Son commits suicide in Yadgir over fear of atrocity case, father dies of shock
x

ಮೃತ ತಂದೆ ಸೈಯದ್ ಅಲಿ ಹಾಗೂ ಮಗ ಮೆಹಬೂಬ್

ಯಾದಗಿರಿಯಲ್ಲಿ ಜಾತಿನಿಂದನೆ ಕೇಸ್ ಭೀತಿಯಿಂದ ಮಗನ ಆತ್ಮಹತ್ಯೆ, ಆಘಾತದಿಂದ ತಂದೆ ಸಾವು

ಯಾದಗಿರಿಯಲ್ಲಿ 22 ವರ್ಷದ ಮೆಹಬೂಬ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಅವರ ತಂದೆ 50 ವರ್ಷದ ಸೈಯದ್ ಅಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.


ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಜಾತಿನಿಂದನೆ ಪ್ರಕರಣದ ಭೀತಿಯಿಂದ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಈ ದುರಂತದಲ್ಲಿ, 22 ವರ್ಷದ ಮೆಹಬೂಬ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಅವರ ತಂದೆ 50 ವರ್ಷದ ಸೈಯದ್ ಅಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವಿವರಗಳ ಪ್ರಕಾರ, ಸುಮಾರು ಒಂದು ವಾರದ ಹಿಂದೆ ವಡಗೇರ ಪಟ್ಟಣದಲ್ಲಿ ಭೂಮಿಗೆ ಹೋಗುವ ದಾರಿಯ ವಿಚಾರವಾಗಿ ದಲಿತ ಕುಟುಂಬವೊಂದರೊಂದಿಗೆ ಮೆಹಬೂಬ್ ಕುಟುಂಬಕ್ಕೆ ಜಗಳವಾಗಿತ್ತು. ಸ್ಥಳೀಯ ಹಿರಿಯರು ಮಧ್ಯಪ್ರವೇಶಿಸಿ ಈ ವಿವಾದವನ್ನು ನ್ಯಾಯ ಪಂಚಾಯಿತಿ ಮೂಲಕ ಬಗೆಹರಿಸಿದ್ದರು. ಆದರೆ, ಬೇರೆ ಊರಿನಿಂದ ಬಂದ ದಲಿತ ಮುಖಂಡರೊಬ್ಬರು ಮೆಹಬೂಬ್‌ಗೆ "ನಿಮ್ಮ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ" ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಬೆದರಿಕೆಯಿಂದ ತೀವ್ರ ಆತಂಕಗೊಂಡಿದ್ದ ಮೆಹಬೂಬ್, ಪ್ರಕರಣ ದಾಖಲಾದರೆ ತಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ ಮತ್ತು ಜೈಲಿಗೆ ಹೋಗಬೇಕಾಗುತ್ತದೆ ಎಂದು ಭಯಪಟ್ಟಿದ್ದ. ಇದೇ ಕಾರಣಕ್ಕೆ ಬುಧವಾರ(ಜು.9) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇತ್ತ, ಮಗನ ಸಾವಿನ ಸುದ್ದಿ ತಿಳಿದ ತಂದೆ ಸೈಯದ್ ಅಲಿ ಅವರಿಗೆ ತೀವ್ರ ಆಘಾತವಾಗಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೈಯದ್ ಅಲಿ ಕೂಡ ಮೃತಪಟ್ಟರು.

Read More
Next Story