
ಸಚಿವ ಪ್ರಿಯಾಂಕ್ ಖರ್ಗೆ
ಅಬಕಾರಿ ಭ್ರಷ್ಟಾಚಾರಕ್ಕೆ ದಾಖಲೆಗಳಿದ್ದರೆ ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ
ಬಳ್ಳಾರಿ ಶೂಟೌಟ್ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುವ ಮುನ್ನ ಬಿಜೆಪಿಯವರು ಕೇಂದ್ರ ಸರ್ಕಾರ ಹಾಗೂ ಸಿಬಿಐ ಅವರು ಪತ್ರ ಬರೆದಿದ್ದನ್ನ ಒಮ್ಮೆ ಓದಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳು ಇದ್ದರೆ ವಿಶೇಷ ಅಧಿವೇಶನದಲ್ಲಿ ಸಲ್ಲಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ವಿಪಕ್ಷಗಳು ಕೇವಲ ಆರೋಪಗಳಿಂದ ರಾಜಕೀಯ ಮಾಡುತ್ತಿವೆಯೇ ಹೊರತು ಸಾಕ್ಷಿಗಳನ್ನು ಒದಗಿಸುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ (ಜನವರಿ 19) ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, "ಈ ಹಿಂದೆಯೂ ಬಿಜೆಪಿ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದೆ. ಆದರೆ ದಾಖಲೆಗಳನ್ನೇ ನೀಡಿಲ್ಲ. ಶೀಘ್ರವೇ ವಿಶೇಷ ಅಧಿವೇಶನ ನಡೆಯಲಿದ್ದು, ದಾಖಲೆಗಳಿದ್ದರೆ ಅಲ್ಲಿ ನೀಡಲಿ," ಎಂದು ಸವಾಲು ಹಾಕಿದರು.
ಅಬಕಾರಿ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ
"ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಅಬಕಾರಿ ಸಚಿವ ತಿಮ್ಮಾಪೂರ್ ಅವರೇ ಹೇಳಿದ್ದಾರೆ. ಬಿಜೆಪಿಯವರು 'ನಮ್ಮದು ಶೇ.40' ಎಂದು ಒಪ್ಪಿಕೊಂಡಿದ್ದಾರೆ," ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ವಿಶೇಷ ಅಧಿವೇಶನ ಕರೆದಿರುವುದನ್ನೇ ಅಸಂವಿಧಾನಿಕ ಎಂದು ಹೇಳುತ್ತಿರುವ ವಿಪಕ್ಷದಲ್ಲಿ ನಾಯಕತ್ವ ಕೊರತೆಯಿದೆ ಎಂದೂ ಅವರು ಟೀಕಿಸಿದರು.
ಬಳ್ಳಾರಿ ಶೂಟೌಟ್ ಸಿಬಿಐ ತನಿಖೆ ವಿಚಾರ
ಬಳ್ಳಾರಿ ಶೂಟೌಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ಬಿಜೆಪಿ ಆಗ್ರಹದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, "ಸಿಬಿಐಗೆ ಕೊಡಿ ಎನ್ನುವ ಮುನ್ನ ಬಿಜೆಪಿಯವರು ಕೇಂದ್ರ ಸರ್ಕಾರ ಹಾಗೂ ಸಿಬಿಐ ಬರೆದ ಪತ್ರವನ್ನು ಒಮ್ಮೆ ಓದಲಿ. 'ನಮ್ಮ ಬಳಿ ಮಾನವ ಸಂಪನ್ಮೂಲವಿಲ್ಲ. ನೀವೇ ಸಿಬ್ಬಂದಿಯನ್ನು ಕೊಡಬೇಕು' ಎಂದು ಸಿಬಿಐ ಪತ್ರ ಬರೆದಿದೆ," ಎಂದು ತಿಳಿಸಿದರು.
ಡಿಸಿಎಂ-ರಾಹುಲ್ ಗಾಂಧಿ ಭೇಟಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗಲಿಲ್ಲ ಎಂಬ ವರದಿಗಳನ್ನು ತಳ್ಳಿಹಾಕಿದ ಪ್ರಿಯಾಂಕ್ ಖರ್ಗೆ, "ದೆಹಲಿಯ ನಮ್ಮ ನಿವಾಸದಲ್ಲೇ ಡಿಸಿಎಂ ಅವರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಎರಡು ಗಂಟೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ," ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಂಚಿಕೆ ಚರ್ಚೆ ಅಪ್ರಸ್ತುತ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಗೊಂದಲದ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳನ್ನು ಅಪ್ರಸ್ತುತ ಎಂದು ಕರೆದ ಪ್ರಿಯಾಂಕ್ ಖರ್ಗೆ, "ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಕರೆದು ಮಾತನಾಡುತ್ತೇವೆ ಎಂದಿದ್ದಾರೆ. ಅಲ್ಲಿಯವರೆಗೂ ಏನೇ ಮಾತನಾಡಿದರೂ ಉಪಯೋಗವಿಲ್ಲ," ಎಂದರು.
ದಲಿತ ಸಿಎಂ ವಿಚಾರ
ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಆಗ್ರಹಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, "ಎಲ್ಲಾ ಸಮುದಾಯಕ್ಕೂ ನಾಯಕತ್ವ ಬೆಳೆಸಬೇಕೆಂಬ ಆಸೆ ಇರುತ್ತದೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಹಾಗೂ ಮೇಲ್ವರ್ಗ ಎಲ್ಲರಿಗೂ ಈ ಆಸೆ ಸ್ವಾಭಾವಿಕ. ಎಲ್ಲವನ್ನೂ ಗುರುತಿಸಿಯೇ ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹೈಕಮಾಂಡ್ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ," ಎಂದು ತಿಳಿಸಿದರು.
ಬಿಜೆಪಿ ಆರ್‌ಎಸ್‌ಎಸ್ ಕೈಗೊಂಬೆ: ಪ್ರಿಯಾಂಕ್
ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, "ಆರ್‌ಎಸ್‌ಎಸ್ ಏನು ಹೇಳುತ್ತದೆಯೋ ಅದರಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಇಲ್ಲ. ಅದು ನಾಗಪುರದಲ್ಲಿದೆ," ಎಂದು ವ್ಯಂಗ್ಯವಾಡಿದರು.

