ಆರೋಪ ಮಾಡಿದಾಕ್ಷಣ ಬಂಧಿಸಲ್ಲ; ತಿಮರೋಡಿ ಬಂಧನ ಸಂಬಂಧ ಬಿಜೆಪಿ ಬೇಡಿಕೆಗೆ ಗೃಹಸಚಿವ ನಕಾರ
x

ಆರೋಪ ಮಾಡಿದಾಕ್ಷಣ ಬಂಧಿಸಲ್ಲ; ತಿಮರೋಡಿ ಬಂಧನ ಸಂಬಂಧ ಬಿಜೆಪಿ ಬೇಡಿಕೆಗೆ ಗೃಹಸಚಿವ ನಕಾರ

ದ್ವೇಷಭಾಷಣ ತಡೆಗೆ ಹೊಸ ಕಾನೂನು ತರಲಾಗುತ್ತಿದೆ. ಆ ವಿಧೇಯಕದಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ನಕಲಿ ಸುದ್ದಿ ನಿಯಂತ್ರಣಕ್ಕೂ ವಿಧೇಯಕದಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ಪರಮೇಶ್ವರ್‌ ಹೇಳಿದರು


ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಮುಖ್ಯಮಂತ್ರಿ ವಿರುದ್ಧವೇ ಕೊಲೆ ಆರೋಪ ಮಾಡಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಳ್ಳಿಹಾಕಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಮಂಗಳವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾವು ಯಾರನ್ನೂ ಬಂಧಿಸಲು ಸೂಚಿಸಲ್ಲ. ಸಿಎಂ ಸೇರಿ ಹಲವರ ವಿರುದ್ಧ ಗಂಭೀರ ಆರೋಪ ಮಾಡಿದ್ದರೆ ಪೊಲೀಸರು ನೋಡಿಕೊಳ್ಳಲಿದ್ದಾರೆ. ಆರೋಪ ಮಾಡಿದ ತಕ್ಷಣ ಯಾರನ್ನೂ ನಾವು ಬಂಧಿಸುವುದಿಲ್ಲ. ಆರೋಪದ ತೀವ್ರತೆ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದರು.

ದ್ವೇಷಭಾಷಣ ತಡೆಗೆ ಹೊಸ ಕಾನೂನು ತರಲಾಗುತ್ತಿದೆ. ಆ ವಿಧೇಯಕದಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ನಕಲಿ ಸುದ್ದಿ ನಿಯಂತ್ರಣಕ್ಕೂ ವಿಧೇಯಕದಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ಪರಮೇಶ್ವರ್‌ ಹೇಳಿದರು.

ಕಳೆದ ಚುನಾವಣಾ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ಸಿಎಂ ವಿರುದ್ಧ 24 ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕರಾಗಿ ಆರೋಪ ಮಾಡಿರುವುದರಿಂದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರೋಪಿಸಿದ್ದಾಗಿ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದರು. ಈ ಹೇಳಿಕೆಯ ವಿಡಿಯೊವನ್ನು ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ, ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಮಹೇಶ್‌ ತಿಮರೋಡಿ ಅವರು ಸಿಎಂ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ ಎಂದು ಸದನದಲ್ಲಿ ಪ್ರಸ್ತಾಪಿಸಿ, ತಿಮರೋಡಿ ಬಂಧನಕ್ಕೆ ಆಗ್ರಹಿಸಿದ್ದರು.

ಒಳಮೀಸಲಾತಿ

ಇನ್ನು ಒಳ ಮೀಸಲಾತಿ ವರದಿ ಜಾರಿ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌ ಅವರು, “ವಿವಿಧ ಸಮುದಾಯಗಳಿಂದ ಅಭಿಪ್ರಾಯಗಳು ಬಂದಿವೆ. ಎಲ್ಲ ಅಭಿಪ್ರಾಯಗಳನ್ನೂ ಸಿಎಂ ಜೊತೆ ಚರ್ಚಿಸಿ ನಂತರ ಸಂಪುಟದ ಮುಂದೆ ಇಡುತ್ತೇವೆ. ಸಂಪುಟ ಸಭೆ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಒಪ್ಪಿಕೊಳ್ಳುತ್ತೇವೆ. ವರದಿ ಅನುಷ್ಠಾನಕ್ಕೆ ಯಾವುದೇ ಹಿಂಜರಿಕೆ ಇಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಖಂಡಿತ ಅನುಷ್ಠಾನ ಮಾಡುತ್ತೇವೆ" ಎಂದು ಹೇಳಿದರು.

Read More
Next Story