
ಹನಿಮೂನ್‌ನಿಂದ ವಾಪಸ್ಸಾದ ಬೆನ್ನಲ್ಲೇ ನವವಧು ಆತ್ಮಹತ್ಯೆಗೆ ಶರಣು
ಹನಿಮೂನ್ ವೇಳೆ ಜಗಳ, ವರದಕ್ಷಿಣೆ ಕಿರುಕುಳಕ್ಕೆ ನವವಧು ಬಲಿ: ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಸಾವು
ಈ ಸಾವಿನ ಬೆನ್ನಲ್ಲೇ ಗಾನವಿ ಪೋಷಕರು ಪತಿ ಸೂರಜ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದ ದಿನದಿಂದಲೂ ಒಡವೆ ಮತ್ತು ವರದಕ್ಷಿಣೆಗಾಗಿ ಸೂರಜ್ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ.
ಹನಿಮೂನ್‌ಗೆ ತೆರಳಿದ್ದಾಗ ಪತಿ ನೀಡಿದ ಎನ್ನಲಾದ ಕಿರುಕುಳ ಹಾಗೂ ವರದಕ್ಷಿಣೆ ಪೀಡೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನವವಧು ಗಾನವಿ (26), ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಅಕ್ಟೋಬರ್ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾನವಿ ಮತ್ತು ಸೂರಜ್ ಅವರ ವಿವಾಹ ಆರತಕ್ಷತೆ ಅತ್ಯಂತ ವೈಭವದಿಂದ ನೆರವೇರಿತ್ತು. ಆದರೆ ಮದುವೆಯಾದ ಕೇವಲ ಎರಡು ತಿಂಗಳಲ್ಲೇ ದಂಪತಿ ನಡುವೆ ಬಿರುಕು ಮೂಡಿತ್ತು. ಹತ್ತು ದಿನಗಳ ಹಿಂದೆ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದ ಸಂದರ್ಭದಲ್ಲಿ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಈ ಕಾರಣದಿಂದ ನಿಗದಿತ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಳೆದ ಭಾನುವಾರ (ಡಿ.21) ಇಬ್ಬರೂ ನಗರಕ್ಕೆ ವಾಪಸ್ಸಾಗಿದ್ದರು.
ಮನನೊಂದು ಆತ್ಮಹತ್ಯೆಗೆ ಶರಣು
ಪ್ರವಾಸದಿಂದ ಮರಳಿದ ಬಳಿಕ ಜಗಳ ಮುಂದುವರಿದ ಹಿನ್ನೆಲೆಯಲ್ಲಿ ಸೋಮವಾರದಂದು ಗಾನವಿ ಅವರನ್ನು ಅವರ ಪೋಷಕರು ಮನೆಗೆ ಕರೆತಂದಿದ್ದರು. ಮದುವೆಯಾದ ಅಲ್ಪ ದಿನಗಳಲ್ಲೇ ಜೀವನದಲ್ಲಿ ಎದುರಾದ ಈ ಕಹಿ ಘಟನೆಗಳಿಂದ ತೀವ್ರವಾಗಿ ನೊಂದಿದ್ದ ಗಾನವಿ, ಬುಧವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು 'ಬ್ರೈನ್ ಡೆಡ್' ಆಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.
ಪೋಷಕರಿಂದ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ
ಮಗಳ ಸಾವಿನ ಬೆನ್ನಲ್ಲೇ ಗಾನವಿ ಪೋಷಕರು ಪತಿ ಸೂರಜ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಮದುವೆಯಾದ ದಿನದಿಂದಲೂ ಚಿನ್ನಾಭರಣ ಮತ್ತು ಹೆಚ್ಚಿನ ವರದಕ್ಷಿಣೆಗಾಗಿ ಸೂರಜ್ ಮನೆಯವರು ಗಾನವಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆಯಲ್ಲೂ ಇದೇ ವಿಚಾರಕ್ಕೆ ಗಾನವಿಗೆ ಪತಿ ಪೀಡಿಸಿದ್ದೇ ಈ ಸಾವಿಗೆ ಪ್ರೇರಣೆ ಎಂದು ಅವರು ಶಂಕಿಸಿದ್ದಾರೆ.
ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪತಿ ಸೂರಜ್ ಹಾಗೂ ಆತನ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

