ತೆರಿಗೆ ಅನ್ಯಾಯ, ಒಕ್ಕೂಟ ವಿರೋಧಿ ನೀತಿ: ಕೇಂದ್ರದ ವಿರುದ್ಧ ದಕ್ಷಿಣದ ನಾಯಕರ ಆಕ್ರೋಶ
x

ತೆರಿಗೆ ಅನ್ಯಾಯ, ಒಕ್ಕೂಟ ವಿರೋಧಿ ನೀತಿ: ಕೇಂದ್ರದ ವಿರುದ್ಧ ದಕ್ಷಿಣದ ನಾಯಕರ ಆಕ್ರೋಶ

ಜನಸಂಖ್ಯೆ ಆಧಾರಿತ ಕ್ಷೇತ್ರಗಳ ಮರುವಿಂಗಡಣೆಯಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಮಾವೇಶ ನಡೆಸಬೇಕು ಎಂಬ ಹಕ್ಕೊತ್ತಾಯವನ್ನು ಮಾಡಲಾಯಿತು.


Click the Play button to hear this message in audio format

ಕೇಂದ್ರ ಸರ್ಕಾರದ ಒಕ್ಕೂಟ ವಿರೋಧಿ ನೀತಿಗಳು ಮತ್ತು ದಕ್ಷಿಣ ಭಾರತಕ್ಕೆ ಆಗುತ್ತಿರುವ ತಾರತಮ್ಯದ ವಿರುದ್ಧ ವಿರುದ್ಧ ದಕ್ಷಿಣದ ರಾಜ್ಯಗಳು ಈಗ ಒಂದಾಗಿವೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಸಭಾಂಗಣದಲ್ಲಿ ನಡೆದ ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’ದಲ್ಲಿ ಕೇಂದ್ರ ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ನಾಯಕರು ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಜನಸಂಖ್ಯೆ ಆಧಾರಿತ ಕ್ಷೇತ್ರಗಳ ಮರುವಿಂಗಡಣೆಯ ಬಗ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೇ, ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಮಾವೇಶ ನಡೆಸಬೇಕು ಎಂಬ ಹಕ್ಕೊತ್ತಾಯವನ್ನು ಸಮಾವೇಶದಲ್ಲಿ ಮಾಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್‌, ಕೇರಳದ ಮಾಜಿ ಹಣಕಾಸು ಸಚಿವ ಐಸ್ಯಾಕ್ ಥಾಮಸ್, ತೆಲಂಗಾಣದ ಶಾಸಕ ವಂಶಿಕೃಷ್ಣ ಸೇರಿದಂತೆ ಉಪಸ್ಥಿತರಿದ್ದರು. ಪ್ರತಿಯೊಬ್ಬರು ತಮ್ಮ ವಾದವನ್ನು ಮಂಡಿಸಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದರು. ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಯೋಚನೆಯಲ್ಲಿದೆ. ಅದು ಕಾರ್ಯಗತವಾದರೆ ದಕ್ಷಿಣದ ರಾಜ್ಯಗಳಿಗೆ ಭಾರಿ ಹೊಡೆತ ಬೀಳಲಿದೆ. ಅಷ್ಟೇ ಅಲ್ಲದೇ ದಕ್ಷಿಣ ರಾಜ್ಯಗಳಿಗೆ ಕೊಡಬೇಕಾದ ತೆರಿಗೆಯ ಪಾಲನ್ನು ನೀಡದೆ, ತಾರತಮ್ಯ ಧೋರಣೆ ಮಾಡುತ್ತಿದೆ ಎಂಬುದರ ಕುರಿತು ಟೀಕೆ ವ್ಯಕ್ತಪಡಿಸಲಾಯಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಒಕ್ಕೂಟ ವ್ಯವಸ್ಥೆ ಎಂಬುದು ದಾನಧರ್ಮವಲ್ಲ, ಅದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಕೇಂದ್ರಕ್ಕೆ ತಿರುಗೇಟು ನೀಡಿದರು. ಜಿಎಸ್‌ಟಿ ಜಾರಿ, ಎನ್‌ಇಪಿ ಹೇರಿಕೆ ಮತ್ತು ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಜ್ಯಗಳ ಸಲಹೆ ಪಡೆಯದೆ ಕೇಂದ್ರ ಸರ್ವಾಧಿಕಾರಿ ಧೋರಣೆ ತಳೆಯುತ್ತಿದೆ. ಅಷ್ಟೇ ಅಲ್ಲದೆ, ಚುನಾಯಿತ ಸರ್ಕಾರಗಳ ಕೆಲಸಕ್ಕೆ ಅಡ್ಡಿಪಡಿಸಲು ರಾಜ್ಯಪಾಲರನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರು ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯು ಅಪಾಯಕಾರಿಯಾಗಿದೆ. ಬರುವ ದಿನದಲ್ಲಿ ಜನಗಣತಿಯಾಗುತ್ತದೆ. ಆಗ ಸಾಮಾನ್ಯವಾಗಿ ಉತ್ತರ ಭಾರತ ಭಾಗದ ಜನಸಂಖ್ಯೆ ಹೆಚ್ಚಾಗಲಿದೆ. ಅಲ್ಲಿ ಲೋಕಸಭಾ ಪ್ರತಿನಿಧಿಗಳ ಸಂಖ್ಯೆಯು ಹೆಚ್ಚಾಗಲಿದೆ. ಉತ್ತರ ಭಾರತದ ಪ್ರತಿನಿಧಿಗಳ ಸಂಖ್ಯೆ ಶೇ. 86ರಷ್ಟು ಹೆಚ್ಚಾದರೆ, ದಕ್ಷಿಣ ಭಾರತದ್ದು ಕೇವಲ ಶೇ. 27ಕ್ಕೆ ಸೀಮಿತವಾಗಲಿದೆ. ಇದು ದಕ್ಷಿಣದ ದನಿಯನ್ನು ಹತ್ತಿಕ್ಕುವ ಸಂಚು ಎಂದು ಕಿಡಿಕಾರಿದರು. ಈ ಅನ್ಯಾಯದ ವಿರುದ್ಧ ಹೋರಾಡಲು ಶೀಘ್ರದಲ್ಲೇ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ತೆಲಂಗಾಣ ಶಾಸಕ ವಂಶಿಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರವು ಕ್ಷೇತ್ರ ಪುನರ್‌ ವಿಂಗಡನೆಯಲ್ಲಿ ತಾರತಮ್ಯ ನಡೆಸಲಿದೆ ಎಂಬ ಅನುಮಾನ ಇದೆ. ರಾಜ್ಯಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಉತ್ತರ ಭಾರತದ ರಾಜ್ಯಗಳು ಹೆಚ್ಚಿನ ಸ್ಥಾನಗಳು ಪಡೆದುಕೊಳ್ಳಲಿದ್ದು, ದಕ್ಷಿಣ ಭಾರತ ಕಡಿಮೆ ಪಡೆದುಕೊಳ್ಳಲಿವೆ. ದಕ್ಷಿಣ ರಾಜ್ಯಗಳ ಹಕ್ಕು ರಕ್ಷಿಸಲು ಜಂಟಿ ಕ್ರಿಯಾ ಸಮಿತಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನ ಅಸಂಘಟಿತ ವಲಯದ ಮುಖಂಡರಾದ ಗೀತಾ ರಾಮಕೃಷ್ಣನ್ ಅವರು, ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತದ ಆರ್ಥಿಕತೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿವೆ. ಕ್ಷೇತ್ರ ಪುನರ್‌ ವಿಂಗಡಣೆಯಿಂದ ಉತ್ತರ ಭಾರತದಲ್ಲಿನ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಸ್ಥಾನ ಲಭಿಸಲಿದೆ ಎಂದು ಎಚ್ಚರಿಸಿದರು. ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಾಗುವ ಅನ್ಯಾಯ ವಿರುದ್ಧ ದಕ್ಷಿಣ ಭಾರತ ರಾಜ್ಯಗಳು ಒಗ್ಗೂಡಿವೆ. ದಕ್ಷಿಣ ಭಾರತದ ಹಕ್ಕುಗಳಿಗಾಗಿ ಈಗ ದೊಡ್ಡ ಮಟ್ಟದ ಹೋರಾಟದ ಹಾದಿ ಸಿದ್ಧವಾದಂತಿದೆ.

Read More
Next Story