
ಕಿರುತೆರೆ ನಟಿ ಆತ್ಮಹತ್ಯೆಗೆ ಟ್ವಿಸ್ಟ್ ಡೈರಿಯಲ್ಲಿ ಅಡಗಿತ್ತು ನಟಿಯ ಸಾವಿನ ರಹಸ್ಯ
ನಂದಿನಿಗೆ ನಟನೆಯಲ್ಲಿ ಅಪಾರ ಆಸಕ್ತಿ ಇತ್ತು, ಆದರೆ ಮನೆಯವರು ಅವರ ಆಸಕ್ತಿಯನ್ನು ಬೆಂಬಲಿಸುತ್ತಿರಲಿಲ್ಲ ಎನ್ನಲಾಗಿದೆ.
ಕನ್ನಡ ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದ ಕಿರುತೆರೆ ನಟಿ ನಂದಿನಿ ಸಿಎಂ (26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯ ವೇಳೆ ನಂದಿನಿ ಬರೆದಿದ್ದ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಹಲವು ನೋವಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
2023ರಲ್ಲಿ ತಂದೆಯ ನಿಧನದ ನಂತರ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸದ ಆಫರ್ ಬಂದಿತ್ತು. ಆದರೆ ನಂದಿನಿಗೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಆ ಕೆಲಸವನ್ನು ನಿರಾಕರಿಸಿದ್ದರು. "ನನಗೆ ಸರ್ಕಾರಿ ಕೆಲಸ ಇಷ್ಟವಿಲ್ಲ, ನಟನೆಯೇ ನನ್ನ ಗುರಿ. ಆದರೆ ಮನೆಯಲ್ಲಿ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ" ಎಂದು ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಪೋಷಕರು ಮದುವೆಗೆ ಒತ್ತಾಯಿಸುತ್ತಿದ್ದರು ಮತ್ತು ತಾವು ಮಾನಸಿಕವಾಗಿ ಅದಕ್ಕೆ ಸಿದ್ಧರಿಲ್ಲದ ಕಾರಣ ಖಿನ್ನತೆಗೆ ಒಳಗಾಗಿದ್ದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಏನು?
ಕಿರುತೆರೆ ನಟಿ ನಂದಿನಿ ಸಿಎಂ ಅವರು ಬೆಂಗಳೂರಿನ ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿರುವ ತಮ್ಮ ಪಿಜಿಯಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಡಿಸೆಂಬರ್ 28ರ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸೋಮವಾರ ಬೆಳಿಗ್ಗೆ ವಿಷಯ ಬೆಳಕಿಗೆ ಬಂದಿದೆ. ನಂದಿನಿ ಅವರು ಎಷ್ಟು ಕರೆ ಮಾಡಿದರೂ ಫೋನ್ ಸ್ವೀಕರಿಸದಿದ್ದಾಗ ಅವರ ಸ್ನೇಹಿತರು ಮತ್ತು ಪಿಜಿ ವ್ಯವಸ್ಥಾಪಕರು ಬಾಗಿಲು ಮುರಿದು ನೋಡಿದಾಗ ಅವರು ಕಿಟಕಿಯ ಗ್ರಿಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಂದಿನಿ ಅವರು ಕನ್ನಡದ ಖ್ಯಾತ ಧಾರಾವಾಹಿಗಳಾದ ‘ಜೀವ ಹೂವಾಗಿದೆ’, ‘ಸಂಘರ್ಷ’, ‘ಮಧುಮಗಳು’ ಮತ್ತು ‘ನೀನಾದೆ ನಾ’ ದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ದುರ್ಗಾ ಮತ್ತು ಕನಕ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ನಾಯಕಿಯಾಗಿ ಮಿಂಚುತ್ತಿದ್ದರು. ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿ ವಿಶ್ರಾಂತಿಗಾಗಿ ಬೆಂಗಳೂರಿಗೆ ಮರಳಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ಆಕೆಯ ಮೃತದೇಹವನ್ನು ಡಿಸೆಂಬರ್ 29ರ ಬೆಳಗಿನ ಜಾವ ಆರ್ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿತ್ತು.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

