SC/ST Quota Hike Stuck in Courts: VS Ugrappa Warns
x

ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿದರು.

ಮೀಸಲಾತಿ ಹೆಚ್ಚಳ ಮರೀಚಿಕೆ: ಜನಪ್ರತಿನಿಧಿಗಳು ತುಟಿಬಿಚ್ಚದಿದ್ದರೆ 'ಉಗ್ರ'ಪ್ಪ ಹೋರಾಟ

ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ (Schedule 9) ಸೇರಿಸಿ ರಕ್ಷಣೆ ಪಡೆಯಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಶೇ.56ರಷ್ಟು ಮೀಸಲಾತಿಯನ್ನೂ ರಕ್ಷಿಸಬೇಕಿತ್ತು ಎಂದು ವಿ.ಎಸ್. ಉಗ್ರಪ್ಪ ತಿಳಿಸಿದರು.


Click the Play button to hear this message in audio format

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಮೀಸಲಾತಿ ಹೆಚ್ಚಳದ ಕಾಯ್ದೆಗೆ ಕೆಎಟಿ (KAT) ಮತ್ತು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದರಿಂದ ಶೋಷಿತ ಸಮುದಾಯಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು, ತಮಿಳುನಾಡು ಮಾದರಿಯಲ್ಲಿ ಮೀಸಲಾತಿಯನ್ನು ಸಂವಿಧಾನದ 'ಶೆಡ್ಯೂಲ್ 9'ಕ್ಕೆ ಸೇರಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮೀಸಲಾತಿ ಹೆಚ್ಚಳಕ್ಕೆ ಈಗ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ (Schedule 9) ಸೇರಿಸಿ ರಕ್ಷಣೆ ಪಡೆಯಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಶೇ.56ರಷ್ಟು ಮೀಸಲಾತಿಯನ್ನೂ ರಕ್ಷಿಸಬೇಕಿತ್ತು. ಆದರೆ, ಆ ಕೆಲಸ ಆಗದ ಕಾರಣ ಇಂದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಬದುಕು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಮಕಾತಿ, ಬಡ್ತಿ ಸ್ಥಗಿತ - ಯುವಜನರ ಪರದಾಟ

ಮೀಸಲಾತಿ ಹೆಚ್ಚಳದ ಗೊಂದಲ ಮತ್ತು ನ್ಯಾಯಾಲಯದ ತಡೆಯಿಂದಾಗಿ ರಾಜ್ಯದಲ್ಲಿ ಪ್ರಸ್ತುತ ಯಾವುದೇ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಅರ್ಹರಿಗೆ ಬಡ್ತಿಯನ್ನೂ ನೀಡಲಾಗುತ್ತಿಲ್ಲ. 1992ರ ಇಂದಿರಾ ಸಾಹ್ನಿ ಪ್ರಕರಣವನ್ನು ಮುಂದಿಟ್ಟುಕೊಂಡು ಮೀಸಲಾತಿ ಜಾರಿಗೆ ತಡೆಯೊಡ್ಡಲಾಗುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಇದರಿಂದ ದೊಡ್ಡ ಪೆಟ್ಟು ಬಿದ್ದಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ವಪಕ್ಷ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

ಎಸ್ಸಿ-ಎಸ್ಟಿ ಜನಪ್ರತಿನಿಧಿಗಳ ಮೌನಕ್ಕೆ ಧಿಕ್ಕಾರ

ರಾಜ್ಯದಲ್ಲಿ 36 ಎಸ್‌ಸಿ ಮತ್ತು 17 ಎಸ್‌ಟಿ ಶಾಸಕರಿದ್ದರೂ ಮೀಸಲಾತಿ ತಗಾದೆಯ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ. ಅಂದು ಮೀಸಲಾತಿ ಹೆಚ್ಚಳ ಮಾಡಿದ್ದ ಬಸವರಾಜ ಬೊಮ್ಮಾಯಿ ಇಂದು ಸಂಸದರಾಗಿದ್ದಾರೆ. ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಅಂತಹ ಹಿರಿಯರು ಕೇಂದ್ರದಲ್ಲಿದ್ದಾರೆ. ಇವರೆಲ್ಲರೂ ಪಕ್ಷಾತೀತವಾಗಿ ಪ್ರಧಾನಿ ಮೋದಿಯವರ ಬಳಿ ನಿಯೋಗ ತೆರಳಿ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಬೇಕು. ಮೇಲ್ವರ್ಗಕ್ಕೆ ಶೇ.10 ಮೀಸಲಾತಿಯನ್ನು ತರಾತುರಿಯಲ್ಲಿ ನೀಡಿದ ಕೇಂದ್ರ ಸರ್ಕಾರ, ಶೋಷಿತರ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಮೌನ ವಹಿಸಿದೆ ಎಂದು ಕಿಡಿಕಾರಿದರು.

ಕುರುಬರ ಸೇರ್ಪಡೆಗೆ ಷರತ್ತು

ಕುರುಬರು ಸೇರಿದಂತೆ ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಆ ಸಮುದಾಯಕ್ಕೆ ಅಗತ್ಯವಿರುವ ಮೀಸಲಾತಿ ಪ್ರಮಾಣವನ್ನೂ ಜೊತೆಗೆ ತೆಗೆದುಕೊಂಡು ಬನ್ನಿ. ಈಗಿರುವ ಮೀಸಲಾತಿಯಲ್ಲೇ ಪಾಲು ನೀಡಲು ಸಾಧ್ಯವಿಲ್ಲ. ವಾಲ್ಮೀಕಿ ಜಯಂತಿಯಂದು ಸಿಎಂ ಸಿದ್ದರಾಮಯ್ಯ ಅವರ ಎದುರೇ ನಾನು ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಉಗ್ರಪ್ಪ ತಿಳಿಸಿದರು.

ವಾಲ್ಮೀಕಿ ರಾಮಾಯಣದ ಪಾಠ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಸರ್ವ ವರ್ಗದ ಸಮ ಸಮಾಜದ ಪರಿಕಲ್ಪನೆ ನೀಡಿದ್ದರು. ಅಯೋಧ್ಯಾ ಕಾಂಡದಲ್ಲಿ ರಾಜ್ಯಭಾರ ಮತ್ತು ವೇತನದ ಬಗ್ಗೆ ಉಲ್ಲೇಖವಿದೆ. ಆದರೆ ಇಂದು ವಾಲ್ಮೀಕಿ ನಿಗಮದಲ್ಲೇ ಹಗರಣ ನಡೆಯುತ್ತಿರುವುದು ವಿಪರ್ಯಾಸ. ನಾಯಕರು ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾರ್ಯಾಧ್ಯಕ್ಷ ಎಂ. ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಕೆ. ಸಣ್ಣಾನಾಯಕ್, ರಮೇಶ್ ಹಿರೇಜಂಬೂರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Read More
Next Story