Scam in 15th Finance Commission grants impossible: Minister Kharge demands release of documents
x

ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್‌ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ

15ನೇ ಹಣಕಾಸು ಆಯೋಗದ ಅನುದಾನದಲ್ಲಿ ಹಗರಣ ಅಸಾಧ್ಯ: ದಾಖಲೆ ಬಿಡುಗಡೆಗೆ ಸಚಿವ ಖರ್ಗೆ ಆಗ್ರಹ

ಸಂವಿಧಾನದ 73, 74ನೇ ತಿದ್ದುಪಡಿಯ ಮೂಲ ಆಶಯದಂತೆ ಸ್ಥಳೀಯವಾಗಿಯೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.


Click the Play button to hear this message in audio format

ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿಯ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್‌ನ್ನು ಮುಂದೆ ಇಟ್ಟುಕೊಂಡು ಮಾಜಿ ಶಾಸಕ ಪಿ.ರಾಜೀವ್‌ ಅವರು ತರ್ಕವಿಲ್ಲದ, ಹುರುಳಿಲ್ಲದ ಹಾಗೂ ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡಿದ್ದಾರೆ. ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು. ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಮಂಗಳವಾರ(ಜ.20) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ಅನುದಾನದಲ್ಲಿಶೇ. 90ರಷ್ಟು ಜನಸಂಖ್ಯೆಯ ಆಧಾರದಲ್ಲಿ ಮತ್ತು ಶೇ.10ರಷ್ಟು ಭೌಗೋಳಿಕ ಆಧಾರದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುತ್ತೋಲೆ ಹಾಗೂ ಮಾರ್ಗಸೂಚಿಗಳ ಅನ್ವಯ ಬಿಡುಗಡೆ ಮಾಡಲಾಗುತ್ತದೆ. ಒಟ್ಟು ಅನುದಾನದಲ್ಲಿ ಶೇ.60 ನಿರ್ಬಂಧಿತ, ಶೇ.40 ಅನಿರ್ಬಂಧಿತ ಅನುದಾನವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರು.

ಗ್ರಾಮ ಸಭೆ ತೀರ್ಮಾನ ಅಂತಿಮ

ಅನುದಾನವನ್ನು ಗ್ರಾಮ ಪಂಚಾಯತಿಗಳು ಮಾರ್ಗಸೂಚಿ ಅನ್ವಯ ಗ್ರಾಮ ಸಭೆ ನಡೆಸಿ, ಕ್ರಿಯಾ ಯೋಜನೆ ತಯಾರಿಸಿಕೊಂಡು, ಗ್ರಾಮ ಪಂಚಾಯತಿಗಳ ಹಂತದಲ್ಲೇ ಕಾಮಗಾರಿ ಮಾಡಲಾಗುತ್ತದೆ, ಕ್ರಿಯಾಯೋಜನೆ ಮತ್ತು ಅನುಷ್ಠಾನದ ಮಾಹಿತಿಯನ್ನು ಇ- ಗ್ರಾಮ್ ಸ್ವರಾಜ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆಯೇ ಹೊರತು ಸರ್ಕಾರದಿಂದ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ, ಸಂವಿಧಾನದ 73, 74ನೇ ತಿದ್ದುಪಡಿಯ ಮೂಲ ಆಶಯದಂತೆ ಸ್ಥಳೀಯವಾಗಿಯೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ದಾಖಲೆ ಬಿಡುಗಡೆ ಮಾಡಲಿ

ಆರೋಪ ಮಾಡುವವರಿಗೆ ಪ್ರಮುಖವಾಗಿ ಮೂಲಭೂತ ಪ್ರಜ್ಞೆ ಇರಬೇಕಾಗಿದ್ದು ಅತ್ಯವಶ್ಯಕ. ಹೈಮಾಸ್ಕ್ ದೀಪಗಳನ್ನಾದರೂ ಹಾಕಬಹುದು, ಅಥವಾ ಯಾವುದೇ ಕಾಮಗಾರಿಗಳನ್ನಾದರೂ ಮಾಡಬಹುದು, ಇದು ಸಂಪೂರ್ಣ ಗ್ರಾಮ ಪಂಚಾಯತಿಗಳ ವಿವೇಚನಾಧಿಕಾರ. 15ನೇ ಹಣಕಾಸು ಆಯೋಗದ ಅನುದಾನವನ್ನು ಬೇರೆಡೆ ವರ್ಗಾಯಿಸಲು ಸಾಧ್ಯವಿಲ್ಲ, ಈ ಅನುದಾನದ ಬಿಡುಗಡೆ ಮತ್ತು ಹಂಚಿಕೆಯಲ್ಲಿ ನನ್ನ ಪಾತ್ರ ಎಲ್ಲಿದೆ ಮತ್ತು ಹೇಗಿದೆ ಎನ್ನುವುದನ್ನು ದಾಖಲೆ ಸಮೇತ ನಿರೂಪಿಸಲು ಸಾಧ್ಯವಾಗದ ಮಾಜಿ ಶಾಸಕ ಪಿ.ರಾಜೀವ್‌ ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದರು.

ಲೆಕ್ಕ ಪರಿಶೋಧನೆಯಲ್ಲಿಅಕ್ಷೇಪಣೆಯಿಲ್ಲ

15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಯಾವುದೇ ಆಕ್ಷೇಪಣೆಗಳು ಬಂದಿಲ್ಲ, ಹೀಗಿರುವಾಗ ಇವರ ಆರೋಪಕ್ಕೆ ಸಾಕ್ಷಿಗಳೇನು? 2020-21ರಿಂದ 2022-23ರವರೆಗೆ, ಬಿಜೆಪಿ ಆಡಳಿತದ ಅವಧಿಯಲ್ಲಿ 65,325.36 ಲಕ್ಷ ರೂಪಾಯಿಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು, ಇದರಲ್ಲಿ 4,586.63 ಲಕ್ಷ ರೂಪಾಯಿಗಳ ವಸೂಲಾತಿಗೆ ಸೂಚಿಸಲಾಗಿತ್ತು, ಇದಕ್ಕೆ ಉತ್ತರ ಹೇಳುವವರು ಯಾರು ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಲ್ಲಿ ಇಲಾಖೆ ಸೊರಗಿತ್ತು

ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್ಲದೆ ಸೊರಗಿತ್ತು. ಇಡೀ ಇಲಾಖೆಯ ವ್ಯವಸ್ಥೆಯನ್ನು ಹಳ್ಳ ಹಿಡಿಸಲಾಗಿತ್ತು. ಬಿಜೆಪಿ ಮಾಡಿ ಹೋಗಿದ್ದ ಅವಾಂತರಗಳನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಈ ನಡುವೆ ಇವರ ಸುಳ್ಳು ಆರೋಪಗಳನ್ನೂ ಸಹ ಸಮರ್ಥವಾಗಿ ಎದುರಿಸುತ್ತೇವೆ ಎಂದರು.

Read More
Next Story