ʼಬ್ರಾಂಡ್ ಬೆಂಗಳೂರಿʼಗೆ ವಿದ್ಯುತ್ ಶಾಕ್: ಜೀವಬಲಿಗೆ ಕಾದಿದೆ ಮಹಾನಗರದ ಬೆಸ್ಕಾಂ ಜಾಲ!
ಸಜೀವ ವಿದ್ಯುತ್ ತಂತಿಗಳು ಮತ್ತು ಅಪಾಯಕಾರಿ ಟ್ರಾನ್ಸ್‌ಫಾರ್ಮರ್ ಗಳಿಗೆ ಬಲಿಯಾಗುವ ಬೆಂಗಳೂರಿಗರ ಜೀವಕ್ಕೆ ಬೆಲೆ ಇಲ್ಲವೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬ ಮಾತು, ಇಲ್ಲಿನ ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯಕ್ಕೆ ಪ್ರತಿ ಜೀವ ಬಲಿಯಾದಾಗಲೂ ಕೇಳಿಬರುವ ಸಾಮಾನ್ಯ ಪ್ರಶ್ನೆ.
ಅದು, ಅಂಡರ್ ಪಾಸ್ ಗಳಲ್ಲಿ ನಿಂತ ಮಳೆ ನೀರು ತೆರವುಗೊಳಿಸದ ಬಿಬಿಎಂಪಿ ಇರಬಹುದು, ಸಜೀವ ವಿದ್ಯುತ್ ತಂತಿ ಮತ್ತು ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳನ್ನು ನಿರ್ಲಕ್ಷಿಸುವ ಬೆಸ್ಕಾಂ ಇರಬಹುದು, ಅಥವಾ ಜನರ ಮೇಲೆ ಎಗ್ಗಿಲ್ಲದೆ ವಾಹನ ಚಲಾಯಿಸುವ ಬಿಎಂಟಿಸಿ ಇರಬಹುದು,.. ನಾಗರಿಕ ಜೀವ ಮತ್ತು ಜೀವನ ಸುರಕ್ಷಿತ, ಸುಲಲಿತಗೊಳಿಸಬೇಕಾದ ಈ ನಾಗರಿಕ ಸಂಸ್ಥೆಗಳು, ತಮ್ಮ ಹೊಣೆಗಾರಿಕೆ ಮರೆತು, ತದ್ವಿರುದ್ಧವಾಗಿ ಜನರ ಜೀವವನ್ನೇ ಬಲಿತೆಗೆದುಕೊಳ್ಳುವ ಆತಂಕಕಾರಿ ಘಟನೆಗಳು ಮಹಾನಗರದಲ್ಲಿ ನಿತ್ಯ ಸುದ್ದಿಯಾಗುತ್ತಲೇ ಇವೆ.
ಇತ್ತೀಚೆಗೆ ಹರಿದು ತುಂಡಾಗಿ ಪಾದಚಾರಿ ಮಾರ್ಗದ ಮೇಲೆ ಬಿದ್ದ ಸಜೀವ ವಿದ್ಯುತ್ ತಂತಿ ತುಳಿದು ತಾಯಿ ಮಗು ಮೃತಪಟ್ಟ ದಾರುಣ ಘಟನೆಯ ಹಿನ್ನೆಲೆಯಲ್ಲಿ ನಾಗರಿಕ ಸೌಕರ್ಯ ನಿರ್ವಹಣಾ ಸಂಸ್ಥೆಗಳ ಹೊಣೆಗೇಡಿತನ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಕಾಡುಗೋಡಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ಸಜೀವ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಆಕೆಯ ೯ ತಿಂಗಳ ಕಂದಮ್ಮ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಯ ಬೆನ್ನಲ್ಲೇ ನಗರದ ಹೊರವಲಯದ ಆವಲಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‌ಮ್ಯಾನ್ ಒಬ್ಬರು ಸಾವುಕಂಡಿದ್ದರು.
ಸಜೀವ ತಂತಿಗಳು ಮತ್ತು ಟ್ರಾನ್ಸ್ ಫಾರ್ಮರ್‌ಗಳು ಪದೇಪದೆ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಲೇ ಇದ್ದು, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು ಎನ್ನುವ ಪ್ರಶ್ನೆ ಬೆಂಗಳೂರಿಗರದು.
ರಸ್ತೆಗಳಲ್ಲಿ ಯಮರಾಜ ಜೀವ ಬಲಿಗೆ ಕಾದು ಉರುಳು ಹಾಕಿ ಕೂತಿರುವಂತೆ ಟ್ರಾನ್ಸ್‌ಫರ್ಮರ್(ಟಿಸಿ) ಗಳು ವಿದ್ಯುತ್ ತಂತಿಗಳನ್ನು ಉರುಳು ಬಿಟ್ಟು ಕಾಯುತ್ತಿವೆ. ಮುಟ್ಟಿದರೆ ಮೂರೇ ಕ್ಷಣಕ್ಕೆ ಬೂದಿ ಮಾಡಿ ಮಸಣ ಸೇರಿಸುವ ಡೇಂಜರ್ ಟ್ರಾನ್ ಫರ್ಮರ್ ಗಳು ನಗರದ ಹಲವೆಡೆ ಜೀವಬಲಿಗೆ ಕಾದಿವೆ.
ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ಗೆ ಹೊಂದಿಕೊಂಡಿರುವ ಗಾಂಧಿನಗರದ ಜನದಟ್ಟಣೆಯ ರಸ್ತೆಯೊಂದರಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮರ್ ಪಾದಚಾರಿಗಳಿಗೆ ಕೈಗೆಟುಕುವಷ್ಟು ಹತ್ತಿರದಲ್ಲೇ ಇದೆ. ಅಲ್ಲಿ ದಿನನಿತ್ಯ ವ್ಯಪಾರ ವಹಿವಾಟು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ಹೋಗುವವರು, ಬರುವವರು ಸೇರಿ ಜನಜಾತ್ರೆಯೇ ನೆರೆಯುತ್ತದೆ. ಆದರೂ, ಆ ಟಿಸಿಯನ್ನು ಸ್ಥಳಾಂತರಿಸುವ ಪ್ರಯತ್ನವಾಗಲೀ, ಕನಿಷ್ಟ ಅದರ ಸುತ್ತ ಸುರಕ್ಷಾ ಬೇಲಿ ನಿರ್ಮಿಸುವ ಯತ್ನವನ್ನಾಗಲೀ ದಶಕಗಳಿಂದಲೂ ಮಾಡಿಲ್ಲ. ಬೆಸ್ಕಾಂ ಮತ್ತು ಬಿಬಿಎಂಪಿ ಜನರ ಜೀವಕ್ಕೆ ಎಷ್ಟು ಬೆಲೆ ಕೊಡುತ್ತವೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ.
ಇನ್ನು ನಗರದ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳಲ್ಲಿ ವೈರಲ್ ಗಳು ಜೋತಾಡುವುದು ಸಾಮಾನ್ಯ ಎನ್ನುವಂತಾಗಿದೆ. ಹೌದು, ಉದಾಹರಣೆಗಾಗಿ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಸ್ಟಾಪ್ ಬಳಿಯ ರಸ್ತೆಯಲ್ಲಿರುವ ವಿದ್ಯುತ್ ಕಂಬದ ದೃಶ್ಯವನ್ನು ನೀವು ನೋಡಬಹುದು.
ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಜನ ಓಡಾಡುತ್ತಾರೆ. ಜೋತುಬಿದ್ದಿರುವ ಈ ವಿದ್ಯುತ್ ವೈರ್ ತಗುಲಿ ಜೀವಕ್ಕೆ ಹಾನಿಯಾದರೆ ಹೊಣೆ ಯಾರು? ಎನ್ನುವುದು ಅಲ್ಲಿನ ನಾಗರಿಕರ ಪ್ರಶ್ನೆ. ಈ ರೀತಿ ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ಬೆಂಗಳೂರಿನ ಹಲವೆಡೆ ನೋಡಬಹುದು.
ಜನವಸತಿ ಪ್ರದೇಶದಲ್ಲಿರುವ ಟ್ರಾನ್ಸ್ಫಾರ್ಮರ್ ಗಳಿಗೆ ಸುರಕ್ಷತೆಗಾಗಿ ಸುತ್ತ ಬೇಲಿ ಹಾಕಬೇಕು ಎಂಬುದು ನಿಯಮ. ಆದರೆ, ಗವಿಪುರ ಬಡಾವಣೆಯಲ್ಲಿನ ಟ್ರಾನ್ಸ್ ಫಾರ್ಮರ್ ಗೆ ಬೇಲಿಯನ್ನೇ ಹಾಕಿಲ್ಲ. ಟಿಸಿಯ ವೈರ್‌ಗಳು ಜೋತು ಬಿದ್ದಿದ್ದಲ್ಲದೇ ಅಲ್ಲಲ್ಲಿಪ್ಲಾಸ್ಟಿಕ್ ಕಿತ್ತು ಸ್ಕಿನ್ ಔಟ್ ಆಗಿ ಜೀವ ಬಲಿಗೆ ಬಾಯ್ದೆರೆದು ಕಾದಿವೆ. ಆದರೂ, ಬೆಸ್ಕಾಂ ಇಂತಹ ತೀರಾ ಅಪಾಯಕಾರಿ ಟಿಸಿಗಳನ್ನು ಕೂಡ ಸುರಕ್ಷಿತಗೊಳಿಸುವ ಯತ್ನ ಮಾಡಿಲ್ಲ.
ಬೆಸ್ಕಾಂ ನಿರ್ಲಕ್ಷಕ್ಕೆ ಮತ್ತೊಂದು ತಾಜಾ ಉದಾಹರಣೆ ಎಂದರೆ, ಪಿಇಎಸ್ ಕಾಲೇಜ್ ಮುಖ್ಯ ರಸ್ತೆ, ಕನಕಪುರ- ಮೈಸೂರು ರಸ್ತೆಯಲ್ಲಿ ವಿದ್ಯುತ್ ವೈರ್ ಮೇಲೆ ಕಟ್ಟಿಗೆ ಜೋತು ಬಿದ್ದಿದೆ. ಮರದ ತುಂಡು ವೈರ ಮೇಲೆ ಬಿದ್ದು ಬಹಳ ದಿನಗಳೇ ಆಗಿವರ. ಆದರೆ ಅದನ್ನು ತೆಗೆದುಹಾಕಿ ಅಪಾಯದಿಂದ ಪಾರು ಮಾಡಬೇಕು ಎಂಬ ಕಾಳಜಿ ಮಾತ್ರ ಬೆಸ್ಕಾಂ ಗೆ ಇಲ್ಲ! ಈ ಸ್ಥಳದಿಂದ ಕೂಗಳತೆ ದೂರದಲ್ಲೇ ವಿದ್ಯುತ್ ನಿಗಮ ನಿಯಮಿತ ಕಚೇರಿ ಇದೆ. ಕಚೇರಿಯ ಸಮೀಪದಲ್ಲೇ ಇಂತಹ ಪರಿಸ್ಥಿದೆ ಇದೆ ಎಂದರೆ ಇನ್ನುಳಿದ ಕಡೆಗಳಲ್ಲಿ ಬೆಸ್ಕಾಂ ಜನಪರ ಕಾಳಜಿ ಹೇಗಿರಬಹುದು ಎಂಬುದನ್ನು ಊಹಿಸಬಹುದು.
ಬೆಂಗಳೂರಿನಲ್ಲಿ ವಿದ್ಯುತ್ ತಗುಲಿ ಸಾವುನೋವಿನ ಸರಣಿ ಪ್ರಕರಣಗಳು ವರದಿಯಾಗುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ಸಾವುನೋವು ಸಂಭವಿಸಿದಾಗ, ಅಧಿಕಾರಿಗಳು ಸಾವು ಸಂಭವಿಸುವುದನ್ನು ತಡೆಯುವ ಬದಲು ಇಲಿಗಳು ಹಾಗೂ ಬಿಬಿಎಂಪಿಯ ಕಾಂಕ್ರೀಟ್ ಫುಟ್‌ಪಾತ್‌ಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆ.
ಸ್ಥಳಾಂತರ ಮಾಡುವ ಮಾತು ಮರೆತ ಬಿಬಿಎಂಪಿ
ತುಂಡಾಗಿ ಬಿದ್ದ ವಿದ್ಯುತ್ ತಂತಿ ಮತ್ತು ಅಪಾಯಕಾರಿ ಟ್ರಾನ್ಸ್‌ಫಾರ್ಮರ್ ಗಳಿಂದಾಗಿ ಸರಣಿ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದರು.
ವಿದ್ಯುತ್ ಮಾರ್ಗ ಮತ್ತು ಟ್ರಾನ್ಸ್‌ಫಾರ್ಮರ್ ಗಳ ಸರ್ವೆ ನಡೆಸಿ ಅಪಾಯಕಾರಿ ಎಂದು ಕಂಡುಬಂದ ಕಡೆ ಕೂಡಲೇ ಸ್ಥಳಾಂತರ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತರು ಹೇಳಿದ್ದರು. ಆದರೆ, ಅವರ ಆ ಹೇಳಿಕೆ ಬಳಿಕ ಒಂದೂವರೆ ವರ್ಷ ಉರುಳಿದೆ ಮತ್ತು ೧೨ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ!
ಬಿಬಿಎಂಪಿ ಕನಿಷ್ಟ ಜನ ವಾಸ ಮತ್ತು ಓಡಾಟದ ಸ್ಥಳಗಳಲ್ಲಿ ಇರುವ ಅಪಾಯಕಾರಿ ತಂತಿ ಮತ್ತು ಟ್ರಾನ್ಸ್ ಫರ್ಮರ್ ಗಳನ್ನು ಪತ್ತೆ ಮಾಡಿ ಪಾದಚಾರಿ ಮಾರ್ಗದ ಮೇಲಿರುವುದನ್ನು ಸ್ಥಳಾಂತರಿಸುವ ಅಥವಾ ಸುತ್ತ ಬೇಲಿ ಹಾಕುವ ಕೆಲಸವನ್ನಾದರೂ ಮಾಡಬೇಕಿತ್ತು. ಅಥವಾ ತಂತಿಗಳನ್ನು ಸರಿಪಡಿಸುವ ಮೂಲಕ ಸುರಕ್ಷಿತಗೊಳಿಸಬೇಕಿತ್ತು. ಆದರೆ, ಅಂತಹ ಗಂಭೀರ ವಿಷಯದಲ್ಲಿ ಕೂಡ ಬೆಸ್ಕಾಂ ಮತ್ತು ಬಿಬಿಎಂಪಿ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಕಳೆದ ಐದು ವರ್ಷದಲ್ಲಿ ೭೦ಕ್ಕೂಹೆಚ್ಚು ಮುಗ್ದರು ಜೀವ ಕಳೆದುಕೊಂಡಿದ್ದಾರೆ.
ತಂತ್ರಜ್ಞಾನದ ವಿಷಯದಲ್ಲಿ ಇಡೀ ಜಗತ್ತಿನಲ್ಲೇ ಹೆಸರು ಮಾಡಿರುವ, ಭಾರತದ ಸಿಲಿಕಾನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರಿನಲ್ಲಿ ಕನಿಷ್ಟ ವಿದ್ಯುತ್ ತಂತಿ ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತಗೊಳಿಸುವ ಮಟ್ಟಿನ ತಂತ್ರಜ್ಞಾನವಾಗಲೀ, ಅದಕ್ಕೆ ಬೇಕಾದ ಬದ್ಧತೆಯಾಗಲೀ ಇಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಕಳೆದ ತಿಂಗಳೊಂದರಲ್ಲೇ ಸಿಲಿಕಾನ್ ಸಿಟಿಯಲ್ಲಿ ಮೂವರು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ ಎಂಬುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಬ್ರಾಂಡ್ ಬೆಂಗಳೂರು ಜಪ ಮಾಡುತ್ತಿರುವ ಆಡಳಿತ, ಇಂತಹ ಕನಿಷ್ಟ ಸುರಕ್ಷತೆಯ ವಿಷಯದಲ್ಲಿ ಮಾತ್ರ ಜಾಣಕಿವುಡಾಗಿರುವುದು ದುರವಸ್ಥೆ.
ಈ ಬಗ್ಗೆ ಬೆಸ್ಕಾಂನ Quality Safety and Standard's General manager ಶಾಂತಮಲ್ಲಪ್ಪ ಅವರು ದ ಫೆಡರಲ್ ಗೆ ಪ್ರತಿಕ್ರಿಯಿಸಿದ್ದು, "ಇತ್ತೀಚೆಗೆ ವಿದ್ಯುತ್ ವೈರ್ ತಗುಲಿ ತಾಯಿ ಮಗು ಸಾವಿಗಿಡಾದ ಬಳಿಕ ನಮ್ಮ ಸಂಸ್ಥೆಯು ಎಚ್ಚೆತ್ತುಕೊಂಡಿದೆ. ಈಗಾಗಲೇ ನಗರದಲ್ಲಿನ ಟ್ರಾನ್ಸಪರ್ಮರ್ ಗಳು, ವಿದ್ಯುತ್ ವೈರ್, ಹಾಗೂ ಎಲ್ಲಾ ಸಿಸ್ಟಮ್ ಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ರೀತಿಯ ದುರಂತಗಳು ಸಂಭವಿಸದಂತೆ ಸಂಸ್ಥೆ ಕ್ರಮವಹಿಸುತ್ತಿದೆ. ಬೆಸ್ಕಾಂ ಸಂಸ್ಥೆಯಿಂದಲೇ ಎಲ್ಲವನ್ನು ಸರಿ ಪಡಿಸುವ ಕೆಲಸ ನಡೆಯುತ್ತಿದೆ" ಎಂದು ಹೇಳಿದರು.