ಬೆಂಗಳೂರಿನ ತರಬೇತಿ ನಿರತ ಪೈಲಟ್‌ಗೆ ಜಾತಿ ನಿಂದನೆ; ಇಂಡಿಗೋ ಸಂಸ್ಥೆಯ ಮೂವರು ಸಿಬ್ಬಂದಿ ವಿರುದ್ಧ ಎಫ್‌ಐಆರ್‌
x

ಬೆಂಗಳೂರಿನ ತರಬೇತಿ ನಿರತ ಪೈಲಟ್‌ಗೆ ಜಾತಿ ನಿಂದನೆ; ಇಂಡಿಗೋ ಸಂಸ್ಥೆಯ ಮೂವರು ಸಿಬ್ಬಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಗುರ್‌ಗಾಂವ್‌ ಕಾರ್ಪೊರೇಟ್ ಕಚೇರಿಯಲ್ಲಿ ಕಿರುಕುಳ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ಅಲ್ಲಿನ ಡಿಎಲ್ಎಫ್ -1 ಪೊಲೀಸ್ ಠಾಣೆ ವರ್ಗಾಯಿಸಲಾಗಿದೆ.


ಬೆಂಗಳೂರು ಮೂಲದ ತರಬೇತಿ ನಿರತ ಪೈಲಟ್ಗೆ ಜಾತಿ ಆಧರಿತ ಕಿರುಕುಳ ನೀಡಿದ ಆರೋಪದ ಮೇಲೆ ಇಂಡಿಗೋ ವಿಮಾನಯಾನ ಸಂಸ್ಥೆಯ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಪೊಲೀಸರು ಮೊದಲಿಗೆ ಝಿರೋ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಘಟನೆಯು ಗುರ್‌ಗಾಂವ್‌ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕಾರಣ ಪ್ರಕರಣವನ್ನು ಗುರ್‌ಗಾಂವ್‌ ಅಲ್ಲಿನ ಡಿಎಲ್ಎಫ್ -1 ಪೊಲೀಸ್ ಠಾಣೆ ವರ್ಗಾಯಿಸಲಾಗಿದೆ.

ತನ್ನ ಮೂವರು ಅಧಿಕಾರಿಗಳ ಮೇಲೆ ಜಾನಿಂದನೆ ಪ್ರಕರಣ ದಾಖಲಾದ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೂರಿನಲ್ಲಿ ಏನಿದೆ?

ಬೆಂಗಳೂರಿನ 35 ವರ್ಷದ ತರಬೇತಿ ನಿರತ ಪೈಲಟ್ಗೆ ಏ.28 ರಂದು ಏರ್ಲೈನ್ಸ್ ಪ್ರಧಾನ ಕಚೇರಿ ಎಮ್ಮಾರ್ ಕ್ಯಾಪಿಟಲ್ ಟವರ್- 2 ರಲ್ಲಿ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ತಾಪ್ಸೆ ಡೇ, ಮನೀಶ್ ಸಹಾನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ಅವರು ಜಾತಿ ಹಿಡಿದು ನಿಂದಿಸಿದ್ದರು ಎಂದು ಪೈಲಟ್ ದೂರು ನೀಡಿದ್ದಾರೆ.

ಕಚೇರಿಗೆ ಬಂದ ತಕ್ಷಣದಿಂದಲೇ ಕಿರುಕುಳ ನೀಡಲು ಆರಂಭಿಸಿದರು. ತಾಪ್ಸೆ ಡೇ ಅವರು ನನ್ನ ಫೋನ್ ಹಾಗೂ ಬ್ಯಾಗನ್ನು ದೂರ ಇಡುವಂತೆ ಆದೇಶಿಸಿ, ಅವಮಾನಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಏ.28ರಂದು ಮಧ್ಯಾಹ್ನ 3.30 ರಿಂದ ನಡೆದ 30 ನಿಮಿಷಗಳ ಸಭೆಯಲ್ಲಿ ಮೂವರು ಅಧಿಕಾರಿಗಳು ಜಾತಿ ಹೆಸರು ಉಲ್ಲೇಖಿಸಿ ಹೇಳಿಕೆ ನೀಡಿದ್ದರು. "ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ವಾಪಸ್ ಹೋಗಿ ಚಪ್ಪಲಿ ಹೊಲಿಯಿರಿ. ನೀನು ಇಲ್ಲಿ ಕಾವಲುಗಾರನಾಗಲು ಯೋಗ್ಯನಲ್ಲ" ಎಂದು ನಿಂದಿಸಿದ್ದರು.

ಇದೇ ರೀತಿ ಹಲವು ದಿನಗಳ ಕಾಲ ಕಿರುಕುಳ ಮುಂದುವರೆದಿತ್ತು. ಅಲ್ಲದೇ ನನ್ನ ರಾಜೀನಾಮೆಗೂ ಒತ್ತಡ ಹೇರಿದ್ದರು ಎಂದು ಪೈಲಟ್ ಆರೋಪಿಸಿದ್ದಾರೆ.

ಇನ್ನು ತರಬೇತಿ ಅವಧಿಯಲ್ಲಿ ವೇತನ ತಾರತಮ್ಯ, ಬಲವಂತದ ಮರುತರಬೇತಿ ಅವಧಿ, ಪ್ರಯಾಣ ಸವಲತ್ತು ರದ್ದು ಹಾಗೂ ಷೋಕಾಸ್ ನೋಟಿಸ್ಗಳನ್ನು ನೀಡಲಾಗುತ್ತಿತ್ತು. ಈ ಕುರಿತು ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ನೈತಿಕ ಸಮಿತಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇರೆ ದಾರಿಯಿಲ್ಲದೇ ಎಸ್ಸಿ/ಎಸ್ಟಿ ಸೆಲ್ ಸಂಪರ್ಕಿಸಿ, ದೂರು ನೀಡಿದ್ದೇನೆ ಎಂದು ಪೈಲಟ್ ತಿಳಿಸಿದ್ದಾರೆ.

Read More
Next Story