
ಬೆಳಗಾವಿ ಅಧಿವೇಶನ: ಜೆಡಿಎಸ್‌ನಲ್ಲಿ ನಾಯಕತ್ವದ ಬರ, ಬಿಜೆಪಿಯೊಂದಿಗೆ ಮೈತ್ರಿಯ ಮುಜುಗರ
ಆಡಳಿತ ಪಕ್ಷದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಇಕ್ಕಟ್ಟಿಗೆ ಸಿಲುಕಿಸುವ ಅಧಿವೇಶನದಲ್ಲಿ ದಳಪತಿಗಳ ಪಾಳೆಯದಲ್ಲಿ ನಾಯಕತ್ವದ ಕೊರತೆ ಮತ್ತು ಮೈತ್ರಿಯೊಳಗಿನ ಮುಜುಗರ ಪಕ್ಷದ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ.
ರಾಜ್ಯದ ಇತಿಹಾಸದಲ್ಲಿ ಅಧಿವೇಶನಕ್ಕೆ ತನ್ನದೇ ಆದ ಮಹತ್ವವಿದ್ದು, ರಾಜ್ಯದ ಸಮಸ್ಯೆಗಳಿಗೆ ಧ್ವನಿಯಾಗುವ ವೇದಿಕೆ ಮಾತ್ರವಲ್ಲದೇ, ಆಡಳಿತ ಪಕ್ಷದ ವೈಫಲ್ಯಗಳನ್ನು ಪ್ರತಿಪಕ್ಷಗಳು ಎಳೆಎಳೆಯಾಗಿ ಬಿಚ್ಚಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಣರಂಗವೂ ಹೌದು. ಆದರೆ, ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ದಳಪತಿಗಳ ಪಾಳೆಯದಲ್ಲಿಕಂಡುಬರುತ್ತಿರುವ ಗೊಂದಲ, ನಾಯಕತ್ವದ ಕೊರತೆ ಮತ್ತು ಮೈತ್ರಿಯೊಳಗಿನ ಮುಜುಗರಗಳು ಪಕ್ಷದ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಹೋರಾಡಿದ ಬಿಜೆಪಿ ಮತ್ತು ಜೆಡಿಎಸ್, ರಾಜ್ಯ ಮಟ್ಟದಲ್ಲಿ,ಆ ಸಾಮರಸ್ಯವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ. ಅಧಿವೇಶನಕ್ಕೂ ಮುನ್ನ ನಡೆಯುವ 'ಸಮನ್ವಯ ಸಮಿತಿ'ಯ ಸಭೆಗಳಲ್ಲಿ ಉಭಯ ಪಕ್ಷಗಳು ಜಂಟಿಯಾಗಿ ಸರ್ಕಾರದ ಭ್ರಷ್ಟಾಚಾರ, ರೈತರ ಸಮಸ್ಯೆಗಳ ಬಗ್ಗೆ ಹೋರಾಡಬೇಕೆಂದು ತೀರ್ಮಾನಿಸುತ್ತವೆ. ಆದರೆ, ಸದನ ಆರಂಭವಾಗುತ್ತಿದ್ದಂತೆಯೇ ಚಿತ್ರಣ ಬದಲಾಗುತ್ತದೆ. ಬಿಜೆಪಿ, ಪ್ರಮುಖ ವಿರೋಧ ಪಕ್ಷವಾಗಿರುವುದರಿಂದ ಸದನದಲ್ಲಿ ಸಿಗುವ ಅವಕಾಶಗಳನ್ನು ತಾನೇ ಬಳಸಿಕೊಳ್ಳಲು ಹಾತೊರೆಯುತ್ತದೆ. ಜೆಡಿಎಸ್‌ಗೆ ಅವಕಾಶ ನೀಡಿದರೆ ಹೋರಾಟದ ಶ್ರೇಯಸ್ಸು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಪಾಲಾಗುತ್ತದೆ ಎಂಬ ಆತಂಕ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ, ಹಲವು ಬಾರಿ ಜೆಡಿಎಸ್ ಶಾಸಕರು ಎದ್ದು ನಿಂತು ಮಾತನಾಡಲು ಪ್ರಯತ್ನಿಸಿದರೂ, ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ, ಜೆಡಿಎಸ್ ಧ್ವನಿಯನ್ನು ಅಡಗಿಸುವ ತಂತ್ರ ಅನುಸರಿಸುತ್ತಾರೆ ಎಂಬ ಆರೋಪವಿದೆ. ಇದು ಜೆಡಿಎಸ್ ಶಾಸಕರಿಗೆ ಸದನದಲ್ಲಿ ತೀವ್ರ ಮುಜುಗರವನ್ನುಂಟುಮಾಡಿದೆ. "ನಾವು ಮೈತ್ರಿ ಧರ್ಮ ಪಾಲಿಸುತ್ತಿದ್ದೇವೆ, ಆದರೆ ಬಿಜೆಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸುತ್ತಿದೆ" ಎಂಬ ಮಾತುಗಳು ಜೆಡಿಎಸ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ರಾಜ್ಯದಲ್ಲಿ ಅಸಮರ್ಥ ಸರ್ಕಾರ ಹಾಗೂ ಅಸಮರ್ಥ ವಿಪಕ್ಷವಿದೆ ಎಂಬ ಜೆಡಿಎಸ್ ನಾಯಕರ ಹೇಳಿಕೆಯು ನಾಯಕತ್ವದ ಕೊರತೆಯನ್ನು ಎತ್ತಿ ತೋರಿಸಿದೆ. ಜೆಡಿಎಸ್ ಹೋರಾಟ ನಡೆಸುತ್ತಿದ್ದರೂ, ಸಮರ್ಥ ನಾಯಕತ್ವದ ಅಲಭ್ಯತೆಯಿಂದಾಗಿ ಸರ್ಕಾರದ ವೈಫಲ್ಯಗಳನ್ನು ಸಮರ್ಥವಾಗಿ ಎತ್ತಿ ಹಿಡಿಯಲು ಅಥವಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವಲ್ಲಿಯೂ ಪಕ್ಷವು ಹಿಂದುಳಿದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕುಮಾರಸ್ವಾಮಿ ಅನುಪಸ್ಥಿತಿ ಮತ್ತು ನಾಯಕತ್ವದ ಕೊರತೆ
ಜೆಡಿಎಸ್ ಪಕ್ಷದ ಅತಿದೊಡ್ಡ ಶಕ್ತಿಯೇ ಎಚ್.ಡಿ. ಕುಮಾರಸ್ವಾಮಿ. ಅವರು ಸದನದಲ್ಲಿದ್ದಾಗ ಸರ್ಕಾರದ ವಿರುದ್ಧ ಅವರು ಮಂಡಿಸುತ್ತಿದ್ದ ವಾದಗಳು, ದಾಖಲೆಗಳ ಸಮೇತ ಅವರು ನಡೆಸುತ್ತಿದ್ದ ದಾಳಿಗಳು ಆಡಳಿತ ಪಕ್ಷವನ್ನು ತಬ್ಬಿಬ್ಬುಗೊಳಿಸುತ್ತಿದ್ದವು. ಆದರೆ, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ದೆಹಲಿಗೆ ತೆರಳಿದ ನಂತರ, ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ ಅಕ್ಷರಶಃ 'ನಾಯಕನಿಲ್ಲದ ಸೇನೆ'ಯಂತಾಗಿದೆ. ಕುಮಾರಸ್ವಾಮಿಯವರ ಅನುಪಸ್ಥಿತಿಯಲ್ಲಿ ಆ ಜಾಗವನ್ನು ತುಂಬಬಲ್ಲ ಸಮರ್ಥ, ಆಕ್ರಮಣಕಾರಿ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಕುಮಾರಸ್ವಾಮಿಯವರ ನಂತರ ಪಕ್ಷದಲ್ಲಿ ಅಂತಹ ಛಾಪು ಮೂಡಿಸುವ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವಲ್ಲಿ ಪಕ್ಷ ವಿಫಲವಾಗಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ. ಬಂಡೆಪ್ಪ ಕಾಶೆಂಪೂರ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಇನ್ನು ಜಿ.ಟಿ. ದೇವೇಗೌಡರಂತಹ ಪ್ರಭಾವಿ ನಾಯಕರಿದ್ದರೂ, ಪಕ್ಷದ ಚಟುವಟಿಕೆಯಿಂದ ದೂರ ಸರಿದ್ದಾರೆ. ಇನ್ನುಳಿದ ನಾಯಕರಿಂದ ಸದನದಲ್ಲಿ ಕುಮಾರಸ್ವಾಮಿಯವರು ಸೃಷ್ಟಿಸುತ್ತಿದ್ದ ಕಂಪನವನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ.
ಸುರೇಶ್ ಬಾಬು ಅವರ ಸೌಮ್ಯ ಸ್ವಭಾವ ಪಕ್ಷಕ್ಕೆ ಮುಳುವಾಯಿತೇ?
ಪ್ರಸ್ತುತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿ.ಬಿ. ಸುರೇಶ್ ಬಾಬು ಅವರು ಅತ್ಯಂತ ಹಿರಿಯ ಮತ್ತು ಅನುಭವಿ ಶಾಸಕರು. ವಿಷಯದ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಪ್ರತಿಪಕ್ಷದ ಸಾಲಿನಲ್ಲಿ ಕುಳಿತು, ಆಡಳಿತ ಪಕ್ಷದ ಶಾಸಕರನ್ನು ಎದುರುಹಾಕಿಕೊಂಡು, ಅವರ ಗದ್ದಲದ ನಡುವೆಯೂ ತಮ್ಮ ಧ್ವನಿಯನ್ನು ಎತ್ತಿ ಹಿಡಿಯಲು ಬೇಕಾದ 'ಆಕ್ರಮಣಕಾರಿ ಮನೋಭಾವ' ಅವರಲ್ಲಿ ಕೊರತೆಯಿದೆ ಎಂಬುದು ಸ್ವಪಕ್ಷೀಯರ ದೂರು.
ಸುರೇಶ್ ಬಾಬು ಅವರ ಸೌಮ್ಯ ಮತ್ತು ಮೃದು ಸ್ವಭಾವವನ್ನು ಕಾಂಗ್ರೆಸ್ ನಾಯಕರು ತಮಗೆ ಅನುಕೂಲಕರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಅವರು ಪ್ರಸ್ತಾಪಿಸಿದರೂ, ಅದಕ್ಕೆ ತೀಕ್ಷ್ಣತೆಯನ್ನು ನೀಡುವಲ್ಲಿ ಅವರು ಎಡವಿದ್ದಾರೆ ಎಂಬ ಭಾವನೆ ಪಕ್ಷದ ಶಾಸಕರಲ್ಲಿದೆ. ಅಧಿವೇಶನದಲ್ಲಿ ಗದ್ದಲ ಉಂಟಾದಾಗ, ಸ್ಪೀಕರ್ ಗಮನ ಸೆಳೆಯುವಲ್ಲಿ ಅಥವಾ ಸರ್ಕಾರದ ಸಚಿವರನ್ನು ಕಟ್ಟಿಹಾಕುವಲ್ಲಿ ಸುರೇಶ್ ಬಾಬು ಅವರ ನಾಯಕತ್ವ ನಿರೀಕ್ಷಿತ ಮಟ್ಟದಲ್ಲಿಲ್ಲ. ಅವರು ಕೇವಲ ಮಾಹಿತಿಯನ್ನು ಮಂಡಿಸುತ್ತಾರೆಯೇ ವಿನಃ, ಅದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ.
ಜೆಡಿಎಸ್ ಶಾಸಕರ ಅಸಮಾಧಾನ
ಪಕ್ಷದ ಈ ಸ್ಥಿತಿಯು ಜೆಡಿಎಸ್‌ನ ಉಳಿದ ಶಾಸಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. "ನಮ್ಮ ನಾಯಕರು ಸದನದಲ್ಲಿ ಮಾತನಾಡದಿದ್ದರೆ, ನಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಹೇಳಿಕೊಳ್ಳುವುದಾದರೂ ಹೇಗೆ? ಬಿಜೆಪಿ ನಮ್ಮನ್ನು ಹತ್ತಿರ ಸೇರಿಸುತ್ತಿಲ್ಲ, ನಮ್ಮ ನಾಯಕರು ಬಾಯಿ ಬಿಡುತ್ತಿಲ್ಲ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ಜನರ ಮುಂದೆ ಹೋಗುವುದು ಹೇಗೆ?" ಎಂಬುದು ಜೆಡಿಎಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಕೆಲವು ಶಾಸಕರು ಈ ಬಗ್ಗೆ ನೇರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ. "ಸದನದಲ್ಲಿ ಪಕ್ಷದ ಘನತೆಯನ್ನು ಉಳಿಸಿಕೊಳ್ಳಲು, ಬಿಜೆಪಿಯ ನೆರಳಿನಿಂದ ಹೊರಬಂದು ಸ್ವತಂತ್ರವಾಗಿ ಮತ್ತು ಪ್ರಬಲವಾಗಿ ವಾದ ಮಂಡಿಸುವ ನಾಯಕತ್ವದ ಅಗತ್ಯವಿದೆ. ಇಲ್ಲದಿದ್ದರೆ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ" ಎಂದು ಅವರು ಎಚ್ಚರಿಸಿದ್ದಾರೆ.
ಜೆಡಿಎಸ್‌ನ ನಾಯಕತ್ವದ ಕೊರತೆ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಶೀತಲ ಸಮರವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ. ವಾಸ್ತವವಾಗಿ, ಸರ್ಕಾರವು ಅಬಕಾರಿ ಇಲಾಖೆಯ ಭ್ರಷ್ಟಾಚಾರ ಆರೋಪ, ಇಲಾಖೆಗಳಲ್ಲಿ ನಡೆಯುತ್ತಿರುವ ಹಗರಣಗಳು, ಆಡಳಿತ ವೈಫಲ್ಯ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆರ್ಥಿಕ ಹೊರೆಗಳಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಈ ವಿಷಯಗಳನ್ನು ಇಟ್ಟುಕೊಂಡು ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡುವ ಸಂಘಟಿತ ಹೋರಾಟ ಪ್ರತಿಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ. ಜೆಡಿಎಸ್ ದುರ್ಬಲವಾಗಿರುವುದರಿಂದ ಮತ್ತು ಬಿಜೆಪಿ ಏಕಾಂಗಿ ಹೋರಾಟಕ್ಕೆ ಇಳಿದಿರುವುದರಿಂದ, ಆಡಳಿತ ಪಕ್ಷವು ಇಬ್ಬರನ್ನೂ ಪ್ರತ್ಯೇಕವಾಗಿ ಎದುರಿಸಿ ಸುಲಭವಾಗಿ ಪಾರಾಗುತ್ತಿದೆ. ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ, ಅವರಿಗೆ ನಾಯಕರಿಲ್ಲ ಎಂದು ಕಾಂಗ್ರೆಸ್ ನಾಯಕರು ಸದನದಲ್ಲಿಯೇ ವ್ಯಂಗ್ಯವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕದ ಸಮಸ್ಯೆಗಳ ನಿರ್ಲಕ್ಷ್ಯ
ಬೆಳಗಾವಿ ಅಧಿವೇಶನದ ಮೂಲ ಉದ್ದೇಶ ಉತ್ತರ ಕರ್ನಾಟಕದ ಅಭಿವೃದ್ಧಿ. ಆದರೆ, ಪ್ರತಿಪಕ್ಷಗಳ ಆಂತರಿಕ ಕಚ್ಚಾಟ ಮತ್ತು ನಾಯಕತ್ವದ ಗೊಂದಲದಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಸಮಸ್ಯೆ, ಅಥವಾ ಆ ಭಾಗದ ರೈತರ ಜ್ವಲಂತ ಸಮಸ್ಯೆಗಳು ಗೌಣವಾಗುತ್ತಿವೆ. ಜೆಡಿಎಸ್ ಈ ಭಾಗದಲ್ಲಿ ತನ್ನದೇ ಆದ ನೆಲೆ ಹೊಂದಿದ್ದರೂ, ಅದನ್ನು ಸದನದಲ್ಲಿ ಸಮರ್ಥವಾಗಿ ಪ್ರತಿನಿಧಿಸಲು ವಿಫಲವಾಗುತ್ತಿರುವುದು ಆ ಭಾಗದ ಜನರಲ್ಲಿ ನಿರಾಶೆ ಮೂಡಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಬಿಜೆಪಿಯಿಂದ ಮೈತ್ರಿ ಧರ್ಮದ ಉಲ್ಲಂಘನೆ?
ಅಧಿವೇಶನಕ್ಕೂ ಮುನ್ನ ಜಂಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಒಟ್ಟಾಗಿ ಹೋರಾಡುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಈ ಒಪ್ಪಂದವನ್ನು ಗಾಳಿಗೆ ತೂರಿಬಿಡುತ್ತಾರೆ. ಯಾವುದೇ ವಿಷಯ ಪ್ರಸ್ತಾಪವಾದಾಗ, ಜೆಡಿಎಸ್ ನಾಯಕರನ್ನು ಸಂಪರ್ಕಿಸದೆಯೇ ಅಥವಾ ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಜೆಡಿಎಸ್ ಶಾಸಕರನ್ನು ಗೊಂದಲಕ್ಕೀಡುಮಾಡಿದೆ. ತಾವು ಬಿಜೆಪಿಯನ್ನು ಹಿಂಬಾಲಿಸಬೇಕೇ ಅಥವಾ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಬೇಕೇ ಎಂಬ ಜಿಜ್ಞಾಸೆ ದಳಪತಿಗಳಲ್ಲಿ ಮೂಡಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ "ದೊಡ್ಡಣ್ಣ"ನ ಧೋರಣೆ ಪ್ರದರ್ಶಿಸುತ್ತಿದೆ ಎಂಬ ಆರೋಪವಿದೆ.
ಜೆಡಿಎಸ್ನ ಕೆಲವು ನಾಯಕರು ಬಿಜೆಪಿ ಪಕ್ಷವು ತಮ್ಮನ್ನು ಕೇವಲ ಮೈತ್ರಿ ಎಂಬ ಹೇಳಿಕೆಯಲ್ಲಿ ಬಳಸಿಕೊಳ್ಳುತ್ತಿದೆ ಹೊರತು, ಸದನದಲ್ಲಿ ಸಮಾನ ಗೌರವ ನೀಡುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಎದ್ದು ನಿಂತು ಮಾತನಾಡಲು ಅವಕಾಶ ಕೋರಿದಾಗಲೂ, ಬಿಜೆಪಿ ಸದಸ್ಯರ ಘೋಷಣೆ ಮತ್ತು ಗದ್ದಲದಲ್ಲಿ ಅವರ ದನಿ ಅಡಗಿಹೋಗುತ್ತಿದೆ. ಸಭಾಧ್ಯಕ್ಷ ಯು.ಟಿ. ಖಾದರ್ ಹಲವು ಬಾರಿ ಜೆಡಿಎಸ್ ನಾಯಕರಿಗೆ ಮಾತನಾಡಲು ಬಿಡಿ ಎಂದು ಹೇಳಿದರೂ, ಬಿಜೆಪಿ ಸದಸ್ಯರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಜೆಡಿಎಸ್ ಶಾಸಕರಿಗೆ ಸದನದಲ್ಲಿ "ಅಪ್ರಸ್ತುತ" ಎಂಬ ಭಾವನೆ ಮೂಡಿಸುತ್ತಿದೆ. ಬಿಜೆಪಿ ಮೈತ್ರಿಯೊಂದಿಗೆ ಹೋಗುವ ಬದಲು ಏಕಾಂಗಿಯಾಗಿ ಹೋರಾಟ ನಡೆಸಿದರೆ ಪಕ್ಷದ ಅಸ್ತಿತ್ವವಾದರೂ ಉಳಿಯಲಿದೆ. ರಾಜ್ಯದ ಜನತೆಗೆ ಪಕ್ಷದ ನಾಯಕರು ಸದನದಲ್ಲಿ ದನಿ ಎತ್ತಲಿದ್ದಾರೆ ಎಂಬ ಸಂದೇಶವನ್ನು ಕಳುಹಿಸಬಹುದು ಎಂದು ನಾಯಕರೊಬ್ಬರು ದ ಫೆಡರಲ್ ಕರ್ನಾಟಕ ಜತೆ ತಮ್ಮ ಅಳಲನ್ನು ತೋಡಿಕೊಂಡರು.
ಬಿಜೆಪಿಯು ಜೆಡಿಎಸ್ ಅನ್ನು ಕಡೆಗಣಿಸಿ ಏಕಾಂಗಿ ಹೋರಾಟ ನಡೆಸುತ್ತಿರುವುದು ತಾತ್ಕಾಲಿಕವಾಗಿ ಬಿಜೆಪಿಗೆ ಪ್ರಚಾರ ನೀಡಬಹುದು. ಆದರೆ, ಇದು ಮೈತ್ರಿ ಧರ್ಮಕ್ಕೆ ಮಾರಕವಾಗಿದೆ. ಜೆಡಿಎಸ್ ಶಾಸಕರಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ಸ್ಫೋಟಗೊಂಡರೆ, ಅದು ರಾಜ್ಯ ರಾಜಕಾರಣದಲ್ಲಿ ಹೊಸ ಧ್ರುವೀಕರಣಕ್ಕೆ ಕಾರಣವಾಗಬಹುದು. ಜೆಡಿಎಸ್ ತನ್ನ ಆತ್ಮಗೌರವ ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಸದನದಲ್ಲಿ ತನ್ನದೇ ಆದ ಪ್ರತ್ಯೇಕ ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆ ಎದುರಾಗಿದೆ. ಅಲ್ಲದೇ, ಎಚ್.ಡಿ. ಕುಮಾರಸ್ವಾಮಿಯವರ ಅನುಪಸ್ಥಿತಿಯಲ್ಲಿ ಪಕ್ಷವು ದಿಕ್ಕು ತಪ್ಪಿದ ಹಡಗಿನಂತಾಗಿದ್ದು, ತಕ್ಷಣವೇ ಚುಕ್ಕಾಣಿ ಹಿಡಿಯುವ ಸಮರ್ಥ ನಾಯಕತ್ವ ಮತ್ತು ಸ್ಪಷ್ಟ ಕಾರ್ಯತಂತ್ರದ ಅಗತ್ಯವಿದೆ.

