
ಮೃತ ಮಹಿಳೆ ಮುಕ್ತಾಬಾಯಿ
ಮೂಢನಂಬಿಕೆಯ ಪರಮಾವಧಿ: ದೆವ್ವ ಹಿಡಿದಿದೆ ಎಂದು ಪತ್ನಿಯನ್ನು ಬೇವಿನ ಕಟ್ಟಿಗೆಯಿಂದ ಹೊಡೆದು ಕೊಂದ
ಕಲಬುರಗಿಯ ಮುಕ್ತಬಾಯಿ ಅವರ ವಿವಾಹವು ಸುಮಾರು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನೊಂದಿಗೆ ನಡೆದಿತ್ತು. ದಂಪತಿಗೆ ಐದು ವರ್ಷದ ಮುದ್ದಾದ ಗಂಡು ಮಗನಿದ್ದಾನೆ.
ದೆವ್ವ ಹಿಡಿದಿದೆ ಎಂಬ ಕುರುಡು ನಂಬಿಕೆಗೆ ವಿವಾಹಿತ ಮಹಿಳೆಯೊಬ್ಬಳು ಬಲಿಯಾಗಿರುವ ಅತ್ಯಂತ ಭೀಕರ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿ ಮುಕ್ತಬಾಯಿ (28) ಎಂಬಾಕೆಯನ್ನು ಆಕೆಯ ಪತಿ ಮತ್ತು ಮನೆಯವರು ಬೇವಿನ ಕಟ್ಟಿಗೆಯಿಂದ ಬರ್ಬರವಾಗಿ ಹೊಡೆದು ಹತ್ಯೆ ಮಾಡಿದ್ದಾರೆ.
ಕಲಬುರಗಿಯ ಮುಕ್ತಬಾಯಿ ಅವರ ವಿವಾಹವು ಸುಮಾರು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನೊಂದಿಗೆ ನಡೆದಿತ್ತು. ದಂಪತಿಗೆ ಐದು ವರ್ಷದ ಮುದ್ದಾದ ಗಂಡು ಮಗನಿದ್ದಾನೆ. ಸಂಸಾರ ಸುಗಮವಾಗಿ ಸಾಗುತ್ತಿದ್ದ ನಡುವೆಯೇ, ಕಳೆದ ಕೆಲವು ದಿನಗಳಿಂದ ಮುಕ್ತಬಾಯಿಗೆ 'ದೆವ್ವ ಹಿಡಿದಿದೆ' ಎಂದು ಪತಿ ಹಾಗೂ ಆತನ ಮನೆಯವರು ಆರೋಪಿಸಲು ಶುರು ಮಾಡಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಆಕೆಯ ಮೇಲೆ ಪದೇಪದೇ ದೈಹಿಕ ಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಘಟನೆಯ ದಿನ ಮುಕ್ತಬಾಯಿ ಅವರ ತಾಯಿ ತಿಪ್ಪವ್ವ ಅವರು ಮಗಳಿಗೆ ಯಾವುದೇ ತೊಂದರೆ ಇಲ್ಲ, ಆಕೆಯನ್ನು ಹಿಂಸಿಸಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ಆರೋಪಿಗಳು ಕಿವಿಗೊಟ್ಟಿಲ್ಲ. ಪತಿ ಗಿಡ್ಡೆಪ್ಪ ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ, ಐದು ವರ್ಷದ ಪುಟ್ಟ ಕಂದಮ್ಮನ ಕಣ್ಣೆದುರೇ ಮುಕ್ತಬಾಯಿಯ ಮೇಲೆ ಬೇವಿನ ಕಟ್ಟಿಗೆಯಿಂದ ಅಮಾನವೀಯವಾಗಿ ದಾಳಿ ನಡೆಸಲಾಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಬಳಿಕ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದೊಯ್ದು, ಅಲ್ಲಿ ಬಲವಂತವಾಗಿ ಪೂಜೆ ಮತ್ತು ನದಿ ಸ್ನಾನ ಮಾಡಿಸಲಾಗಿದೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತಲೆಗೆ ಬಿದ್ದಿದ್ದ ಗಂಭೀರ ಪೆಟ್ಟಿನಿಂದಾಗಿ ಚಿಕಿತ್ಸೆ ಫಲಿಸದೆ ಮುಕ್ತಬಾಯಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಯ ಕುರಿತು ಮೃತರ ಸಹೋದರಿ ಶ್ರೀದೇವಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಸಾವು ಅಲ್ಲ, ಮೂಢನಂಬಿಕೆಯ ಹೆಸರಿನಲ್ಲಿ ನಡೆದ ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಹತ್ಯೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದ್ದು, ಘಟನೆ ನಡೆದ ಸ್ಥಳ ಮಹಾರಾಷ್ಟ್ರದ ವ್ಯಾಪ್ತಿಗೆ ಬರುವುದರಿಂದ ತನಿಖೆಯನ್ನು ಮುರುಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

