
No To Child Pregnancy Part -7: ಪೋಕ್ಸೋ ಕಾಯ್ದೆ ಬಲಿಷ್ಠ.. ಆದರೆ, ಪರಿಣಾಮಕಾರಿ ಬಳಕೆ ಅಗತ್ಯ
ಅಪ್ರಾಪ್ತರ ಹಿತರಕ್ಷಣೆ ಉದ್ದೇಶದಿಂದ 2012ರಲ್ಲಿ ಪೋಕ್ಸೊ ಕಾಯ್ದೆ ಜಾರಿಯಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಕಾಯ್ದೆ ಅನುಷ್ಠಾನಗೊಂಡಿಲ್ಲ. ಶಿಕ್ಷೆಯ ಪ್ರಮಾಣವು ಕಡಿಮೆ.
ಆಡಿ ನಲಿಯುವ ವಯಸ್ಸಿನಲ್ಲಿ ಬಾಲಕಿಯರಿಗೆ ಹೆರಿಗೆಯಾಗಿರುವ ಪ್ರಕರಣ ರಾಜ್ಯದ ಕೆಲ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಬಳಿಕ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಮತ್ತು ಅದರ ಗಂಭೀರತೆ ಬಗ್ಗೆ ಚರ್ಚೆಗಳು ಮುನ್ನೆಲೆ ಬರುತ್ತವೆ. ಆದರೆ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಅಪವಾದಗಳು ಕೇಳಿಬರುತ್ತಿವೆ.
ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅದನ್ನು ತಡೆಯಲು ಫೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಹಿತರಕ್ಷಣೆ ಉದ್ದೇಶದಿಂದ 2012ರಲ್ಲಿ ಪೋಕ್ಸೊ ಕಾಯ್ದೆ ಜಾರಿ ಮಾಡಲಾಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನಗೊಂಡಿಲ್ಲ. ಉಳ್ಳವರು ಪ್ರಕರಣದಲ್ಲಿ ಭಾಗಿಯಾದರೆ ಅಂತಹವರಿಗೆ ಶಿಕ್ಷೆಯಾಗುವುದು ತೀರಾ ಕಡಿಮೆ ಸಾಧ್ಯತೆ ಇದೆ. ದನಿ ಇಲ್ಲದವರಿಗೆ ನ್ಯಾಯ ಸಿಗುತ್ತಿರುವುದು ಬೆರಳೆಣಿಕೆ ಮಾತ್ರ ಎಂಬುದು ಗಮನಾರ್ಹ.
ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು 24 ಗಂಟೆಯೊಳಗೆ ದಾಖಲಾಗಿ ತನಿಖೆ ಕೈಗೆತ್ತಿಕೊಳ್ಳಬೇಕು. ವೈದ್ಯಕೀಯ ಪರೀಕ್ಷೆಗೊಳಪಡಿಸಬೇಕು. ತನಿಖೆಯನ್ನು ತ್ವರಿತಗೊಳಿಸಬೇಕು. ಪ್ರಕರಣಗಳ ತನಿಖೆ ನಡೆಸುವ ಪೊಲೀಸರು 60 ದಿನದಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಬೇಕು ಮತ್ತು ಒಂದು ವರ್ಷದಲ್ಲಿ ಪ್ರಕರಣ ಇತ್ಯರ್ಥಗೊಳಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಬಹಳಷ್ಟು ಪ್ರಕರಣದಲ್ಲಿ ಈ ರೀತಿಯಾಗಿ ನಡೆಯುತ್ತಿಲ್ಲ. ನಿಧಾನವಾಗಿ ಪ್ರಕರಣಗಳು ನಡೆಯುತ್ತಿದ್ದು, ವರ್ಷಾನುಗಟ್ಟಲೇ ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದು ವಿಪರ್ಯಾಸ.
ಪೋಕ್ಸೊ ಕಾಯ್ದೆಯ ಉದ್ದೇಶ:
ಅಪ್ರಾಪ್ತ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ರಕ್ಷಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದ್ದು, ಇದರ ಮತ್ತೊಂದು ಅಂಶವೆಂದರೆ ಇದರಲ್ಲಿ ಯಾವುದೇ ಲಿಂಗ ತಾರತಮ್ಯ ಇರುವುದಿಲ್ಲ. ಬಾಲಕಿ ಹಾಗೂ ಬಾಲಕರಿಬ್ಬರನ್ನೂ ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಗುರುತಿಸಲಾಗುತ್ತದೆ. ಕಾಯ್ದೆಯು ಮಕ್ಕಳಿಗೆ ಪರಿಹಾರ ನೀಡುವುದು, ಮಕ್ಕಳ ಸ್ನೇಹಿ ತನಿಖೆ ಮತ್ತು ವಿಚಾರಣೆಗೆ ಒತ್ತು ನೀಡುವುದು, ಕಡ್ಡಾಯ ದೂರು ದಾಖಲಿಸುವುದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವುದು, ಎಲ್ಲಾ ಪ್ರಕರಣಗಳಿಗೆ ವಿಶೇಷ ಪೋಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸುವುದು, ಸಂತ್ರಸ್ತ ಮಗುವಿನ ಗುರುತು ಗೌಪ್ಯವಾಗಿಡುವುದು ಮತ್ತು ಲೈಂಗಿಕ ಅಪರಾಧಗಳ ವರದಿ ಮಾಡಲು ಯಾವುದೇ ಸಮಯ ಮಿತಿಯನ್ನು ಹೊಂದಿಲ್ಲದಿರುವುದಿಲ್ಲ.
ಪೋಕ್ಸೋ ಕಾಯ್ದೆಯು ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಶೋಷಣೆ ಮತ್ತು ಕಿರುಕುಳದಿಂದ ರಕ್ಷಿಸುವ ಗುರಿಯನ್ನು ಹೊಂದಿರುವ ಒಂದು ನಿರ್ಣಾಯಕ ಕಾಯ್ದೆಯಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ರೀತಿಯ ದೌರ್ಜನ್ಯದಿಂದ ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕಾನೂನನ್ನು ರೂಪಿಸಲಾಗಿದೆ. ಇದು ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಕಡ್ಡಾಯಗೊಳಿಸುತ್ತದೆ.
ಹಕ್ಕುಗಳು ಮತ್ತು ಜವಾಬ್ದಾರಿಗಳು:
ಪ್ರತಿಯೊಂದು ಮಗುವೂ ಸುರಕ್ಷಿತವಾಗಿರಲು, ಗೌರವಿಸಲ್ಪಡಲು ಮತ್ತು ದೈಹಿಕ, ಭಾವನಾತ್ಮಕ ಅಥವಾ ಲೈಂಗಿಕ ಯಾವುದೇ ರೀತಿಯ ದೌರ್ಜನ್ಯದಿಂದ ಮುಕ್ತರಾಗಲು ಹಕ್ಕನ್ನು ಹೊಂದಿದೆ. ವೈಯಕ್ತಿಕ ಮಿತಿಗಳನ್ನು ಅರ್ಥಮಾಡಿಕೊಂಡು ಗೌರವಿಸಬೇಕು. ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಯಾರನ್ನೂ ಮುಟ್ಟಲು, ಕಿರುಕುಳ ನೀಡಲು ಯಾರಿಗೂ ಅವಕಾಶವಿಲ್ಲ. ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾಗಿದ್ದರೆ ಅಥವಾ ಅದನ್ನು ವೀಕ್ಷಿಸಿದರೆ, ಮುಕ್ತವಾಗಿ ಮಾತನಾಡಬೇಕು. ದೌರ್ಜನ್ಯಕ್ಕೊಳಗಾದ ಮಗುವಿನ ಗೌಪ್ಯತೆಯನ್ನು ರಕ್ಷಿಸಲು ದೌರ್ಜನ್ಯದ ವರದಿಗಳನ್ನು ಅತ್ಯಂತ ಗೌಪ್ಯತೆಯಿಂದ ನಿರ್ವಹಿಸಲಾಗುತ್ತದೆ.
ಪೋಕ್ಸೋ ಕಾಯ್ದೆಯಲ್ಲಿ ಪೋಷಕರ ಪಾತ್ರ:
ಪೋಕ್ಸೋ ಕಾಯ್ದೆಯಡಿ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಗು ಸುರಕ್ಷಿತವಾಗಿರಲು , ನ್ಯಾಯ ಸಿಗಲು ಮತ್ತು ಮಗು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗುವಿನ ಆತ್ಮಸ್ಥೈರ್ಯ ತುಂಬುವ ಪೋಷಕರು ರಕ್ಷಕರು, ಬೆಂಬಲಕರು, ಸಾಕ್ಷ್ಯ ಒದಗಿಸುವವರು, ನ್ಯಾಯ ಪ್ರಕ್ರಿಯೆಯಲ್ಲಿ ಮಾರ್ಗದರ್ಶಕರಾಗಿರುತ್ತಾರೆ.
ಮಕ್ಕಳೊಂದಿಗೆ ದೇಹದ ಸುರಕ್ಷತೆ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಮಕ್ಕಳು ಮಾತನಾಡಲು ಪ್ರೋತ್ಸಾಹಿಸಿ ಮತ್ತು ಅವರಿಗೆ ಬೆಂಬಲ ನೀಡುವ ಬಗ್ಗೆ ಅಶ್ವಾಸನೆ ಮೂಡಿಸಬೇಕು. ಶಾಲೆಯ ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಮಗುವಿನ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಯಾವುದೇ ತೊಂದರೆ ಅಥವಾ ಅಸಾಮಾನ್ಯ ನಡವಳಿಕೆಯ ಲಕ್ಷಣಗಳಿಗೆ ಬೆಂಬಲ ನೀಡುವುದರ ಜತೆಗೆ ಜಾಗರೂಕರಾಗಿರುವುದು ಬಹಳ ಮುಖ್ಯವಾಗಿರುತ್ತದೆ.
ಮಗು ಯಾವುದೇ ರೀತಿಯ ಲೈಂಗಿಕ ಶೋಷಣೆ ಅಥವಾ ಕಿರುಕುಳ ಅನುಭವಿಸಿದರೆ, ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಬೇಕು. ಮಗು ಹೆದರುವ ಅಥವಾ ನಾಚಿಕೆಯಿಡುವ ಸಂದರ್ಭಗಳಲ್ಲಿ, ಪೋಷಕರು ಮಗುವಿನ ಪರವಾಗಿ ಎಫ್‌ಐಆರ್ ದಾಖಲಿಸಬಹುದು. ಶೋಷಣೆಗೆ ಒಳಗಾದ ಮಗು ಸಾಮಾನ್ಯವಾಗಿ ಭಯ, ನಾಚಿಕೆ, ಆತಂಕ ಅನುಭವಿಸಲಾಗುತ್ತದೆ. ಪೋಷಕರು ಮಗುವಿಗೆ "ನೀನು ತಪ್ಪೇನು ಮಾಡಿಲ್ಲ, ನಿನಗೆ ನ್ಯಾಯ ಸಿಗುತ್ತದೆ” ಎಂಬ ಭರವಸೆ ನೀಡಬೇಕು. ಅಲ್ಲದೇ, ಪೊಲೀಸ್ ವಿಚಾರಣೆ, ವೈದ್ಯಕೀಯ ಪರೀಕ್ಷೆ, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಪೋಷಕರು ಮಗುವಿನ ಜೊತೆ ಇರಬೇಕು. ಇದು ಮಗುವಿಗೆ ಆತ್ಮಸ್ಥೈರ್ಯ ನೀಡುತ್ತದೆ.
ಪೋಷಕರು ಮಗುವಿನ ಹೆಸರು, ಘಟನೆ ವಿವರಗಳನ್ನು ಸಾರ್ವಜನಿಕವಾಗಿ ಹಂಚಬಾರದು. ಶಾಲೆ, ನೆರೆಹೊರೆಯವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬಹಿರಂಗ ಪಡಿಸುವುದು ಕಾನೂನುಬಾಹಿರ. ಮಗು ಮಾನಸಿಕವಾಗಿ ಚೇತರಿಸಿಕೊಳ್ಳಲು ಮನೋವೈದ್ಯಕೀಯ ಸಲಹೆ , ಮನೋವೈಜ್ಞಾನಿಕ ಬೆಂಬಲ ನೀಡಲು ಪೋಷಕರು ಮುಂದಾಗಬೇಕು. ಅಗತ್ಯವಿದ್ದರೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸರ್ಕಾರದ ಸಹಾಯ ಪಡೆಯಬಹುದು. ಅಲ್ಲದೇ, ಪೋಷಕರು ವಕೀಲರ ಮೂಲಕ ಮಗುವಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕಾಗಿದೆ.
ಪೋಕ್ಸೊ ಕಾಯ್ದೆಯ ವ್ಯಾಪ್ತಿಗೆ ಬರುವ ವಿಷಯಗಳು
ಪೋಕ್ಸೊ ಕಾಯ್ದೆಯಲ್ಲಿ ಹಲವು ಸೂಕ್ಷ್ಮವಾದ ವಿಷಯಗಳನ್ನು ಸೇರಿಸಲಾಗಿದೆ. ಈ ಕಾಯ್ದೆಯ ಪ್ರಕಾರ 18 ವರ್ಷದ ಒಳಗಿನ ಎಲ್ಲರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯವನ್ನು ಪೋಕ್ಸೊ ಕಾಯ್ದೆಯಡಿ ಪರಿಗಣಿಸಲಾಗುತ್ತದೆ. ಅತ್ಯಾಚಾರ ರೀತಿಯ ಲೈಂಗಿಕ ಹಲ್ಲೆ, ಮಕ್ಕಳ ಮೇಲೆ ಅಪರಾಧ ಎಸಗುವ ಉದ್ದೇಶದಿಂದ ಮಕ್ಕಳಿಗೆ ರಾಸಾಯನಿಕ ಅಥವಾ ಹಾರ್ಮೋನ್‌ಗಳನ್ನು ನೀಡುವುದು. ಮಕ್ಕಳನ್ನು ಅಶ್ಲೀಲವಾಗಿ ಬಳಸಿಕೊಳ್ಳುವುದು ಅಪರಾಧವಾಗಿದೆ. ಅಲ್ಲದೇ ಯಾವುದಾದರೂ ಮಗುವಿನ ಅಶ್ಲೀಲ ಭಂಗಿಯ ವಸ್ತು ಅಥವಾ ಚಿತ್ರದ ಬಗ್ಗೆ ವರದಿ ಮಾಡುವುದು. ಈ ರೀತಿಯ ಚಿತ್ರಗಳನ್ನು ರವಾನಿಸುವುದು, ಪ್ರಚಾರ ಮಾಡುವುದು ಹಾಗೂ ಮಕ್ಕಳು ಒಳಗೊಂಡ ಯಾವುದಾದರೂ ಅಶ್ಲೀಲ ವಸ್ತುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಕಾಯ್ದೆ ಬಲಿಷ್ಠ...ಸಮರ್ಪಕವಾಗಿ ಬಳಕೆ ಅಗತ್ಯ
ಪೋಕ್ಸೋ ಕಾಯ್ದೆ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ , ರಾಜ್ಯದಲ್ಲಿ ಪೋಕ್ಸೋ ಕಾಯ್ದೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದ ಅಗತ್ಯತೆ ಇದೆ. ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಮತ್ತು ಒಂದು ವರ್ಷದಲ್ಲಿ ಪ್ರಕರಣ ಇತ್ಯರ್ಥಗೊಳ್ಳಬೇಕು. ಕಳೆದ ಐದು ವರ್ಷದಲ್ಲಿ15 ಸಾವಿರ ಪ್ರಕರಣ ದಾಖಲಾಗಿದ್ದು, ಕೇವಲ ೬೦೦ ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಶಿಕ್ಷೆ ಪ್ರಮಾಣ ಹೆಚ್ಚಾದರೆ ಮಾತ್ರ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಹೇಳಿದರು
ಪೋಕ್ಸೋ ಕಾಯ್ದೆಯು ಬಲಿಷ್ಠವಾಗಿದೆ. ಆದರೆ ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆಯಾಗಬೇಕು. ವಕೀಲರು, ಪೊಲೀಸರು ಮತ್ತು ನ್ಯಾಯಾಲಯವು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಈ ವ್ಯವಸ್ಥೆಯು ಮಗುವಿಗೆ ನ್ಯಾಯ ಕೊಡಿಸುತ್ತದೆ. ಈ ವ್ಯವಸ್ಥೆಯಿಂದ ತ್ವರಿತಗತಿಯಲ್ಲಿ ಶಿಕ್ಷೆಯಾಗಬೇಕು. ಅಮಾಯಕರು, ಸಾಮಾಜಿಕ ಗೌರವಕ್ಕೆ ಅಂಜುವವರು, ದನಿ ಇಲ್ಲದರವರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಆಯೋಗದ ಮತ್ತೋರ್ವ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ರಾಜ್ಯದಲ್ಲಿ ನಡೆದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದಾಖಲಾಗಿರುವ ಎಫ್‌ಐಆರ್ ಪ್ರತಿ ಕೇಳಿದ್ದೇವೆ. ಆಯೋಗವು ಸುಮೋಟೋ ದಾಖಲಿಸಿಕೊಂಡಿದ್ದು, ಪ್ರಕರಣಗಳ ವರದಿಯನ್ನು ಕೇಳಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಯಾರು ನಡೆಸಿದ್ದಾರೆ ಎಂಬುದರ ಅಂಶದ ಮೇಲೆ ಶಿಕ್ಷೆ ಬದಲಾಗುತ್ತದೆ. ಅಪರಿಚಿತರು, ಸಂಬಂಧಿಕರು, ಸರ್ಕಾರಿ ಸಿಬ್ಬಂದಿ ಸೇರಿದಂತೆ ಯಾರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಅಂಶದ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ. ಸರ್ಕಾರಿ ಅಧಿಕಾರಿ ಮಾಡಿದರೆ ಶಿಕ್ಷೆ ಮಾಡಿದರೆ ಶಿಕ್ಷೆ ಪ್ರಮಾಣವು ಬೇರೆಯಾಗಿರುತ್ತದೆ, ಸಂಬಂಧಿಕರು, ಅಪರಿಚಿತರಿಗೆ ಶಿಕ್ಷೆಯ ಪ್ರಮಾಣ ಬೇರೆಯಾಗಿತ್ತದೆ. ಎಂದು ಹೇಳಿದರು.
ಪೋಕ್ಸೊ ಪ್ರಕರಣ ಸಾಬೀತಾದರೆ ಶಿಕ್ಷೆ ಏನು?
ಪೋಕ್ಸೊ ಪ್ರಕರಣದಡಿ ಅಪ್ರಾಪ್ತ ಮಕ್ಕಳೊಂದಿಗೆ ಅಪರಾಧಿ ನಡೆಸಿರುವ ಕೃತ್ಯದ ಗಂಭಿರತೆಯ ಆಧಾರದ ಮೇಲೆ ಕನಿಷ್ಟ 3 ರಿಂದ 20 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರ, ಪ್ರಭಾವ ಬಳಸಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡರೆ, ಕಿರುಕುಳ ನೀಡಿದರೆ ಪ್ರಕರಣ ಇನ್ನಷ್ಟು ಗಂಭೀರ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಅವಕಾಶ ಕೂಡ ಕಾಯ್ದೆಯಲ್ಲಿ ಇದೆ.