Sugar Price War Factory Owners Confront Karnataka Government Over Mounting Challenges
x

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.

ಕಬ್ಬು ದರ ಸಮರ: ಸರ್ಕಾರದ ಮುಂದೆ ಸಮಸ್ಯೆಗಳ ಸರಮಾಲೆಯನ್ನೇ ಇಟ್ಟ ಕಾರ್ಖಾನೆ ಮಾಲೀಕರು

ಕೇಂದ್ರದ ನೀತಿಗಳು ಉತ್ತರ ಭಾರತದ ಕಾರ್ಖಾನೆಗಳಿಗೆ ಅನುಕೂಲಕರವಾಗಿದ್ದು, ದಕ್ಷಿಣ ಭಾರತದ ಕಾರ್ಖಾನೆಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಮಾಲೀಕರು ಆರೋಪಿಸಿದರು.


Click the Play button to hear this message in audio format

ರಾಜ್ಯದಲ್ಲಿ ತೀವ್ರಗೊಂಡಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯು ತೀವ್ರ ವಾದ-ವಿವಾದಗಳಿಗೆ ಸಾಕ್ಷಿಯಾಯಿತು. ಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಕಾರ್ಖಾನೆ ಮಾಲೀಕರು, "ನಾವು ರೈತರ ವಿರೋಧಿಗಳಲ್ಲ, ಆದರೆ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ನಾವು ನಷ್ಟ ಅನುಭವಿಸುತ್ತಿದ್ದೇವೆ. ನಮ್ಮನ್ನು 'ದರೋಡೆಕೋರರು' ಎಂದು ಬಿಂಬಿಸಲಾಗುತ್ತಿದೆ, ಇದು ನಮಗೆ ನೋವು ತಂದಿದೆ. ಹೀಗೆಯೇ ಮುಂದುವರೆದರೆ, ಕಾರ್ಖಾನೆಗಳನ್ನು ಸರ್ಕಾರಕ್ಕೇ ಒಪ್ಪಿಸಿಬಿಡುತ್ತೇವೆ," ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದರು

ಕೇಂದ್ರ ಸರ್ಕಾರದ ನೀತಿಗಳೇ ಸಂಕಷ್ಟಕ್ಕೆ ಕಾರಣ

ಸಭೆಯಲ್ಲಿ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ, ಸಕ್ಕರೆ ಉತ್ಪಾದನೆ, ಎಥೆನಾಲ್ ಬೆಲೆ ನಿಗದಿ, ರಫ್ತು ನೀತಿ ಎಲ್ಲವೂ ಕೇಂದ್ರದ ಹಿಡಿತದಲ್ಲಿದೆ ಎಂದು ಸ್ಪಷ್ಟಪಡಿಸಿದರು. "ಕಳೆದ ಆರು ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಪರಿಷ್ಕರಿಸಿಲ್ಲ, ಆದರೆ ಕಬ್ಬಿನ ಎಫ್‌ಆರ್‌ಪಿ ಪ್ರತಿ ವರ್ಷ ಹೆಚ್ಚುತ್ತಿದೆ. ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿರುವುದರಿಂದ, ಕಾರ್ಖಾನೆಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿವೆ. ದೇಶಾದ್ಯಂತ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾನೂನುಬದ್ಧವಾಗಿ ನೀಡಬೇಕಾದ ಎಫ್‌ಆರ್‌ಪಿ ಪಾವತಿಸುವುದೇ ಕಷ್ಟವಾಗಿದೆ," ಎಂದು ಅವರು ವಿವರಿಸಿದರು.

ದಕ್ಷಿಣ-ಉತ್ತರ ತಾರತಮ್ಯ

ಕೇಂದ್ರದ ನೀತಿಗಳು ಉತ್ತರ ಭಾರತದ ಕಾರ್ಖಾನೆಗಳಿಗೆ ಅನುಕೂಲಕರವಾಗಿದ್ದು, ದಕ್ಷಿಣ ಭಾರತದ ಕಾರ್ಖಾನೆಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಮಾಲೀಕರು ಆರೋಪಿಸಿದರು. "ಮಹಾರಾಷ್ಟ್ರದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ.14ರಷ್ಟಿದೆ, ಆದರೆ ನಮ್ಮಲ್ಲಿ ಕಡಿಮೆ. ಆದರೂ, ಅಲ್ಲಿನ ದರವನ್ನೇ ಇಲ್ಲಿಯೂ ಕೇಳುತ್ತಾರೆ. ನಮ್ಮ ಸಮಸ್ಯೆಗಳ ಬಗ್ಗೆ ನಾವು ಧ್ವನಿ ಎತ್ತಿದರೂ ಪ್ರಯೋಜನವಾಗುತ್ತಿಲ್ಲ. ಆದರೆ, ಉತ್ತರ ಭಾರತದ ಮಾಲೀಕರು ಕೇಂದ್ರದ ವಿರುದ್ಧ ಮಾತನಾಡುವುದಿಲ್ಲ," ಎಂದು ಅವರು ದೂರಿದರು.

ರಾಜ್ಯ ಸರ್ಕಾರದ ಮುಂದಿಟ್ಟ ಬೇಡಿಕೆಗಳು

ಕಾರ್ಖಾನೆಗಳ ಸಂಕಷ್ಟವನ್ನು ಬಗೆಹರಿಸಲು ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಬೇಕೆಂದು ಮಾಲೀಕರು ಮನವಿ ಮಾಡಿದರು. ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯೂನಿಟ್‌ಗೆ 60 ಪೈಸೆ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ, ಕಾರ್ಖಾನೆಗಳಿಂದ ಖರೀದಿಸುವ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 6 ರೂಪಾಯಿಗೆ ಹೆಚ್ಚಿಸಬೇಕು ಮತ್ತು ವಿದ್ಯುತ್ ಖರೀದಿ ಒಪ್ಪಂದವನ್ನು ನವೀಕರಿಸಬೇಕು. ಹೊಸ ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರವನ್ನು ಕನಿಷ್ಠ 25 ಕಿ.ಮೀ.ಗೆ ನಿಗದಿಪಡಿಸಬೇಕು. ಏವಿಯೇಷನ್ ಇಂಧನಕ್ಕೆ ಎಥೆನಾಲ್ ಮಿಶ್ರಣ ಮಾಡಲು ಶೀಘ್ರವಾಗಿ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ರೈತರ ಪರ ನಮ್ಮ ನಿಲುವು: ಸಿಎಂ ಅಭಯ

ಕಾರ್ಖಾನೆ ಮಾಲೀಕರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ರೈತರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ. ರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಮತ್ತು ಕಾರ್ಖಾನೆಗಳ ಜವಾಬ್ದಾರಿಯೂ ಇದೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ, ನೀವೂ ಅವರ ಸಮಸ್ಯೆ ಬಗೆಹರಿಸಲು ಸಿದ್ಧರಿರಬೇಕು," ಎಂದು ಸ್ಪಷ್ಟಪಡಿಸಿದರು. ಅಲ್ಲದೆ, "ಕಾರ್ಖಾನೆಗಳ ಸಮಸ್ಯೆಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿದ್ಯುತ್ ತೆರಿಗೆಯಂತಹ ವಿಷಯಗಳನ್ನು ಮರುಪರಿಶೀಲಿಸಲಾಗುವುದು," ಎಂದು ಭರವಸೆ ನೀಡಿದರು. ಪ್ರಸ್ತುತ ಎಫ್‌ಆರ್‌ಪಿ ಪ್ರಕಾರ ದರ ನೀಡಿ, ಸೀಸನ್ ಮುಗಿದ ನಂತರ ಹೆಚ್ಚುವರಿ ಆದಾಯವನ್ನು ರೈತರಿಗೆ ಹಂಚಿಕೆ ಮಾಡಲು ಸಿದ್ಧರಿರುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ.

Read More
Next Story