DKSH meeting with police | Is the rubber stamp Home Minister in the state? HDK outraged
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

'ಪೊಲೀಸರೊಂದಿಗೆ ಡಿಕೆಶಿ ಸಭೆ| ರಾಜ್ಯದಲ್ಲಿರೋದು ಹೆಬ್ಬೆಟ್ಟು ಗೃಹ ಸಚಿವರಾ? '

ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸುತ್ತಾರ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


Click the Play button to hear this message in audio format

ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್‌ ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಬಳ್ಳಾರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿರುವುದಕ್ಕೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದು, ಪೊಲೀಸರ ಸಭೆ ನಡೆಸಲು ಡಿಸಿಎಂಗೆ ಅಧಿಕಾರ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಮಂಗಳವಾರ(ಜ.6) ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಲು ಡಿ.ಕೆ. ಶಿವಕುಮಾರ್‌ ಯಾರು ? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಅಥವಾ ಹೆಬ್ಬೆಟ್ಟು ಗೃಹ ಸಚಿವರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ? ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ? ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ? ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ನಿಮ್ಮ ತನಿಖೆಯ ಹಣೆಬರಹ ಏನು ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ

ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ? ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹಕ್ಕೆ ಅಂತಿಮ ವಿಧಿ ವಿಧಾನ ನಡೆಸುವುದಕ್ಕೂ ಕುಟುಂಬಕ್ಕೆ ಅವಕಾಶವನ್ನೂ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದು ಯಾಕೆ? ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಸತ್ಯಶೋಧನ ಸಮಿತಿ ಸತ್ಯ ಹೇಳಲಿ

ಬಳ್ಳಾರಿಯಲ್ಲಿ ನಡೆದದ್ದು ಅಹಿತರ ಘಟನೆ, ಸಾವು ಪ್ರಕರಣ ಎಲ್ಲರಿಗೂ ನೋವು ತರುತ್ತದೆ. ಕಳೆದ ಒಂದು ವಾರದಿಂದ ಹಲವು ನಾಯಕರು ಬಳ್ಳಾರಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸತ್ಯಶೋಧನೆ ಮಾಡುತ್ತೇವೆ ಎಂದು ಹೋಗಿದ್ದರು! ಅಲ್ಲಿ ಅವರೇನು ಸತ್ಯ ಶೋಧನೆ ಮಾಡಿದರು ಎಂಬುದನ್ನು ಜನರ ಮುಂದೆ ಹೇಳಲಿ. ಯಾಕೆಂದರೆ ಕಾಂಗ್ರೆಸ್ಸಿಗರು ಸತ್ಯ ಬಿಟ್ಟು ಬೇರೇನು ಹೇಳುವುದಿಲ್ಲ. ಹಾಗಿದ್ದ ಮೇಲೆ ಈ ಸಮಿತಿ ಸತ್ಯವನ್ನೇ ಹೇಳಲಿ ಎಂದು ವ್ಯಂಗ್ಯವಾಡಿದರು.

ಡಿಕೆಶಿಯಿಂದ ವಿಶ್ವಾಸ ದ್ರೋಹ

ನನ್ನ ಮತ್ತು ಶಾಸಕ ಜನಾರ್ಧನ ರೆಡ್ಡಿ ನಡುವೆ ನಡೆದ ಗಲಾಟೆ ಹಳೇ ಕಥೆ. ಅದನ್ನು ಈಗ ಮುಂದೆ ತಂದು ಅವರು ಏನು ಮಾಡಲು ಸಾಧ್ಯ? ನಾನು ಯಾವುದೋ ರಾಗದ್ವೇಷ ಇಲ್ಲದೇ ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ. ಕಾಂಗ್ರೆಸ್ ಜತೆ ಕೂಡ ಸರ್ಕಾರ ಮಾಡಿದ್ದೇನೆ. ಆಗ ಬಂಡೆ ತರ ನಿಂತಿದ್ದು ಇವರೇ ತಾನೇ. ಎಲ್ಲರೂ ಜೋಡೆತ್ತು ಎಂದರು. ಆಮೇಲೆ ಆಗಿದ್ದು ಏನು? ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುಮಿಠಕಲ್‌ ಕ್ಷೇತ್ರಕ್ಕೆ ಸಚಿವ ಖರ್ಗೆ ಕೊಡುಗೆ ಏನು ?

ಗುರುಮಿಠಕಲ್ ಕ್ಷೇತ್ರಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಕೊಡುಗೆ ಏನು ಅಂತ ಹೇಳಲಿ. ಕಲ್ಯಾಣ ಕರ್ನಾಟಕ ಬಿಡಿ, ನಿಮ್ಮ ಕ್ಷೇತ್ರ ನೋಡಿದರೆ ನೀವು ಮಾಡಿದ ಅಭಿವೃದ್ಧಿ ಏನು, ಎಂತದ್ದು ಎಂಬುದು ಗೊತ್ತಾಗುತ್ತದೆ. ಮರಣೋತ್ತರ ಪರೀಕ್ಷೆಗೆ ಇಬ್ಬರು ವೈದ್ಯರನ್ನು ಕರೆಸಿದ್ದು ಯಾಕೆ? ಇದು ಇಲ್ಲಿರುವ ಪ್ರಶ್ನೆ? ಹಾಲಿ ಒಬ್ಬ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದರೆ ಎರಡನೇ ವೈದ್ಯರನ್ನು ಪೂಜೆ ಮಾಡಲು ಕರೆಸಿದಿರಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಕರಣದ ಬಗ್ಗೆ ಸಿಎಂ ಮಾತನಾಡಲಿ

ಡಿಜಿಟಲ್ ಯುಗದಲ್ಲಿ ಕುಳಿತಿರುವ ಕಡೆ ಮಾಹಿತಿ ಪಡೆಯಬಹುದು. ಈ ಪ್ರಕರಣದ ಸರಿಯಾದ ತನಿಖೆ ನಡೆದರೆ ಯಾರಿಗೆ ತೊಂದರೆಯಾಗಲಿದೆ ಎಂಬುದು ತಿಳಿದಿಲ್ಲ ಎಂದು ಪೊಲೀಸ್ ಅಧಿಕಾರಿಗಳೇ ಮಾತಾಡುತ್ತಿದ್ದಾರೆ. ಕರ್ನಾಟಕವನ್ನು ಜಂಗಲ್ ರಾಜ್ಯ ಮಾಡಲಾಗುತ್ತಿದೆ. ಇದು ಅತ್ಯಂತ ಗಂಭೀರ ಪ್ರಕರಣ. ಮುಖ್ಯಮಂತ್ರಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ ಯಾಕೆ? ನಿಮ್ಮ ಶಾಸಕರೇ ಕೊಲೆ ಮಾಡಿಸಿದರೂ ಯಾರು ಕೇಳುವಂತಿಲ್ಲ ಎನ್ನುವಂತಾಗಿದೆ ಎಂದರು.

ವೈದ್ಯರ ಮೇಲೆ ಒತ್ತಡ ಹೇರಿದ್ದು ಯಾರು ?

ಬಳ್ಳಾರಿ ಬಿಮ್ಸ್ ನಿರ್ದೇಶಕರೇ ಹೇಳುವಂತೆ ಡಾ. ಯೋಗೀಶ್ ಎಂಬುವರು ಮೊದಲು ಮರಣೋತ್ತರ ಪರೀಕ್ಷೆ ಶುರು ಮಾಡಿದ್ದರು. ಅವರ ಪರೀಕ್ಷೆ ತಡವಾಯಿತು ಎಂದು ಇನ್ನೊಬ್ಬ ವೈದ್ಯ ಡಾ. ಚೇತನ್ ಎನ್ನುವರನ್ನು ಕರೆಸಿದ್ದಾರೆ. ಆ ವೈದ್ಯರನ್ನು ಕರೆಸಿದ್ದು ಯಾಕೆ? ಯಾರ ಆದೇಶದಂತೆ ಅವರನ್ನು ಕರೆಸಲಾಯಿತು? ಇತಿಹಾಸದಲ್ಲಿ ಮೊದಲ ಬಾರಿಗೆ ಮರಣೋತ್ತರ ಪರೀಕ್ಷೆಗೆ ಇಬ್ಬರು ವೈದ್ಯರನ್ನು ಕರೆಸಿ ಮಾಡಿಸಿದ್ದಾರೆ. ಇದು ಯಾಕಾಯಿತು? ಯಾರು ಒತ್ತಡ ಹೇರಿದರು? ಯಾರನ್ನು ರಕ್ಷಣೆ ಮಾಡುವುದಕ್ಕೆ ಇದೆಲ್ಲವನ್ನೂ ಮಾಡಿದಿರಿ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ ಎಂದು ಡಿಸಿಎಂ ಡಿಕೆಶಿ ಅವರ ʼಮಿಸ್ ಗೈಡ್ʼ ಹೇಳಿಕೆಗೆ ತಿರುಗೇಟು ಕೊಟ್ಟರು.

ಘಟನೆ ಪೊಲೀಸರ ನಿಷ್ಕ್ರಿಯತೆಗೆ ಸಾಕ್ಷಿ

ನಾನು ಯಾವುದೇ ವಿಷಯವನ್ನು ದಾಖಲೆಗಳು ಇಲ್ಲದೇ ಮಾತನಾಡುವುದಿಲ್ಲ. ನೀವೆಲ್ಲಾ ಯಾರನ್ನು ತಪ್ಪಿತಸ್ಥರನ್ನಾಗಿ ಮಾಡಲು ಹೊರಟಿದ್ದೀರಿ ಎನ್ನುವುದು ಗೊತ್ತಿದೆ. ಶಾಸಕ ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿ ನಡೆಸುತ್ತಿದ್ದ ಗುಂಪನ್ನು ಕೇವಲ ಐದು ನಿಮಿಷದಲ್ಲಿ ಚದುರಿಸಬಹುದಿತ್ತು. ಯಾಕೆ ಚದುರಿಸಲಿಲ್ಲ? ಪೊಲೀಸರ ಕೈ ಯಾರು ಕಟ್ಟಿ ಹಾಕಿದರು? ಖಾಸಗಿ ಗನ್ ಮ್ಯಾನ್ ಗಳು ಮನಸೋ ಇಚ್ಚೆ ಫೈರಿಂಗ್ ಮಾಡುತ್ತಿದ್ದರೂ ಪೊಲೀಸರು ಸುಮ್ಮನಿದ್ದಿದ್ದು ಯಾಕೆ ಎಂದು ಪ್ರಶ್ನಿಸಿದರು.


Read More
Next Story