Let the government stop fighting for chairs and solve the problems of farmers.
x

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌


ಸಿಎಂ ಕುರ್ಚಿಗೆ ಕಿತ್ತಾಡುವುದು ಬಿಟ್ಟು ರೈತರ ಸಮಸ್ಯೆ ಬಗೆಹರಿಸಲಿ; ಬಿಜೆಪಿ ನಾಯಕರ ಆಕ್ರೋಶ

ಚಾಮರಾಜನಗರದಲ್ಲಿ ಕೆರೆ ತುಂಬಿಸಿಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ಧಾರೆ. ರೈತರ ವಿಷಯದಲ್ಲಿ ಸರ್ಕಾರ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.


Click the Play button to hear this message in audio format

ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗುತ್ತಿದೆ. ಸೂಕ್ತ ಬೆಂಬಲ ಬೆಲೆಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಸುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕೇವಲ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಪ್ರತಿ ಹಂತದಲ್ಲಿ ಕೇಂದ್ರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ರಾಜ್ಯದ ಹಲವು ಕಡೆ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರ ಅಥವಾ ಸಚಿವರಾಗಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳು ಹಾಗೂ ರಾಜಕೀಯದ ವಿಚಾರಗಳ ಕುರಿತು ಆರ್‌ಎಸ್‌ಎಸ್‌ ಹಿರಿಯ ಸದಸ್ಯರ ಜೊತೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಮಂಗಳವಾರ (ನ.4) ಬೆಳಗಾವಿಗೆ ಭೇಟಿ ನೀಡಲಿದ್ದು, ರೈತರ ಸಂಕಷ್ಟ ಆಲಿಸಲಾಗುವುದು. ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರು ನವೆಂಬರ್‌ ಕ್ರಾಂತಿ ಬಿಟ್ಟು, ರೈತರ ಸಮಸ್ಯೆಗೆ ಪರಿಹಾರ ನೀಡಬೇಕು. ಚಾಮರಾಜನಗರದಲ್ಲಿ ಕೆರೆ ತುಂಬಿಸಿಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ಧಾರೆ. ರೈತರ ವಿಷಯದಲ್ಲಿ ಸರ್ಕಾರ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದರು.

ಶಾಸಕ ಯತ್ನಾಳ್‌ ಹೇಳಿಕೆಗೆ ತಿರುಗೇಟು

ಸಚಿವ ಪ್ರಿಯಾಂಕ್ ಖರ್ಗೆ ಅಟ್ಯಾಕ್ ಮಾಡಿದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಪತ್ತೆಯಾಗುತ್ತಾರೆ ಎಂಬ ಶಾಸಕ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರ ಹೇಳಿಕೆಗೂ ಉತ್ತರ ಕೊಡಲು‌ ನಾನಿಲ್ಲ. ಯಾವ ವಿಚಾರದಲ್ಲಿ ಯಾರು ಉತ್ತರ ಕೊಡಬೇಕೋ ಅವರು ಕೊಡುತ್ತಾರೆ. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆ ಬಗ್ಗೆ ಮಾತಾನಾಡುತ್ತಿಲ್ಲ. ಅದನ್ನು ಬಿಟ್ಟು ಬೇರೆ‌ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕ್ರಾಂತಿ ಬಿಟ್ಟು ಅಭಿವೃದ್ಧಿ ಮಾಡಿ: ಆರ್.ಅಶೋಕ್‌

ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಶಾಸಕ ಕೆ.ಎನ್‌. ರಾಜಣ್ಣ ಕ್ರಾಂತಿ ಬಗ್ಗೆ ಮಾತನಾಡಿ ಮಂತ್ರಿ ಸ್ಥಾನ ಕಳೆದುಕೊಂಡರು. ರಾಮನಗರ ಶಾಸಕ ಸೇರಿದಂತೆ ಸಿಎಂ ಹಾಗೂ ಡಿಸಿಎಂ ಆಪ್ತ ಬಳಗದಲ್ಲೇ ಚರ್ಚೆಯಾಗುತ್ತಿದೆ. ಹಲವು ನಾಯಕರು ಪದೇ ಪದೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಕ್ರಾಂತಿ ಬಿಟ್ಟು ರಾಜ್ಯದ ಅಭಿವೃದ್ದಿ ಮಾಡಿ ಎಂದು ಬಿಜೆಪಿ ಆಗ್ರಹಿಸುತ್ತಿದೆ ಎಂದರು.

ಟನಲ್‌ ರಸ್ತೆಗೂ ಮೊದಲು ಗುಂಡಿ ಮುಚ್ಚಿ

ನಗರದಲ್ಲಿ ಟನಲ್‌ ರಸ್ತೆ ಸಮಿತಿಗೆ ಅಧ್ಯಕ್ಷನಾಗುವೆ. ಆದರೆ ಅದಕ್ಕು ಮೊದಲು ಸರ್ಕಾರ ರಸ್ತೆ ಗುಂಡಿ ಮುಚ್ಚಿ ಕಸ ಸಮಸ್ಯೆ ಬಗೆಹರಿಸಲಿ. ನಂತರ ನನಗೆ ಆಹ್ವಾನ ಕೊಡಲಿ, ಸುರಂಗ ರಸ್ತೆ ನಿರ್ಮಿಸಲು ನಿಮ್ಮ ಬಳಿ ಹಣವಿಲ್ಲ. ಇನ್ನು ಸಮಿತಿ ಮಾಡಿ ಹಣ ಏಕೆ ಪೋಲು ಮಾಡುತ್ತೀರಿ? ಇನ್ನೂ ರಸ್ತೆ ಕುರಿತಾಗಿ ಚರ್ಚೆಯಾಗಿಲ್ಲ. ಬೆಂಗಳೂರು ಜನರ ಅಭಿಪ್ರಾಯ ಪಡೆದಿಲ್ಲ. ವಿವಿಧ ಇಲಾಖೆಗಳ ಅನುಮತಿ ಪಡೆಯಬೇಕು. ಆದರೆ ಇದುವರೆಗೂ ಅನುಮತಿ ಪಡೆದಿಲ್ಲ. ರಸ್ತೆ ಗುಂಡಿ ಮುಚ್ಚುವ ಯೋಜನೆ ನಿಮ್ಮಲ್ಲಿ ಇಲ್ಲವಾದರೆ, ಸುರಂಗ ರಸ್ತೆ ಏಕೆ ನಿರ್ಮಿಸುತ್ತೀರಾ ಎಂದು ಪ್ರಶ್ನಿಸಿದರು.

ಬಿಜೆಪಿ ಅಭಿವೃದ್ಧಿ ವಿರೋಧಿಯಲ್ಲ

ನಾವು ಅಭಿವೃದ್ಧಿ ಪರವಾಗಿಯೇ ಇದ್ದೇವೆ. ಸುರಂಗ ರಸ್ತೆ ನಿರ್ಮಿಸುವ ಮೊದಲು ನಗರದ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ. ಅದನ್ನು ಬಿಟ್ಟು ಪರಿಸರಕ್ಕೆ ಹಾನಿಯಾಗುವ ಯೋಜನೆ ಮಾಡುವುದು ಸರಿಯಲ್ಲ ಎಂದರು.

Read More
Next Story