Ethanol distribution: CM Siddaramaiah attacks Minister Pralhad Joshi for lying
x

ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಎಥೆನಾಲ್ ಹಂಚಿಕೆ: ಸಚಿವ ಪ್ರಹ್ಲಾದ್ ಜೋಷಿ ಸುಳ್ಳು ಹೇಳುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

"ಒಂದೋ ಜೋಷಿ ಇಂದು ನೀಡಿರುವುದು ಸುಳ್ಳಾಗಿರಬೇಕು, ಇಲ್ಲವೇ ಲೋಕಸಭೆಯಲ್ಲಿ ನೀಡಿದ್ದು ಸುಳ್ಳಾಗಿರಬೇಕು. ಎರಡರಲ್ಲಿ ಒಂದು ಹೇಳಿಕೆಯನ್ನು ಒಪ್ಪಿಕೊಂಡರೂ ಅವರಿಗೆ ಸುಳ್ಳುಗಾರನ ಪಟ್ಟ ತಪ್ಪಿದ್ದಲ್ಲ," ಎಂದು ಸಿಎಂ ಕುಟುಕಿದ್ದಾರೆ.


Click the Play button to hear this message in audio format

"ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸುಳ್ಳನ್ನೇ ಮನೆದೇವರನ್ನಾಗಿಸಿಕೊಂಡಿದ್ದಾರೆ. ಅವರು ರಾಜಾರೋಷವಾಗಿ ಸುಳ್ಳು ಹೇಳುವ ಮೂಲಕ ತಮ್ಮ ಸಚಿವ ಸ್ಥಾನದ ಮರ್ಯಾದೆಯನ್ನೂ ಕಳೆಯುತ್ತಿದ್ದಾರೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಜೋಷಿ ಅವರು ನೀಡುತ್ತಿರುವ ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದು ಸಿಎಂ ಆರೋಪಿಸಿದ್ದಾರೆ.

"2024-25ನೇ ಸಾಲಿನಲ್ಲಿ ಕರ್ನಾಟಕಕ್ಕೆ 116.30 ಕೋಟಿ ಲೀಟರ್ ಎಥೆನಾಲ್ ಹಂಚಿಕೆಯಾಗಿದೆ, 47 ಕೋಟಿ ಲೀಟರ್ ಅಲ್ಲ ಎಂದು ಜೋಷಿ ಹೇಳಿದ್ದಾರೆ. ಆದರೆ, ನಾನು ಮಾತನಾಡಿದ್ದು 2024-25ನೇ ಸಾಲಿನಲ್ಲಿ ನಮ್ಮ ರಾಜ್ಯದ 46 ಡಿಸ್ಟಿಲರಿಗಳ 270 ಕೋಟಿ ಲೀಟರ್ ಉತ್ಪಾದನಾ ಸಾಮರ್ಥ್ಯಕ್ಕೆ ಪ್ರತಿಯಾಗಿ, ತೈಲ ಕಂಪನಿಗಳಿಗೆ ಕೇವಲ 47 ಕೋಟಿ ಲೀಟರ್ ಹಂಚಿಕೆಯಾಗಿರುವ ಬಗ್ಗೆ. ಈ ಅಂಕಿಅಂಶ ನನ್ನದಲ್ಲ, ಸ್ವತಃ ಜೋಷಿ ಅವರೇ 2025ರ ಆಗಸ್ಟ್ 6ರಂದು ಲೋಕಸಭೆಯಲ್ಲಿ ನೀಡಿದ್ದ ಉತ್ತರ," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. "ಒಂದೋ ಜೋಷಿ ಇಂದು ನೀಡಿರುವುದು ಸುಳ್ಳಾಗಿರಬೇಕು, ಇಲ್ಲವೇ ಲೋಕಸಭೆಯಲ್ಲಿ ನೀಡಿದ್ದು ಸುಳ್ಳಾಗಿರಬೇಕು. ಎರಡರಲ್ಲಿ ಒಂದು ಹೇಳಿಕೆಯನ್ನು ಒಪ್ಪಿಕೊಂಡರೂ ಅವರಿಗೆ ಸುಳ್ಳುಗಾರನ ಪಟ್ಟ ತಪ್ಪಿದ್ದಲ್ಲ," ಎಂದು ಸಿಎಂ ಕುಟುಕಿದ್ದಾರೆ.

ಕರ್ನಾಟಕಕ್ಕೆ ನಿರಂತರ ಅನ್ಯಾಯ

ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕಕ್ಕೆ ಎಥೆನಾಲ್ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. "2021 ರಿಂದ 2025ರವರೆಗೆ ಕರ್ನಾಟಕದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 879 ಕೋಟಿ ಲೀಟರ್ ಇದ್ದರೆ, ಖರೀದಿ ಮಾಡಿರುವುದು ಕೇವಲ 171 ಕೋಟಿ ಲೀಟರ್ ಮಾತ್ರ. ಆದರೆ, 40 ಕೋಟಿ ಲೀಟರ್ ಸಾಮರ್ಥ್ಯದ ಗುಜರಾತ್‌ಗೆ 31 ಕೋಟಿ ಲೀಟರ್ ಹಂಚಿಕೆ ಮಾಡಲಾಗಿದೆ. ಇದ್ಯಾವ ನ್ಯಾಯ?" ಎಂದು ಅವರು ಪ್ರಶ್ನಿಸಿದ್ದಾರೆ. "ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿ ಎಂಬ ನಮ್ಮ ರೈತಪರ ಬೇಡಿಕೆಗೆ ಬೆಂಬಲ ನೀಡಬೇಕಿದ್ದ ಜೋಷಿ, ನಮ್ಮ ವಿರುದ್ಧವೇ ಮಾತನಾಡಿ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



ರೈತರ ಕ್ಷಮೆ ಕೇಳಲಿ, ಪಾಪ ತೊಳೆದುಕೊಳ್ಳಲಿ

"ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಬ್ಬಿಗೆ ಎಫ್‌ಆರ್‌ಪಿ ಮತ್ತು ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ನಿಮಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಕುರುಡಾಗಿದೆ. ಪ್ರಧಾನಿ ಮುಂದೆ ನಿಂತು ರೈತರ ಹಿತ ಕಾಯುವ ಧೈರ್ಯ ಜೋಷಿ ಅವರಿಗಿಲ್ಲ. ಅವರದ್ದು ಕೇವಲ ಸುಳ್ಳು ಹೇಳಿಕೆಗಳ ಉತ್ತರಕುಮಾರನ ಪೌರುಷ," ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. "ರಾಜ್ಯದ ರೈತರನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಸುಳ್ಳು ಹೇಳಿರುವ ಜೋಷಿ ಅವರು ರೈತರ ಕ್ಷಮೆ ಕೇಳಬೇಕು. ಈಗಲೂ ಕಾಲ ಮಿಂಚಿಲ್ಲ, ಪ್ರಧಾನಿ ಮೇಲೆ ಒತ್ತಡ ಹೇರಿ ಕರ್ನಾಟಕದಿಂದ ಹೆಚ್ಚಿನ ಎಥೆನಾಲ್ ಖರೀದಿ ಮಾಡುವಂತೆ ಮಾಡಿ, ರೈತರಿಗೆ ಬಗೆದ ದ್ರೋಹದ ಪಾಪವನ್ನು ತೊಳೆದುಕೊಳ್ಳಲಿ," ಎಂದು ಅವರು ಆಗ್ರಹಿಸಿದ್ದಾರೆ.

Read More
Next Story