
ಬಾಲ್ಯ ವಿವಾಹ
ಬೆಂಗಳೂರಿನಲ್ಲಿ 16ರ ಬಾಲಕಿಗೆ ಬಾಲ್ಯ ವಿವಾಹ: ಗರ್ಭಿಣಿ ಶಂಕೆ, ಪೋಕ್ಸೋ ಅಡಿ ಪ್ರಕರಣ ದಾಖಲು
ಸೆಪ್ಟೆಂಬರ್ 26 ರಂದು, 16 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಮತ್ತು ಇತರರು ಸೇರಿ ಅನೆಪಾಳ್ಯದ ಬಳಿಯಿರುವ ನೀಲಸಂದ್ರ ಮಸೀದಿಯಲ್ಲಿ 20 ವರ್ಷದ ಯುವಕನೊಂದಿಗೆ ಅಕ್ರಮವಾಗಿ ಮದುವೆ ಮಾಡಲು ಪ್ರಯತ್ನಿಸಿದ್ದಾರೆ.
ತಂತ್ರಜ್ಞಾನ ನಗರಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಇನ್ನೂ ಜೀವಂತವಾಗಿರುವುದಕ್ಕೆ ಆಘಾತಕಾರಿ ಪ್ರಕರಣವೊಂದು ಸಾಕ್ಷಿಯಾಗಿದೆ. 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ನಗರದ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಲವಂತವಾಗಿ ಮದುವೆ ಮಾಡಲಾಗಿದ್ದು, ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 26 ರಂದು, 16 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಮತ್ತು ಇತರರು ಸೇರಿ ಅನೆಪಾಳ್ಯದ ಬಳಿಯಿರುವ ನೀಲಸಂದ್ರ ಮಸೀದಿಯಲ್ಲಿ 20 ವರ್ಷದ ಯುವಕನೊಂದಿಗೆ ಅಕ್ರಮವಾಗಿ ಮದುವೆ ಮಾಡಲು ಪ್ರಯತ್ನಿಸಿದ್ದಾರೆ.
ಮಕ್ಕಳ ಸಹಾಯವಾಣಿಯ ಸಂಯೋಜಕರು ದೂರು ದಾಖಲಿಸಿದ ನಂತರ, ಅಶೋಕ್ ನಗರ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಸೀದಿಯ ಸದಸ್ಯರು, "ಇಲ್ಲಿ ಯಾವುದೇ ಮದುವೆ ನಡೆದಿಲ್ಲ, ಕೇವಲ ಇಸ್ಲಾಮಿಕ್ ಸಂಪ್ರದಾಯದಂತೆ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮದುವೆಯ ಸಿದ್ಧತೆಗಳ ಕುರಿತ ಫೋಟೋ ಮತ್ತು ವಿಡಿಯೋಗಳು ಅಧಿಕಾರಿಗಳಿಗೆ ಲಭ್ಯವಾಗಿವೆ ಎಂದು ವರದಿಯಾಗಿದೆ.
ಗರ್ಭಿಣಿ ಶಂಕೆ, ಪೋಕ್ಸೋ ಪ್ರಕರಣ
ದೂರಿನಲ್ಲಿ, ಬಾಲಕಿ ಗರ್ಭಿಣಿಯಾಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸುವಂತೆ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಸುಜಾತ್ ಅಲಿ, ಹಸನ್ ರಝಾ, ಮಿರ್ ಕೈಂ, ಅಝಾನ್ ಜಾಫರಿ ಮತ್ತು ಇತರರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಮತ್ತು ಪೋಕ್ಸೋ ಕಾಯ್ದೆ-2012 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.