
ಮುಖ್ಯಾಧಿಕಾರಿ ಅಮೃತಗೌಡ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ
ಮಹಿಳಾ ಅಧಿಕಾರಿಗೆ ʼಕೈʼ ಮುಖಂಡನಿಂದ ಜೀವ ಬೆದರಿಕೆ, ನಿಂದನೆ; ಬಿಜೆಪಿ-ಜೆಡಿಎಸ್ ಕಿಡಿ
ಶಿಡ್ಲಘಟ್ಟ ನಗರಸಭೆ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಪಕ್ಷದ ಮುಖಂಡನ ವಿರುದ್ಧ ವ್ಯಕ್ತಿ ಮೇಲೆ ಕ್ರಮ ಜರುಗಿಸಬೇಕು. ಒಬ್ಬ ಮಹಿಳಾ ಅಧಿಕಾರಿಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಹೇಗೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರೊಬ್ಬರು ನಗರಸಭೆ ಪೌರಾಯುಕ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡನ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಬುಧವಾರ (ಜ.13) ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕರೆ ಮಾಡಿದ್ದ ಅವರು, ಶಿಡ್ಲಘಟ್ಟ ನಗರಸಭೆಯ ಮಹಿಳಾ ಅಧಿಕಾರಿಗೆ ನಿಂದಿಸಿದ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು. ಒಬ್ಬ ಮಹಿಳಾ ಅಧಿಕಾರಿಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
"ನೀವು ಕೂಡ ಮಹಿಳೆ, ಮಹಿಳಾ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳನ್ನು ಸಹಿಸಬಾರದು. ಮಹಿಳಾ ಅಧಿಕಾರಿಗಳ ರಕ್ಷಣೆ ಸರ್ಕಾರದ ಹೊಣೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು" ಎಂದು ಆಗ್ರಹಿಸಿದ್ದಾರೆ.
ಗೂಂಡಾ ಕಾಯ್ದೆಯಡಿ ಬಂಧಿಸಲು ಆಗ್ರಹ
ಘಟನೆ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಳ್ಳಾರಿ ಬ್ಯಾನರ್ ಪ್ರಕರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದರೇ?, ಪತ್ರವನ್ನೂ ನೀಡಿಲ್ಲ, ಹಣ ಕಟ್ಟಿಲ್ಲ ಹಾಗೂ ಅನುಮತಿ ಪಡೆದಿಲ್ಲ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಅಟ್ಟಹಾಸ, ದರ್ಪ ಹೆಚ್ಚಾಗಿದೆ. ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಬೇಕು ಎಂದು ತಿಳಿಸಿದ್ದಾರೆ.
ನಗರಸಭೆ ಪೌರಾಯುಕ್ತರನ್ನು ನಿಂದಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪೌರಕಾರ್ಮಿಕರು ಧರಣಿ ಕುಳಿತಿದ್ದಾರೆ. ಇದನ್ನು ಬಿಜೆಪಿ ವಿಶೇಷ ಆದ್ಯತೆ ಮೇಲೆ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೌರ ಕಾರ್ಮಿಕರನ್ನು ಸೇರಿದಂತೆ ಎಲ್ಲರನ್ನೂ ಶಿಡ್ಲಘಟ್ಟ ಬಿಟ್ಟು ಓಡಿಸುವೆ ಎಂದು ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ: ಖರ್ಗೆ
ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಯಾರೂ ಕೂಡ ಅವಾಚ್ಯ ಶಬ್ದ ಮಾತಾಡಬಾರದು. ಶಿಡ್ಲಘಟ್ಟದಲ್ಲಿ ಏನಾಗಿದೆ ಎಂಬುದು ತಿಳಿದಿಲ್ಲ. ಘಟನೆ ನಿಜವಾಗಿದ್ದರೆ ತನಿಖೆ ಮಾಡಿ ಕ್ರಮ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ತಿಳಿಸಿದ್ದಾರೆ.
ಏನಿದು ಘಟನೆ ?
ಬುಧವಾರ(ಜ.14) ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರು ಪಟ್ಟಣ ವ್ಯಾಪ್ತಿಯಲ್ಲಿನ ಅನಧಿಕೃತ ಬ್ಯಾನರ್ ತೆರವುಗೊಲಿಸುತ್ತಿದ್ದರು. ಈ ವೇಳೆ ರಾಜಕಾರಣಿಯೊಬ್ಬರ ಪುತ್ರನ ಸಿನಿಮಾ ಬ್ಯಾನರ್ ತೆಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪೌರಾಯುಕ್ತರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಯಾರನ್ನು ಕೇಳಿ ಬ್ಯಾನರ್ ತೆರವು ಮಾಡಿದ್ದೀರಿ ಎಂದು ಕೆಟ್ಟ ಶಬ್ದಗಳಿಂದ ಆವಾಜ್ ಹಾಕಿದ್ದು, ಚಪ್ಪಲಿಯಲ್ಲಿ ಹೊಡೆದು ದಂದೆ ಎಬ್ಬಿಸುವುದಾಗಿ ಬೆದರಿಕೆ ಹಾಕಿರುವ ಆಡಿಯೋ ಇದೀಗ ವೈರಲ್ ಆಗಿದೆ.

