
ಕೊಡುವುದು 1 ರೂಪಾಯಿ, ಸಿಗುವುದು 13 ಪೈಸೆ..! ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಬಿಜೆಪಿ, ಆರ್‌ಎಸ್‌ಎಸ್ ಸಾಂವಿಧಾನಿಕ ತತ್ವಗಳನ್ನು ನಾಶ ಮಾಡುತ್ತಿದ್ದು, ಗಡಿನಿರ್ಣಯ, ಹಣಕಾಸಿನ ಅನ್ಯಾಯ ಹಾಗೂ ಸಾಂವಿಧಾನಿಕ ಮೌಲ್ಯಗಳ ದಮನದ ಮೂಲಕ ದೇಶಕ್ಕೆ ಮೂರು ಪ್ರಮುಖ ಬಿಕ್ಕಟ್ಟುಗಳನ್ನು ತರುತ್ತಿವೆ
ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಸಾಂವಿಧಾನಿಕ ತತ್ವಗಳನ್ನು ನಾಶ ಮಾಡುತ್ತಿದ್ದು, ಗಡಿನಿರ್ಣಯ, ಹಣಕಾಸಿನ ಅನ್ಯಾಯ ಹಾಗೂ ಸಾಂವಿಧಾನಿಕ ಮೌಲ್ಯಗಳ ದಮನದ ಮೂಲಕ ದೇಶಕ್ಕೆ ಮೂರು ಪ್ರಮುಖ ಬಿಕ್ಕಟ್ಟುಗಳನ್ನು ತರುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ದಕ್ಷಿಣ ಭಾರತ ಸಮಾಜವಾದಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಪ್ರಗತಿಪರ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಕಾರ್ಯಕ್ಷಮತೆಗಾಗಿ ಶಿಕ್ಷೆ ನೀಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯವು ದೇಶದ ಆರ್ಥಿಕತೆಗೆ ಸಾಕಾಷ್ಟು ಕೊಡುಗೆ ನೀಡುತ್ತಿದೆ. ನಮ್ಮದು ಹಿಂದುಳಿದ ರಾಜ್ಯವಲ್ಲ. ಪ್ರತಿ ವರ್ಷ ನಾವು ಒಕ್ಕೂಟದ ಒಟ್ಟು ತೆರಿಗೆಗೆ ಸುಮಾರು 5 ಲಕ್ಷ ಕೋಟಿ ಕೊಡುಗೆ ನೀಡುತ್ತೇವೆ. ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ. 5 ರಷ್ಟು ಹೊಂದಿದ್ದರೂ, ದೇಶದ ಜಿಡಿಪಿಗೆ ರಾಜ್ಯದ ಕೊಡುಗೆ ಶೇ. 8.4 ರಷ್ಟಿದೆ. ಜಿಎಸ್‌ಟಿ ಸಂಗ್ರಹದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಆದರೆ, ನಾವು ದೆಹಲಿಗೆ ಕಳುಹಿಸುವ ಪ್ರತಿ ಒಂದು ರೂಪಾಯಿಗೆ ನಮಗೆ ವಾಪಸ್ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರವಾಗಿದೆ. ಇದು ನ್ಯಾಯವೇ? ಯುಪಿಎ ಸರ್ಕಾರದ ಅವಧಿಯಲ್ಲಿ 14ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ. 4.72 ರಷ್ಟು ಪಾಲನ್ನು ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ರಚಿಸಿದ 15ನೇ ಹಣಕಾಸು ಆಯೋಗವು ಈ ಪಾಲನ್ನು ಶೇ. 3.64 ಕ್ಕೆ ಕಡಿತಗೊಳಿಸಿದೆ. ಈ ಒಂದೇ ನಿರ್ಧಾರದಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯವು 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದೆ. ಅಲ್ಲದೆ, 5,495 ಕೋಟಿ ರೂ. ಅನ್ನು ವಿಶೇಷ ಅನುದಾನ ಮತ್ತು ಆರು ಕೋಟಿ ರು. ನಷ್ಟು ನಿರ್ದಿಷ್ಟ ಅನುದಾನಗಳನ್ನು ಬಿಡುಗಡೆ ಮಾಡಿಲ್ಲ. 2017 ರಿಂದ ರಾಜ್ಯವು 53 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವಂಚಿತಗೊಳಿಸಿದೆ. ಇದು ರಾಜ್ಯಗಳ ಆರ್ಥಿಕ ಕತ್ತು ಹಿಸುಕುವಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬರಗಾಲದ ಸಂದರ್ಭದಲ್ಲೂ ಕೇಂದ್ರದ ನಿರ್ಲಕ್ಷ್ಯ
ರಾಜ್ಯವು ಶತಮಾನದ ಭೀಕರ ಬರಗಾಲ ಎದುರಿಸಿದಾಗ 33 ಸಾವಿರ ಕೋಟಿ ರೂ.ಗಿಂತ ಅಧಿಕ ನಷ್ಟ ಸಂಭವಿಸಿದ್ದರೂ ಕೇಂದ್ರ ಸರ್ಕಾರ ಯಾವುದೇ ತುರ್ತು ನೆರವು ನೀಡದೆ ನಿರ್ಲಕ್ಷ್ಯ ವಹಿಸಿದೆ. 20 ಕ್ಕೂ ಹೆಚ್ಚು ತಾಲ್ಲೂಕುಗಳು ಬರಗಾಲಕ್ಕೆ ತುತ್ತಾದಾಗ, ಬೆಳೆ ನಷ್ಟವು ಶೇ. 40 ರಿಂದ 90 ವರೆಗೆ ಇತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯದ ದುಃಸ್ಥಿತಿಯನ್ನು ನಿರ್ಲಕ್ಷಿಸಿತು. ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ. ನರೇಗಾ ಯೋಜನೆಯಲ್ಲಿ ಶೇ.90 ರಷ್ಟು ನೀಡುತ್ತಿದ್ದ ಅನುದಾನವನ್ನು ಈಗ ಶೇ. 60 ರಷ್ಟು ಮಾಡಿದೆ. ರಾಜ್ಯಗಳು ಶೇ. 10ರಷ್ಟು ನೀಡುತ್ತಿದ್ದ ಪಾಲನ್ನು ಶೇ.೪೦ಕ್ಕೆ ಹೆಚ್ಚಳ ಮಾಡಿದೆ. ಕೇಂದ್ರದ ಪಾಲು ಕಡಿಮೆಯಾಗುತ್ತಿದ್ದು, ರಾಜ್ಯದ ಮೇಲೆ ಹೊರೆ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಡಿ ನಿರ್ಣಯ: ದಕ್ಷಿಣ ಭಾರತದ ಧ್ವನಿ ಅಡಗಿಸುವ ಸಂಚು
ಮುಂಬರುವ ಲೋಕಸಭಾ ಕ್ಷೇತ್ರಗಳ ಸೀಮಾ ನಿರ್ಣಯದ ಕುರಿತು ಕಳವಳ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಜನಸಂಖ್ಯಾ ನಿಯಂತ್ರಣ, ಶಿಕ್ಷಣ ಮತ್ತು ಆರೋಗ್ಯದಲ್ಲಿ ಯಶಸ್ಸು ಸಾಧಿಸಿದ್ದಕ್ಕಾಗಿ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ ನೀಡಲಾಗುತ್ತಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಹೆಚ್ಚು ಸ್ಥಾನಗಳನ್ನು ಪಡೆಯಲಿವೆ. ಆದರೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದಂತಹ ರಾಜ್ಯಗಳು ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿವೆ. ಇದು ಪ್ರಜಾಪ್ರಭುತ್ವವಲ್ಲ, ಬದಲಾಗಿ ಜನಸಂಖ್ಯಾ ಶಿಕ್ಷೆಯಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರ 20 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬಹುದು, ತಮಿಳುನಾಡು ಮತ್ತು ಕೇರಳ ಒಟ್ಟಾಗಿ 16 ಸ್ಥಾನಗಳನ್ನು ಕಳೆದುಕೊಳ್ಳಬಹುದು ಮತ್ತು ಕರ್ನಾಟಕ ಕೂಡ ರಾಜಕೀಯ ಧ್ವನಿಯಲ್ಲಿ ಗಂಭೀರ ಕಡಿತವನ್ನು ಎದುರಿಸಲಿದೆ. ಈ ಅನ್ಯಾಯವನ್ನು ಸರಿಪಡಿಸದೆ ಗಡಿ ನಿರ್ಣಯವನ್ನು ಮಾಡಿದರೆ, ದಕ್ಷಿಣ ಭಾರತವು ತನ್ನದೇ ಆದ ದೇಶದಲ್ಲಿ ರಾಜಕೀಯವಾಗಿ ಅಂಚಿನಲ್ಲಿರುತ್ತದೆ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆ ದಾನಧರ್ಮವಲ್ಲ, ಅದು ಸಾಂವಿಧಾನಿಕ ಹಕ್ಕು
ರಾಜ್ಯಗಳು ದೆಹಲಿಯ ಪುರಸಭೆಗಳಲ್ಲ. ಕೃಷಿ, ಆರೋಗ್ಯ, ಶಿಕ್ಷಣ, ನೀರು, ಸಂಸ್ಕೃತಿ ಮತ್ತು ಇನ್ನೂ ಹೆಚ್ಚಿನವುಗಳು ರಾಜ್ಯದ ವಿಷಯಗಳಾಗಿವೆ. ಆದರೆ ಇಂದು, ನಿರ್ಧಾರಗಳನ್ನು ಸಮಾಲೋಚನೆಯಿಲ್ಲದೆ ಹೇರಲಾಗುತ್ತದೆ. ಒಮ್ಮತವಿಲ್ಲದೆ ಎನ್‌ಇಪಿ , ರಾಜ್ಯಗಳಿಲ್ಲದೆ ಕೃಷಿ ಕಾನೂನುಗಳು, ಪರಿಹಾರ ಖಚಿತತೆ ಇಲ್ಲದೆ ಜಿಎಸ್‌ಟಿ ನಿಗದಿ ಮಾಡಲಾಗುತ್ತಿದೆ. ಚುನಾಯಿತ ಸರ್ಕಾರಗಳ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಉದ್ದೇಶಿಸಲಾದ ರಾಜ್ಯಪಾಲರನ್ನು ಸಹ ಆಡಳಿತವನ್ನು ತಡೆಯಲು ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಸಾಂವಿಧಾನಿಕ ನೈತಿಕತೆಯ ಅಪಾಯಕಾರಿಯಾಗಿದೆ ಎಂದು ಹೇಳಿದರು.

