
ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಅಧಿಕ ಕಮಿಷನ್: ಸಿಎಂಗೆ ಪತ್ರ ಬರೆದ ಗುತ್ತಿಗೆದಾರರ ಸಂಘ
ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡದಿರುವುದಕ್ಕೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ರಾಜ್ಯ ಸರ್ಕಾರ ವತಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡದಿರುವುದಕ್ಕೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಅವಧಿಯಲ್ಲೇ ಬಿಲ್ ಪಾವತಿಸಲು ದುಪ್ಪಟ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗ ಎಲ್ಲ ಇಲಾಖೆಗಳಲ್ಲೂ ದುಪ್ಪಟ್ಟು ಕಮಿಷನ್ ಪಡೆಯಲಾಗುತ್ತಿದೆ. ಸದ್ಯ 33 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಸರ್ಕಾರದಿಂದ ನಮಗೆ ಯಾವ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ಕಳೆದ 2 ವರ್ಷಗಳಿಂದ ಸಮಸ್ಯೆ ಹಾಗೂ ಬಾಕಿ ಹಣದ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಪ್ರತಿ ಬಾರಿ ಗುತ್ತಿಗೆದಾರರನ್ನು ಸಮಾಧಾನ ಮಾಡಿ ಕಳುಹಿಸಲಾಗಿದೆ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಮುಖ್ಯಮಂತ್ರಿಗಳಿಗೆ ಗೌರವ ಕೊಟ್ಟು ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆ, ಭರವಸೆಯಿಂದ ಎಲ್ಲಾ ಗುತ್ತಿಗೆದಾರರು ಸಮಾಧಾನದಿಂದ ಇದ್ದೆವು. ಆದರೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಹಿಂದಿನ ಸರ್ಕಾರಕ್ಕಿಂತ ಈ ಮೇಲ್ಕಂಡ ಇಲಾಖೆಗಳಲ್ಲಿ ಕಮಿಷನ್ ದುಪ್ಪಟ್ಟು ಆಗಿದೆ ಎಂದು ಪತ್ರದಲ್ಲಿ ಆರೋಪ ಮಾಡಲಾಗಿದೆ.
ಎಂಟು ಇಲಾಖೆಯಿಂದ ಹಣ ಬಿಡುಗಡೆ ಇಲ್ಲ
ಕಾಮಗಾರಿ ಕೈಗೊಳ್ಳುವ 8 ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಸಂಬಂಧಿಸಿದ ಎಲ್ಲಾ ಇಲಾಖೆ ಸಚಿವರು, ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಜೇಷ್ಠತೆ, ಪಾರದರ್ಶಕತೆ ಕಾಯ್ದೆ ಕಾಪಾಡಿಲ್ಲ. ಅವರದ್ದೆ ಫಾರ್ಮುಲಾಗಳನ್ನು ತಯಾರಿಸಿಕೊಂಡು ವಿಶೇಷ ಎಓಸಿ ರೂಪದಲ್ಲಿ ಬಾಕಿ ಹಣ 3 ತಿಂಗಳಿಗೊಮ್ಮೆ ಶೇ15-20 ಬಿಡುಗಡೆ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
2017-18, 2018-19, 2019-20 ಮತ್ತು 2020-21 ಜಿಎಸ್‌ಟಿಯ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿಲ್ಲ. 2 ವರ್ಷದಿಂದ ಹಲವಾರು ಬಾರಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಿದರೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯವರು ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳನ್ನು ಪಾವತಿಸುವ ಸಮಯದಲ್ಲಿ ಎಂಡಿಪಿ ಸಲ್ಲಿಸದ ಸಂದರ್ಭದಲ್ಲಿ 5 ಪಟ್ಟು ರಾಜಧನ (ರಾಯಲ್ಟಿ) ದಂಡ ವಿಧಿಸುತ್ತಿದ್ದಾರೆ. ರಾಯಲ್ಟಿ ಮತ್ತು ಎಂಡಿಪಿ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ ಎಂದು ಹಿಂದಿನ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಚಿವರ ಸಭೆಯಲ್ಲಿ ತಿಳಿಸಿದ್ದರು. ಆದರೆ, ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಎಂದು ದೂರಲಾಗಿದೆ.
ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿದ್ದಾರೆ. ಬಳಿಕ ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್ ಪ್ರಕ್ರಿಯೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ರಾಜ್ಯ ಸಂಘವು ಪದಾಧಿಕಾರಿಗಳ ಸಭೆ ನಡೆಸಲು ಹಲವಾರು ಸಾರಿ ಪತ್ರದ ಮೂಲಕ ಮತ್ತು ಮೌಖಿಕವಾಗಿ ತಿಳಿಸಿದರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಮನವಿ ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಲಾಗಿದೆ.