಾಯ್ದೆ ಮತ್ತು ಗಿಗ್‌ ಕಾರ್ಮಿಕರ ವಿಧೇಯಕ ಜಾರಿ ಮಾಡಿದ ರಾಜ್ಯ ಸರ್ಕಾರ. ಸಂಬಂಧಿಸಿದ ಸಂಸ್ಥೆಗಳಿಂದ ಶೇ.5 ರಷ್ಟು ಸೆಸ್ ಸಂಗ್ರಹಿಸಿ ಹಣ ಸಂಗ್ರಹ


ಕಾಲೇಜುಗಳಲ್ಲಿ ಕಿರುಕುಳ ತಡೆಯುವ ಸಂಬಂಧ ರೋಹಿತ್‌ ವೇಮುಲ ಕಾಯ್ದೆ ಅಂಗೀಕಾರ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ವ ಹೆಜ್ಜೆ ಇಟ್ಟು ಗಿಗ್‌ ಕಾರ್ಮಿಕರ ರಕ್ಷಣೆಗಾಗಿ ಕರ್ನಾಟಕ ವೇದಿಕೆ ಆಧಾರಿತ ಗಿಗ್‌ ಕಾರ್ಮಿಕರ ವಿಧೇಯಕವನ್ನು ಅನುಮೋದಿಸಿದೆ. ಈ ಎರಡು ಕಾಯ್ದೆಗಳು ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿಯ ಆಸಕ್ತಿಯ ಮೇಲೆ ಅನುಷ್ಠಾನಗೊಳಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು. ಅಲ್ಲದೇ, ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ರಾಹುಲ್‌ ಗಾಂಧಿ ಚರ್ಚೆಯ ಬಳಿಕ ಸಿದ್ದರಾಮಯ್ಯ ಅವರು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನಿಸಿದ್ದರು. ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಯಿತು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಸೂದೆಯನ್ನು ಸಂಪುಟದ ಮುಂದೆ ಇರಿಸಿ, ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಯಿತು. ಇದೀಗ ಸದನದಲ್ಲಿ ವಿಧೇಯಕಕ್ಕೆ ರೂಪುರೇಷೆಗಳನ್ನು ರೂಪಿಸಿ ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡರು. ರಾಹುಲ್‌ಗಾಂಧಿ ಜತೆ ಚರ್ಚೆಯ ವೇಳೆ ಗಿಗ್‌ ಕಾರ್ಮಿಕರ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸಿದ್ದರು. ಈ ಎಲ್ಲಾ ಅಂಶಗಳನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಸಂಸ್ಥೆಗಳಿಂದ ಶೇ.5 ರಷ್ಟು ಸೆಸ್ ಸಂಗ್ರಹ

ಗಿಗ್‌ ಕಾರ್ಮಿಕರ ಬಗ್ಗೆ ರಾಹುಲ್‌ ಗಾಂಧಿ ಅವರು ವಿಶೇಷವಾಗಿ ಕಾಳಜಿ ಹೊಂದಿದ್ದಾರೆ. ರಾಜಸ್ಥಾನದಲ್ಲಿ ಬಂದ ಮಸೂದೆಗಿಂತ ಹೆಚ್ಚಿನ ಅಧ್ಯಯನ ಮಾಡಿ ನಾವು ಈವರೆಗೆ ಮೂವತ್ತಕ್ಕೂ ಹೆಚ್ಚು ಸಭೆಗಳನ್ನು ಮಾಡಲಾಗಿದೆ. ಗಿಗ್‌ ಕಾರ್ಮಿಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಇದೆ. ಸಂಬಂಧಿತ ಸಂಸ್ಥೆಗಳಿಂದ ಶೇ.5 ರಷ್ಟು ಸೆಸ್ ಸಂಗ್ರಹಿಸುವುದು ಮತ್ತು ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ಉದ್ಯೋಗಿ, ಉದ್ಯೋಗದಾತ, ಕೈಗಾರಿಕಾ ವಿವಾದ ಅಥವಾ ಪ್ಲಾಟ್‌ ಫಾರಂನವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಈ ಮಸೂದೆ ಉದ್ದೇಶ ಯಾರು ಗಿಗ್‌ ವಲಯದಲ್ಲಿ ಕೆಲಸ ಮಾಡುತ್ತಾರೆ ಅವರಿಗೆ ಅನುಕೂಲ ಮಾಡಿಕೊಡುವುದಾಗಿದೆ.

ದೇಶಕ್ಕೆ ಬಂದ ಹೊಸ ಪರಿಕಲ್ಪನೆ:

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವವರು ಗಿಗ್ ಕಾರ್ಮಿಕರಾಗಿದ್ದಾರೆ. ವಿದೇಶಗಳಲ್ಲಿ ಈಗಾಗಲೇ ಅಂತಹ ಕಾಯ್ದೆ ಜಾರಿಯಲ್ಲಿದೆ. ವಾಣಿಜ್ಯ ವೇದಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆ ಕಾಯ್ದುಕೊಳ್ಳುವುದು ಸಹ ಸರ್ಕಾರದ ಜವಾಬ್ದಾರಿ. ಈ ಹೊಸ ಪರಿಕಲ್ಪನೆಯು ದೇಶಕ್ಕೂ ಬಂದಿದೆ. ನೀತಿ ಆಯೋಗದ ಪ್ರಕಾರ, 23.5 ಮಿಲಿಯನ್ ಕಾರ್ಮಿಕರು ಗಿಗ್‌ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ. ಕರ್ನಾಟಕದಲ್ಲಿ 4 ಲಕ್ಷ ಗಿಗ್ ಕಾರ್ಮಿಕರಿದ್ದಾರೆ. ಹೆಚ್ಚಿನ ಗಿಗ್ ಕಾರ್ಮಿಕರು ಸಂಚಾರ ದಟ್ಟಣೆ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವಿರುವ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲಿನ್ಯದಿಂದಾಗಿ ಹಲವು ಗಿಗ್ ಕಾರ್ಮಿಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯ ಸರ್ಕಾರವು ಅವರಿಗೆ 2 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯನ್ನು ವಿಧೇಯಕ ಮೂಲಕ ಒದಗಿಸಲಾಗುತ್ತದೆ. ಗಿಗ್ ವೇದಿಕೆಯಡಿಯಲ್ಲಿ ಈಗಾಗಲೇ 10,560 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.

ಯಾರೆಲ್ಲ ಗಿಗ್ ಕಾರ್ಮಿಕರು?

ಪ್ಲಾಟ್‌ಫಾರ್ಮ್ ಆಧರಿತ ಸೇವೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಸ್ವಿಗ್ಗಿ, ರೋಮ್ಯಾಟೋ, ಅಗ್ರಿಗೇಟರ್‌ಗಳಾದ ಓಲಾ, ಊಬರ್ ಸೇರಿ ರೈಡ್ ಶೇರಿಂಗ್ ಸರ್ವಿಸಸ್, ಫುಡ್ ಆ್ಯಂಡ್ ಗ್ರಾಸರಿ ಡಿಲೆವರಿ ಸರ್ವಿಸಸ್, ಲಾಜಿಸ್ಟಿಕ್ ಸರ್ವಿಸಸ್, ಇ-ಮಾರ್ಕೆಟ್, ಹೆಲ್ತ್ ಕೇರ್, ಟ್ರಾವೆಲ್ ಆ್ಯಂಡ್ ಹಾಸ್ಪಿಟಾಲಿಟಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.

ಸಚಿವರ ಅಧ್ಯಕ್ಷತೆಯಲ್ಲಿ ಮಂಡಳಿ:

ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚನೆ ಮಾಡಲಾಗುತ್ತದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಅಥವಾ ಸರ್ಕಾರದ ಜಂಟಿ ಕಾರ್ಯದರ್ಶಿ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿ ಸದಸ್ಯರಾಗಿದ್ದರಾಗಿದ್ದಾರೆ. ಇವರೊಂದಿಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಅಥವಾ ಜಂಟಿ ಆಯುಕ್ತರ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿಯೂ ಸಹ ಸದಸ್ಯರಾಗಿರುತ್ತಾರೆ. ಸರ್ಕಾರ ನೇಮಿಸಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯು ಕಾರ್ಯದರ್ಶಿಯಾಗಿರುತ್ತಾರೆ. ಸರ್ಕಾರ ನಾಮನಿರ್ದೇಶಿಸುವ ಗಿಗ್‌ ಕಾರ್ಮಿಕರ ನಾಲ್ವರು ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

ದ ಫೆಡರಲ್‌ ಕರ್ನಾಟಕ ಜತೆಗೆ ಮಾತನಾಡಿದ ಸ್ವಿಗ್ಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಜಿ.ಗಣೇಶ್‌ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ ಸ್ವಾಗತಾರ್ಹವಾಗಿದೆ. ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಕಾಯ್ದೆ ತಂದಿರುವುದು ಒಳ್ಳೆಯ ಬೆಳವಣಿಗೆ. ಇದು ನಮ್ಮಂತಹ ಕಾರ್ಮಿಕ ರಕ್ಷಣೆಗೆ ಸಹಕಾರಿಯಾಗಲಿದೆ. ಆದರೆ ಕೆಲವೊಂದು ಅಂಶಗಳ ಬಗ್ಗೆ ಸರ್ಕಾರ ಗಮನವಹಿಸಬೇಕು. ಗಿಗ್‌ ಕಾರ್ಮಿಕರಿಗೆ ಕೆಲಸದ ಸಮಯವನ್ನು ಸರ್ಕಾರ ನಿಗದಿಪಡಿಸಬೇಕು. ಇದರಿಂದ ಕುಟುಂಬಕ್ಕೂ ಸಮಯ ನೀಡಲು ಸಹಕಾರಿಯಾಗಲಿದೆ. ಕಾರ್ಮಿಕರಿಗೆ ಯಾವುದೇ ಸಮಯದ ನಿಗದಿ ಇಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮಿಸಲಾಗುತ್ತದೆ. ಸಮಯದ ನಿಗದಿ ಮಾಡುವುದರಿಂದ ಆರೋಗ್ಯದ ಬಗ್ಗೆಯೂ ಗಮನ ಹರಿಸಲು ಸಹಕಾರಿಯಾಗಲಿದೆ ಎಂದರು.

ರಾಹುಲ್‌ಗಾಂಧಿ ಏನು ಹೇಳಿದ್ದರು?

ಫ್ಲಾಟ್‌ಫಾರ್ಮ್‌ ಆಧಾರಿತ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಕಾನೂನು ಜಾರಿಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಶ್ಲಾಘಿಸಿದ್ದರು. ದೇಶದ ಪ್ರತಿ ರಾಜ್ಯಕ್ಕೂ ಪಕ್ಷದ ದೃಷ್ಟಿಕೋನ ಇದಾಗಿದೆ ಎಂದು ಹೇಳಿದ್ದರು.

‘ರೇಟಿಂಗ್ ನಹಿ, ಹಕ್ ಚಾಹಿಯೇ’ ‘ಇನ್ಸಾನ್ ಹೈ ಹಮ್, ಗುಲಾಮ್ ನಹಿ’. ಗಿಗ್ ಕಾರ್ಮಿಕರ ಈ ಪ್ರಬಲ ಮಾತುಗಳು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಉಳಿದವು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗಿಗ್ ಕಾರ್ಮಿಕರ ಹಕ್ಕುಗಳು, ಘನತೆ ಮತ್ತು ರಕ್ಷಣೆಯನ್ನು ಖಾತರಿಪಡಿಸುವ ಕ್ರಮವು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದು ನಮ್ಮ ದೃಷ್ಟಿಕೋನ ಮತ್ತು ನಾವು ಅದನ್ನು ಪ್ರತಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೊಂಡೊಯ್ಯುತ್ತೇವೆ. ಈ ಕಾರ್ಮಿಕರು ನಮಗೆ ಆಹಾರವನ್ನು ತರುತ್ತಾರೆ, ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ ಮತ್ತು ಸೆಕೆ, ಚಳಿ ಮತ್ತು ಮಳೆಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತಾರೆ ಎಂದಿದ್ದರು.

Read More
Next Story