Priority given to safety at Chinnaswamy Stadium, emphasis on holding matches again in the state
x

ಭಾರತ ತಂಡದ ಮಾಜಿ ಆಟಗಾರ ಬ್ರಿಜೇಶ್‌ ಪಟೇಲ್‌ ಮಾತನಾಡಿದರು. (ಚಿತ್ರ: ರಘು ಆರ್‌.ಡಿ.)

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳ ಕಲರವ: ಬ್ರಿಜೇಶ್ ಪಟೇಲ್

ನಾವು ಕಾನೂನಾತ್ಮಕವಾಗಿ ಕ್ರಿಕೆಟ್‌ಗೆ ಹಣವನ್ನು ಖರ್ಚು ಮಾಡಿದ್ದೇವೆ. ಬ್ಯಾಂಕಿನಲ್ಲಿ 400 ಕೋಟಿ ರೂ. ಹಣವಿದ್ದು, ಪಂದ್ಯಗಳನ್ನು ನಡೆಸಲು ಆಲೂರಿನಲ್ಲಿರುವ ಕ್ರಿಕೆಟ್ ಮೈದಾನ ಸಿದ್ದವಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಬ್ರಿಜೇಶ್‌ ಪಟೇಲ್‌ ತಿಳಿಸಿದರು.


Click the Play button to hear this message in audio format

"ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಶೀಘ್ರದಲ್ಲೇ ಮರುಕಳಿಸಲಿವೆ. ಕ್ರೀಡಾಂಗಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮರು ವಿನ್ಯಾಸಗೊಳಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಅಭಿಮಾನಿಗಳಿಗೆ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲಾಗುವುದು," ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಹಿರಿಯ ಕ್ರಿಕೆಟ್ ಆಡಳಿತಗಾರ ಬ್ರಿಜೇಶ್ ಪಟೇಲ್ ಭರವಸೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯ ಕುರಿತು ಮತ್ತು ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.

ಚುನಾವಣಾ ಕಣ ರಂಗೇರುತ್ತಿದೆ

ಕೆಎಸ್‌ಸಿಎ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಎನ್. ಶಾಂತಕುಮಾರ್ ಅವರ ತಂಡವನ್ನು ಬೆಂಬಲಿಸುತ್ತಿರುವುದಾಗಿ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದರು. "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ನಾನು ಕ್ರಿಕೆಟ್‌ಗಾಗಿ ಹಣ ಖರ್ಚು ಮಾಡುತ್ತಿಲ್ಲ ಎಂಬ ಆರೋಪಗಳಲ್ಲಿ ಹುರುಳಿಲ್ಲ. ನಾವು ಕಾನೂನಾತ್ಮಕವಾಗಿಯೇ ಕ್ರಿಕೆಟ್ ಅಭಿವೃದ್ಧಿಗೆ ಹಣ ವಿನಿಯೋಗಿಸಿದ್ದೇವೆ," ಎಂದು ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಿದರು.

ಸಂಸ್ಥೆಯ ಖಜಾನೆಯಲ್ಲಿ 400 ಕೋಟಿ ರೂಪಾಯಿ

ಕೆಎಸ್‌ಸಿಎ ಆರ್ಥಿಕವಾಗಿ ಸದೃಢವಾಗಿದೆ ಎಂದು ಬ್ರಿಜೇಶ್ ಪಟೇಲ್ ಇದೇ ವೇಳೆ ಮಾಹಿತಿ ನೀಡಿದರು. "ಸದ್ಯ ಕೆಎಸ್‌ಸಿಎ ಖಾತೆಯಲ್ಲಿ 400 ಕೋಟಿ ರೂಪಾಯಿ ಹಣವಿದೆ. ಪಂದ್ಯಗಳನ್ನು ಆಯೋಜಿಸಲು ಆಲೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ಸಿದ್ಧವಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೆ.ಎನ್. ಶಾಂತಕುಮಾರ್ ಅವರಿಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಪರ್ಕವಿದ್ದು, ಇದು ಕ್ರಿಕೆಟ್ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುರಕ್ಷತೆಗೆ 'ಮಾಸ್ಟರ್ ಪ್ಲಾನ್'

ಇದೇ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆ.ಎನ್. ಶಾಂತಕುಮಾರ್, "ನಾಲ್ಕು ದಶಕಗಳಿಂದ ವಿಶ್ವದ ವಿವಿಧ ದೇಶಗಳಲ್ಲಿನ ಕ್ರೀಡಾಂಗಣಗಳನ್ನು ನೋಡಿದ ಅನುಭವ ನನಗಿದೆ. ಆಡಳಿತಗಾರನಾಗಿ ನನ್ನ ಅನುಭವವನ್ನು ರಾಜ್ಯದ ಕ್ರಿಕೆಟ್ ಅಭಿವೃದ್ಧಿಗೆ ಧಾರೆಯೆರೆಯುತ್ತೇನೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆಗೆ ವಿಶೇಷ ಗಮನಹರಿಸಿ, ಅವರಿಗೆ ಉತ್ತಮ ಅನುಭವ ನೀಡಲು ನಮ್ಮ ತಂಡ ಬದ್ಧವಾಗಿದೆ," ಎಂದು ಭರವಸೆ ನೀಡಿದರು.

ಚುನಾವಣೆ ಮುಂದೂಡಿಕೆ ವಿವಾದ

ಕೆಎಸ್‌ಸಿಎ ಪದಾಧಿಕಾರಿಗಳ ಆಯ್ಕೆಗೆ ನವೆಂಬರ್ 30 ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೆಲವು ಆಂತರಿಕ ಗೊಂದಲಗಳ ನಿವಾರಣೆಗಾಗಿ ಡಿಸೆಂಬರ್ 30ಕ್ಕೆ ಮುಂದೂಡಲಾಗಿದೆ. ಆದರೆ, ಚುನಾವಣಾಧಿಕಾರಿಗಳ ಈ ನಡೆಗೆ ಅಧ್ಯಕ್ಷ ಸ್ಥಾನದ ಮತ್ತೋರ್ವ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಚುನಾವಣಾ ಕಣದಲ್ಲಿ ಹೊಸ ಸಂಚಲನ ಮೂಡಿಸಿದೆ.

Read More
Next Story