ಇಂಧನವಾಗಿ ಎಥೆನಾಲ್: ಒಂದು ಅವೈಜ್ಞಾನಿಕ ಆಲೋಚನೆ
The net result of blending ethanol into petrol would be to raise food prices, with little gain on the climate front
ಇಂಧನವಾಗಿ ಎಥೆನಾಲ್: ಒಂದು ಅವೈಜ್ಞಾನಿಕ ಆಲೋಚನೆ
-ಟಿ.ಕೆ. ಅರುಣ್
2025-26 ರ ಅಂತ್ಯದ ವೇಳೆಗೆ ಪೆಟ್ರೋಲಿನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ಕ್ಕೆ ಹೆಚ್ಚಿಸುವ ಪ್ರಸ್ತಾವನೆಯಿದೆ. ಜೈವಿಕ ಇಂಧನಕ್ಕೆ ಕಬ್ಬನ್ನು ಬಳಸುವುದು ಒಂದು ಅರ್ಥಹೀನ ಆಲೋಚನೆ. ವಿಶ್ವಾದ್ಯಂತ ಸಕ್ಕರೆಯ ಬೆಲೆ ಶೇ.33 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ, ಸಾಕಷ್ಟು ಮಳೆ ಇಲ್ಲದಿದ್ದರೆ, ಇದು ಸಣ್ಣ ಬೆಳೆಗಳಿಗೆ ಕಾರಣವಾಗುತ್ತದೆ ಮತ್ತು ಈ ವರ್ಷ ಮತ್ತು ಮುಂದಿನ ವರ್ಷ ಬೆಳೆದ ಕಬ್ಬಿನಿಂದ ಕಡಿಮೆ ಸಕ್ಕರೆಯನ್ನು ತೆಗೆಯುತ್ತದೆ. ಹಬ್ಬ ಹರಿದಿನಗಳಿಗೆ ಮುನ್ನವೇ ಸಕ್ಕರೆ ಬೆಲೆ ಏರಿಕೆಯಾಗಲಿದೆ ಎಂಬ ಆತಂಕದಲ್ಲಿ ಸರ್ಕಾರ ಸಕ್ಕರೆ ರಫ್ತಿಗೆ ಅವಕಾಶ ನೀಡಿಲ್ಲ. ಡಿಸೆಂಬರ್ ಅಂತ್ಯದೊಳಗೆ ಎಥೆನಾಲ್ ಪ್ರಮಾಣವನ್ನು ಶೇ.12ಕ್ಕೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಶೇ.11.7ಕ್ಕೆ ಹೆಚ್ಚಿಸಲು ಸಾಕಷ್ಟು ಎಥೆನಾಲ್ ನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಇದರರ್ಥ- ಅಗತ್ಯವಿರುವ ಎಥೆನಾಲ್ ಪ್ರಮಾಣವು 4.5 ಶತಕೋಟಿ ಲೀಟರ್‌ನಿಂದ 7.7 ಶತಕೋಟಿ ಲೀಟರಿಗೆ ಹೆಚ್ಚುತ್ತದೆ. ಕಬ್ಬಿನ ಕಾರ್ಖಾನೆಗಳು ಪ್ರಸ್ತುತ 7 ಶತಕೋಟಿ ಲೀಟರ್ ಎಥೆನಾಲ್ ಸಾಮರ್ಥ್ಯ ಉತ್ಪಾದನೆ ಹೊಂದಿವೆ. ಭಾರತೀಯ ಸಕ್ಕರೆ ಕಾರ್ಖಾನೆ ಸಂಘದ ಅಧ್ಯಕ್ಷ ಆದಿತ್ಯ ಜುಂಜುನ್‌ವಾಲಾ ಪ್ರಕಾರ, ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಸಾಮರ್ಥ್ಯವನ್ನು 12 ಶತಕೋಟಿ ಲೀಟರ್‌ಗೆ ಹೆಚ್ಚಿಸಬೇಕಿದೆ. ಕಬ್ಬಿನ ರಸ ಅಥವಾ ಕಾಕಂಬಿಯಿಂದ ಎಥೆನಾಲ್ಅನ್ನು ತ್ಪಾದಿಸಲು ಹೆಚ್ಚು ಕಬ್ಬನ್ನು ಬೆಳೆಯುವುದು ಅವಶ್ಯ. ಕಬ್ಬು ಕೃಷಿ ತುಂಬ ಗಲೀಜು.
ಒಂದು ಟನ್ ಕಬ್ಬನ್ನು ಸಂಸ್ಕರಿಸಿದರೆ 115 ಕೆಜಿ ಸಕ್ಕರೆ ಮತ್ತು 45 ಕೆಜಿ ಕಾಕಂಬಿ ಉತ್ಪಾದನೆ ಆಗುತ್ತದೆ. 18 ಕೆಜಿ ಸಕ್ಕರೆಯನ್ನು ಪರಿವರ್ತಿಸಿದರೆ, 10.8 ಲೀಟರ್ ಎಥೆನಾಲ್ ಸಿಗುತ್ತದೆ. ಕಬ್ಬಿನ ರಸದಲ್ಲಿರುವ ಎಲ್ಲಾ ಸಕ್ಕರೆಯನ್ನು ಎಥೆನಾಲ್ ಆಗಿ ಪರಿವರ್ತಿಸಿದರೆ, 1 ಟನ್ ಕಬ್ಬಿನಿಂದ ಸುಮಾರು 80 ಲೀಟರ್ ಎಥೆನಾಲ್ ಉತ್ಪಾದಿಸಬಹುದು. ಕಬ್ಬನ್ನು ಎಥೆನಾಲ್ ಉತ್ಪಾದಿಸಲು ಮಾತ್ರ ಬಳಸಲಾಗುತ್ತದೆ ಎಂದುಕೊಂಡರೆ, ಶೇ.20 ಮಿಶ್ರಣದ ಅಗತ್ಯವನ್ನು ಪೂರೈಸಲು ಹೆಚ್ಚುವರಿ 3.2 ಶತಕೋಟಿ ಲೀಟರ್ ಎಥೆನಾಲ್ ಅಗತ್ಯವಿದೆ. ಇದನ್ನು 40 ದಶಲಕ್ಷ ಟನ್ ಕಬ್ಬಿನಿಂದ ಉತ್ಪಾದಿಸಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 80 ಟನ್ ಕಬ್ಬು ಇಳುವರಿ ಬರುತ್ತದೆ ಎಂದುಕೊಂಡರೆ, ಕಬ್ಬು ಬೆಳೆಯುವ ಪ್ರದೇಶವನ್ನು 5 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಿಸಬೇಕಿದೆ. ಇದು ಮಹಾರಾಷ್ಟ್ರದ ಅರ್ಧದಷ್ಟು ಮತ್ತು ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಯುವ ಪ್ರದೇಶದ ಐದನೇ ಒಂದು ಭಾಗಕ್ಕಿಂತ ಹೆಚ್ಚು. ದೇಶದಲ್ಲಿ ಬಳಕೆಯಾಗದ ಭೂಮಿ ಇಲ್ಲ. ಎಥೆನಾಲ್ ಮಿಶ್ರಣಕ್ಕಾಗಿ ಹೆಚ್ಚು ಕಬ್ಬು ಉತ್ಪಾದಿಸಲು, ಇತರ ಬೆಳೆ ಬೆಳೆಯುತ್ತಿರುವ ಭೂಮಿಯನ್ನು ಬಳಸಬೇಕಾಗುತ್ತದೆ. ಇದರಿಂದ ಆಹಾರ ಧಾನ್ಯಗಳ ಕೊರತೆ ಉಂಟಾಗುತ್ತದೆ ಮತ್ತು ಅವುಗಳ ಬೆಲೆ ಹೆಚ್ಚುತ್ತದೆ.
ದೇಶದಲ್ಲಿ ಕಬ್ಬು ಕೃಷಿ ಸಂಕೀರ್ಣ ಮತ್ತು ವಿವಾದಾತ್ಮಕ ಪ್ರಕ್ರಿಯೆಯಾಗಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ಅಕ್ಕಿ, ಗೋಧಿ ಮತ್ತಿತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುತ್ತದೆ. ರಾಜ್ಯ ಸರ್ಕಾರಗಳು ತಮ್ಮದೇ ದರಗಳನ್ನು ನಿಗದಿಪಡಿಸುತ್ತವೆ. ಕಬ್ಬು ಬೆಳೆಗಾರರದ್ದು ಪ್ರಭಾವಿ ಗುಂಪು. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಸಂಪೂರ್ಣ ಮೊತ್ತವನ್ನು ಪಾವತಿಸುವುದಿಲ್ಲ. ನೂರಾರು ಕೋಟಿ ಬಾಕಿ ಉಳಿಸಿಕೊಂಡಿವೆ. ಇದು ಕಬ್ಬು ಕೃಷಿಯ ಏಕೈಕ ರಾಜಕೀಯ ಅಂಶ. ಕಬ್ಬು ಬೆಳೆಯುವುದು ಶುಷ್ಕ ಪ್ರದೇಶಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ. ರೈತರು ಕಬ್ಬಿನ ಗದ್ದೆಗಳಿಗೆ ನೀರುಣಿಸಲು ಆಳವಾದ ಕೊಳವೆ ಬಾವಿಗಳಿಂದ ನೀರನ್ನು ಪಂಪ್ ಮಾಡುತ್ತಾರೆ. ತಮಿಳುನಾಡು ಕಾವೇರಿ ನೀರಿಗಾಗಿ ಕರ್ನಾಟಕದೊಂದಿಗೆ ಜಲಯುದ್ಧ ಮಾಡುತ್ತಿದ್ದು, ಆ ನೀರು ಕಬ್ಬು ಬೆಳೆಯಲು ವ್ಯರ್ಥವಾಗುತ್ತಿದೆ. ನೀರೆತ್ತಲು ಬಳಸುವ ವಿದ್ಯುತ್ ಕಲ್ಲಿದ್ದಲು ದಹನದಿಂದ ಉತ್ಪತ್ತಿಯಾಗುತ್ತದೆ. ಆದ್ದರಿಂದ, ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಉಳಿಸುವ ಮೂಲಕ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವುದು ಒಂದು ಕಾಲ್ಪನಿಕ ಕಥೆಯಾಗಲಿದೆ.
ಕಬ್ಬಿನ ಕೃಷಿಯಲ್ಲಿ ರಾಜಕೀಯದ ಪಾತ್ರ ಇದೆಲ್ಲವನ್ನೂ ಮೀರಿಸುತ್ತದೆ. ಕಬ್ಬಿನ ಕೃಷಿಗೆ ಅತ್ಯಂತ ಸೂಕ್ತವಾದ ಭೂಮಿ ಇರುವುದು ಗಂಗಾ ನದಿಯ ಪ್ರವಾಹ ಪ್ರದೇಶದಲ್ಲಿ-ಉತ್ತರ ಪ್ರದೇಶ ಮತ್ತು ಬಿಹಾರ. ಆದರೆ, ಕಟಾವಿನ ನಂತರ ಕಬ್ಬನ್ನು ಆದಷ್ಟು ಬೇಗ ನುರಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಸಕ್ಕರೆ ಇಳುವರಿ ಕಡಿಮೆಯಾಗುತ್ತದೆ. ಇದರರ್ಥ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೋಟಗಳ ಆಸುಪಾಸಿನಲ್ಲಿ ಇರಬೇಕು. ಪೆಟ್ರೋಲ್-ಎಥೆನಾಲ್ ಮಿಶ್ರಣಕ್ಕೆ ಕಬ್ಬಿನ ಬೆಳೆ ಪ್ರದೇಶವನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಕಬ್ಬು ದೇಶದ ಅತಿ ರಾಜಕೀಕರಣಗೊಂಡ ಬೆಳೆ. ಎಥೆನಾಲ್ ಉತ್ಪಾದನೆಗೆ ಹೆಚ್ಚುವರಿ ಕಬ್ಬು ಬೆಳೆಯಲು ಬೇರೆ ಬೆಳೆಗೆ ಮೀಸಲಾದ ಕೃಷಿ ಭೂಮಿಯನ್ನು ಬಳಸಬೇಕು ಮತ್ತು ಕಬ್ಬು ಬೆಳೆಯುವ ಭೂಮಿ ಶೀಘ್ರವಾಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದೆಲ್ಲವೂ ಹವಾಮಾನ ಬದಲಾವಣೆಗೆ ತಮ್ಮ ಪಾಲು ನೀಡುತ್ತವೆ. ಅದನ್ನು ತಗ್ಗಿಸುವ ಬದಲು ಕಲ್ಲಿದ್ದಲು ದಹನದಿಂದ ಬಂದ ವಿದ್ಯುತ್ ಬಳಸಿ ನೀರೆತ್ತಿ ಕಬ್ಬಿಗೆ ಉಣಿಸುವುದು, ಈ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಸಮರ್ಪಕ ಆಲೋಚನೆಯಲ್ಲ.
ಎಥೆನಾಲ್ ಉತ್ಪಾದನೆಗೆ ಜೋಳ ಇಲ್ಲವೇ ಅಕ್ಕಿ ನುಚ್ಚು ಬಳಕೆ ಕೂಡ ಅವೈಜ್ಞಾನಿಕ. ಜೋಳದ ಬಳಕೆ ಕೋಳಿ ಸಾಕಣೆ ಉದ್ಯಮದ ಮೇಲೆ ವಿಪರಿಣಾಮ ಬೀರುತ್ತದೆ. ಅಕ್ಕಿ ನುಚ್ಚು ಕೂಡ ಕೋಳಿ ಆಹಾರವಾಗಿ ಮತ್ತು ಮನುಷ್ಯರು ಆಹಾರವಾಗಿ ಕೂಡ ಬಳಸುತ್ತಾರೆ. ಪೆಟ್ರೋಲ್ ಆಮದಿಗೆ ಅಪಾರ ವಿದೇಶಿ ವಿನಿಮಯವನ್ನು ವೆಚ್ಚವಾಗುತ್ತಿದೆ. ವಿದೇಶಿ ವಿನಿಮಯ ಉಳಿಸಬೇಕು ಎನ್ನುವುದು ಸರಿ. ಆದರೆ, ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಗೊಳಿಸುವುದು ಮತ್ತು ಅದಕ್ಕಾಗಿ ಆಹಾರ ಧಾನ್ಯಗಳು ಹಾಗು ಕಬ್ಬಿನ ಬಳಕೆ ಸಮರ್ಪಕ ನೀತಿ ಆಗುವುದಿಲ್ಲ. ಹವಾಮಾನಸ್ನೇಹಿ ಮಾರ್ಗಗಳನ್ನು ಶೋಧಿಸಬೇಕಿದೆ ಮತ್ತು ದುಬಾರಿ ಆಹಾರಧಾನ್ಯಗಳನ್ನು ಇಂಧನವಾಗಿ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ. ದೇಶ ಸಂಪೂರ್ಣವಾಗಿ ಹಸಿವಿನಿಂದ ಮುಕ್ತಿ ಪಡೆದಿಲ್ಲ. ಇಂಥ ಸನ್ನಿವೇಶ ಇರುವಾಗ ಆಹಾರಧಾನ್ಯಗಳ ಬೆಲೆ ಹೆಚ್ಚಳಗೊಂಡರೆ ಇನ್ನಷ್ಟು ಜನ ಹಸಿವಿನಿಂದ ಬಳಲಬೇಕಾಗುತ್ತದೆ. ನಮ್ಮ ಕಾರ್ಯನೀತಿ ಜನಪರ ಆಗಿರಬೇಕಿದೆ.
(ಲೇಖಕರು ದೆಹಲಿ ಮೂಲದ ಹಿರಿಯ ಪತ್ರಕರ್ತರು. ಲೇಖನದಲ್ಲಿರುವ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಇವು ಫೆಡರಲ್‌ನ ಅಭಿಪ್ರಾಯಗಳಲ್ಲ)