Winter Session Government prepares to introduce more than 13 bills, including hate speech
x

ಬೆಳಗಾವಿ ಅಧಿವೇಶನ 

ಚಳಿಗಾಲದ ಅಧಿವೇಶನ| ದ್ವೇಷ ಭಾಷಣ ನಿಯಂತ್ರಣ ಸೇರಿದಂತೆ 10ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ

ಇಂದು ಅಧಿವೇಶನದಲ್ಲಿ 10ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿದೆ. ಪ್ರತಿಪಕ್ಷಗಳು ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಲಿವೆಯೇ ಅಥವಾ ವಿರೋಧ ವ್ಯಕ್ತಪಡಿಸಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.


Click the Play button to hear this message in audio format

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಮೂರನೇ ದಿನ ಕಾಲಿಟ್ಟಿದ್ದು, ಇಂದು 13 ಕ್ಕೂ ಹೆಚ್ಚು ವಿಧೇಯಕಗಳನ್ನು ಸರ್ಕಾರ ಮಂಡಿಸಲಿದೆ. ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಇಂದು ದ್ವೇಷ ಭಾಷಣ ನಿಯಂತ್ರಣ ಸೇರಿದಂತೆ ಹಲವು ವಿಧೇಯಕಗಳನ್ನು ಮಂಡಿಸಿ ಸದನದ ಒಪ್ಪಿಗೆ ಪಡೆಯವ ಸಾಧ್ಯತೆ ಇದ್ದು, ಪ್ರತಿಪಕ್ಷಗಳು ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಲಿವೆಯೇ ಅಥವಾ ವಿರೋಧ ವ್ಯಕ್ತಪಡಿಸಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.

ಬುಧವಾರ(ಡಿ.10) ವಿಧಾನಸಭೆಯ ಸರ್ಕಾರ 13ಕ್ಕೂ ಹೆಚ್ಚು ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಕಾನೂನು ಹಾಗೂ ಸಂಸದಿಯ ಸಚಿವ ಹೆಚ್‌.ಕೆ. ಪಾಟೀಲ್‌ ಸ್ಪೀಕರ್‌ ಮುಂದೆ ಕೆಲವು ಹೊಸ ಹಾಗೂ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ನೀಡುವಂತೆ ಮನವಿ ಮಾಡಲಿದ್ದಾರೆ.

ಯಾವ ಯಾವ ವಿಧೇಯಕಗಳ ಮಂಡನೆ ?

* 2025ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ಮತ್ತು ನಿಯಂತ್ರಣ) ವಿಧೇಯಕ

* 2025ನೇ ಸಾಲಿನ ಶ್ರೀಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ

* 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮರಾಯ ದತ್ತಿಗಳ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ

* 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಾಗ್ರಿ (ಕರ್ನಾಟಕ ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ

* 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ

ಅಧಿವೇಶನದಲ್ಲಿ 13 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದು, ದೀರ್ಘಕಾಲ ಚರ್ಚೆ ನಡೆಸಿ ಎಲ್ಲಾ ವಿಧೇಯಕಗಳಿಗೂ ಸದನದ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.

ಏನಿದು ದ್ವೇಷಭಾಷಣ ವಿಧೇಯಕ ?

ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದ ದ್ವೇಷ ಅಪರಾಧಗಳನ್ನು ನಿಯಂತ್ರಿಸಿ, ನಿಷೇಧಿಸಿ ಮತ್ತು ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಲು ಒಂದು ಪ್ರತ್ಯೇಕ ಮತ್ತು ಸಮಗ್ರ ಕಾನೂನು ಚೌಕಟ್ಟನ್ನು ಒದಗಿಸಲು ರಾಜ್ಯ ಸರ್ಕಾರ ದ್ವೇಷ ಭಾಷಣ ವಿಧೇಯಕವನ್ನು ತರಲು ಸಿದ್ಧತೆ ನಡೆಸಿದೆ. ಕಾನೂನಿನಲ್ಲಿ ದ್ವೇಷ ಭಾಷಣವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಮತ್ತು ಶಿಕ್ಷಿಸುವ ಪ್ರತ್ಯೇಕ ಕಾಯ್ದೆ ಇಲ್ಲದಿರುವ ಕೊರತೆಯನ್ನು ನೀಗಿಸಲು ಈ ವಿಧೇಯಕವನ್ನು ತರಲಾಗುತ್ತಿದೆ.

ದ್ವೇಷ ಭಾಷಣವು ಯಾವುದಾದರೂ ಕಾರಣಗಳಿಂದ ಒಂದು ವ್ಯಕ್ತಿ, ಗುಂಪು, ಅಥವಾ ಸಮುದಾಯದ ವಿರುದ್ಧ ಗಾಯ, ವೈಷಮ್ಯ, ದ್ವೇಷ ಅಥವಾ ದುರುದ್ದೇಶಪೂರಿತ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಮಾತನಾಡುವುದು, ಬರೆಯುವುದು, ಚಿತ್ರ ಸಂಕೇತಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಾರ್ವಜನಿಕವಾಗಿ ಪ್ರಕಟಿಸುವುದನ್ನೂ ಒಳಗೊಂಡಿರುತ್ತದೆ.

ಶಿಕ್ಷೆ ಏನು ?

ಮೊದಲ ಅಪರಾಧಕ್ಕೆ ಕನಿಷ್ಠ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ. ಪುನರಾವರ್ತಿತ ಅಪರಾಧಗಳಿಗೆ ಕನಿಷ್ಠ ಎರಡು ವರ್ಷದಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1ಲಕ್ಷ ದಂಡ ಹಾಗೂ ಜಾಮೀನು ರಹಿತ ಅಪರಾಧಗಳಾಗಿರುತ್ತವೆ. ನ್ಯಾಯಾಲಯವು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಅವಕಾಶವೂ ಇರುತ್ತದೆ.

ದ್ವೇಷಾಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ತಡೆಹಿಡಿಯಲು ಅಥವಾ ತೆಗೆದುಹಾಕಲು ಸರ್ಕಾರದಿಂದ ನೇಮಕಗೊಂಡ ಅಧಿಕಾರಿಯು ಟೆಲಿಕಾಂ, ಇಂಟರ್ನೆಟ್, ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಯಾವುದೇ ಸೇವಾ ಪೂರೈಕೆದಾರರು ಅಥವಾ ಮಧ್ಯವರ್ತಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ. ಒಂದು ಸಂಸ್ಥೆ ಅಥವಾ ಸಂಘಟನೆಯ ಮೂಲಕ ದ್ವೇಷ ಭಾಷಣ ನಡೆದರೆ, ಅಪರಾಧ ನಡೆದ ಸಮಯದಲ್ಲಿ ಆ ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆಗೆ ಒಳಪಡಿಸಲಾಗುತ್ತದೆ.

Read More
Next Story