
ಸಿಜೆಐ ಮೇಲೆ ಶೂ ಎಸೆತ| ವಕೀಲನ ನಡೆ ಸಮರ್ಥಿಸಿಕೊಂಡ ಭಾಸ್ಕರ್ ರಾವ್ ವಿರುದ್ಧ ಎಲ್ಲೆಡೆ ಆಕ್ರೋಶ
"ಒಮ್ಮೆ ಕಾನೂನನ್ನು ಎತ್ತಿ ಹಿಡಿದಿದ್ದ ನೀವು, ಇಂದು ಮುಖ್ಯ ನ್ಯಾಯಮೂರ್ತಿಗಳನ್ನು ಅವಮಾನಿಸಿದವರ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿ," ಎಂದು ಭಾಸ್ಕರ್ ರಾವ್ ನಡೆಯನ್ನು ಕಾಂಗ್ರೆಸ್ ನಾಯಕ ಮನ್ಸೂರ್ ಅಲಿ ಖಾನ್ ಟೀಕಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, 'ನಿಮ್ಮ ಧೈರ್ಯ ಮೆಚ್ಚುತ್ತೇನೆ' ಎಂದು ವಕೀಲನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾನೂನು ಎತ್ತಿಹಿಡಿಯಬೇಕಾಗಿದ್ದ ಮಾಜಿ ಐಪಿಎಸ್ ಅಧಿಕಾರಿಯ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾಸ್ಕರ್ ರಾವ್ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೂ ಎಸೆಯಲು ಯತ್ನಿಸಿದ ರಾಕೇಶ್ ಕಿಶೋರ್ ಬೆಂಬಲಿಸಿ ಟ್ವೀಟ್ ಹಾಕಿದ್ದ ಭಾಸ್ಕರ್ ರಾವ್, "ಇದು ಕಾನೂನಾತ್ಮಕವಾಗಿ ತಪ್ಪಾಗಿದ್ದರೂ, ಪರಿಣಾಮ ಲೆಕ್ಕಿಸದೆ ಒಂದು ನಿಲುವು ತೆಗೆದುಕೊಂಡು ಅದಕ್ಕೆ ಬದ್ಧವಾಗಿರುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ,'' ಎಂದು ಬರೆದುಕೊಂಡಿದ್ದರು. ಇದು ತೀವ್ರ ವಿವಾದ ಸೃಷ್ಟಿಸುತ್ತಿದ್ದಂತೆ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯೊಬ್ಬರಿಂದ ಇಂತಹ ಹೇಳಿಕೆ ಬಂದಿರುವುದಕ್ಕೆ ಕಾಂಗ್ರೆಸ್ ನಾಯಕ ಮನ್ಸೂರ್ ಅಲಿ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಒಮ್ಮೆ ಕಾನೂನು ಎತ್ತಿ ಹಿಡಿದಿದ್ದ ನೀವು, ಇಂದು ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸಿದವರ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿ," ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಸಿಜೆಐ ಬಿ.ಆರ್. ಗವಾಯಿ ಗುರಿಯಾಗಿಸಿಕೊಂಡು ಶೂ ಎಸೆದಿರುವ ಪ್ರಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಟೀಕಿಸಿದ್ದರು. ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಸಾಮಾಜಿಕ ಜಾಲಾತಾಣದಲ್ಲಿ ವಕೀಲ ರಾಕೇಶ್ ಕಿಶೋರ್ ಬೆಂಬಲಿಸಿ ಹಲವರು ಬಿಜೆಪಿಯ ಹಲವು ನಾಯಕರು, ಮುಖಂಡರು ಸಂದೇಶ ಹಂಚಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.
ಫೇಸ್‌ಬುಕ್‌ನಲ್ಲಿ ವಕೀಲನ ಸಂದರ್ಶನ ಉಲ್ಲೇಖಿಸಿ ಬಳಕೆದಾರರೊಬ್ಬರು, "ಮಾತು ಕೂಡ ಚಪ್ಪಲಿಯಲ್ಲಿ ಹೊಡೆದ ಹಾಗಿದೆ"ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಅವರು ನ್ಯಾಯಾಮೂರ್ತಿಗಳೇ ಇರಬಹುದು. ಒಂದು ಧರ್ಮಕ್ಕೆ ಅಪಮಾನ ಮಾಡುವ ಹಕ್ಕು, ನೈತಿಕತೆ ಅವರಿಗಿಲ್ಲ. ಧರ್ಮದ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ಅಧಿಕಾರವಿದೆ ಎಂದ ಮಾತ್ರಕ್ಕೆ ಅವಹೇಳನ ಮಾಡುವ ಹಕ್ಕಿದೆ ಎಂದಲ್ಲ". ಎಂದಿದ್ದಾರೆ.
ಏನಿದು ಪ್ರಕರಣ ?
ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಈ ವೇಳೆ, 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬುವವರು ನ್ಯಾಯಮೂರ್ತಿಗಳ ವೇದಿಕೆಯ ಬಳಿ ಬಂದು, ತಮ್ಮ ಕಾಲಿನ ಶೂ ಕಳಚಿ, ಸಿಜೆಐ ಗವಾಯಿ ಅವರನ್ನು ಗುರಿಯಾಗಿಸಿ ಎಸೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ವಕೀಲನನ್ನು ವಶಕ್ಕೆ ಪಡೆದರು. ಈ ವೇಳೆ, "ಸನಾತನ ಧರ್ಮಕ್ಕೆ ಆದ ಅವಮಾನ ಸಹಿಸುವುದಿಲ್ಲ" ಎಂದು ವಕೀಲರು ಕೂಗಾಡಿದ್ದರು.
ಈ ಅನಿರೀಕ್ಷಿತ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದ ಸಿಜೆಐ ಗವಾಯಿ ಅವರು, ತಮ್ಮ ಆಸನದಲ್ಲಿ ಶಾಂತವಾಗಿ ಕುಳಿತು, "ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನು ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ," ಎಂದು ಅಲ್ಲಿದ್ದ ಇತರ ವಕೀಲರಿಗೆ ತಿಳಿಸಿ, ಕಲಾಪ ಮುಂದುವರೆಸಿದರು.