
ಸಾಂದರ್ಭಿಕ ಚಿತ್ರ
Haveri | ವಿದ್ಯುತ್ ತಂತಿ ಸ್ಪರ್ಶಿಸಿ ಶಾಲಾ ಬಾಲಕ ಸಾವು
ಊಟದ ಸಮಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಆಟವಾಡುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಕಲಂದರ್, ಶ್ರೇಯಸ್ ಹಾಗೂ ಚೇತನ್ ಮೇಲೆ ಬಿದ್ದಿದೆ. ಕಲಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಒಬ್ಬ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದಿದೆ.
ಹಂಸಭಾವಿ ಗ್ರಾಮದ ಶಿವಯೋಗಿಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಅವಗಡ ಸಂಭವಿಸಿದೆ. ವಿದ್ಯುತ್ ತಂತಿ ತುಂಡಾಗಿ ಕಲಂದರ್, ಶ್ರೇಯಸ್ ಹಾಗೂ ಚೇತನ್ ಮೇಲೆ ಬಿದ್ದಿದ್ದು, ವಿದ್ಯಾರ್ಥಿ ಕಲಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಾಯಗೊಂಡಿದ್ದ ವಿದ್ಯಾರ್ಥಿ ಚೇತನ್ ಹಾಗೂ ಶ್ರೇಯಸ್‌ನನ್ನು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಗಡ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆಗಳ ಮೇಲೆ ಮತ್ತು ಆವರಣದಲ್ಲಿರುವ ವಿದ್ಯುತ್ ತಂತಿಗಳನ್ನು ಬೇರೆಡೆಗೆ ವರ್ಗಾಯಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ , ಕೆಲವೆಡೆ ಶಿಕ್ಷಣ ಇಲಾಖೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇಂತಹ ಅವಗಡಗಳಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.