ಸಿಎಂ ಸಿದ್ದರಾಮಯ್ಯ –ಕೆ.ಸಿ. ವೇಣುಗೋಪಾಲ್ ಗೌಪ್ಯ ಸಭೆ: ಕುತೂಹಲ ಕೆರಳಿಸಿದ ಉಭಯರ ಸಮಾಲೋಚನೆ
x

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಗೌಪ್ಯ ಸಭೆ ನಡೆಸಿದರು

ಸಿಎಂ ಸಿದ್ದರಾಮಯ್ಯ –ಕೆ.ಸಿ. ವೇಣುಗೋಪಾಲ್ ಗೌಪ್ಯ ಸಭೆ: ಕುತೂಹಲ ಕೆರಳಿಸಿದ ಉಭಯರ ಸಮಾಲೋಚನೆ

ಡಿಸಿಎಂ ಡಿ.ಕೆ. ಶಿವಕುಮಾರ್‌ ಗೈರು ಹಾಜರಿಯಲ್ಲಿ ಉಭಯ ನಾಯಕರು ಸುಮಾರು 20 ನಿಮಿಷಗಳ ಕಾಲ ಗೌಪ್ಯ ಸಭೆ ನಡೆಸಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ನಾಯಕತ್ವ ಬದಲಾವಣೆ ಬಿಕ್ಕಟ್ಟು ಇತ್ಯಾದಿ ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮಂಗಳೂರಿನಲ್ಲಿ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧೀಜಿ ಭೇಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೂ ಮುನ್ನ ಪ್ರತ್ಯೇಕ ಸಭೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಗೈರು ಹಾಜರಿಯಲ್ಲಿ ಉಭಯ ನಾಯಕರು ಸುಮಾರು 20 ನಿಮಿಷಗಳ ಕಾಲ ಗೌಪ್ಯ ಸಭೆ ನಡೆಸಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ನಾಯಕತ್ವ ಬದಲಾವಣೆ ಬಿಕ್ಕಟ್ಟು ಇತ್ಯಾದಿ ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಹಾಗೂ ಡಿಸಿಎಂ ನಡುವಿನ ನಾಯಕತ್ವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಬ್ರೇಕ್‌ಫಾಸ್ಟ್ ಮೀಟಿಂಗ್‌ ನಡೆಸಲು ಸೂಚಿಸಿದ ಬಳಿಕ ಇದೇ ಮೊದಲ ಬಾರಿಗೆ ಕೆ.ಸಿ. ವೇಣುಗೋಪಾಲ್‌ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ್ದು, ರಾಜಕೀಯ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಿಒಕ್ಕಟ್ಟು ಉಲ್ಬಣಿಸಲು ಕೆಲ ಶಾಸಕರು ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರು ದೆಹಲಿಗೆ ತೆರಳಿ ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳಿಂದಲೇ ಗೊಂದಲ ಶುರುವಾಯಿತೆಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಪ್ರಸ್ತುತ, ಹೈಕಮಾಂಡ್ ಸೂಚನೆ ಮೇರೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಬೆಳಗಿನ ಉಪಹಾರ ಸಭೆ ನಡೆಸಿ ಒಗ್ಗಟ್ಟಿನ ಸಂದೇಶ ನೀಡಿದ್ದೇವೆ. ಮುಂದೆ ಪಕ್ಷದೊಳಗಿನ ಎಲ್ಲಾ ಗೊಂದಲಗಳಿಗೆ ರಾಹುಲ್ ಗಾಂಧಿ ಸಮ್ಮುಖದಲ್ಲೇ ಅಂತಿಮ ತೆರೆ ಎಳೆಯಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಸಭೆ ಬಳಿಕ ಹೈಕಮಾಂಡ್‌ ಭೇಟಿ

ಬೆಳಗಾವಿ ಅಧಿವೇಶನ ಮುಗಿದ ನಂತರ ಅಥವಾ ಮಧ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ, ಅಂತಿಮವಾಗಿ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಕಳೆದ ಕೆಲ ವಾರಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು, ಶಾಸಕರ ಹೇಳಿಕೆಗಳು ಹಾಗೂ ಆಂತರಿಕ ಕಲಹದಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿತ್ತು.

ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿಎಂ ಸ್ಥಾನದ ಬದಲಾವಣೆಗಾಗಿ ಡಿ.ಕೆ. ಶಿವಕುಮಾರ್ ಅವರು ಪಟ್ಟು ಹಿಡಿದು ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ಆರಂಭಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಪ್ರತ್ಯೇಕವಾಗಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಎಡೆ ಮಾಡಿಕೊಟ್ಟಿತ್ತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿ, ರಾಹುಲ್‌ ಗಾಂಧಿ ಅವರಿಗೆ ವರದಿ ನೀಡಿದ್ದರು. ಈ ಮಧ್ಯೆ ರಾಹುಲ್‌ ಗಾಂಧಿ ಅವರೇ ಬಿ.ಕೆ. ಹರಿಪ್ರಸಾದ್‌ ಹಾಗೂ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ನಾಯಕತ್ವ ಬದಲಾವಣೆ ಕುರಿತಂತೆ ಎದುರಾಗಿರುವ ಗೊಂದಲಗಳ ಮಾಹಿತಿ ಪಡೆದಿದ್ದರು.

ಇದಾದ ಬಳಿಕ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮುಗಿಸಿ ಆ ನಂತರ ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ದೂರವಾಣಿ ಕರೆ ಮಾಡಿ ಸೂಚಿಸಿದ್ದರು. ಅದರಂತೆ ಮೊದಲಿಗೆ ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಸಭೆ ನಡೆಸಿ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದರು. ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್‌ ನಿವಾಸದಲ್ಲಿ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಮಾಡಲಾಗಿತ್ತು.

Read More
Next Story