
ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದೇ ಅನುಮಾನ; ಪಿಡಬ್ಲ್ಯೂಡಿಯಿಂದಲೂ ಕೆಎಸ್‌ಸಿಎಗೆ ನೋಟಿಸ್
ಸರ್ಕಾರದ ಈ ನಡೆ ಹಠಾತ್ ಬೆಳವಣಿಗೆಯಲ್ಲದಿದ್ದರೂ, ಅದರ ತೀವ್ರತೆ ಮಾತ್ರ ಕೆಎಸ್‌ಸಿಎ ಪಾಲಿಗೆ ಬಿಸಿ ತುಪ್ಪವಾಗಿದೆ. ಪಿಡಬ್ಲ್ಯೂಡಿ ಇಲಾಖೆ ಕಳುಹಿಸಿರುವ ಅಧಿಸೂಚನೆಯಲ್ಲಿ ಪ್ರಮುಖ ಮತ್ತು ರಾಜಿ ಮಾಡಿಕೊಳ್ಳಲಾಗದ ಷರತ್ತುಗಳನ್ನು ವಿಧಿಸಲಾಗಿದೆ.
ಸುರಕ್ಷತೆಗೇ ಮೊದಲ ಆದ್ಯತೆ ನೀಡಬೇಕೆಂಬ ಕಠಿಣ ನಿಲುವು ತಳೆದಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯು, ವಿಶ್ವದರ್ಜೆಯ ಕ್ರಿಕೆಟ್ ಮೈದಾನವೆಂದು ಖ್ಯಾತಿ ಪಡೆದಿರುವ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿಗೆ ದೊಡ್ಡದೊಂದು ಆಘಾತ ನೀಡಿದೆ.
ಕ್ರೀಡಾಂಗಣದ ಕಟ್ಟಡದ ಸ್ಥಿರತೆ ಮತ್ತು ಪ್ರೇಕ್ಷಕರ ಸುರಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪಿಡಬ್ಲ್ಯೂಡಿ ಇಲಾಖೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಅಧಿಕೃತ ಮತ್ತು ಕಠಿಣ ಸ್ವರೂಪದ ನೊಟೀಸ್ ಜಾರಿ ಮಾಡಿದೆ. ಇದರ ಪರಿಣಾಮವಾಗಿ, ಈ ಸುಂದರ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಬೇಕಿದ್ದ ಪಂದ್ಯಗಳ ಭವಿಷ್ಯ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ.
ಕಠಿಣ ಷರತ್ತುಗಳು
ಸರ್ಕಾರದ ಈ ನಡೆ ಹಠಾತ್ ಬೆಳವಣಿಗೆಯಲ್ಲದಿದ್ದರೂ, ಅದರ ತೀವ್ರತೆ ಮಾತ್ರ ಕೆಎಸ್‌ಸಿಎ ಪಾಲಿಗೆ ಬಿಸಿ ತುಪ್ಪವಾಗಿದೆ. ಪಿಡಬ್ಲ್ಯೂಡಿ ಇಲಾಖೆ ಕಳುಹಿಸಿರುವ ಅಧಿಸೂಚನೆಯಲ್ಲಿ ಪ್ರಮುಖ ಮತ್ತು ರಾಜಿ ಮಾಡಿಕೊಳ್ಳಲಾಗದ ಷರತ್ತುಗಳನ್ನು ವಿಧಿಸಲಾಗಿದೆ.
ಕ್ರೀಡಾಂಗಣದ ಕಟ್ಟಡಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಸಾಬೀತುಪಡಿಸಲು ಸಾಮಾನ್ಯ ಸಿವಿಲ್ ಎಂಜಿನಿಯರ್‌ಗಳ ವರದಿ ಸಾಲದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ (NABL) ಮಾನ್ಯತೆ ಪಡೆದ ತಜ್ಞ ಸಂಸ್ಥೆಗಳಿಂದಲೇ ಅತ್ಯಂತ ವಿವರವಾದ ಫಿಟ್‌ನೆಸ್ ವರದಿಯನ್ನು ಸಿದ್ಧಪಡಿಸಬೇಕು ಎಂಬುದು ಸರ್ಕಾರದ ಪ್ರಮುಖ ಆದೇಶವಾಗಿದೆ.
ಎಲ್ಲಿಯವರೆಗೆ ಈ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಇಲಾಖೆಯಿಂದ ಸುರಕ್ಷತಾ ಅನುಮೋದನೆ ಅಥವಾ ನಿರಾಕ್ಷೇಪಣಾ ಪತ್ರವನ್ನು ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಕ್ರೀಡಾಂಗಣದಲ್ಲಿ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಅದು ಅಂತಾರಾಷ್ಟ್ರೀಯ ಪಂದ್ಯವಾಗಿರಲಿ ಅಥವಾ ಸ್ಥಳೀಯ ಲೀಗ್ ಆಗಿರಲಿ, ಕ್ರೀಡಾಂಗಣವು ಸುರಕ್ಷಿತ ಎಂದು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಚಿನ್ನಸ್ವಾಮಿ ಮೈದಾನದ ಬಾಗಿಲುಗಳು ಪ್ರೇಕ್ಷಕರಿಗೆ ಮುಚ್ಚಿರಲಿವೆ.
ನ್ಯಾ.ಕುನ್ಹಾ ಸಮಿತಿಯ ತನಿಖಾ ವರದಿಯ ಶಿಫಾರಸುಗಳು
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ನಡೆದ ಬಳಿಕ ಆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾ.ಜಾನ್ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿತ್ತು.
ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆಯೇ (Design and Structure) ಇಂತಹ ಬೃಹತ್ ಜನಸಂದಣಿಗೆ ಸೂಕ್ತವಾಗಿಲ್ಲ ಎಂದು ವರದಿ ಬೆಟ್ಟು ಮಾಡಿತ್ತು.
ವರದಿಯ ಪ್ರಕಾರ, ಕ್ರೀಡಾಂಗಣದಲ್ಲಿ ತುರ್ತು ನಿರ್ಗಮನ ದ್ವಾರಗಳ ಕೊರತೆ, ಕಿರಿದಾದ ಪ್ರವೇಶ ದ್ವಾರಗಳು ಮತ್ತು ಜನಸಂದಣಿ ನಿಯಂತ್ರಣಕ್ಕೆ ಬೇಕಾದ ಮೂಲಸೌಕರ್ಯಗಳ ಕೊರತೆಯೇ ಅಂದಿನ ದುರಂತಕ್ಕೆ ಪ್ರಮುಖ ಕಾರಣವಾಗಿತ್ತು. ಕ್ರೀಡಾಂಗಣದ ಮೂಲಸೌಕರ್ಯವನ್ನು ಆಮೂಲಾಗ್ರವಾಗಿ ಬದಲಾಯಿಸುವವರೆಗೂ ಅಥವಾ ಸುರಕ್ಷತಾ ಮಾನದಂಡಗಳನ್ನು ಪೂರೈಸುವವರೆಗೂ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುವುದು ಅಪಾಯಕಾರಿ ಎಂದು ಕುನ್ಹಾ ಸಮಿತಿ ಎಚ್ಚರಿಸಿತ್ತು. ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳ ನಿರ್ಲಕ್ಷ್ಯವನ್ನೂ ವರದಿ ಎತ್ತಿ ಹಿಡಿದಿತ್ತು. ಇದೀಗ ಲೋಕೋಪಯೋಗಿ ಇಲಾಖೆಯೂ ನೋಟಿಸ್ ನೀಡಿದೆ.
ಹೈಕೋರ್ಟ್ ಮೇಲ್ವಿಚಾರಣೆ
ವಿಜಯೋತ್ಸವ ಕಾಲ್ತುಗಳಿತ ದುರಂತದ ನಂತರ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಸಾವಿರಾರು ಜನರ ಪ್ರಾಣದ ರಕ್ಷಣೆ ಸರ್ಕಾರದ ಆದ್ಯತೆಯಾಗಬೇಕು ಎಂದು ನ್ಯಾಯಾಲಯ ಕಟುವಾಗಿ ನುಡಿದಿತ್ತು.
ಕ್ರೀಡಾಂಗಣದ ಸಾಮರ್ಥ್ಯ ಕೇವಲ 35,000 ಇದ್ದಾಗ್ಯೂ, ವಿಜಯೋತ್ಸವದ ದಿನ ಲಕ್ಷಾಂತರ ಜನರನ್ನು ಸೇರಲು ಬಿಟ್ಟಿದ್ದು ಹೇಗೆ? ಆಂಬ್ಯುಲೆನ್ಸ್ ಸೇರಿದಂತೆ ತುರ್ತು ವೈದ್ಯಕೀಯ ಸೌಲಭ್ಯಗಳು ಏಕಿರಲಿಲ್ಲ? ಎಂದು ನ್ಯಾಯಾಲಯ ಸರ್ಕಾರ ಮತ್ತು ಕೆಎಸ್‌ಸಿಎಯನ್ನು ಪ್ರಶ್ನಿಸಿತ್ತು.
ನ್ಯಾಯಾಲಯದ ತೀಕ್ಷ್ಣ ನಿರ್ದೇಶನಗಳು ಮತ್ತು ಕುನ್ಹಾ ಸಮಿತಿಯ ಶಿಫಾರಸುಗಳ ಹಿನ್ನೆಲೆಯಲ್ಲಿಯೇ ಇದೀಗ ಪಿಡಬ್ಲ್ಯೂಡಿ ಇಲಾಖೆ ಇಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ. ಕೇವಲ ತಾತ್ಕಾಲಿಕ ಪರಿಹಾರಗಳಿಂದ ಇನ್ನು ಮುಂದೆ ಕೆಲಸ ನಡೆಯುವುದಿಲ್ಲ, ಶಾಶ್ವತ ಮತ್ತು ವೈಜ್ಞಾನಿಕ ಸುರಕ್ಷತಾ ಕ್ರಮಗಳು ಆಗಲೇಬೇಕು ಎಂಬುದು ಈಗಿನ ಆದೇಶದ ಹೂರಣವಾಗಿದೆ.
ಕೆಎಸ್‌ಸಿಎ ಮುಂದಿರುವ ಸವಾಲು
ಪಿಡಬ್ಲ್ಯೂಡಿ ಇಲಾಖೆಯ ಈ ಆದೇಶ ಕೆಎಸ್‌ಸಿಎ ಪಾಲಿಗೆ ನುಂಗಲಾರದ ತುತ್ತಾಗಿದೆ. ಕ್ರೀಡಾಂಗಣವು ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ಜಾಗದಲ್ಲಿದ್ದು (ಲೀಸ್ ಆಧಾರದಲ್ಲಿ), ಸರ್ಕಾರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.
2026ರ ಐಪಿಎಲ್ ಪಂದ್ಯಗಳ ಆತಿಥ್ಯ ವಹಿಸಲು ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಬೇಕಿದೆ. ಆದರೆ, ಅದಕ್ಕೂ ಮುನ್ನ ಎನ್‌ಎಬಿಎಲ್ ತಜ್ಞರ ಮೂಲಕ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಪರೀಕ್ಷಿಸಿ, ಅಗತ್ಯವಿದ್ದರೆ ದುರಸ್ತಿ ಅಥವಾ ಮಾರ್ಪಾಡುಗಳನ್ನು ಮಾಡಿ ಸುರಕ್ಷತಾ ಪ್ರಮಾಣಪತ್ರ ಪಡೆಯಬೇಕಾದ ದೊಡ್ಡ ಸವಾಲು ಆಡಳಿತ ಮಂಡಳಿಯ ಮುಂದಿದೆ. ಅಲ್ಲಿಯವರೆಗೂ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದ ಹೊರಗೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

