
No To Child Pregnancy Part-8 | ಬಾಲ ಗರ್ಭಿಣಿಯರ ಕುರಿತ 'ದ ಫೆಡರಲ್ ಕರ್ನಾಟಕ' ಅಭಿಯಾನಕ್ಕೆ ವ್ಯಾಪಕ ಸ್ಪಂದನೆ: ಗಣ್ಯರಿಂದ ಪ್ರಶಂಸೆ
ʼದ ಫೆಡರಲ್ ಕರ್ನಾಟಕʼ ಕೈಗೊಂಡ ಈ ಅಭಿಯಾನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಿನಿತಾರೆಯರು, ಮನಶಾಸ್ತ್ರಜ್ಞರು, ಕಾನೂನು ತಜ್ಞರು ಕೂಡ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ತೀವ್ರ ಕಳವಳ ವ್ಯಕ್ತಪಡಿಸಿ, ತಮ್ಮ ಸಲಹೆ-ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳು ಆತಂಕಕಾರಿಯಾಗಿ ಏರುತ್ತಿರುವ ಗಂಭೀರ ಸಮಸ್ಯೆಯ ಕುರಿತು 'ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ ಲೇಖನಗಳ ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಅಭಿಯಾನವು, ಮಕ್ಕಳ ರಕ್ಷಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ, ಪೋಕ್ಸೋ ಕಾಯ್ದೆಯ ಅಸಮರ್ಪಕ ಜಾರಿ, ಮತ್ತು ಮಕ್ಕಳ ರಕ್ಷಣಾ ನೀತಿಯಲ್ಲಿನ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿತ್ತು.
ಈ ಅಭಿಯಾನದ ಭಾಗವಾಗಿ, ಮಕ್ಕಳ ಹಕ್ಕುಗಳ ತಜ್ಞರು, ಹಿರಿಯ ಅಧಿಕಾರಿಗಳು, ಮತ್ತು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಒಳಗೊಂಡ ವರದಿಗಳನ್ನು ಪ್ರಕಟಿಸಲಾಗಿತ್ತು. ಇದರಲ್ಲಿ, ಮಕ್ಕಳ ಸುರಕ್ಷತೆಗಾಗಿ ಸರ್ಕಾರವು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಗಿತ್ತು.
'ದ ಫೆಡರಲ್ ಕರ್ನಾಟಕ'ದ ಈ ಸಾಮಾಜಿಕ ಕಳಕಳಿಯ ಅಭಿಯಾನಕ್ಕೆ ಚಿತ್ರರಂಗದ ಗಣ್ಯರು, ಮನಶಾಸ್ತ್ರಜ್ಞರು, ಮತ್ತು ಕಾನೂನು ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಧ್ವನಿಗೂಡಿಸಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಈ ಸಮಸ್ಯೆಯನ್ನು ತಡೆಗಟ್ಟಲು ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಈ ಅಭಿಯಾನವು, ಮಕ್ಕಳ ರಕ್ಷಣೆಯ ವಿಷಯದಲ್ಲಿ ಸಮಾಜದಲ್ಲಿ ಹೊಸ ಜಾಗೃತಿಯನ್ನು ಮೂಡಿಸಿದೆ.
ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿ, ಅನ್ಯಾಯ ಪ್ರಶ್ನಿಸುವ ಛಲ ಬೆಳೆಸಿ: ಡಿ. ರೂಪಾ, ಎಡಿಜಿಪಿ
ಸಮಾಜದಲ್ಲಿ ಎಷ್ಟೇ ಅರಿವು ಮೂಡಿಸಿದರೂ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲದಿರುವುದು ದುರದೃಷ್ಟಕರ. ವಿಶೇಷವಾಗಿ ವಸತಿ ಶಾಲೆಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆಗಳು ನಡೆಯುತ್ತಿರುವುದು ತೀವ್ರ ಕಳವಳಕಾರಿ," ಎಂದು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಎಡಿಜಿಪಿ ಡಿ. ರೂಪಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡಿದ ಅವರು, "ಶಾಲಾ ಹಂತದಲ್ಲಿಯೇ ಮಕ್ಕಳಿಗೆ 'ಗುಡ್ ಟಚ್' ಮತ್ತು 'ಬ್ಯಾಡ್ ಟಚ್' ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡಬೇಕು. ಮಕ್ಕಳು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾದಾಗ, ಪೋಷಕರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವರನ್ನು ಹೆದರಿಸಿದರೆ, ಮಕ್ಕಳು ಭಯದಿಂದ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಹಾಗಾಗಿ, ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ, ಅವರ ನೋವನ್ನು ಆಲಿಸಬೇಕು," ಎಂದು ಸಲಹೆ ನೀಡಿದ್ದಾರೆ.
"ಮಕ್ಕಳಿಗೆ ಏನಾದರೂ ಅನ್ಯಾಯವಾದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡಿ, 'ನಾವು ನಿನ್ನ ಜೊತೆಗಿದ್ದೇವೆ' ಎಂಬ ಬೆಂಬಲವನ್ನು ಪೋಷಕರು ನೀಡಬೇಕು. ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಕೌನ್ಸಿಲಿಂಗ್ ಮತ್ತು ಉಚಿತ ಕಾನೂನು ನೆರವು ಲಭ್ಯವಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಶಿಕ್ಷಣದ ಜೊತೆಗೆ, ಅವರಿಗೆ ಹೋರಾಟದ ಧೈರ್ಯವನ್ನು ಮತ್ತು ಅನ್ಯಾಯವನ್ನು ಪ್ರಶ್ನಿಸುವ ಛಲವನ್ನು ಬೆಳೆಸುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕು," ಎಂದು ಡಿ. ರೂಪಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಹೆಣ್ಣು ಮಕ್ಕಳ ಸುರಕ್ಷತೆ ಶಾಲೆಗಳ ಜವಾಬ್ದಾರಿ - ನಟ ಅನಿರುದ್ಧ
"ನಮ್ಮ ಸಮಾಜದಲ್ಲಿ ಮಹಿಳೆಯರಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ದೇವರ ಸಮಾನವಾದ ಸ್ಥಾನವನ್ನು ನೀಡಲಾಗಿದೆ. ಅಂತಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದು ಖಂಡನೀಯ ಮತ್ತು ಅಂತಹ ಕೃತ್ಯವೆಸಗುವವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಚಿತ್ರನಟ ಅನಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, "ವಿದ್ಯೆ ಕಲಿಸುವ ದೇಗುಲಗಳಾದ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯುವುದೆಂದರೆ, ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಷಯ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು ಅಪಾರ ನಂಬಿಕೆಯಿಂದ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಶಾಲಾ ಆಡಳಿತ ಮಂಡಳಿಯ ಸಂಪೂರ್ಣ ಜವಾಬ್ದಾರಿಯಾಗಿದೆ," ಎಂದು ಹೇಳಿದ್ದಾರೆ.
"ಶಾಲೆಗಳು ಮಕ್ಕಳಿಗೆ ಕೇವಲ ವಿದ್ಯೆಯನ್ನು ನೀಡುವ ದೇಗುಲಗಳಲ್ಲ, ಬದಲಿಗೆ ಸಂಸ್ಕಾರವನ್ನು ಕಲಿಸುವ ಕೇಂದ್ರಗಳೂ ಹೌದು. ಅಲ್ಲಿ ಮಕ್ಕಳಿಗೆ ನರಕದ ಅನುಭವವಾಗಬಾರದು. ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಮತ್ತು ಶಾಲೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತಿರಬೇಕು. ಮಕ್ಕಳ ರಕ್ಷಣೆಗಾಗಿ ಇರುವ ಸಂಸ್ಥೆಗಳು ಈ ವಿಷಯದಲ್ಲಿ ಹೆಚ್ಚು ಜಾಗೃತರಾಗಿ, ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ದೌರ್ಜನ್ಯ ನಡೆಸುವವರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು," ಎಂದು ಅನಿರುದ್ಧ ಅವರು ಒತ್ತಾಯಿಸಿದ್ದಾರೆ.
ಭಾವನಾತ್ಮಕ ಸಂಬಂಧಗಳ ಕೊರತೆಯೇ ಮೂಲ ಕಾರಣ: ಡಾ. ಕಲ್ಪನಾ ಎಚ್.ಕೆ.
"ಆಧುನಿಕ ಯುಗದಲ್ಲಿ ಮಕ್ಕಳ ಭಾವನೆಗಳು ಸುಲಭವಾಗಿ ವಿಚಲಿತಗೊಳ್ಳುತ್ತಿವೆ ಮತ್ತು ಕುಟುಂಬಗಳಲ್ಲಿ ಭಾವನಾತ್ಮಕ ಸಂಬಂಧಗಳ ಕೊರತೆ ಇರುವುದರಿಂದಲೇ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ," ಎಂದು ಶಿವಮೊಗ್ಗದ ಮನಶಾಸ್ತ್ರಜ್ಞರಾದ ಡಾ. ಕಲ್ಪನಾ ಎಚ್.ಕೆ. ಅವರು ಅಭಿಪ್ರಾಯಪಟ್ಟಿದ್ದಾರೆ. ಫೆಡರಲ್ ಕರ್ನಾಟಕ ಮಾಡುತ್ತಿರುವ ಈ ಅಭಿಯಾನ ಅಭಿನಂದನಾರ್ಹ ಎಂದು ಅವರು ಹೇಳಿದ್ದಾರೆ.
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ತಪ್ಪು-ಸರಿಗಳ ಬಗ್ಗೆ ಸ್ಪಷ್ಟವಾದ ಅರಿವು ಇರುವುದಿಲ್ಲ. ಈ ಸಮಯದಲ್ಲಿ ಆಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳಿಂದಾಗಿ, ಅವರು ಸುಲಭವಾಗಿ ಆಕರ್ಷಣೆಗಳಿಗೆ ಒಳಗಾಗುತ್ತಾರೆ. ಇದರ ಪರಿಣಾಮಗಳನ್ನು ಅರಿಯದೆ, ಅವರು ತಪ್ಪು ದಾರಿ ಹಿಡಿಯುವ ಸಾಧ್ಯತೆಯಿರುತ್ತದೆ. "ಇಂದಿನ ದಿನಗಳಲ್ಲಿ, ಅನೇಕ ಕುಟುಂಬಗಳಲ್ಲಿ ಭಾವನಾತ್ಮಕ ಸಂಬಂಧಗಳ ಮೌಲ್ಯಗಳನ್ನು ಹೇಳಿಕೊಡುವುದಿಲ್ಲ. ಪೋಷಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು," ಎಂದು ಡಾ. ಕಲ್ಪನಾ ಹೇಳುತ್ತಾರೆ.
"ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ, ಶಿಕ್ಷಕರು ಮಾಡುವ ಕೃತ್ಯಗಳು ತಪ್ಪು ಎಂದು ಅರಿಯುವ ಅಥವಾ ಅದನ್ನು ಖಂಡಿಸುವ ಮನಸ್ಥಿತಿ ಮಕ್ಕಳಲ್ಲಿ ಇರುವುದಿಲ್ಲ. ಆದರೆ, ನಗರ ಪ್ರದೇಶಗಳಲ್ಲಿನ ಹೆಣ್ಣು ಮಕ್ಕಳು ಇಂತಹ ದೌರ್ಜನ್ಯಗಳನ್ನು ವಿರೋಧಿಸುವ ಧೈರ್ಯವನ್ನು ಹೊಂದಿರುತ್ತಾರೆ. ದೌರ್ಜನ್ಯಕ್ಕೊಳಗಾದ ಅನೇಕ ಮಕ್ಕಳು, ಯಾರೊಂದಿಗೂ ಹೇಳಿಕೊಳ್ಳಲಾಗದೆ, ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿದರ್ಶನಗಳೂ ಇವೆ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ಈ ಸಮಸ್ಯೆಯನ್ನು ಹೋಗಲಾಡಿಸಲು, ನಾವು ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡುವುದು ಮತ್ತು ಅವರಲ್ಲಿ ಮನೋಸ್ಥೈರ್ಯವನ್ನು ಬೆಳೆಸುವುದು ಅತ್ಯಗತ್ಯ. ಲೈಂಗಿಕ ದೌರ್ಜನ್ಯದಂತಹ ಘಟನೆಗಳು ನಡೆದಾಗ, ಪೋಷಕರು ತಮ್ಮ ಮಕ್ಕಳಿಗೆ ಬೆಂಬಲವಾಗಿ ನಿಂತು, ಅವರೊಂದಿಗೆ ಧೈರ್ಯವಾಗಿ ನಿಲ್ಲಬೇಕು. ಆಗ ಮಾತ್ರ ಮಕ್ಕಳು ಇಂತಹ ಸಂಕಷ್ಟಗಳಿಂದ ಹೊರಬರಲು ಸಾಧ್ಯ," ಎಂದು ಡಾ. ಕಲ್ಪನಾ ಅವರು ಸಲಹೆ ನೀಡಿದ್ದಾರೆ
ಮೌಲ್ಯಗಳ ಕೊರತೆಯೇ ದೌರ್ಜನ್ಯಕ್ಕೆ ಮೂಲ ಕಾರಣ: ಡಾ. ಮಂಜುನಾಥ್.ಪಿ
"ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಕೇವಲ ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯ ಮಾತ್ರವಲ್ಲ, ವ್ಯಕ್ತಿಗಳಲ್ಲಿನ ಮೌಲ್ಯಗಳ ಕೊರತೆ, ಸಂಸ್ಕಾರದ ಕೊರತೆ, ಮತ್ತು ಲಿಂಗ ಸಮಾನತೆಯ ಬಗ್ಗೆ ಇರುವ ಸಂವೇದನಾಶೂನ್ಯತೆಯೇ ಪ್ರಮುಖ ಕಾರಣ," ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್.ಪಿ ಅವರು ವಿಶ್ಲೇಷಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯದ ಹಿಂದಿರುವ ಮಾನಸಿಕ ಕಾರಣಗಳನ್ನು ವಿವರಿಸಿದ ಅವರು, "ಆಕ್ರಮಣಶೀಲ ವ್ಯಕ್ತಿತ್ವ, ಮಾನಸಿಕ ನ್ಯೂನತೆಗಳು, ಮತ್ತು ಹಾರ್ಮೋನುಗಳ ಬದಲಾವಣೆಗಳಂತಹ ವೈಯಕ್ತಿಕ ಅಂಶಗಳ ಜೊತೆಗೆ, ಬಾಲ್ಯದಲ್ಲಿನ ಕೆಟ್ಟ ಅನುಭವಗಳು ಮತ್ತು ಬೆಳೆದುಬಂದ ಪರಿಸರವೂ ಸಹ ವ್ಯಕ್ತಿಯನ್ನು ದೌರ್ಜನ್ಯ ಎಸಗುವಂತೆ ಪ್ರೇರೇಪಿಸುತ್ತದೆ. ಇಂದಿನ ದಿನಗಳಲ್ಲಿ, ಅನೇಕರು ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು, ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಮನೆಗಳಲ್ಲಿಯೇ ಮಕ್ಕಳಿಗೆ ಮೌಲ್ಯಯುತ ಬದುಕಿನ ಬಗ್ಗೆ ತಿಳಿಸಿಕೊಡುವ ಅವಶ್ಯಕತೆಯಿದೆ," ಎಂದು ಹೇಳಿದ್ದಾರೆ.
"ಈ ಸಮಸ್ಯೆಯನ್ನು ಪರಿಹರಿಸಲು, ದೌರ್ಜನ್ಯದ ಮನಸ್ಥಿತಿ ಇರುವವರಿಗೆ ಲಿಂಗ ಸಮಾನತೆಯ ಬಗ್ಗೆ ಅರಿವು ಮೂಡಿಸಬೇಕು. ಬಾಲ್ಯದ ಕೆಟ್ಟ ಅನುಭವಗಳನ್ನು ಮನಸ್ಸಿನಿಂದ ತೊಡೆದುಹಾಕಲು ಅವರಿಗೆ ಆಪ್ತ ಸಮಾಲೋಚನೆಯನ್ನು ನೀಡಬೇಕು. ಸಂಸ್ಕಾರಯುತ ಶಿಕ್ಷಣವನ್ನು ಒದಗಿಸುವುದರಿಂದ ಮಾತ್ರ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಸಾಧ್ಯ," ಎಂದು ಡಾ. ಮಂಜುನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳ ವ್ಯಾಮೋಹವೇ ಪ್ರಚೋದನೆಗೆ ಕಾರಣ: ಶೇಖರಗೌಡ ರಾಮತ್ನಾಳ
"ಇತ್ತೀಚೆಗೆ ವಸತಿ ಶಾಲೆಗಳು ಮತ್ತು ಕುಟುಂಬಗಳಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚಾಗುತ್ತಿರುವುದು ಆಘಾತಕಾರಿ. ಇದಕ್ಕೆ ಪ್ರಮುಖ ಕಾರಣ, ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ವ್ಯಾಮೋಹ ಹೆಚ್ಚಾಗಿರುವುದು ಮತ್ತು ಇದರಿಂದಾಗಿ ಅವರಲ್ಲಿ ಮಾನಸಿಕ ಹತೋಟಿ ಇಲ್ಲದಂತಾಗಿರುವುದು," ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದಾಗಿ ಮಕ್ಕಳು ಸುಲಭವಾಗಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ ಅವರು, "ಈ ಸಮಸ್ಯೆಯನ್ನು ತಡೆಗಟ್ಟಲು, ಶಾಲೆಗಳಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ನೈತಿಕ ಮತ್ತು ಲೈಂಗಿಕ ಶಿಕ್ಷಣವನ್ನು ನೀಡುವುದು ಅತ್ಯಗತ್ಯ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ವಸತಿ ಶಾಲೆಗಳು, ಪ್ರೌಢಶಾಲೆಗಳು, ಮತ್ತು ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ, ಮಕ್ಕಳ ಹಕ್ಕುಗಳು ಮತ್ತು ಬಾಲ್ಯವಿವಾಹದ ಕುರಿತು ಅರಿವು ಮೂಡಿಸುತ್ತಿದೆ," ಎಂದು ಮಾಹಿತಿ ನೀಡಿದರು.
"ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಯಿಂದ ಬದ್ಧತಾ ಪತ್ರವನ್ನು ಪಡೆಯಬೇಕು. ಬಾಲ್ಯ ವಿವಾಹವನ್ನು ತಡೆಯಲು, ಕಲ್ಯಾಣ ಮಂಟಪಗಳು ಮತ್ತು ಲಗ್ನಪತ್ರಿಕೆ ಮುದ್ರಣಾಲಯಗಳಿಗೂ ಸಹ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಮದುವೆಗೆ ಮುನ್ನ, ವಧು-ವರರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ, ವಯಸ್ಸನ್ನು ಖಚಿತಪಡಿಸಿಕೊಂಡ ನಂತರವೇ ಮಂಟಪಗಳನ್ನು ನೀಡುವಂತೆ ತಿಳಿಸಲಾಗಿದೆ," ಎಂದು ಶೇಖರಗೌಡ ಅವರು ವಿವರಿಸಿದರು. ಇದೇ ವೇಳೆ ಅವರು ಫೆಡರಲ್ ಕರ್ನಾಟಕದ ಸರಣಿ ವರದಿಗಳನ್ನು ಪ್ರಶಂಸಿಸಿದರು.
ಮಕ್ಕಳಲ್ಲಿ ಭಯವಲ್ಲ, ಜ್ಞಾನ ಮತ್ತು ಆತ್ಮವಿಶ್ವಾಸ ತುಂಬಿ: ನಟಿ ಉಷಾ ಕೃಷ್ಣ
ಹೆಣ್ಣು ಶಕ್ತಿ ಸ್ವರೂಪಿಣಿ. ಆಕೆಗೆ ಮನೆಯ ಒಳಗೆ ಮತ್ತು ಹೊರಗೆ ಭದ್ರತೆಯನ್ನು ಒದಗಿಸುವುದು ಪೋಷಕರು, ಸಮಾಜ, ಮತ್ತು ಸರ್ಕಾರದ ಜಂಟಿ ಜವಾಬ್ದಾರಿ. ಆದರೆ, ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂದು ನಿರೀಕ್ಷಿಸುವುದನ್ನು ನಾವು ಬಿಡಬೇಕು. ಮೊದಲು, ಮನೆ ಮಟ್ಟದಲ್ಲಿಯೇ ನಾವು ಹೆಣ್ಣುಮಕ್ಕಳಿಗೆ ಸೂಕ್ತ ಶಿಕ್ಷಣ ಮತ್ತು ಅರಿವನ್ನು ಮೂಡಿಸಬೇಕು," ಎಂದು ನಟಿ ಮತ್ತು ಹಿರಿಯ ನಟಿ ಶ್ರುತಿ ಅವರ ಸಹೋದರಿ ಉಷಾ ಕೃಷ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡಿದ ಅವರು, "ವಿಶೇಷವಾಗಿ ಲೈಂಗಿಕ ಶಿಕ್ಷಣದ ಕುರಿತು, ಪ್ರತಿಯೊಂದು ಮನೆಯಲ್ಲಿಯೂ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳಿಗೆ ನಾವು ಭಯವನ್ನು ಹುಟ್ಟಿಸುವುದಕ್ಕಿಂತ, ಜ್ಞಾನ ಮತ್ತು ಆತ್ಮವಿಶ್ವಾಸವನ್ನು ತುಂಬಬೇಕು. ಈ ನಿಟ್ಟಿನಲ್ಲಿ, ತಂದೆ-ತಾಯಿಯರ ಪಾತ್ರ ಅತ್ಯಂತ ಪ್ರಮುಖವಾದುದು. ಶಾಲೆಯಲ್ಲಿ ಪಾಠಗಳು ಪ್ರಾರಂಭವಾಗುವ ಮುನ್ನವೇ, ಮನೆಯಲ್ಲಿ ಮಕ್ಕಳಿಗೆ ಜೀವನದ ಪ್ರಥಮ ಪಾಠಗಳು ಸಿಗಬೇಕು," ಎಂದು ಹೇಳಿದ್ದಾರೆ.
"ಇಂದಿನ ದಿನಗಳಲ್ಲಿ, ಬಹುತೇಕ ಸಮಸ್ಯೆಗಳು ಮನೆಯೊಳಗೇ ಹುಟ್ಟಿಕೊಳ್ಳುತ್ತಿವೆ. ಕುಟುಂಬದ ಸದಸ್ಯರಿಂದಲೇ ಮಕ್ಕಳಿಗೆ ಅನಾಹುತಗಳು ಸಂಭವಿಸುತ್ತಿವೆ. ಆದ್ದರಿಂದ, ಮೊದಲಿನಿಂದಲೇ ಮಕ್ಕಳಿಗೆ ಸರಿ-ತಪ್ಪುಗಳ ಬಗ್ಗೆ ಸರಿಯಾದ ಅರಿವನ್ನು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ," ಎಂದು ಉಷಾ ಕೃಷ್ಣ ಅವರು ಪ್ರತಿಪಾದಿಸಿದ್ದಾರೆ.
ಜನರಲ್ಲಿ ಕಾನೂನು ಅರಿವಿನ ಕೊರತೆ- ಡಾ.ನಾಗಲಕ್ಷ್ಮಿ .ಎ
ಕಠಿಣ ಕಾನೂನುಗಳಿದ್ದರೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಲು ಹಲವಾರು ಕಾರಣಗಳಿರಬಹುದು. ಮುಖ್ಯವಾಗಿ ಕಾನೂನಿನ ಬಗ್ಗೆ ಅರಿವಿನ ಕೊರತೆಯೂ ಇರಬಹುದು. ಸಂತ್ರಸ್ತರು, ಸಂತ್ರಸ್ತರ ಪೋಷಕರು ಮತ್ತು ಸಂತ್ರಸ್ತರ ಸುತ್ತಲಿನ ಇತರರು ಸಂಬಂಧಿತ ಕಾನೂನುಗಳು ಮತ್ತು ಪರಿಹಾರಗಳ ಬಗ್ಗೆ ತಿಳಿದಿರುವುದಿಲ್ಲ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾದ್ಯಾಪಕಿ ಡಾ. ನಾಗರತ್ನ ಎ ತಿಳಿಸಿದ್ದಾರೆ.
ಮನೆಯಲ್ಲಿ ಅಥವಾ ಕುಟುಂಬದಲ್ಲಿ ಒತ್ತಡದ ವಾತಾವರಣ ಇರುತ್ತದೆ. ವೈಯಕ್ತಿಕ ಕಾಳಜಿ ಕೊರತೆ, ಪೋಷಕರು ಬೇರೆ ಯಾವುದೇ ಕೆಲಸದಲ್ಲಿ ಕಾರ್ಯನಿರತರಾಗಿರುವುದು, ಸೈಬರ್ ತಂತ್ರಜ್ಞಾನಕ್ಕೆ ಅನಿಯಮಿತ ಪ್ರವೇಶ ಇತ್ಯಾದಿಗಳು ಸಹ ಕಾರಣವಾಗಿರಬಹುದು. ಶಾಲೆ, ಹಾಸ್ಟೆಲ್ ಇತ್ಯಾದಿಗಳಲ್ಲಿ ಆಡಳಿತ, ಸಿಬ್ಬಂದಿ, ಶಿಕ್ಷಕರು ಸಹ ಸಂವೇದನಾಶೀಲರಾಗಿರಬೇಕು ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಬಗ್ಗೆ ತರಬೇತಿ ನೀಡಬೇಕು. ಮುಖ್ಯವಾಗಿ ನಾವು ಮಗುವಿಗೆ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕಲಿಸಬೇಕು ಮತ್ತು ಅಂತಹ ಘಟನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಬೇಕು. ಪೋಕ್ಸೋ ಕಾಯ್ದೆ ಒಂದು ಅತ್ಯಂತ ಕಠಿಣ ಕಾನೂನು. ಆದರೆ ಅದು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ಜಾರಿಗೆ ಬಂದಿದೆಯೇ ಎಂಬುದು ಯಕ್ಷ ಪ್ರಶ್ನೆ ಎಂದು ಹೇಳಿದ್ದಾರೆ.