
ನವವಿವಾಹಿತೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಪತ್ನಿ ಬೆನ್ನಲ್ಲೇ ಪತಿಯೂ ನೇಣಿಗೆ ಶರಣು!
ಬೆಂಗಳೂರಿನ ಗಾನವಿ ಮತ್ತು ಸೂರಜ್ ಅವರ ಮದುವೆಯಾದ ಒಂದೂವರೆ ತಿಂಗಳಲ್ಲೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪತ್ನಿ ಗಾನವಿ ಸಾವಿನ ಬೆನ್ನಲ್ಲೇ ಆಕೆಯ ಪತಿ ಕೂಡ ಶುಕ್ರವಾರ ನಾಗ್ಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವನ್ನಪ್ಪಿದ ಬೆನ್ನಲ್ಲೇ, ಆಕೆಯ ಅಗಲಿಕೆ ನೋವು ಮತ್ತು ಎದುರಾದ ಅವಮಾನದ ಹೊರೆ ತಾಳಲಾರದೆ ಪತಿ ಸೂರಜ್ ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಕೇವಲ ಎರಡು ತಿಂಗಳ ಹಿಂದಷ್ಟೇ ವೈಭವಯುತವಾಗಿ ಆರಂಭವಾಗಿದ್ದ ಸುಂದರ ದಾಂಪತ್ಯವೀಗ ಮಸಣದಲ್ಲಿ ಕೊನೆಗೊಂಡಿದೆ.
ಏನಿದು ಪ್ರಕರಣ?
ವಿದ್ಯಾರಣ್ಯಪುರದ ಸೂರಜ್ ಮತ್ತು ಗಾನವಿ ಅಕ್ಟೋಬರ್ 29ರಂದು ವಿವಾಹವಾಗಿದ್ದರು. ನವೆಂಬರ್ 23ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬರೋಬ್ಬರಿ 40 ಲಕ್ಷ ರೂ. ಖರ್ಚು ಮಾಡಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿತ್ತು. ಮದುವೆಯ ನಂತರ ಹತ್ತು ದಿನಗಳ ಕಾಲ ಶ್ರೀಲಂಕಾಕ್ಕೆ ಹನಿಮೂನ್‌ಗೆ ತೆರಳಿದ್ದ ಈ ಜೋಡಿ, ಹದಿನೈದು ದಿನ ಕಳೆಯುವ ಮುನ್ನವೇ ಅಂದರೆ ಐದೇ ದಿನಕ್ಕೆ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದರು. ಹನಿಮೂನ್ ಟ್ರಿಪ್‌ನಲ್ಲಿ ಇಬ್ಬರ ನಡುವೆ ನಡೆದಿದ್ದೇನು ಎನ್ನುವುದು ಇಂದಿಗೂ ನಿಗೂಢವಾಗಿದೆ. ವಾಪಸ್ ಬಂದ ಮೂರೇ ದಿನಗಳಲ್ಲಿ ಗಾನವಿ ತನ್ನ ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅವಮಾನ ತಾಳಲಾರದೇ ಪತಿ ಆತ್ಮಹತ್ಯೆ
ಗಾನವಿ ಸಾವಿನ ನಂತರ ಆಕೆಯ ಕುಟುಂಬಸ್ಥರು ಸೂರಜ್ ಮತ್ತು ಅವರ ಮನೆಯವರ ವಿರುದ್ಧ ವರದಕ್ಷಿಣೆ ಹಾಗೂ ಕಿರುಕುಳದ ಆರೋಪ ಮಾಡಿದ್ದರು. ಇದರಿಂದ ತೀವ್ರವಾಗಿ ಕುಗ್ಗಿ ಹೋಗಿದ್ದ ಸೂರಜ್, ತನ್ನ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಅಲ್ಲಿ ಸೂರಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ಬಗ್ಗೆ ತಿಳಿಯುತ್ತಿದ್ದಂತೆ ಅವರ ತಾಯಿ ಜಯಂತಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ತನಿಖೆ ಚುರುಕು
ರಾಮಮೂರ್ತಿನಗರ ಪೊಲೀಸರು ಈಗ ಪ್ರಕರಣದ ಮೂಲವನ್ನು ಹುಡುಕುತ್ತಿದ್ದಾರೆ. ಹನಿಮೂನ್ ವೇಳೆ ದಂಪತಿ ನಡುವೆ ಯಾವುದಾದರೂ ಭಿನ್ನಾಭಿಪ್ರಾಯ ಮೂಡಿತ್ತೇ? ಅಥವಾ ಮದುವೆಗೂ ಮುನ್ನವೇ ಇಬ್ಬರ ನಡುವೆ ಏನಾದರೂ ಸಮಸ್ಯೆ ಇತ್ತೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸೂರಜ್ ಮೃತಪಟ್ಟಿರುವುದರಿಂದ ಪ್ರಕರಣ ಈಗ ಮತ್ತಷ್ಟು ಜಟಿಲವಾಗಿದ್ದು, ಇಬ್ಬರ ಮೊಬೈಲ್ ಕರೆಗಳ ವಿವರ (CDR) ಆಧಾರದ ಮೇಲೆ ಸತ್ಯಾಂಶ ಹೊರಬರಬೇಕಿದೆ.

