
ಯಲ್ಲಾಪುರ: ಪ್ರೀತಿ ನಿರಾಕರಿಸಿದ ಮಹಿಳೆಯ ಹತ್ಯೆಗೈದ ಆರೋಪಿ ಕಾಡಿನಲ್ಲಿ ನೇಣಿಗೆ ಶರಣು
ಮಹಿಳೆಯ ಕೊಲೆಯಾದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಈ ಕಾರ್ಯಾಚರಣೆಯ ವೇಳೆ ಕಾಜಲವಾಡಾ ಅರಣ್ಯದಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ.
ಪ್ರೀತಿಸುವಂತೆ ಒತ್ತಡ ಹೇರಿ ವಿವಾಹಿತ ಮಹಿಳೆಯನ್ನು ಹತ್ಯೆ ಮಾಡಿದ್ದ ಆರೋಪಿಯು ಪೊಲೀಸರಿಗೆ ಹೆದರಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಪಟ್ಟಣದ ಕಾಳಮ್ಮ ನಗರದ ನಿವಾಸಿ ರಂಜಿತಾ ಬನ್ಸೊಡೆ ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿ ರಫೀಕ್ ಯಳ್ಳೂರ ಎಂಬಾತನೇ ಭಾನುವಾರ ನಸುಕಿನ ಜಾವ ಪಟ್ಟಣದ ಹೊರವಲಯದ ಕಾಜಲವಾಡಾ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮೃತ ರಂಜಿತಾ ಮತ್ತು ಆರೋಪಿ ರಫೀಕ್ ಇಬ್ಬರೂ ಸಹಪಾಠಿಗಳಾಗಿದ್ದರು. ರಂಜಿತಾ ಅವರು ಪತಿಯಿಂದ ವಿಚ್ಛೇದನ ಪಡೆದ ನಂತರ ತನ್ನ ಪುತ್ರನೊಂದಿಗೆ ತಾಯಿ ಮನೆಯಲ್ಲಿ ವಾಸವಿದ್ದರು. ಆದರೆ, ಆರೋಪಿ ರಫೀಕ್ ಆಕೆಯನ್ನು ಪ್ರೀತಿಸುವಂತೆ ಸತತವಾಗಿ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ರಂಜಿತಾ ಅವರನ್ನು ಹತ್ಯೆ ಮಾಡಿದ್ದ ಎಂದು ಯಲ್ಲಾಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯ ಕೊಲೆಯಾದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಈ ಕಾರ್ಯಾಚರಣೆಯ ವೇಳೆ ಕಾಜಲವಾಡಾ ಅರಣ್ಯದಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯು ಪಟ್ಟಣದಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

