ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ| 2025ರಲ್ಲಿ 3,954 ಪ್ರಕರಣ ದಾಖಲು, ಶಿಕ್ಷೆಯಾಗಿದ್ದು  6 ಮಂದಿಗೆ ಮಾತ್ರ!
x

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ| 2025ರಲ್ಲಿ 3,954 ಪ್ರಕರಣ ದಾಖಲು, ಶಿಕ್ಷೆಯಾಗಿದ್ದು 6 ಮಂದಿಗೆ ಮಾತ್ರ!

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ತನಿಖಾ ಹಂತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿಯುತ್ತಿರುವುದು ನ್ಯಾಯದಾನ ಪ್ರಕ್ರಿಯೆಯ ವೈಫಲ್ಯ ಪುಷ್ಟಿಕರಿಸಿದೆ.


Click the Play button to hear this message in audio format

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲು 'ಪೋಕ್ಸೋ' ಕಾಯ್ದೆಡಿಯಲ್ಲಿ ಪ್ರತಿ ಪ್ರಕರಣವೂ ಅತ್ಯಂತ ಸೂಕ್ಷ್ಮ ಹಾಗೂ ಆದ್ಯತೆಯ ತನಿಖೆಗೆ ಒಳಪಡಬೇಕು. ಆದರೆ, ಕರ್ನಾಟಕ ರಾಜ್ಯದ ಇತ್ತೀಚಿನ ಅಂಕಿಅಂಶಗಳು ಒಂದು ಆಘಾತಕಾರಿ ಸತ್ಯವನ್ನು ಹೊರಹಾಕುತ್ತಿವೆ.

ರಾಜ್ಯದಲ್ಲಿ ಪೋಕ್ಸೋ (Protection of Children from Sexual Offences Act, 2012) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತನಿಖಾ ಹಂತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿಯುತ್ತಿರುವುದು ನ್ಯಾಯದಾನ ಪ್ರಕ್ರಿಯೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳಿಗೆ ಹೋಲಿಸಿದರೆ, ಈ ವರ್ಷ ತನಿಖೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸಂತ್ರಸ್ತ ಮಕ್ಕಳಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ.

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, 2025ನೇ ಸಾಲಿನಲ್ಲಿ ಒಟ್ಟು 807 ಪೋಸ್ಕೊ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳ ಪೈಕಿ ಕೇವಲ 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2024ರಲ್ಲಿ 62 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಕೇವಲ 16 ಪ್ರಕರಣಗಳು ತನಿಖಾ ಹಂತದಲ್ಲಿವೆ. 2023ರಲ್ಲಿ 167 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ಕೇವಲ 4 ಪ್ರಕರಣಗಳು ತನಿಖಾ ಹಂತದಲ್ಲಿ ಬಾಕಿ ಉಳಿದಿವೆ. 2025ರಲ್ಲಿ 807 ಪ್ರಕರಣಗಳು ಇನ್ನೂ ಪೋಲೀಸ್ ತನಿಖೆಯ ಹಂತದಲ್ಲೇ ಇರುವುದು ಕಳವಳಕ್ಕೆ ಕಾರಣವಾಗಿದೆ. 60 ದಿನಗಳ ಕಾಲಮಿತಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸಂತ್ರಸ್ತ ಮಕ್ಕಳಿಗೆ ಸಕಾಲದಲ್ಲಿ ನ್ಯಾಯ ದೊರೆಯಲು ಸಾಧ್ಯ ಎಂದು ಹೇಳಲಾಗಿದೆ.

60 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿಲ್ಲ.. ಯಾಕೆ?

ಪೋಕ್ಸೋ ಕಾಯ್ದೆಯ ಪ್ರಕಾರ, ದೂರು ದಾಖಲಾದ 60 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಆದರೆ 807 ಪ್ರಕರಣಗಳು ಬಾಕಿ ಇವೆ ಎಂದರೆ ಈ ಕಾನೂನುಬದ್ಧ ಕಾಲಮಿತಿಯ ಉಲ್ಲಂಘನೆಯಾಗುತ್ತಿದೆ ಎಂದರ್ಥ. ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಮತ್ತು ಒಂದೇ ಅಧಿಕಾರಿಗೆ ಹತ್ತಾರು ಪ್ರಕರಣಗಳ ಜವಾಬ್ದಾರಿ ನೀಡಿರುವುದು ತನಿಖೆಯ ವೇಗವನ್ನು ಕುಂಠಿತಗೊಳಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವೈಜ್ಞಾನಿಕ ಪುರಾವೆಗಳು ಬಹಳ ಮುಖ್ಯ. ವಿಧಿವಿಜ್ಞಾನ ಪ್ರಯೋಗಾಲಯಗಳಿಂದ ವರದಿ ಬರಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿರುವುದು ತನಿಖೆ ಬಾಕಿ ಉಳಿಯಲು ಮುಖ್ಯ ಕಾರಣ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಅಥವಾ ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಣೆ ಸವಾಲಾಗಿ ಪರಿಣಮಿಸಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ತನಿಖೆಯು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ನಾಲ್ಕು ವರ್ಷಗಳ ಅಂಕಿ-ಅಂಶಗಳು

2022ರಲ್ಲಿ ಒಟ್ಟು 3,211 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ನಗರ 501, ತುಮಕೂರು 182 ಪ್ರಕರಣಗಳು ದಾಖಲಾಗುವ ಮೂಲಕ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. 215 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1,034 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 2023 ರಲ್ಲಿ ಒಟ್ಟು 3,903. ಪ್ರಕರಣಗಳು ದಾಖಲಾಗಿದ್ದು, ಈ ವರ್ಷ 167 ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. 1,755 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 2024 ರಲ್ಲಿ ಒಟ್ಟು 4,078 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಕೇವಲ 62 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 2,747 ಪ್ರಕರಣಗಳು ಬಾಕಿ ಇವೆ. 2025ರ ನ.15ರವರೆಗೆ ಒಟ್ಟು 3,954 ಪ್ರಕರಣಗಳು ದಾಖಲಾಗಿವೆ. ಕೇವಲ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 2,813 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂಬುದನ್ನು ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ.

ಪ್ರತಿ ವರ್ಷವೂ ಬೆಂಗಳೂರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ (500ಕ್ಕಿಂತ ಹೆಚ್ಚು). ಇದು ನಗರೀಕರಣ, ವಲಸೆ ಮತ್ತು ಜನಸಂಖ್ಯೆಯ ಸಾಂದ್ರತೆಯ ಫಲವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಿರಂತರವಾಗಿ ಸರಾಸರಿ 150-200 ವರದಿಯಾಗುತ್ತಿವೆ.

ಪ್ರಕರಣಗಳಲ್ಲಿ ಪೋಷಕರ, ಶಿಕ್ಷಕರ ಪಾತ್ರ

ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಒಂದು ಕಡೆ ಆತಂಕಕಾರಿಯಾದರೂ, ಮತ್ತೊಂದು ಕಡೆ ಜನರು ದೂರು ನೀಡಲು ಮುಂದೆ ಬರುತ್ತಿರುವುದರ ಸಂಕೇತವೂ ಹೌದು. ಇದು ಜಾಗೃತಿಯ ಫಲವಾಗಿದೆ. ಪೊಲೀಸರು ಕೇವಲ 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ಮಾತ್ರವಲ್ಲದೆ, ಭದ್ರವಾದ ಸಾಕ್ಷ್ಯಗಳನ್ನು ಒದಗಿಸಬೇಕು. ಎಫ್‌ಎಸ್‌ಎಲ್ ವರದಿಗಳು ಶೀಘ್ರವಾಗಿ ಬರುವಂತೆ ವ್ಯವಸ್ಥೆ ಮಾಡಬೇಕು. ಪೋಕ್ಸೋ ಪ್ರಕರಣಗಳಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ದೊಡ್ಡದು. ಮಕ್ಕಳ ವರ್ತನೆಯಲ್ಲಿನ ಬದಲಾವಣೆಗಳನ್ನು ಗಮನಿಸುವುದು ಮತ್ತು ಅವರೊಂದಿಗೆ ಮುಕ್ತವಾಗಿ ಸಂವಹನ ಮಾಡುವುದು ಅಗತ್ಯ. ಪ್ರತಿ ಶಾಲೆಯ ವ್ಯಾಪ್ತಿಯಲ್ಲಿ ಮತ್ತು ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸುವುದು ಮತ್ತು ಅದರ ನೇರ ಸಂಪರ್ಕವನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಪರಿಣಾಮಕಾರಿ ಕ್ರಮವಾಗಬಹುದು.

ತನಿಖಾ ಸವಾಲುಗಳು

ಸರ್ಕಾರವು ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದರೂ, ಅಪರಾಧಗಳು ಏರುತ್ತಲೇ ಇರುವುದಕ್ಕೆ ಮತ್ತು ಶಿಕ್ಷೆಯ ಪ್ರಮಾಣ ಕಡಿಮೆಯಿರುವುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. 2024ರಲ್ಲಿ 2,747 ಪ್ರಕರಣಗಳು ಮತ್ತು 2025 ರಲ್ಲಿ 2,813 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ವರ್ಷಗಳಿಂದ ನಡೆಯುವ ವಿಚಾರಣೆ ಸಂತ್ರಸ್ತ ಕುಟುಂಬಗಳ ತಾಳ್ಮೆಯನ್ನು ಪರೀಕ್ಷಿಸಿದಂತಾಗಿದೆ. ದೌರ್ಜನ್ಯ ಎಸಗುವವರು ಹೆಚ್ಚಾಗಿ ಪರಿಚಯಸ್ಥರೇ ಆಗಿರುತ್ತಾರೆ. ಸಾಮಾಜಿಕ ಒತ್ತಡ ಅಥವಾ ಭಯದಿಂದಾಗಿ ಸಾಕ್ಷಿಗಳು ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸುವ ಸಾಧ್ಯತೆ ಹೆಚ್ಚು. ಕೇವಲ ಶೇ. 2-3 ಶಿಕ್ಷೆಯ ಪ್ರಮಾಣವು ಅಪರಾಧಿಗಳಲ್ಲಿ ಭಯವನ್ನು ಹುಟ್ಟಿಸಲು ವಿಫಲವಾಗುತ್ತಿದೆ. ಹಳ್ಳಿಗಳಲ್ಲಿ ಮತ್ತು ಹಿಂದುಳಿದ ವರ್ಗಗಳಲ್ಲಿ ಪೋಕ್ಸೋ ಕಾಯ್ದೆಯ ಬಗ್ಗೆ ಇಂದಿಗೂ ಸರಿಯಾದ ಅರಿವಿಲ್ಲ. ಅನೇಕ ಪ್ರಕರಣಗಳು ಸಾಮಾಜಿಕ ಗೌರವದ ಹೆಸರಿನಲ್ಲಿ ಮುಚ್ಚಿಹೋಗುತ್ತಿವೆ ಎಂದು ಹೇಳಲಾಗಿದೆ.

ಸರ್ಕಾರದ ನೀತಿಗಳು

ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ರಿಮಿನಲ್ ಕಾನೂನು ತಿದ್ದುಪಡಿಯಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು 60 ದಿನಗಳೊಳಗೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪೋಕ್ಸೋ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಇವರು ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತಾರೆ. ಬೆಂಗಳೂರಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸಿಸಿಪಿಡಬ್ಲಯೂಸಿ ಪೋರ್ಟಲ್ ಮೂಲಕ ಆನ್‌ಲೈನ್ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಮಕ್ಕಳ ಸಹಾಯವಾಣಿ 1098 ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

Read More
Next Story