
ಇಡಿ ದಾಳಿ | ಚಿತ್ರದುರ್ಗ ಶಾಸಕ ವೀರೇಂದ್ರ ಬಂಧನ; 12 ಕೋಟಿ ನಗದು, ಚಿನ್ನಾಭರಣ ಜಪ್ತಿ
ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಸೇರಿ 5 ಕ್ಯಾಸಿನೊಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಅನಧಿಕೃತ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಹಾಗೂ ಅವರ ಆಪ್ತರ ಕಚೇರಿ, ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ಕೋಟ್ಯಂತರ ರೂ. ನಗದು, ಚಿನ್ನಾಭರಣ ಜಪ್ತಿ ಮಾಡಿದೆ.
ಆ.22 ಹಾಗೂ 23 ರಂದು ಜಾರಿ ನಿರ್ದೇಶನಾಲಯದ ಬೆಂಗಳೂರು ವಿಭಾಗದ ಅಧಿಕಾರಿಗಳು ಸಿಕ್ಕಿಂನ ಗ್ಯಾಂಗ್ಟಕ್, ಕರ್ನಾಟಕದ ಚಿತ್ರದುರ್ಗ, ಬೆಂಗಳೂರು ನಗರ, ಹುಬ್ಬಳ್ಳಿ, ರಾಜಸ್ತಾನದ ಜೋದ್‌ಪುರ, ಮಹಾರಾಷ್ಟ್ರದ ಮುಂಬೈ ಮತ್ತು ಗೋವಾ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಸೇರಿ 5 ಕ್ಯಾಸಿನೊಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ವಿವಿಧ ಅಪರಾಧ ದಾಖಲೆಗಳು, ಅಂದಾಜು 12 ಕೋಟಿ ರೂ. ನಗದು, ವಿದೇಶಿ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆ.ಜಿ ಬೆಳ್ಳಿ ವಸ್ತುಗಳು, ಆಸ್ತಿ ದಾಖಲೆಗಳು ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇದಲ್ಲದೆ, ವೀರೇಂದ್ರ ಹಾಗೂ ಅವರ ಆಪ್ತರ ಹೆಸರಿನಲ್ಲಿದ್ದ 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಸೀಜ್ ಮಾಡಲಾಗಿದೆ.
ಕೆ.ಸಿ.ವೀರೇಂದ್ರ ಬಂಧನ
ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಶನಿವಾರ ಸಿಕ್ಕಿಂನ ಗ್ಯಾಂಗ್ಟಾಕ್‌ನಿಂದ ಬಂಧಿಸಿ, ಅಲ್ಲಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಅವರನ್ನು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮ್ಯಾಂಡ್ ಪಡೆದು ಕರೆತರಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.