
ಏರ್‌ಪೋರ್ಟ್ ಪಿಕ್-ಅಪ್ ಗೊಂದಲ: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿ, ಪರಿಹಾರ ಪ್ರಕಟ
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಮಾರ್ಗಸೂಚಿಗಳ ಪ್ರಕಾರ ನೂರು ಮೀಟರ್‌ಗಳವರೆಗೆ, ಆಗಮನ ದ್ವಾರದಲ್ಲಿ ಯಾವುದೇ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಪಾರ್ಕಿಂಗ್ ಮತ್ತು ವಾಹನ ನೋಂದಣಿ ವ್ಯವಸ್ಥೆಯಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ ಟ್ಯಾಕ್ಸಿ ಚಾಲಕರು ಈ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಯಾಣಿಕರ ಪರದಾಟ ತಪ್ಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಕೆಲವೊಂದು ಪರ್ಯಾಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ದಟ್ಟಣೆ ಮತ್ತು ಗೊಂದಲಕ್ಕೆ ಕಾರಣವೇನು?
ಟರ್ಮಿನಲ್-1ರ ಆಗಮನ ದ್ವಾರದ ಮುಂಭಾಗದಲ್ಲಿರುವ ಪಿಕ್-ಅಪ್ ವ್ಯವಸ್ಥೆಯಲ್ಲಿನ ದಟ್ಟಣೆಯೇ ಪ್ರಮುಖ ಸಮಸ್ಯೆಯಾಗಿತ್ತು. ಇಲ್ಲಿ ತಲಾ ಮೂರು ಲೇನ್‌ಗಳಂತೆ ಒಟ್ಟು 12 ಲೇನ್‌ಗಳಿದ್ದು, ಪ್ರತಿ 90 ಸೆಕೆಂಡಿಗೆ 30 ಕಾರುಗಳು ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ ವಾಸ್ತವದಲ್ಲಿ ಸುಮಾರು 100 ಕಾರುಗಳು ಏಕಕಾಲದಲ್ಲಿ ಇಲ್ಲಿಗೆ ನುಗ್ಗುತ್ತಿದ್ದುದರಿಂದ, ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕನಿಷ್ಠ 10 ನಿಮಿಷಗಳ ಕಾಲ ಅಲ್ಲೇ ನಿಲ್ಲುವಂತಾಗಿತ್ತು. ಖಾಸಗಿ ಮತ್ತು ವಾಣಿಜ್ಯ ವಾಹನಗಳ ಪ್ರವೇಶಕ್ಕೆ ಪ್ರತ್ಯೇಕ ನಿಯಂತ್ರಣವಿಲ್ಲದೆ ಇದು ಕೃತಕ ಸಂಚಾರ ದಟ್ಟಣೆಗೆ ಕಾರಣವಾಗಿ ಪ್ರಯಾಣಿಕರಿಂದ ವ್ಯಾಪಕ ದೂರುಗಳು ಬಂದಿದ್ದವು ಎಂದು ಬಿಐಎಎಲ್ ಅಧಿಕಾರಿಗಳು ವಿವರಿಸಿದರು.
ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ನಿಯಮ
ಎಲ್ಲಾ ಪ್ರಮುಖ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿರುವಂತೆ, ಇಲ್ಲೂ ಕೂಡ ಬಿಳಿ ಬೋರ್ಡ್ ಹೊಂದಿರುವ ಖಾಸಗಿ ವಾಹನಗಳಿಗೆ ಪ್ರಯಾಣಿಕರನ್ನು ಪಿಕ್-ಅಪ್ ಮಾಡಲು ಉಚಿತ ಪ್ರವೇಶ ಕಲ್ಪಿಸಲಾಗಿದೆ. ಆದರೆ ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ವಾಹನಗಳಿಗೆ ಆರಂಭದಿಂದಲೂ ಪ್ರತ್ಯೇಕ ವಲಯವನ್ನು ನಿಗದಿಪಡಿಸಲಾಗಿದ್ದು, ಅವುಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ವಾಣಿಜ್ಯ ವಾಹನಗಳ ಅನಿಯಂತ್ರಿತ ಪ್ರವೇಶ ತಡೆಯಲು ಈ ನಿಯಮ ಪಾಲನೆ ಅನಿವಾರ್ಯ.
ಟ್ಯಾಕ್ಸಿಗಳಿಗೆ ಕಠಿಣ ಸುರಕ್ಷತಾ ಮಾನದಂಡಗಳು
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಆಗಮನ ದ್ವಾರದ ಬಳಿ ಪ್ರವೇಶ ಪಡೆಯುವ ಟ್ಯಾಕ್ಸಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂತಹ ವಾಹನಗಳು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಪಟ್ಟಿರಬೇಕು ಮತ್ತು ಆರ್‌ಟಿಒ ಫಿಟ್‌ನೆಸ್ ಪ್ರಮಾಣಪತ್ರ ಹೊಂದಿರಬೇಕು. ವಾಹನದಲ್ಲಿ ಲೊಕೇಶನ್ ಟ್ರ್ಯಾಕಿಂಗ್ (AIS-140), ಪ್ಯಾನಿಕ್ ಬಟನ್ ಅಳವಡಿಕೆ ಮತ್ತು ಸುರಕ್ಷಾ ಮಿತ್ರ ಆ್ಯಪ್ ಬಳಕೆ ಕಡ್ಡಾಯವಾಗಿದೆ. ಚಾಲಕರು ಸಮವಸ್ತ್ರ ಧರಿಸಿರಬೇಕು, ವಾಹನ ಸ್ವಚ್ಛವಾಗಿರಬೇಕು ಹಾಗೂ ಕಾರುಗಳಲ್ಲಿ ಮಕ್ಕಳ ಸುರಕ್ಷತೆಗೆ ತೊಂದರೆಯಾಗುವ 'ಚೈಲ್ಡ್ ಲಾಕ್' ವ್ಯವಸ್ಥೆಯನ್ನು ತೆಗೆದುಹಾಕಿರಬೇಕು. ಈ ಮಾನದಂಡಗಳನ್ನು ಪಾಲಿಸುವ ಕೆಎಸ್‌ಟಿಡಿಸಿ ಮೂಲಕ ನೋಂದಾಯಿತವಾದ ವಾಹನಗಳಿಗೆ ಮಾತ್ರ ಆಗಮನ ದ್ವಾರದ ಬಳಿ ಪ್ರವೇಶಕ್ಕೆ ಅರ್ಹತೆ ಸಿಗಲಿದ್ದು, ಈಗಾಗಲೇ 900 ಪರವಾನಗಿಗಳನ್ನು ವಿತರಿಸಲಾಗಿದೆ.
ಪಾರ್ಕಿಂಗ್ ಸ್ಥಳ ಬದಲಾವಣೆ ಮತ್ತು ಆ್ಯಪ್ ಆಧಾರಿತ ಸೇವೆಗಳು
ನಮ್ಮ ಯಾತ್ರಿ (Namma Yatri) ಮತ್ತು ರ್‍ಯಾಪಿಡೋ (Rapido) ಸೇವೆಗಳನ್ನು ಬಳಸುವ ಪ್ರಯಾಣಿಕರಿಗಾಗಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ P1 ಮತ್ತು P2 ನಲ್ಲಿದ್ದ ಪಿಕ್-ಅಪ್ ಪಾಯಿಂಟ್‌ಗಳನ್ನು ಈಗ P4 ಪಾರ್ಕಿಂಗ್ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನೋಂದಾಯಿತ ಆ್ಯಪ್ ಆಧಾರಿತ ಸೇವಾ ವಾಹನಗಳಿಗೆ ಸುಮಾರು 1000 ಕಾರುಗಳನ್ನು ನಿಲ್ಲಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಸುಲಭವಾಗಿ ಈ ಸ್ಥಳವನ್ನು ತಲುಪಲು ಸೂಕ್ತ ಮಾರ್ಗದರ್ಶನ ಫಲಕಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಶಟಲ್ ಮತ್ತು ವ್ಯಾಲೆಟ್ ಸೇವೆ
ಹಿಂದೆ ಇದ್ದ 550 ಮೀಟರ್ ಉದ್ದದ ವಾಕ್‌ವೇ (Walkway) ಜೊತೆಗೆ, ಈಗ ಪಾರ್ಕಿಂಗ್ ಪ್ರದೇಶ ಮತ್ತು ಟರ್ಮಿನಲ್ ನಡುವೆ ಸಂಪರ್ಕ ಕಲ್ಪಿಸಲು ಉಚಿತ ಶಟಲ್ ಬಸ್ ಸೇವೆಗಳನ್ನು ಆರಂಭಿಸಲಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗಾಗಿ ಹೈಡ್ರಾಲಿಕ್ ಸೌಲಭ್ಯವಿರುವ ವೀಲ್‌ಚೇರ್ ಮತ್ತು 6 ಪ್ರತ್ಯೇಕ ಕಾರುಗಳನ್ನು ಒದಗಿಸಲಾಗಿದೆ. ಖಾಸಗಿ ವಾಹನಗಳ ಮಾಲೀಕರಿಗೆ ಅನುಕೂಲವಾಗುವಂತೆ 'ವ್ಯಾಲೆಟ್ ಪಾರ್ಕಿಂಗ್' ಸೇವೆಯನ್ನೂ ಒದಗಿಸಲು ಸೂಚಿಸಲಾಗಿದ್ದು, P4ನಲ್ಲಿ ನಿಲ್ಲಿಸಿದ ಕಾರುಗಳನ್ನು ಕೇವಲ ನಾಲ್ಕು ನಿಮಿಷಗಳಲ್ಲಿ ಆಗಮನ ದ್ವಾರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರಯಾಣಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಟ್ರಾನ್ಸ್‌ಪೋರ್ಟ್ ಡೆಸ್ಕ್ ತೆರೆಯಲಾಗಿದ್ದು, ಲಗೇಜ್ ಸಾಗಿಸಲು ನೆರವಾಗಲು 20 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪೊಲೀಸ್ ಇಲಾಖೆಗೆ ಕಠಿಣ ಕ್ರಮದ ಸೂಚನೆ
ಬಿಸಿಎಎಸ್ ಮಾರ್ಗಸೂಚಿಗಳ ಪ್ರಕಾರ ಆಗಮನ ದ್ವಾರದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಆದ್ದರಿಂದ, ಈ ಪ್ರದೇಶವನ್ನು 'ನೋ ಹಾಂಕಿಂಗ್ ಜೋನ್' ಎಂದು ಘೋಷಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅನಗತ್ಯವಾಗಿ ಹಾರ್ನ್ ಮಾಡುವ ಅಥವಾ ನಿಯಮ ಮೀರಿ ವಾಹನ ನಿಲ್ಲಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

