
ಹೊಸ ಪಾರ್ಕಿಂಗ್ ನಿಯಮ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಪ್ರತಿಭಟನೆ
ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ಪಿಕ್-ಅಪ್ ಲೇನ್‌ಗಳಲ್ಲಿ ಖಾಸಗಿ ಕಾರುಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರಬಹುದು. ಆದರೆ ಸಮಯದ ಮಿತಿ ನಿಗದಿಗೊಳಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಟರ್ಮಿನಲ್‌ಗಳಲ್ಲಿ ಜಾರಿಗೊಂಡಿರುವ ಹೊಸ ಪಿಕ್ ಅಪ್ ನಿಮಯಗಳು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೊಸ ನಿಯಮವನ್ನು ಖಂಡಿಸಿ ಸಾವಿರಾರು ಟ್ಯಾಕ್ಸಿ ಚಾಲಕರು ಸಾದಹಳ್ಳಿ ಟೋಲ್ ಬಳಿ ಮಂಗಳವಾರ ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಇನ್ನು ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ವಾಕ್ಸಮರ ನಡೆದಿದ್ದು, ಕೊನೆಗೆ ಇದು ತಾರಕಕ್ಕೇರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊನೆಗೆ ಪ್ರತಿಭಟನಾಕಾರರನ್ನು ಪರಿಣಾಮ ಸ್ಥಳದಲ್ಲಿಉದ್ವಿಗ್ನತೆ ಸೃಷ್ಟಿಯಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿ ನಿಯಂತ್ರಿಸಿದರು.
ಏನಿದು ಹೊಸ ನಿಯಮ?
ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ಪಿಕ್-ಅಪ್ ಲೇನ್‌ಗಳಲ್ಲಿ ಖಾಸಗಿ ಕಾರುಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರಬಹುದು. ಆದರೆ ಸಮಯದ ಮಿತಿ ನಿಗದಿಗೊಳಿಸಲಾಗಿದೆ. ಮೊದಲ 8 ನಿಮಿಷ ಉಚಿತವಾಗಿದ್ದು, 8 ರಿಂದ 13 ನಿಮಿಷದವರೆಗೆ 150 ರೂ. ಶುಲ್ಕ ನಿಗದಿಮಾಡಲಾಗಿದೆ. 13 ರಿಂದ 18 ನಿಮಿಷದವರೆಗೆ 300 ರೂ. ಶುಲ್ಕ ನಿಗದಿಗೊಳಿಸಲಾಗಿದೆ. 18 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ಇದ್ದರೆ ವಾಹನವನ್ನು ಟೋಯಿಂಗ್ ಮಾಡಿ ಪೊಲೀಸ್ ಠಾಣೆಗೆ ಕಳುಹಿಸಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ.
ಹಳದಿ ಬೋರ್ಡ್ ಇರುವ ಟ್ಯಾಕ್ಸಿಗಳು ಮತ್ತು ಎಲೆಕ್ನಿಕ್ ಕ್ಯಾಬ್‌ಗಳು ಪ್ರಯಾಣಿಕರಿಗಾಗಿ ನೇರವಾಗಿ ಆಗಮನ ದ್ವಾರದ ಮುಂದೆ ಕಾಯುವಂತಿಲ್ಲ. ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲೇ ಇರಬೇಕು. ಟರ್ಮಿನಲ್ 1 ಕ್ಕೆ ಬರುವ ಟ್ಯಾಕ್ಸಿಗಳು ಪಿ3 ಮತ್ತು ಪಿ4 ಪಾರ್ಕಿಂಗ್ ಬಳಸಬೇಕು. ಟರ್ಮಿನಲ್ 2ಗೆ ಬರುವ ಟ್ಯಾಕ್ಸಿಗಳು ಪಿ2 ಪಾರ್ಕಿಂಗ್ ಬಳಸಬೇಕು. ಸುಗಮ ಪಿಕ್-ಅಪ್‌ಗಾಗಿ ಪಾರ್ಕಿಂಗ್‌ಗೆ ಬಂದ ಮೊದಲ 10 ನಿಮಿಷ ಉಚಿತವಾಗಿರುತ್ತದೆ.
ಈ ನಿಯಮ ತರಲು ಕಾರಣ ಏನು?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೇಗವಾಗಿ ಬೆಳೆಯುತ್ತಿರುವ, ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1.30 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 1 ಲಕ್ಷ ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್‌ಗಳ ಮುಂಭಾಗ ಇರುವ ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು (ಕರ್ಬ್‌ಸೈಡ್) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ವಿಮಾನ ನಿಲ್ದಾಣವು ಪ್ರಯಾಣಿಕರ ಅನುಕೂಲಕ್ಕಾಗಿ, ದಟ್ಟಣೆಯನ್ನು ಸರಾಗಗೊಳಿಸುವುದು, ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಹೆಜ್ಜೆ ಇಟ್ಟಿದೆ.
ಟ್ಯಾಕ್ಸಿ ಚಾಲಕರು ಹೇಳೋದೇನು?
ಹೊಸ ನಿಯಮದ ಪ್ರಕಾರ, ವಿಮಾನ ನಿಲ್ದಾಣದ ಟರ್ಮಿನಲ್-1 ಮತ್ತು ಟರ್ಮಿನಲ್-2ರಲ್ಲಿನಿಗದಿಪಡಿಸಲಾದ ಪ್ರಯಾಣಿಕರ ಡ್ರಾಪ್ ಹಾಗೂ ಪಿಕ್‌ಅಪ್ ವಲಯಕ್ಕೆ ವಾಹನಗಳಿಗೆ 8 ನಿಮಿಷಗಳ ಕಾಲ ಉಚಿತ ನಿಲುಗಡೆಯ ಅವಕಾಶ ನೀಡಲಾಗಿದೆ. ಆದರೆ, ನಿಗದಿತ ಸಮಯದ ಮಿತಿ ಮೀರಿ ಹೆಚ್ಚಿನ ಅವಧಿಗೆ ವಾಹನ ನಿಲ್ಲಿಸಿದರೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆ. ಪ್ರಯಾಣಿಕರು ಬರುವುದಕ್ಕೆ ತಡ ಮಾಡಿದರೆ ನಾವು ಏನು ಮಾಡುವುದು? ದುಡಿದ ಹಣವನ್ನೆಲ್ಲಾ ಪೆಟ್ರೋಲ್, ಟೋಲ್, ಪಾರ್ಕಿಂಗ್ ದಂಡಕ್ಕೆ ಕಟ್ಟಿದರೆ ನಮ್ಮ ಪಾಡೇನು? ಕೆಐಎಎಲ್‌ನ ಈ ನೀತಿಯಿಂದ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ” ಎಂದು ಚಾಲಕರು ನೋವು ತೋಡಿಕೊಂಡಿದ್ದಾರೆ.
ಪ್ರಯಾಣಿಕರು ಸುರಕ್ಷತೆ, ಅನುಕೂಲತೆಯೇ ಮುಖ್ಯ
ಇನ್ನು ಪ್ರಯಾಣಿಕರು ಸುರಕ್ಷತೆ ಮತ್ತು ಅನುಕೂಲತೆಯೇ ಮುಖ್ಯ ಎಂದು ಕೆಐಎಎಲ್ ಹೇಳಿದೆ. “ಎಲ್ಲಾ ಜಾಗತಿಕ ವಿಮಾನ ನಿಲ್ದಾಣಗಳಲ್ಲಿಅಳವಡಿಸಿಕೊಂಡಿರುವ ಪದ್ಧತಿಯನ್ನೇ ಅನುಸರಿಸಿ ಟರ್ಮಿನಲ್‌ಗಳಲ್ಲಿನೂತನ ಪಿಕ್‌ಅಪ್ ವ್ಯವಸ್ಥೆಯ ನಿಯಮ ಜಾರಿಗೊಳಿಸಿದ್ದೇವೆ. ಈ ನಿಯಮದಿಂದ ಶೇ.95ರಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ,'' ಎಂದು ತಿಳಿಸಿದ್ದಾರೆ.

