
ಲೋಕಾಯುಕ್ತ ದಾಳಿ: 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಅಧಿಕಾರಿ ಬಂಧನ
ಸಿಎಲ್-7, ಮೈಕ್ರೋ ಬ್ರೂವರಿ ಪರವಾನಗಿ ಮಂಜೂರು ಮಾಡಲು ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಮತ್ತು ತಂಡವು ಬರೋಬ್ಬರಿ 80 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಸಿಎಲ್-7 ಮತ್ತು ಮೈಕ್ರೋ ಬ್ರೂವರಿ ಪರವಾನಗಿ ನೀಡಲು 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಉಪ ಆಯುಕ್ತ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬ್ಯಾಟರಾಯನಪುರದ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್, ಅಬಕಾರಿ ಅಧೀಕ್ಷಕ ಕೆ.ಎಂ.ತಮ್ಮಣ್ಣ, ಅಬಕಾರಿ ಕಾನ್ಸ್‌ಟೇಬಲ್ ಲಕ್ಕಪ್ಪ ಗಣಿ ಎಂದು ಗುರುತಿಸಲಾಗಿದೆ.
ಲಕ್ಷ್ಮೀನಾರಾಯಣ ಸಿ. ಎಂಬುವವರು ಹೊಸದಾಗಿ ಸಿಎಲ್-7 ಮತ್ತು ಮೈಕ್ರೋ ಬ್ರೂವರಿ ಪರವಾನಗಿ ಪಡೆಯಲು ಬ್ಯಾಟರಾಯನಪುರದಲ್ಲಿರುವ ಅಬಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಪರವಾನಗಿಗಳನ್ನು ಮಂಜೂರು ಮಾಡಲು ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಮತ್ತು ತಂಡವು ಬರೋಬ್ಬರಿ 80 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಚ್ಛಿಸದ ಲಕ್ಷ್ಮೀನಾರಾಯಣ ಅವರು ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು ಕಾರ್ಯಾಚರಣೆ ಕೈಗೊಂಡಿದೆ. ದೂರುದಾರರಿಂದ ಮೊದಲ ಕಂತಿನ ಮೊತ್ತವಾಗಿ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಎಂ ಅವರ ನೇತೃತ್ವದ ತಂಡದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಬಸವರಾಜ್ ಪುಲ್ಹಾರಿ ಮತ್ತು ರಾಮಪ್ಪ ಎಂ. ಸವಲಗಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬಂಧಿತರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಕಲಂ 7(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮೂವರನ್ನು ಬಂಧಿಸುವ ಪೊಲೀಸರು, ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಹೊಸ ಮದ್ಯದ ಅಂಗಡಿ ಅಥವಾ ಬ್ರೂವರಿ ಆರಂಭಿಸಲು ಸರ್ಕಾರದ ಅನುಮತಿ ಕಡ್ಡಾಯ. ಈ ಕಡತಗಳು ಉಪ ಆಯುಕ್ತರ ಅಥವಾ ಜಂಟಿ ಆಯುಕ್ತರ ಹಂತದಲ್ಲಿ ತಿಂಗಳುಗಟ್ಟಲೆ ಬಾಕಿ ಉಳಿಯುತ್ತವೆ. ಬಾಕಿ ಉಳಿರುವ ಕಡತಗಳ ವಿಲೇವಾರಿಗಾಗಿ ಲಕ್ಷಾಂತರ ರೂ. ಲಂಚ ಕೇಳುವುದು ಸಾಮಾನ್ಯವಾಗಿದೆ. ಈ ಪ್ರಕರಣವು ಸಹ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ಲಂಚಾವತಾರವನ್ನು ಬಹಿರಂಗಗೊಳಿಸಿದೆ.

