
ಸಾಂದರ್ಭಿಕ ಚಿತ್ರ
ನೇಮಕಾತಿ ಅಧಿಸೂಚನೆ ರದ್ದು; KPSC ಕಣ್ಣಾಮುಚ್ಚಾಲೆಯಿಂದ ಸ್ಪರ್ಧಾರ್ಥಿಗಳ ಜೇಬಿಗೆ ಕತ್ತರಿ
ಕರ್ನಾಟಕ ಲೋಕಸೇವಾ ಆಯೋಗ 2024 ಸೆ. 20ರಂದು ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗೆ ಅಧಿಸೂಚನೆ ಹೊರಡಿಸಿತ್ತು.
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಉಂಟಾಗಿರುವ ಕಗ್ಗಂಟು ನೇರವಾಗಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವಂತಿದೆ.
ಮೀಸಲಾತಿ ಸಮಸ್ಯೆಯಿಂದಾಗಿಯೇ ಕಳೆದ ಒಂದು ವರ್ಷದಿಂದ ಯಾವುದೇ ನೇಮಕ ಅಧಿಸೂಚನೆ ಹೊರಡಿಸಿರಲಿಲ್ಲ. ಇದಕ್ಕೂ ಮೊದಲು ಹೊರಡಿಸಿದ್ದ ಅಧಿಸೂಚನೆಗಳನ್ನು ಈಗ ರದ್ದು ಮಾಡಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಹೊರಟಿರುವ ನೇಮಕಾತಿ ಪ್ರಾಧಿಕಾರದ ನಡೆ, ಸ್ಪರ್ಧಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವ ಜತೆಗೆ ಅವರ ಜೇಬಿಗೆ ಕತ್ತರಿ ಹಾಕುವಂತಿದೆ.
ಕರ್ನಾಟಕ ಲೋಕಸೇವಾ ಆಯೋಗ 2024 ಸೆ. 20ರಂದು ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಕ್ರೀಡಾಪಟುಗಳ ಮೀಸಲಾತಿ ಸೇರಿಸಿ ತಿದ್ದುಪಡಿ ಮಾಡಿ 2024 ಡಿಸೆಂಬರ್ 31ರಂದು ಮರು ಅಧಿಸೂಚನೆ ಹೊರಡಿಸಿ ಪರೀಕ್ಷೆಗೆ ಸಿದ್ದತೆ ನಡೆಸಿತ್ತು. ಹಾಗೆಯೇ ಭೂ ಮಾಪನ ಇಲಾಖೆಯಲ್ಲಿ 750 ಭೂ ಮಾಪಕರ ಹುದ್ದೆಗಳಿಗೆ 2024 ಡಿಸೆಂಬರ್ 9ರಂದು ಅಧಿಸೂಚನೆ ಹೊರಡಿಸಿತ್ತು. ಇದೀಗ ಎರಡೂ ನೇಮಕಾತಿ ಪ್ರಕ್ರಿಯೆಗಳನ್ನು ಕೆಪಿಎಸ್‌ಸಿ ರದ್ದುಪಡಿಸಿದ್ದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಲು ಸಿದ್ಧತೆ ಆರಂಭಿಸಿದೆ.
ಹಳೆಯ ಅಧಿಸೂಚನೆ ರದ್ದುಪಡಿಸಿ ಹೊಸ ಪ್ರಕ್ರಿಯೆ ಆರಂಭಿಸುತ್ತಿರುವುದರ ಹಿಂದೆ ನೇಮಕಾತಿ ಪ್ರಾಧಿಕಾರಗಳ ಹಣ ಮಾಡುವ ಹುನ್ನಾರ ಅಡಗಿದೆ ಎಂಬ ಆರೋಪಗಳು ಇದೀಗ ಕೇಳಿಬರುತ್ತಿವೆ.
ಸರ್ಕಾರಿ ಉದ್ಯೋಗಕ್ಕಾಗಿ ಲಕ್ಷಾಂತರ ಸ್ಪರ್ಧಾರ್ಥಿಗಳು ಶುಲ್ಕ ಪಾವತಿಸಿದ್ದರು. ಒಳಮೀಸಲಾತಿ ಕಾರಣದಿಂ ಕೆಪಿಎಸ್‌ಸಿ, ಹಳೆಯ ಅಧಿಸೂಚನೆ ರದ್ದುಪಡಿಸಿ, ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದರೆ ಮತ್ತೆ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಅದಕ್ಕಾಗಿ ಹೊಸದಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಈ ಹಿಂದಿನ ಅದಿಸೂಚನೆ ವೇಳೆ ಪಾವತಿಸಿದ್ದ ಅರ್ಜಿ ಶುಲ್ಕದ ಕಥೆಯೇನು ಎಂಬುದು ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿ ಪ್ರಶ್ನೆಯಾಗಿದೆ.
ಸರ್ಕಾರದ ವಿಳಂಬ ಧೋರಣೆಯಿಂದ ಸ್ಪರ್ಧಾರ್ಥಿಗಳಿಗೆ ಈಗಾಗಲೇ ಸಮಯ ವ್ಯರ್ಥವಾಗಿದೆ. ಆರ್ಥಿಕ ಹೊರೆಯೂ ಆಗಿದೆ. ಆದ್ದರಿಂದ ಹೊಸ ಅಧಿಸೂಚನೆ ಹೊರಡಿಸುವಾಗ ಈಗಾಗಲೇ ಅರ್ಜಿ ಸಲ್ಲಿಸಿರುವ ಸ್ಪರ್ಧಾರ್ಥಿಗಳಿಗೆ ಅರ್ಜಿ ಶುಲ್ಕಕ್ಕೆ ವಿನಾಯಿತಿ ನೀಡಬೇಕು ಎಂಬುದು ಸ್ಪರ್ಧಾರ್ಥಿಗಳ ಆಗ್ರಹವಾಗಿದೆ.
ಕೋಟ್ಯಂತರ ರೂ. ಶುಲ್ಕ ಸಂಗ್ರಹ
ಕೆಪಿಎಸ್ ಸಿಯು ಕೃಷಿ ಇಲಾಖೆಯ 945 ಹುದ್ದೆಗಳು ಹಾಗೂ ಭೂ ಮಾಪನ ಇಲಾಖೆಯ 750 ಭೂ ಮಾಪಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಎರಡೂ ಅಧಿಸೂಚನೆಗಳಿಂದ ಒಟ್ಟು 1,695 ಹುದ್ದೆಗಳಿಗೆ ಅಂದಾಜು 2ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಒಂದು ಅರ್ಜಿಗೆ ಸರಾಸರಿ 500 ರೂ. ಪರೀಕ್ಷಾ ಶುಲ್ಕ ಪಾವತಿಸಿದ್ದರೂ, ಅಂದಾಜು ಒಂದು ಕೋಟಿ ರೂ. ಸಂಗ್ರಹವಾಗಿರಲಿದೆ. ಆದರೆ ಈಗ ಮರು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದರೆ ಈ ಹಣವನ್ನು ಅಭ್ಯರ್ಥಿಗಳಿಗೆ ಮರು ಪಾವತಿಸಲಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಹಿಂತಿರುಗಿಸದೇ ಹೋದರೆ ಹಣ ಕೀಳುವ ತಂತ್ರ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಅಭ್ಯರ್ಥಿಗಳು ದೂರುತ್ತಾರೆ.
ರದ್ದಾಗಲು ಕಾರಣವೇನು?
ಸರ್ಕಾರವು ಜಾರಿಗೊಳಿಸಿರುವ ಹೊಸ ಒಳ ಮೀಸಲಾತಿ ನೀತಿಯನ್ನು ಅನೇಕ ನೇಮಕಾತಿ ಅಧಿಸೂಚನೆಗಳು ಪಾಲಿಸಿರಲಿಲ್ಲ. ಈ ಅಧಿಸೂಚನೆಗಳು ಹೊರಬಿದ್ದ ನಂತರ, ಸರ್ಕಾರವು ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿತ್ತು. ಈ ಬದಲಾವಣೆಗಳನ್ನು ಹಳೆಯ ಅಧಿಸೂಚನೆಗಳಲ್ಲಿ ಸೇರಿಸದ ಕಾರಣ, ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯ ಖಾತ್ರಿಪಡಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪರೀಕ್ಷೆ ಮುಂದೂಡಿದ್ದ ಕೆಪಿಎಸ್‌ಸಿ
ಸರ್ಕಾರದ ಹೊಸ ಆದೇಶದ ಪರಿಣಾಮ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕೃಷಿ ಇಲಾಖೆಯ 945 ಅಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಿತ್ತು.
ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 6 ಮತ್ತು 7ರಂದು ಹಾಗೂ ಇತರ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 27 ಮತ್ತು 28ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿ, ಪ್ರವೇಶ ಪತ್ರಗಳನ್ನೂ ಬಿಡುಗಡೆ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಪರೀಕ್ಷೆ ರದ್ದುಗೊಳಿಸಿತ್ತು.
ಕೆಇಎ ಪರೀಕ್ಷೆ ಮಾಡಲಿ
2017ರಲ್ಲಿ ಕೆಪಿಎಸ್‌ಸಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದಾದ ಬರೋಬ್ಬರಿ ಏಳು ವರ್ಷಗಳ ಬಳಿಕ 2024 ಸೆ.20 ರಂದು ಕೃಷಿ ಇಲಾಖೆಯಲ್ಲಿನ 945 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿತ್ತು. ಬಿಎಸ್‌ಸಿ(ಅಗ್ರಿ) ಪದವಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈಗ ದಿಢೀರ್ ಅಧಿಸೂಚನೆ ರದ್ದುಪಡಿಸಿರುವುದರಿಂದ ಮತ್ತೆ ಕೆಪಿಎಸ್ ಸಿ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹಾಗಾಗಿ ನೇಮಕಾತಿ ಪರೀಕ್ಷೆಗಳ ಹೊಣೆಯನ್ನು ಕೆಇಎಗೆ ವಹಿಸಬೇಕು ಎಂದು ಹಲವು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
"ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದ ಸ್ಪರ್ಧಾರ್ಥಿಯೊಬ್ಬರು ಪೂರ್ವಭಾವಿ ಪರೀಕ್ಷೆ ಉತ್ತೀರ್ಣರಾಗಿದ್ದರೂ ಕೃಷಿ ಅಧಿಕಾರಿಯಾಗಬೇಕು ಎಂಬ ಆಸೆಯಿಂದ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವುದು ಬಿಟ್ಟು ಕೃಷಿ ಇಲಾಖೆ ಪರೀಕ್ಷೆಗೆ ತಯಾರಿ ನಡೆಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಇದೀಗ ಅಧಿಸೂಚನೆ ರದ್ದುಪಡಿಸಿರುವುದರಿಂದ ಆ ವಿದ್ಯಾರ್ಥಿಯ ಭವಿಷ್ಯವೇ ಅತಂತ್ರವಾಗಿದೆ" ಎಂದು ಫಾರಸೈಟ್ ಸಂಸ್ಥೆಯ ನಿರ್ದೇಶಕ ತೌಸಿಫ್ ಪಾಷಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಗೊಂದಲದಲ್ಲಿ ವಿದ್ಯಾರ್ಥಿಗಳು
ಕೃಷಿ ಅಧಿಕಾರಿ ಹುದ್ದೆ ಆಕಾಂಕ್ಷಿ ಸಿಂಚನಾ ತೀರ್ಥಹಳ್ಳಿ ಮಾತನಾಡಿ,"ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂದು ರಾಜ್ಯಾದ್ಯಂತ ರೈತರು ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಆದರೆ ಕೃಷಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಅಧಿಸೂಚನೆ ಹೊರಡಿಸಿ, ಸಮಯಕ್ಕೆ ಸರಿಯಾಗಿ ಪರೀಕ್ಷೆ ನಡೆಸಿ ಎಂದು ಹಲವು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳಿಗೆ ತಯಾರಿ ನಡೆಸಲು ಖಾಸಗಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಕೊಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದು, ಗ್ರಂಥಾಲಯದಲ್ಲಿ ದಿನದ 24ಗಂಟೆಯೂ ಅಭ್ಯಾಸ ಮಾಡುತ್ತಿದ್ದೇವೆ. ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವ ನಮಗೆ ಪ್ರತೀ ತಿಂಗಳು ಕನಿಷ್ಠ 8 ಸಾವಿರ ರೂ. ಅವಶ್ಯಕತೆ ಇದೆ. ಕೆಪಿಎಸ್‌ಸಿ ಕೂಡಲೇ ಅಧಿಸೂಚನೆ ಹೊರಡಿಸಿ ಪರೀಕ್ಷೆ ಮಾಡಬೇಕು" ಎಂದು ಅಭಿಪ್ರಾಯಪಟ್ಟರು.
ಪರೀಕ್ಷೆ ನಡೆಸಲು ಕೆಪಿಎಸ್‌ಸಿ ವಿಳಂಬ
ಕಳೆದೊಂದು ವರ್ಷದ ಹಿಂದೆಯೇ ನೇಮಕ ಅಧಿಸೂಚನೆ ಹೊರಡಿಸಿದರೂ ಇದುವರೆಗೂ ಪರೀಕ್ಷೆ ನಡೆಸದೇ ಇರುವುದು ಕೆಪಿಎಸ್‌ಸಿಯ ವಿಳಂಬ ಧೋರಣೆ ತೋರಿಸುತ್ತದೆ.
ಕೃಷಿ ಇಲಾಖೆ ಅಧಿಕಾರಿ ಹಾಗೂ ಭೂಮಾಪನ ಇಲಾಖೆ ಪರೀಕ್ಷೆಗಳಿಗಾಗಿಯೇ ಅಭ್ಯರ್ಥಿಗಳು ತಪಸ್ಸಿನಂತೆ ಅಧ್ಯಯನ ಮಾಡಿದ್ದಾರೆ. ಆದರೆ, ಏಕಾಏಕಿ ಪರೀಕ್ಷೆಯನ್ನು ರದ್ದುಪಡಿಸಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸುವುದು ಸ್ಪರ್ಧಾರ್ಥಿಗಳಿಗೆ ಮಾಡಿದ ದ್ರೋಹವಾಗಿದೆ. ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಕೇವಲ ಹುಸಿ ಹೇಳಿಕೆ ನೀಡುತ್ತಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದಿದ್ದರೆ ಸಂಘಟನೆವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಸಂತೋಷ್ ಮರೂರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮರು ಅಧಿಸೂಚನೆಯಿಂದ ಸಾಮಾಜಿಕ ನ್ಯಾಯ
ಒಳ ಮೀಸಲಾತಿ ಅನ್ವಯ ಹೊಸ ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಅಧಿಸೂಚನೆಯನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಇದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿದೆ. ಸ್ಪರ್ಧಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಲೂ ಇನ್ನೂ ಹೆಚ್ಚಿನ ಅವಕಾಶ ದೊರೆಯಲಿದೆ. ಕೆಲವು ಹುದ್ದೆಗಳು ಮಾರಾಟವಾಗಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದೀಗ ಅಧಿಸೂಚನೆಯೇ ರದ್ದುಗೊಳಿಸಿರುವುದು ಇಂತಹ ಅಕ್ರಮಗಳಿಗೆ ತಡೆ ಬೀಳಲಿದೆ. ಕೆಪಿಎಸ್‌ಸಿ ಆದಷ್ಟು ಶೀಘ್ರವಾಗಿ ಅಧಿಸೂಚನೆ ಹೊರಡಿಸಿ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲಿ, ಈಗಾಗಲೇ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಕೊಡಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಅಂಕೇಶ್ ಅಭಿಪ್ರಾಯಪಟ್ಟರು.

