
ಬಿಜೆಪಿ ಶಾಸಕ ಸಿಮೆಂಟ್ ಮಂಜುನಾಥ್ ಹಾಗೂ ಸ್ಪೀಕರ್ ಯು.ಟಿ. ಖಾದರ್
ʼಸ್ಮಾರ್ಟ್ ಲಾಕ್ʼ ಖರೀದಿಯಲ್ಲಿ ಅವ್ಯವಹಾರ ಆರೋಪ; ಯು.ಟಿ. ಖಾದರ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಶಾಸಕರ ಭವನದ 224 ಕೊಠಡಿಗಳಿಗೆ ಸ್ಮಾರ್ಟ್ ಲಾಕ್ ಅಳವಡಿಸಿದ್ದಾರೆ. ಶಾಸಕರು ಇದನ್ನು ಕೇಳಿರದಿದ್ದರೂ ಹಾಕಿದ್ದು, ಲಾಕ್ ವೆಚ್ಚ ಮತ್ತು ಬಿಲ್ ಖರ್ಚಿನ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ ದೂರಿದ್ದಾರೆ.
ಶಾಸಕರ ಕೊಠಡಿಗಳಲ್ಲಿ ʼಸ್ಮಾರ್ಟ್ ಲಾಕ್ʼ ಅಳವಡಿಕೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರವಾಗಿದ್ದು, ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕೂಡಲೇ ರಾಜೀನಾಮೆ ಕೊಡಬೇಕೆಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು (ಮಂಜುನಾಥ್) ಒತ್ತಾಯಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಶಾಸಕರ ಭವನದ 224 ಕೊಠಡಿಗಳಿಗೆ ಸ್ಮಾರ್ಟ್ ಲಾಕ್ ಅಳವಡಿಸಿದ್ದಾರೆ. ಶಾಸಕರು ಇದನ್ನು ಕೇಳಿರದಿದ್ದರೂ ಹಾಕಲಾಗಿದೆ. ಲಾಕ್ ವೆಚ್ಚ ಮತ್ತು ಬಿಲ್ ಖರ್ಚಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಬೀಗ ಖರೀದಿ ವೆಚ್ಚದಲ್ಲಿ 3 ಲಾಕ್ ಖರೀದಿಸಬಹುದಾದಷ್ಟು ವೆಚ್ಚ ತೋರಿಸಲಾಗಿದೆ ಎಂದು ಆರೋಪಿಸಿದರು.
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಲಾಕ್ ಬೆಲೆ 11,744 ರೂ. ಇದೆ. ಆದರೆ, ಸ್ಪೀಕರ್ ಕಚೇರಿಯಿಂದ ಒಂದು ಲಾಕ್‌ಗೆ 49,300 ರೂ. ದರ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಉದ್ದೇಶಪೂರ್ವಕವಾಗಿ ತಮ್ಮ ಜಿಲ್ಲೆಯ ಆತ್ಮೀಯರಿಗೆ ಟೆಂಡರ್ ಕೊಡಿಸುವ ಮೂಲಕ ಒಂದು ಲಾಕ್‌ಗೆ ಹೆಚ್ಚುವರಿಯಾಗಿ 37,500 ರೂ. ಪಾವತಿಸಲಾಗಿದೆ.
ಇನ್ನು ಡೋರ್‌ಲಾಕ್ ಒಂದಕ್ಕೆ ಮಾರುಕಟ್ಟೆ ದರ 8,100 ರೂ ಇದ್ದು, ಇದಕ್ಕೆ 35 ಸಾವಿರ ಬಿಲ್ ಮಾಡಲಾಗಿದೆ. ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ಅನವಶ್ಯಕವಾಗಿ ದುಂದು ವೆಚ್ಚ ಮಾಡಿ ಸ್ಪೀಕರ್ ಕಚೇರಿ ವತಿಯಿಂದ ದೊಡ್ಡ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.
ನ್ಯಾಯಾಂಗ ತನಿಖೆಗೆ ಆಗ್ರಹ
ಲಕ್ಷಾಂತರ ರೂ. ಭ್ರಷ್ಟಾಚಾರದ ಬಗ್ಗೆ ಯು.ಟಿ.ಖಾದರ್ ಅವರು ಸ್ಪಷ್ಟನೆ ಕೊಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ವಿಧಾನಸಭೆ ಒಳಗಡೆಯೂ ಹಲವಾರು ರೀತಿಯ ದುಂದುವೆಚ್ಚಗಳಾಗಿವೆ. ಸ್ಮಾರ್ಟ್ ಲಾಕ್‍ಗೆ ಲೀಥಿಯಂ ಬ್ಯಾಟರಿ ಎಂದು ತೋರಿಸಿದ್ದು, ಮಾಮೂಲಿ ಬ್ಯಾಟರಿ ಅಳವಡಿಸುವ ಲಾಕ್ ಹಾಕಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ದೂರು ನೀಡುವುದಾಗಿ ಈಗಾಗಲೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ ಎಂದರು.
ಖರ್ಗೆಯಿಂದ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅಡ್ಡಿ
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಭೀಮ್ ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಭೀಮ್ ಆರ್ಮಿ ಎಂಬುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ಅದರಲ್ಲಿ ದಲಿತ ಸಮುದಾಯದ ಪ್ರತಿನಿಧಿಗಳಿಲ್ಲ. ಬೆಂಗಳೂರಿನಲ್ಲಿ ನಿಷೇಧಿತ ಪಿಎಫ್‍ಐ ಸಂಘಟನೆಯ ಮುಖ್ಯಸ್ಥರೇ ಮುಂದೆ ನಿಂತು ಹೋರಾಟ ಮಾಡಿದ್ದಾರೆ. ಚಿತ್ತಾಪುರದಲ್ಲೂ ಅದೇ ಸಂಘಟನೆಯವರು ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

