Tipu Jayanti Question Triggers Drama in Suvarna Soudha: Congress MLA Vanishes From House After Raising Notice
x

ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್‌

ಟಿಪ್ಪು ಜಯಂತಿ ಪ್ರಶ್ನೆ ಕೇಳಿ ಸದನದಿಂದಲೇ ಕಣ್ಮರೆಯಾದ 'ಕೈ' ಶಾಸಕ

ಹುನಗುಂದ ಶಾಸಕ ವಿಜಯಾನಂದ ಕಾಶೆಪ್ಪನವರ ಅವರು ನಿಯಮ 69ರ ಅಡಿ (ಗಮನ ಸೆಳೆಯುವ ಸೂಚನೆ) ಟಿಪ್ಪು ಜಯಂತಿ ಆಚರಣೆಯ ಕುರಿತು ಸರ್ಕಾರವನ್ನು ಪ್ರಶ್ನಿಸಲು ನೋಟಿಸ್ ನೀಡಿದ್ದರು.


Click the Play button to hear this message in audio format

ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಟಿಪ್ಪು ಜಯಂತಿ ಆಚರಣೆಯ ಕುರಿತು ಸರ್ಕಾರದ ಗಮನ ಸೆಳೆಯಲು ಸ್ವತಃ ಪ್ರಶ್ನೆ ಕೇಳಿದ್ದ ಆಡಳಿತ ಪಕ್ಷದ ಶಾಸಕ ವಿಜಯಾನಂದ ಕಾಶೆಪ್ಪನವರ, ಸರಿಯಾಗಿ ಸ್ಪೀಕರ್ ಹೆಸರು ಕೂಗುವ ಹೊತ್ತಿಗೆ ಸದನಕ್ಕೆ ಗೈರಾಗುವ ಮೂಲಕ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣರಾಗಿದ್ದಾರೆ.

ಹುನಗುಂದ ಶಾಸಕ ವಿಜಯಾನಂದ ಕಾಶೆಪ್ಪನವರ ಅವರು ನಿಯಮ 69ರ ಅಡಿ (ಗಮನ ಸೆಳೆಯುವ ಸೂಚನೆ) ಟಿಪ್ಪು ಜಯಂತಿ ಆಚರಣೆಯ ಕುರಿತು ಸರ್ಕಾರವನ್ನು ಪ್ರಶ್ನಿಸಲು ನೋಟಿಸ್ ನೀಡಿದ್ದರು. ರಾಜ್ಯ ರಾಜಕಾರಣದಲ್ಲಿ ಸದಾ ವಿವಾದದ ಕಿಡಿ ಹೊತ್ತಿಸುವ ಟಿಪ್ಪು ಜಯಂತಿ ವಿಚಾರ ಸದನದಲ್ಲಿ ಪ್ರಸ್ತಾಪವಾಗಲಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಸರ್ಕಾರ ಏನು ಉತ್ತರ ನೀಡಲಿದೆ ಎಂಬ ಬಗ್ಗೆ ಬೆಳಗಿನಿಂದಲೇ ವಿಧಾನಸಭೆಯ ಮೊಗಸಾಲೆಯಲ್ಲಿ ಮತ್ತು ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆದಿತ್ತು. ಒಂದು ವೇಳೆ ಸರ್ಕಾರ ಉತ್ತರ ನೀಡಿದ್ದರೆ, ಅದು ಪರ ಅಥವಾ ವಿರೋಧ ಏನೇ ಆಗಿದ್ದರೂ, ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವುದು ಖಚಿತವಾಗಿತ್ತು.

ಹೆಸರು ಕೂಗಿದಾಗ ಕುರ್ಚಿ ಖಾಲಿ!

ಸದನದಲ್ಲಿ ಪ್ರಶ್ನೋತ್ತರ ಕಲಾಪದ ನಂತರ ಸ್ಪೀಕರ್ ಯು.ಟಿ. ಖಾದರ್ ಅವರು ಗಮನ ಸೆಳೆಯುವ ಸೂಚನೆಯ ಪಟ್ಟಿಯಲ್ಲಿದ್ದ ವಿಷಯಗಳನ್ನು ಒಂದೊಂದಾಗಿ ಪ್ರಸ್ತಾಪಿಸಿದರು. ವಿಜಯಾನಂದ ಕಾಶೆಪ್ಪನವರ ಸರದಿ ಬಂದಾಗ ಸ್ಪೀಕರ್ ಅವರು ಶಾಸಕರ ಹೆಸರನ್ನು ಕೂಗಿದರು. ಆದರೆ, ಆಶ್ಚರ್ಯವೆಂಬಂತೆ ಪ್ರಶ್ನೆ ಕೇಳಬೇಕಿದ್ದ ಶಾಸಕ ಕಾಶೆಪ್ಪನವರ ಸದನದಲ್ಲಿ ಹಾಜರಿರಲಿಲ್ಲ. ತಮ್ಮದೇ ಸರ್ಕಾರವಿದ್ದರೂ, ವಿವಾದಾತ್ಮಕ ವಿಷಯದ ಬಗ್ಗೆ ಪ್ರಶ್ನೆ ಕೇಳಲು ಮುಂದಾಗಿದ್ದ ಶಾಸಕರು ಅಂತಿಮ ಕ್ಷಣದಲ್ಲಿ ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.

ಪೂರ್ವನಿಯೋಜಿತ ಗೈರು ಹಾಜರಿಯೇ?

ಕಾಶೆಪ್ಪನವರ ಗೈರು ಹಾಜರಿ ಕೇವಲ ಕಾಕತಾಳೀಯವಲ್ಲ, ಇದೊಂದು ಪೂರ್ವನಿಯೋಜಿತ ತಂತ್ರ ಇರಬಹುದು ಎಂಬ ಮಾತುಗಳು ಕಾಂಗ್ರೆಸ್ ಪಾಳಯದಲ್ಲೇ ಕೇಳಿಬರುತ್ತಿವೆ. ಟಿಪ್ಪು ಜಯಂತಿ ವಿಚಾರವಾಗಿ ಸದನದಲ್ಲಿ ಚರ್ಚೆಯಾದರೆ ಅನಗತ್ಯವಾಗಿ ವಿಪಕ್ಷ ಬಿಜೆಪಿಗೆ ಅಸ್ತ್ರ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ, ಶಾಸಕರೇ ಬೇಕಂತಲೇ ಹೊರಗುಳಿದರಾ? ಅಥವಾ ಹೈಕಮಾಂಡ್ ಸೂಚನೆಯ ಮೇರೆಗೆ ಅವರು ಸದನಕ್ಕೆ ಗೈರಾದರಾ ಎಂಬುದು ನಿಗೂಢವಾಗಿದೆ. "ಪ್ರಶ್ನೆ ಕೇಳುವುದೇ ಆಗಿದ್ದರೆ ಅವರು ಹಾಜರಿರುತ್ತಿದ್ದರು, ಆದರೆ ವಿವಾದ ಭುಗಿಲೇಳದಂತೆ ತಡೆಯಲು ಈ 'ಗೈರು ಹಾಜರಿ' ಅಸ್ತ್ರ ಪ್ರಯೋಗಿಸಲಾಗಿದೆ," ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ತಪ್ಪಿಹೋದ ಸಿಎಂ ಉತ್ತರ, ಉಳಿದುಕೊಂಡ ನಿಗೂಢತೆ

ಒಂದು ವೇಳೆ ಕಾಶೆಪ್ಪನವರ ಹಾಜರಿದ್ದು ಪ್ರಶ್ನೆ ಕೇಳಿದ್ದರೆ, ಮುಖ್ಯಮಂತ್ರಿಗಳು ನೀಡುವ ಉತ್ತರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತಿತ್ತು. ಆದರೆ ಶಾಸಕರ ಗೈರಿನಿಂದಾಗಿ ಸರ್ಕಾರ ಈ ಮುಜುಗರದ ಸನ್ನಿವೇಶದಿಂದ ಪಾರಾದಂತಾಗಿದೆ. ಒಟ್ಟಿನಲ್ಲಿ, ಟಿಪ್ಪು ಜಯಂತಿ ಆಚರಣೆಯ ಪ್ರಶ್ನೆ 'ಕೇಳಿಯೂ ಕೇಳದಂತಾಗಿ' ಕಡತ ಸೇರಿದ್ದು, ಶಾಸಕರ ನಡೆ ಮಾತ್ರ ಅಧಿವೇಶನದ 'ಹಾಟ್ ಟಾಪಿಕ್' ಆಗಿ ಉಳಿದುಕೊಂಡಿದೆ.

Read More
Next Story