RR Nagars Anil Gowdas partnership with MLA Pappi: ED proposition before the court
x

ಕರ್ನಾಟಕ ಹೈಕೋರ್ಟ್‌ ಹಾಗೂ ಜಾರಿ ನಿರ್ದೇಶನಾಲಯ

ಶಾಸಕ ಪಪ್ಪಿ ಜೊತೆ ಆರ್​ಆರ್​ ನಗರದ ಅನಿಲ್‌ ಗೌಡ ಪಾಲುದಾರಿಕೆ: ಕೋರ್ಟ್​ ಮುಂದೆ ಇ.ಡಿ ಪ್ರತಿಪಾದನೆ

ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಅನಿಲ್ ಗೌಡ ಕೇವಲ ವಕೀಲರಲ್ಲ, ಅವರು ಶಾಸಕ ಪಪ್ಪಿ ಅವರೊಂದಿಗೆ ವ್ಯವಹಾರದಲ್ಲಿ ಪಾಲುದಾರರು ಎಂದು ವಾದಿಸಿದರು.


Click the Play button to hear this message in audio format

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಆರ್​ಆರ್​ ನಗರ ಕಾಂಗ್ರೆಸ್ ನಾಯಕ ಹನುಮಂತರಾಯಪ್ಪ ಅವರ ಪುತ್ರ ವಕೀಲ ಅನಿಲ್‌ ಗೌಡ ನಡುವೆ ವ್ಯವಹಾರಿಕ ಪಾಲುದಾರಿಕೆ ಇರುವುದಕ್ಕೆ ತಮ್ಮ ಬಳಿ ಪ್ರಬಲ ಸಾಕ್ಷ್ಯಗಳಿವೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ(ಸೆ.11) ಹೈಕೋರ್ಟ್‌ಗೆ ತಿಳಿಸಿದೆ.

ತಮಗೆ ಇ.ಡಿ ನೀಡಿದ್ದ ಸಮನ್ಸ್‌ ಅನ್ನು ರದ್ದುಗೊಳಿಸುವಂತೆ ಕೋರಿ ಅನಿಲ್‌ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಪೀಠದಲ್ಲಿ ನಡೆಯಿತು. ಈ ವೇಳೆ ದುಬೈನಲ್ಲಿರುವ ಕಂಪನಿಯೊಂದರಲ್ಲಿ ಇಬ್ಬರೂ ಷೇರುದಾರರಾಗಿದ್ದು, ಕೋಟ್ಯಂತರ ರೂಪಾಯಿ ಲಾಭಾಂಶ ಪಡೆದಿದ್ದಾರೆ ಎಂದು ಇಡಿ ನ್ಯಾಯಪೀಠದ ಮುಂದೆ ಬಲವಾಗಿ ವಾದಿಸಿದೆ.

ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಅನಿಲ್ ಗೌಡ ಕೇವಲ ವಕೀಲರಲ್ಲ, ಅವರು ಶಾಸಕ ಪಪ್ಪಿ ಅವರೊಂದಿಗೆ ವ್ಯವಹಾರದಲ್ಲಿ ಪಾಲುದಾರರು ಎಂದು ವಾದಿಸಿದರು. ದುಬೈನಲ್ಲಿರುವ 'ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌' ಎಂಬ ಕಂಪನಿಗೆ ಅಲ್ಲಿನ ಸರ್ಕಾರದಿಂದ ವಾಣಿಜ್ಯ ಪರವಾನಗಿ ನೀಡಲಾಗಿದೆ. ಈ ಕಂಪನಿಯ ದಾಖಲೆಗಳಲ್ಲಿ ಅನಿಲ್‌ ಗೌಡರನ್ನು 'ಮ್ಯಾನೇಜರ್‌' ಎಂದು ಉಲ್ಲೇಖಿಸಲಾಗಿದೆ ಎಂದರು.

29 ಕೋಟಿ ರೂ. ಲಾಭ

ಕಂಪನಿಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರ ಹೆಸರೂ ಇದೆ. ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಶೇ. 35 ಮತ್ತು ಅನಿಲ್‌ ಗೌಡ ಶೇ. 15ರಷ್ಟು ಷೇರು ಹೊಂದಿದ್ದಾರೆ. ಅನಿಲ್‌ ಗೌಡರ ಲ್ಯಾಪ್‌ಟಾಪ್‌ನಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ, ಶೇ. 5ರಷ್ಟು ಲಾಭಾಂಶ, ಅಂದರೆ ಸುಮಾರು 29 ಕೋಟಿ ರೂಪಾಯಿ ಪಡೆಯಲಾಗಿದೆ ಎಂಬ ಅಂಶವಿದೆ. 2021ರ ಇ-ಮೇಲ್ ಸಂದೇಶವೊಂದು ಇಬ್ಬರ ಪಾಲುದಾರಿಕೆಯನ್ನು ದೃಢಪಡಿಸುತ್ತದೆ ಎಂದು ಇ.ಡಿ ಹೇಳಿದೆ.

ವಕೀಲ ವೃತ್ತಿಯ ರಕ್ಷಣೆ ಇಲ್ಲ

2022ರಲ್ಲಿ ಅನಿಲ್‌ ಗೌಡ ವಕೀಲರಾಗಿ ನೋಂದಾಯಿಸಿಕೊಂಡಿರಬಹುದು, ಆದರೆ ಈ ವ್ಯವಹಾರಗಳು ನಡೆದಿದ್ದು 2021ರಲ್ಲಿ. ಆಗ ಅವರು ಕಾನೂನು ವಿದ್ಯಾರ್ಥಿಯಾಗಿದ್ದರು. ಹೀಗಾಗಿ, ನಾವು ಅವರನ್ನು ವಕೀಲರಾಗಿ ವಿಚಾರಣೆಗೆ ಕರೆದಿಲ್ಲ, ಬದಲಿಗೆ ಉದ್ಯಮದ ಪಾಲುದಾರರಾಗಿ ಹೇಳಿಕೆ ಪಡೆಯಲು ಸಮನ್ಸ್‌ ನೀಡಿದ್ದೇವೆ ಎಂದು ಇ.ಡಿ ಸ್ಪಷ್ಟಪಡಿಸಿತು. ಅನಿಲ್‌ ಗೌಡ ಪರ ವಕೀಲರು, "ಅನಿಲ್‌ ಗೌಡ ಅವರು ಪ್ರಾಕ್ಟೀಸ್ ಮಾಡುತ್ತಿರುವ ವಕೀಲರು ಎಂಬುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಬೇಕು," ಎಂದು ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿತು. ಅಲ್ಲದೆ, ಅನಿಲ್‌ ಗೌಡ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಮುಂದೂಡಿತು.

Read More
Next Story