
Belagavi Session| ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪ; ಪ್ರತಿಧ್ವನಿಸಿದ ಕೃಷ್ಣ ಮೃಗಗಳ ಸಾವು, ಶಿಕ್ಷಕರ ಖಾಲಿ ಹುದ್ದೆ ಭರ್ತಿ ವಿಚಾರ
ಕೃಷ್ಣಮೃಗಳ ಸಾವಿಗೆ ಇಲಾಖೆ ಅಧಿಕಾರಿಗಳು, ಮೃಗಾಲಯದ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಲ್ಲ. ಚಿಗುರು ತಿನ್ನುವ ಪ್ರಾಣಿಗಳಲ್ಲಿ ಗಳಲೆ ರೋಗ ಕಾಣಿಸುತ್ತದೆ. ಈ ಸೋಂಕು ತಗುಲಿದ ಪ್ರಾಣಿಗಳು 6ರಿಂದ 24 ಗಂಟೆಗಳಲ್ಲಿ ಮೃತಪಡಲಿವೆ.
ಬೆಳಗಾವಿಯ ಬೂತರಾಯನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಗಳಲೆ ರೋಗದಿಂದಲೇ ಮೃತಪಟ್ಟಿರುವುದು ತನಿಖೆಯಿಂದ ದೃಢಪಟ್ಟಿದೆ. ಕೃಷ್ಣಮೃಗಗಳ ಸಾವಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸದನಕ್ಕೆ ತಿಳಿಸಿದರು.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣಮೃಗಳ ಸಾವಿಗೆ ಇಲಾಖೆ ಅಧಿಕಾರಿಗಳು, ಮೃಗಾಲಯದ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಲ್ಲ. ಚಿಗುರು ತಿನ್ನುವ ಪ್ರಾಣಿಗಳಲ್ಲಿ ಗಳಲೆ ರೋಗ ಕಾಣಿಸುತ್ತದೆ. ಈ ಸೋಂಕು ತಗುಲಿದ ಪ್ರಾಣಿಗಳು 6ರಿಂದ 24 ಗಂಟೆಗಳಲ್ಲಿ ಮೃತಪಡಲಿವೆ. ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುವ ಕಾರಣ ಹೆಚ್ಚಿನ ಸಂಖ್ಯೆ ಕೃಷ್ಣಮೃಗ ಮೃತಪಟ್ಟಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಕಿರು ಮೃಗಾಲಯದಲ್ಲಿ ನ.13ರಿಂದ 17ರವರೆಗೆ ಒಟ್ಟು 31 ಕೃಷ್ಣಮೃಗಗಳು ಸಾವಿಗೀಡಾಗಿವೆ. ಮೃಗಾಲಯದ ವೈದ್ಯರು, ಪಶು ಸಂಗೋಪನಾ ಇಲಾಖೆಯ ಸ್ಥಳೀಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ಪಶುವೈದ್ಯಕೀಯ ಜೈವಿಕ ಸಂಸ್ಥೆಗೆ ಮಾದರಿ ಕಳಿಸಿದ್ದರು. ಎಲ್ಲ ಕೃಷ್ಣಮೃಗಗಳೂ ಗಳಲೆ ರೋಗದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದರು.
ರಾಜ್ಯದ 9 ಮೃಗಾಲಯಗಳಲ್ಲಿ ಒಟ್ಟಾರೆ 322 ಕೃಷ್ಣಮೃಗಗಳಿದ್ದು, ಈ ಪ್ರಾಣಿಗಳಿಗೆ ರೋಗ ಬಾರದಂತೆ ಎಚ್ಚರ ವಹಿಸಲಾಯಿತು. ಮೃಗಾಲಯಗಳಲ್ಲಿ ಬಹುತೇಕ ಎಲ್ಲ ಪ್ರಾಣಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕಲಾಗುತ್ತದೆ. ಆದರೆ ಕೃಷ್ಣ ಮೃಗಳಿಗೆ ಲಸಿಕೆ ನೀಡುವುದು ಕಷ್ಟಸಾಧ್ಯ. ಕಾರಣ ಕೃಷ್ಣಮೃಗ ಬಹು ಸೂಕ್ಷ್ಮ ಜೀವಿ. ಕೃಷ್ಣಮೃಗಗಳನ್ನು ಹಿಡಿದು ಲಸಿಕೆ ಹಾಕಿದರೆ ಅವು ಬಂಧನ ಭೀತಿ (ಕ್ಯಾಪ್ಚರ್ ಮಯೋಪತಿ) ಯಿಂದ ಹೃದಯಾಘಾತಕ್ಕೂ ಒಳಗಾಗುತ್ತವೆ. ಮೃಗಾಲಯದಲ್ಲಿರುವ ಕೃಷ್ಣಮೃಗಗಳು ಚಿರತೆ, ಹುಲಿಯ ಶಬ್ದ ಕೇಳಿ ಇಲ್ಲವೇ ತಮ್ಮ ಪಂಜರಕ್ಕೆ ನಾಯಿ ಬಂದಿದ್ದನ್ನು ನೋಡಿ ಹೆದರಿ ಸಾಯುತ್ತವೆ. ಕೇರಳದಲ್ಲಿ ನಾಯಿ ಬಂದ ಕಾರಣಕ್ಕೆ ಸಾವು ಸಂಭವಿಸಿತ್ತು ಎಂದು ತಿಳಿಸಿದರು.
ನೀರು, ಆಹಾರ ಕೆಲವೊಮ್ಮೆ ಗಾಳಿಯಿಂದಲೂ ಹರಡುವ ಈ ಕಾಯಿಲೆಗೆ ಜಾನುವಾರುಗಳು ಕೂಡ ಬಲಿಯಾಗಿವೆ. ಕೊಪ್ಪಳ ತಾಲೂಕಿನಲ್ಲಿ ಗಳಲೆ ರೋಗಕ್ಕೆ ಒಂದೇ ದಿನ 5-6 ಹಸುಗಳು ಮೃತಪಟ್ಟಿದ್ದವು. 4 ದಿನಗಳಲ್ಲಿ 11 ದನ, ಕರು ಸಾವಿಗೀಡಾಗಿದ್ದವು. ಇತ್ತೀಚೆಗೆ ಜಾರ್ಖಂಡ್ ನ ಜೆಮ್ಷೆಡ್ಪುರದ ಟಾಟಾ ಜೈವಿಕ ಉದ್ಯಾನವನದಲ್ಲಿ ಹೆಮೊರೆಜಿಕ್ ಸೆಪ್ಪಿಸೀಮಿಯಾ ಕಾಯಿಲೆಯಿಂದ 10 ಕೃಷ್ಣಮೃಗ ಮೃತಪಟ್ಟಿದೆ ಎಂದರು.
ಕೊರೊನಾ ಶಾಪ ನಿಮಗೆ ತಟ್ಟುವುದಿಲ್ಲವೇ?
31 ಕೃಷ್ಣಮೃಗಗಳ ಸಾವಿನ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂಬ ಸದಸ್ಯ ತಳವಾರ ಸಾಬಣ್ಣ ಹೇಳಿಕೆ ಕಿಡಿಕಾರಿದ ಸಚಿವರು, ಕೊರೊನಾ ಸಮಯದಲ್ಲಿ ಚಾಮರಾಜನಗರದಲ್ಲಿ ಒಂದೇ ದಿನ 36 ಜನರು ಆಕ್ಸಿಜನ್ ಲಭಿಸದೆ ಮೃತಪಟ್ಟರು, ನಿಮ್ಮ ಸರ್ಕಾರಕ್ಕೂ ಹೀಗೆ ಹೇಳಿದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಇಂತಹ ವಿಚಾರಗಳನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯದ ಎಲ್ಲ ಮೃಗಾಲಯಗಳಲ್ಲಿ 2021-22ರಿಂದ ಇಲ್ಲಿಯವರೆಗಿನ ಅಂಕಿ ಅಂಶ ನೋಡುವುದಾದರೆ, 2021-22 ರಲ್ಲಿ ಶೇ.6.2ರಷ್ಟು ವನ್ಯಜೀವಿಗಳು ಮೃಗಾಲಯದಲ್ಲಿ ಮೃತಪಟ್ಟಿದ್ದವು. 2022-23ರಲ್ಲಿ ಮರಣ ಪ್ರಮಾಣ ಶೇ.4.5 ಆಗಿತ್ತು. 2023-24ರಲ್ಲಿ ಶೇ.4.76 2024-25ರಲ್ಲಿ ಶೇ.3.25 ಹಾಗೂ 2025-26ರಲ್ಲಿ ಶೇ.2.42ರಷ್ಟು ವನ್ಯಜೀವಿಗಳು ಮೃಗಾಲಯದಲ್ಲಿ ಮೃತಪಟ್ಟಿವೆ ಎಂದು ವಿವರ ನೀಡಿದರು.
31 ಕೃಷ್ಣಮೃಗಗಳ ಸಾವಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿರುವ ಎಲ್ಲಾ ಮೃಗಾಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.
ನೇಮಕಾತಿ ಪ್ರಕ್ರಿಯೆಗೆ ಗ್ರಹಣ
ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಕುರಿತಂತೆ ಸದಸ್ಯರು ಎತ್ತಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ವಿವಾದವು ನ್ಯಾಯಾಲಯದಲ್ಲಿರುವ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂದು ಹೇಳಿದರು.
ನೇಮಕಾತಿ ಪ್ರಕ್ರಿಯೆ ಇಲಾಖೆ ಸಿದ್ಧವಾಗಿದೆ. ಯಾವುದೇ ಹಣಕಾಸು ಸಮಸ್ಯೆ ಇಲ್ಲ. ನ್ಯಾಯಾಲಯ ಹೊರತುಪಡಿಸಿದಂತೆ ನಮ್ಮ ಹಂತದಲ್ಲಿ ಬೇಕಾಗಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 10ದಿನಗಳ ಹಿಂದೆ ನಾನೇ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದು, ಪ್ರಕ್ರಿಯೆ ಸನ್ನದ್ಧವಾಗಿರುವಂತೆ ಸೂಚಿಸಿದ್ದೇನೆ. ಅಂದುಕೊಂಡಂತೆ ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಪಾಠ ಮಾಡಲು ಅಗತ್ಯ ಸಿಬ್ಬಂದಿಯನ್ನು ಶಾಲೆಗಳಿಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಪರಿಷತ್ ಸದಸ್ಯ ಎಸ್.ವಿ ಸಂಕನೂರ ಅವರು ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಪ್ರೌಢ ಶಿಕ್ಷಣ, ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಹೊಂದಿದ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ, ಪ್ರಾಥಮಿಕ ಶಾಲೆಗಳಿಗೆ ಅನುಮತಿ ನೀಡಿಲ್ಲ. ರಾಜ್ಯಾದ್ಯಂತ ಒಟ್ಟು 1600 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಹೊಂದಾಣಿಕೆ ಮಾಡಲಾಗಿದೆ. ಹಾಗಾಗಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗೆ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಅಧಿಕ ಶುಲ್ಕದಿಂದ ವಿದ್ಯಾರ್ಥಿಗಳಿಗೆ ಹೊರೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಂದ ಅಧಿಕ ಪರೀಕ್ಷಾ ಶುಲ್ಕ ಪಡೆಯುತ್ತಿದೆ. ಕೆಪಿಎಸ್ಸಿ ಹಾಗೂ ಯುಪಿಎಸ್ಸಿ ಮಾದರಿಯಲ್ಲಿ ಶುಲ್ಕ ಪಡೆಯಬೇಕು ಎಂದು ಪರಿಷತ್ ಸದಸ್ಯ ಹಣಮಂತ ನಿರಾಣಿ ಒತ್ತಾಯಿಸಿದರು. ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 2.60 ಲಕ್ಷ ಹುದ್ದೆಗಳು ಖಾಲಿ ಇವೆ. 17 ಅಧಿಸೂಚನೆ ಹೊರಡಿಸಿದರೂ ನೇಮಕಾತಿ ಪ್ರಕ್ರಿಯೆ ಆಗಿಲ್ಲ. ಧಾರವಾಡ, ವಿಜಯಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, 10 ರಂದು ಬೆಳಗಾವಿ ಚಲೋ ಆಯೋಜಿಸಲಾಗಿದೆ. ಹಾಗಾಗಿ ತ್ವರಿತವಾಗಿ ನೇಮಕಾತಿ ಪೂರ್ಣಗೊಳಿಸಬೇಕು. ಪರೀಕ್ಷಾ ಶುಲ್ಕ ಇಳಿಸಬೇಕು ಎಂದು ಆಗ್ರಹಿಸಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉತ್ತರ ನೀಡಿ, ಒಳ ಮೀಸಲಾತಿ ಹಾಗು ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ನೇಮಕಾತಿ ವಿಳಂಬವಾಗಿದೆ. ಕೆಇಎ ಪರೀಕ್ಷಾ ಶುಲ್ಕದ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷಾ ಕ್ರಮದಲ್ಲಿ ಎಐ ಬಳಕೆ ಮಾಡುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆ, ವೆಬ್ಕಾಸ್ಟಿಂಗ್ ಇನ್ನಿತರ ಸುಧಾರಣ ಕ್ರಮಗಳನ್ನು ಅಳವಡಿಸಿಕೊಂಡಿದೆ. ಪ್ರಾಧಿಕಾರಕ್ಕೆ ಸರ್ಕಾರದ ಯಾವುದೇ ಸಹಾಯಧನ ಇರುವುದಿಲ್ಲ. ಪರೀಕ್ಷಾ ಶುಲ್ಕದಲ್ಲೇ ವೆಚ್ಚಗಳನ್ನು ಸರಿದೂಗಿಸಲಾಗುತ್ತಿದೆ. ಆದಾಗ್ಯೂ , ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಪರೀಕ್ಷಾ ಶುಲ್ಕ ಏರಿಸಿಲ್ಲ ಎಂದು ಹೇಳಿದರು.
ಕೆಇಎ 2022ನೇ ಸಾಲಿನಿಂದ ಇಷ್ಟೇ ನಿಗದಿತ ಶುಲ್ಕ ವಿಧಿಸುತ್ತಿದೆ. ಪರೀಕ್ಷೆ ನಡೆಸುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾದರೂ ಬಡ ಹಾಗೂ ಗ್ರಾಮೀಣ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಶುಲ್ಕ ಹೆಚ್ಚಿಸಿರುವುದಿಲ್ಲ. ಆರ್ಥಿಕ ಹೊರ ತಪ್ಪಿಸಲು ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಮೊದಲ ಹುದ್ದೆಗೆ ಮಾತ್ರ ಅವರಿಗೆ ಅನ್ವಯಿಸುವ ಪೂರ್ಣ ಅರ್ಜಿ ಶುಲ್ಕ ಪಾವತಿಸಲು ಹಾಗೂ ಹೆಚ್ಚುವರಿ ಹುದ್ದೆಗೆ ಕೇವಲ ರೂ.100 ವಿಧಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲಿ ಅಥವಾ ಕರ್ನಾಟಕ ಲೋಕ ಆಯೋಗದ ಮಾದರಿಯಲ್ಲಿ ಅರ್ಜಿ ಶುಲ್ಕ ನಿಗದಿ ಪಡಿಸಬಹುದಲ್ಲವೇ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗುತ್ತಿಲ್ಲ. ಆದ್ದರಿಂದ, ಕೇಂದ್ರ / ರಾಜ್ಯ ಲೋಕ ಸೇವಾ ಆಯೋಗದ ಮಾದರಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

