Petition filed Supreme Court challenging Banu Mushtaqs selection, hearing Friday
x

ಸುಪ್ರೀಂ ಕೋರ್ಟ್‌ ಹಾಗೂ ಬಾನು ಮುಷ್ತಾಕ್‌

ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ವಜಾ

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಕಡೆ ಸರ್ಕಾರದ ನಿರ್ಧಾರಕ್ಕೆ ಮಾನ್ಯತೆ ಸಿಕ್ಕಿದ್ದು, ಬಾನು ಮುಷ್ತಾಕ್ ಅವರಿಂದಲೇ ದಸರಾ ಉದ್ಘಾಟನೆಗೆ ಇದ್ದ ಅಡೆತಡೆಗಳು ನಿವಾರಣೆಯಾದಂತಾಗಿದೆ.


ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ, ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದಿದೆ.

ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಚ್.ಎಸ್. ಗೌರವ್ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಸೆಪ್ಟೆಂಬರ್ 22 ರಂದು ದಸರಾ ಉದ್ಘಾಟನೆ ನಡೆಯಲಿರುವುದರಿಂದ, ತುರ್ತು ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರು. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಕರ್ನಾಟಕ ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿತು.

ಕರ್ನಾಟಕ ಹೈಕೋರ್ಟ್‌ನಲ್ಲೇನಾಗಿತ್ತು?

ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಿದ್ದರು. ಬಾನು ಮುಷ್ತಾಕ್ ಅವರು ಹಿಂದೂ ಧರ್ಮ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದು, ದಸರಾ ಹಿಂದೂಗಳ ಧಾರ್ಮಿಕ ಹಬ್ಬವಾಗಿದ್ದು, ಹಿಂದೂಯೇತರರಿಂದ ಉದ್ಘಾಟನೆ ಮಾಡಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಇದು ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಗಳನ್ನು ವಜಾಗೊಳಿಸಿತ್ತು . ಬಾನು ಮುಷ್ತಾಕ್ ಅವರು ಒಬ್ಬ ಸಾಧಕಿ. ಅವರನ್ನು ಆಹ್ವಾನಿಸುವುದರಿಂದ ಅರ್ಜಿದಾರರ ಯಾವುದೇ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ. ದಸರಾ ಒಂದು ನಾಡಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ ಎಂದು ರಾಜ್ಯ ಸರ್ಕಾರದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಹಿಂದೆ ಸಂಸದರಾಗಿದ್ದಾಗ ಪ್ರತಾಪ್ ಸಿಂಹ ಅವರೇ ಸಾಹಿತಿ ಕೆ.ಎಸ್. ನಿಸಾರ್ ಅಹ್ಮದ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದರು ಎಂಬುದನ್ನು ಅಡ್ವೊಕೇಟ್ ಜನರಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಕಡೆ ಸರ್ಕಾರದ ನಿರ್ಧಾರಕ್ಕೆ ಮಾನ್ಯತೆ ಸಿಕ್ಕಿದ್ದು, ಬಾನು ಮುಷ್ತಾಕ್ ಅವರಿಂದಲೇ ದಸರಾ ಉದ್ಘಾಟನೆಗೆ ಇದ್ದ ಅಡೆತಡೆಗಳು ನಿವಾರಣೆಯಾದಂತಾಗಿದೆ.

Read More
Next Story