
ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವೇ ಮೊದಲ ಗ್ರಾಹಕ: ನವೋದ್ಯಮಕ್ಕೆ ಬಲ 570 ಕೋಟಿ ರೂ. ಅನುದಾನ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಯೋಜನೆಗಳನ್ನು ಘೋಷಿಸಿದ್ದು, ಎಲೆವೇಟ್ ನೆಕ್ಸ್ಟ್ ಉಪಕ್ರಮ ಪ್ರಕಟಿಸಿದರು. ಸ್ಟಾರ್ಟ್‌ಅಪ್‌ಗಳಿಗಾಗಿ 150 ಕೋಟಿ ರೂ. ನಿಗದಿಪಡಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಉದ್ಯಮಶೀಲತೆಗೆ ಹೆಚ್ಚಿನ ಉತ್ತೇಜನ ನೀಡುವ ಗುರಿಯೊಂದಿಗೆ ರಾಜ್ಯ ಸರ್ಕಾರದ ನವೋದ್ಯಮ ನೀತಿಯು 2030ರ ವೇಳೆಗೆ ರಾಜ್ಯಾದ್ಯಂತ 25 ಸಾವಿರ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ರಾಷ್ಟ್ರೀಯ ʼನವೋದ್ಯಮ ಮಾಸʼದ ಭಾಗವಾಗಿ, ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ನವೋದ್ಯಮಗಳಿಗೆ ನೆರವಾಗುವ ʼಐಡಿಯಾ2ಪಿಒಸಿ ಎಲೆವೇಟ್ 2025ʼ ಕಾರ್ಯಕ್ರಮದ 146 ವಿಜೇತರ ಸನ್ಮಾನ ಸಮಾರಂಭದಲ್ಲಿ ನೀತಿಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.
ನೀತಿಯ ಜಾರಿಗಾಗಿ ಒಟ್ಟು 570.67 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಒಟ್ಟು ಗುರಿಯಲ್ಲಿ ಕನಿಷ್ಠ 10 ಸಾವಿರ ನವೋದ್ಯಮಗಳನ್ನು ಬೆಂಗಳೂರಿನ ಹೊರಗಿನ ಕ್ಲಸ್ಟರ್‌ಗಳಲ್ಲಿ ಸ್ಥಾಪಿಸಲು ಆದ್ಯತೆ ನೀಡಲಾಗಿದೆ. ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತಾರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು ನೀಡುವುದು ಈ ನೀತಿಯ ಮೂಲ ಉದ್ದೇಶವಾಗಿದೆ. ಸ್ಟಾರ್ಟ್‌ಆಪ್‌ಗಳು ನೀಡುವ ಉತ್ಪನ್ನ ಮತ್ತು ಪರಿಹಾರಗಳಿಗೆ ಸರ್ಕಾರವೇ ಮೊದಲ ಗ್ರಾಹಕನಾಗಿ ಅವಕಾಶ ಕಲ್ಪಿಸಲಿದೆ. ಇದು ಪರಿಕಲ್ಪನೆಯ ಹಂತದಿಂದ ಐಪಿಒವರೆಗೂ ಬೆಂಬಲ ನೀಡುವ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಮಹಿಳಾ ನೇತೃತ್ವದ ಉದ್ಯಮಗಳು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು.
ಸಮಾರಂಭದಲ್ಲಿ ಒಟ್ಟು 146 ನವೋದ್ಯಮಿಗಳನ್ನು ಸನ್ಮಾನಿಸಲಾಯಿತು. ಇದರಲ್ಲಿ 103 ಎಲೆವೇಟ್ 2025 ವಿಜೇತರು, 33 ಎಲೆವೇಟ್ ಉನ್ನತಿ ವಿಜೇತರು ಮತ್ತು 10 ಎಲೆವೇಟ್ ಅಲ್ಪಸಂಖ್ಯಾತ ನವೋದ್ಯಮಿಗಳು ಸೇರಿದ್ದಾರೆ. ಇವರಿಗೆ ಒಟ್ಟು 38.85 ಕೋಟಿ ಮೊತ್ತದ ಅನುದಾನ ವಿತರಿಸಲಾಯಿತು. ಎಲೆವೇಟ್ ಕಾರ್ಯಕ್ರಮದಡಿ ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಿಗೆ 50 ಲಕ್ಷ ರೂ.ವರೆಗೆ ಒಂದು ಬಾರಿಯ ಅನುದಾನ ಒದಗಿಸಲಾಗುತ್ತಿದೆ. ವಿಶೇಷವೆಂದರೆ, ನವೋದ್ಯಮಗಳ ಒಡೆತನದಲ್ಲಿ ಯಾವುದೇ ಪಾಲು ತೆಗೆದುಕೊಳ್ಳದೆ ಹಣಕಾಸು ನೆರವು ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ಐದು ವರ್ಷಗಳ ಉದ್ಯಮಶೀಲ ಬೆಳವಣಿಗೆಗೆ ಮಾರ್ಗಸೂಚಿ ಹೊಂದಿರುವ ಈ ನೀತಿಯು 2030ರ ವೇಳೆಗೆ ಬೆಂಗಳೂರು ಆಚೆಗಿನ ಕ್ಲಸ್ಟರ್‌ಗಳಲ್ಲಿ ಕನಿಷ್ಠ 10 ಸಾವಿರ ನವೋದ್ಯಮಗಳು ಸೇರಿದಂತೆ ರಾಜ್ಯದಾದ್ಯಂತ 25 ಸಾವಿರ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಈ ನೀತಿ ಜಾರಿಗೊಳಿಸಲು ಇಲಾಖೆಯು 570.67 ಕೋಟಿ ರೂ. ಮೊತ್ತವನ್ನು ಮೀಸಲು ಇರಿಸಿದೆ. ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತರರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು ಒಳಗೊಂಡಂತೆ ಒಟ್ಟು ಏಳು ಪ್ರಮುಖ ಆಧಾರ ಸ್ತಂಭಗಳನ್ನು ಈ ನೀತಿಯು ಆಧರಿಸಿದೆ ಎಂದು ಹೇಳಿದರು.
ಮಹಿಳಾ ನೇತೃತ್ವದ ಉದ್ಯಮಗಳು, ತಳಮಟ್ಟದ ನಾವೀನ್ಯಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಎಲ್ಲರ ಒಳಗೊಳ್ಳುವಿಕೆಗೆ ಆದ್ಯತೆ ನೀಡಲಿದೆ. ಯೋಜನೆಯಡಿ ಉತ್ಪನ್ನ ಮತ್ತು ಪರಿಹಾರ ನೀಡುವ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವನ್ನು ತಮ್ಮ ಮೊದಲ ಗ್ರಾಹಕರಾಗಿ ಹೊಂದುವ ವಿಶಿಷ್ಟ ಅವಕಾಶವನ್ನು ನೀಡಲಾಗುವುದು. ಆರಂಭಿಕ ಪರಿಕಲ್ಪನೆಯಿಂದ ಆರಂಭಿಸಿ ಜಾಗತಿಕ ವಿಸ್ತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ ಷೇರುಪೇಟೆ ಪ್ರವೇಶಿಸುವ ಹಂತದವರೆಗೂ ನವೋದ್ಯಮಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಎಲೆವೇಟ್ ಕಾರ್ಯಕ್ರಮದಡಿಯಲ್ಲಿ ಗುರುತಿಸಲ್ಪಟ್ಟ ನವೋದ್ಯಮಗಳಿಗೆ 50 ಲಕ್ಷ ರೂ.ವರೆಗೆ ಒಂದು ಬಾರಿಯ ಅನುದಾನ ಒದಗಿಸಲಾಗುತ್ತಿದೆ. ಇದರ ಜೊತೆಗೆ, ಉತ್ಪನ್ನ ಅಭಿವೃದ್ಧಿ ಮತ್ತು ದೃಢೀಕರಣಕ್ಕೆ ನೆರವಾಗಲು ನವೋದ್ಯಮಗಳಿಗೆ ಸಬ್ಸಿಡಿ ದರದಲ್ಲಿ ಮಾರ್ಗದರ್ಶನ ಮತ್ತು ಸೂಕ್ತ ನೆರವು ನೀಡಲಾಗುತ್ತಿದೆ. ಎಲೆವೇಟ್ ಮೂಲಕ, ರಾಜ್ಯಾದ್ಯಂತದ ನವೋದ್ಯಮಿಗಳು ತಮ್ಮ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡಲಾಗುತ್ತಿದೆ. ಎಲೆವೇಟ್ ಕಾರ್ಯಕ್ರಮದಡಿ ಉದ್ಯಮಶೀಲತೆಯ ಪಯಣದ ವಿವಿಧ ಹಂತಗಳಲ್ಲಿ ಭರವಸೆ ಮೂಡಿಸಿರುವ ನವೋದ್ಯಮಗಳನ್ನು ಗುರುತಿಸಿ ಅಗತ್ಯ ಬೆಂಬಲ ನೀಡಲಾಗುತ್ತಿದೆ. ನವೋದ್ಯಮಗಳು ಸುಸ್ಥಿರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡಲಾಗುತ್ತಿದೆ. ನವೋದ್ಯಮಗಳ ಒಡೆತನದಲ್ಲಿ ಯಾವುದೇ ಪಾಲು ತೆಗೆದುಕೊಳ್ಳದೆ ಹಣಕಾಸಿನ ನೆರವು ನೀಡುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಭರವಸೆಯದಾಯಕ ನವೋದ್ಯಮಗಳ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ಪ್ರಗತಿಪರ ಮತ್ತು ಅನುಕೂಲಕರ ಧೋರಣೆಗೆ ನಿದರ್ಶನವಾಗಿದೆ ಎಂದು ವಿವರಿಸಿದರು.
ಮೂರು ಹೊಸ ಬೃಹತ್ ಉಪಕ್ರಮಗಳ ಘೋಷಣೆ
ಕಾರ್ಯಕ್ರಮದಲ್ಲಿ ಸಚಿವರು ಮೂರು ಹೊಸ ಯೋಜನೆಗಳನ್ನು ಘೋಷಿಸಿದರು. ಎಲೆವೇಟ್ ನೆಕ್ಸ್ಟ್ ಎಐ, ಮಷಿನ್ ಲರ್ನಿಂಗ್, ರೋಬೋಟಿಕ್ಸ್, ಡ್ರೋನ್ ಇತ್ಯಾದಿ ಸ್ಟಾರ್ಟ್‌ಅಪ್‌ಗಳಿಗಾಗಿ 150 ಕೋಟಿ ರೂ. ನಿಗದಿಪಡಿಸಲಾಗಿದೆ. ಆಯ್ಕೆಯಾದ ಪ್ರತಿ ಅರ್ಹ ಕಂಪನಿಗೆ 1 ಕೋಟಿ ನೆರವು ಸಿಗಲಿದೆ. ಇದು ದೇಶದ ಎಲ್ಲಾ ಅರ್ಹ ಡೀಪ್‌ಟೆಕ್ ಕಂಪನಿಗಳಿಗೆ ಮುಕ್ತವಾಗಿದ್ದು, ಆಯ್ಕೆಯಾದ ಹೊರರಾಜ್ಯದ ಕಂಪನಿಗಳು 4 ತಿಂಗಳೊಳಗೆ ರಾಜ್ಯದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಬೆಂಗಳೂರಿನ ಹೊರಗೆ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ನವೋದ್ಯಮ ಸ್ಥಾಪನೆ ಉತ್ತೇಜಿಸಲು 75 ಕೋಟಿ ರೂ. ಮೊತ್ತದ ನಿಧಿಯನ್ನು ಸ್ಥಾಪಿಸಲಾಗಿದೆ. ಲೀಪ್ ಚೌಕಟ್ಟು ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮದ ಅಡಿಯಲ್ಲಿ ನಾವೀನ್ಯತೆ ಆಧಾರಿತ ಕೈಗಾರಿಕಾ ಪರಿವರ್ತನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

