ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್​ ನಿಯಮ : 8 ನಿಮಿಷಕ್ಕೆ ದಂಡ, 18 ನಿಮಿಷ ದಾಟಿದರೆ ಟೋಯಿಂಗ್
x

ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್​ ನಿಯಮ : 8 ನಿಮಿಷಕ್ಕೆ ದಂಡ, 18 ನಿಮಿಷ ದಾಟಿದರೆ ಟೋಯಿಂಗ್

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಇದೇ 8ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಖಾಸಗಿ ಕಾರು ಮತ್ತು ಬಾಡಿಗೆ ಟ್ಯಾಕ್ಸಿಗಳಿಗೆ ಪ್ರತ್ಯೇಕ ನಿಯಮ ರೂಪಿಸಲಾಗಿದೆ.


Click the Play button to hear this message in audio format

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಇದೇ ತಿಂಗಳ 8ನೇ ತಾರೀಖಿನಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ವಿಮಾನ ನಿಲ್ದಾಣದ ಆಗಮನ ದ್ವಾರದ ಬಳಿ ವಾಹನಗಳು ಹೆಚ್ಚು ಹೊತ್ತು ನಿಂತು ದಟ್ಟಣೆ ಉಂಟುಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಕಾರುಗಳು ಮತ್ತು ಬಾಡಿಗೆ ಟ್ಯಾಕ್ಸಿಗಳಿಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೇಗವಾಗಿ ಬೆಳೆಯುತ್ತಿರುವ, ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1.30 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 1 ಲಕ್ಷ ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್‌ಗಳ ಮುಂಭಾಗ ಇರುವ ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು (ಕರ್ಬ್‌ಸೈಡ್‌) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ವಿಮಾನ ನಿಲ್ದಾಣವು ಪ್ರಯಾಣಿಕರ ಅನುಕೂಲಕ್ಕಾಗಿ, ದಟ್ಟಣೆಯನ್ನು ಸರಾಗಗೊಳಿಸುವುದು, ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಹೆಜ್ಜೆ ಇಟ್ಟಿದೆ.

ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ಪಿಕ್-ಅಪ್ ಲೇನ್‌ಗಳಲ್ಲಿ ಖಾಸಗಿ ಕಾರುಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರಬಹುದು. ಆದರೆ ಸಮಯದ ಮಿತಿ ನಿಗದಿಗೊಳಿಸಲಾಗಿದೆ. ಮೊದಲ 8 ನಿಮಿಷ ಉಚಿತವಾಗಿದ್ದು, 8 ರಿಂದ 13 ನಿಮಿಷದವರೆಗೆ 150 ರೂ. ಶುಲ್ಕ ನಿಗದಿಮಾಡಲಾಗಿದೆ. 13 ರಿಂದ 18 ನಿಮಿಷದವರೆಗೆ 300 ರೂ. ಶುಲ್ಕ ನಿಗದಿಗೊಳಿಸಲಾಗಿದೆ. 18 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ಇದ್ದರೆ ವಾಹನವನ್ನು ಟೋಯಿಂಗ್ ಮಾಡಿ ಪೊಲೀಸ್ ಠಾಣೆಗೆ ಕಳುಹಿಸಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ.

ಹಳದಿ ಬೋರ್ಡ್ ಇರುವ ಟ್ಯಾಕ್ಸಿಗಳು ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಪ್ರಯಾಣಿಕರಿಗಾಗಿ ನೇರವಾಗಿ ಆಗಮನ ದ್ವಾರದ ಮುಂದೆ ಕಾಯುವಂತಿಲ್ಲ. ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲೇ ಇರಬೇಕು. ಟರ್ಮಿನಲ್ 1 ಕ್ಕೆ ಬರುವ ಟ್ಯಾಕ್ಸಿಗಳು ಪಿ3 ಮತ್ತು ಪಿ4 ಪಾರ್ಕಿಂಗ್ ಬಳಸಬೇಕು. ಟರ್ಮಿನಲ್ 2ಗೆ ಬರುವ ಟ್ಯಾಕ್ಸಿಗಳು ಪಿ2 ಪಾರ್ಕಿಂಗ್ ಬಳಸಬೇಕು. ಸುಗಮ ಪಿಕ್-ಅಪ್‌ಗಾಗಿ ಪಾರ್ಕಿಂಗ್‌ಗೆ ಬಂದ ಮೊದಲ 10 ನಿಮಿಷ ಉಚಿತವಾಗಿರುತ್ತದೆ.

ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್‌) ವ್ಯವಸ್ಥಾಪಕ ನಿರ್ದೇಶಕ ಮತ್ತು ಎಂ.ಡಿ. ಮತ್ತು ಸಿಇಒ ಹರಿ ಮರಾರ್, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹೆಚ್ಚಳ ಹೆಚ್ಚುತ್ತಲೇ ಇರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ಪ್ರಯಾಣಿಕರ ಸುರಕ್ಷತೆ, ಸುಗಮ ಆಗಮನ ಹಾಗೂ ನಿರ್ಗಮನಕ್ಕೆ ಸಹಕಾರಿಯಾಗಲಿದೆ. ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಹೊಸ ಪ್ರಕ್ರಿಯೆಯನ್ನು ಅನುಸರಿಸಿದಾಗ, ಅನುಭವವು ತ್ವರಿತ, ಸುರಕ್ಷಿತ ಮತ್ತು ಈ ಭಾಗದಲ್ಲಿ ಓಡಾಡುವ ಎಲ್ಲರಿಗೂ ಹೆಚ್ಚು ಅನುಕೂಲಕರವಾಗುತ್ತದೆ. ವಿಮಾನ ನಿಲ್ದಾಣದ ಅನುಭವವನ್ನು ಸುಗಮ ಮತ್ತು ಉತ್ತಮವಾಗಿ ಸಂಘಟಿತವಾಗಿಸುವಲ್ಲಿ ಎಲ್ಲಾ ಪಾಲುದಾರರ ಬೆಂಬಲವನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1.30 ಲಕ್ಷ ಪ್ರಯಾಣಿಕರು ಮತ್ತು 1 ಲಕ್ಷ ವಾಹನಗಳು ಸಂಚರಿಸುತ್ತವೆ. ಕಾರುಗಳು ಮತ್ತು ಟ್ಯಾಕ್ಸಿಗಳು ದೀರ್ಘಕಾಲ ರಸ್ತೆಯಲ್ಲೇ ನಿಲ್ಲುವುದರಿಂದ ಕೃತಕ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದನ್ನು ತಡೆಯಲು ಮತ್ತು ಪ್ರಯಾಣಿಕರಿಗೆ ಬೇಗನೆ ವಾಹನ ಸಿಗುವಂತೆ ಮಾಡಲು ಈ ‘ಶಿಸ್ತು ಕ್ರಮ’ ಅನಿವಾರ್ಯವಾಗಿದೆ. ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಪ್ರಯಾಣಿಕರ ಬೆಂಬಲ ವ್ಯವಸ್ಥೆಗಳಲ್ಲಿ ನಿರಂತರ ಹೂಡಿಕೆಗಳೊಂದಿಗೆ, ಬೆಂಗಳೂರು ವಿಮಾನ ನಿಲ್ದಾಣವು ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವ ದರ್ಜೆಯ ಪ್ರಯಾಣಿಕರ ಪ್ರಯಾಣವನ್ನು ಸಕ್ರಿಯಗೊಳಿಸಲು ಬದ್ಧವಾಗಿದೆ ಎಂದು ಹೇಳಿದರು.

Read More
Next Story