
ಬಿಜೆಪಿ ನೂತನ ಸಾರಥಿ ಆಯ್ಕೆಗೆ ಮುಹೂರ್ತ ಫಿಕ್ಸ್: ಜ.20ಕ್ಕೆ ನೂತನ ಅಧ್ಯಕ್ಷರ ಪಟ್ಟಾಭಿಷೇಕ!
ಭಾರತೀಯ ಜನತಾ ಪಕ್ಷದ (BJP) ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಅಧಿಕೃತವಾಗಿ ದಿನಾಂಕ ಘೋಷಣೆಯಾಗಿದೆ. ಜನವರಿ 20 ರಂದು ನೂತನ ಅಧ್ಯಕ್ಷರ ಹೆಸರು ಅಧಿಕೃತವಾಗಿ ಹೊರಬೀಳಲಿದೆ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದ್ದು, ಬಿಹಾರದ ಯುವ ನಾಯಕ ನಿತಿನ್ ನಬಿನ್ ಅವರು ಈ ಉನ್ನತ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಜ.19ಕ್ಕೆ ನಾಮಪತ್ರ ಸಲ್ಲಿಕೆ ಹಾಗೂ ಜ.20ಕ್ಕೆ ನೂತನ ಅಧ್ಯಕ್ಷರ ಘೋಷಣೆ ನಡೆಯಲಿದೆ. ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಹಾದಿ ಸುಗಮವಾಗಿದೆ.
ಚುನಾವಣಾ ವೇಳಾಪಟ್ಟಿ
• ನಾಮಪತ್ರ ಸಲ್ಲಿಕೆ: ಜನವರಿ 19, ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ.
• ದಾಖಲೆಗಳ ಪರಿಶೀಲನೆ: ಜನವರಿ 19, ಸಂಜೆ 4:00 ರಿಂದ 5:00 ರವರೆಗೆ.
• ನಾಮಪತ್ರ ಹಿಂಪಡೆಯಲು ಅವಕಾಶ: ಜನವರಿ 19, ಸಂಜೆ 5:00 ರಿಂದ 6:00 ರವರೆಗೆ.
• ಅಂತಿಮ ಘೋಷಣೆ: ಜನವರಿ 20 ರಂದು (ಅಗತ್ಯವಿದ್ದರೆ ಮಾತ್ರ ಮತದಾನ ನಡೆಯಲಿದೆ).
ನಿತಿನ್ ನಬಿನ್ ಸಾರಥ್ಯ ಬಹುತೇಕ ಖಚಿತ
ಸದ್ಯ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ 45 ವರ್ಷದ ಯುವ ನಾಯಕ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ ನಬಿನ್ ಅವರನ್ನು ನೇಮಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಒಲವು ತೋರಿದ್ದಾರೆ ಎನ್ನಲಾಗಿದೆ.
ಈ ಸಂಪೂರ್ಣ ಪ್ರಕ್ರಿಯೆಯು ನವದೆಹಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಬೇರೆ ಯಾರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲದ ಕಾರಣ, ಜನವರಿ 20 ರಂದೇ ನಿತಿನ್ ನಬಿನ್ ಅವರನ್ನು ಬಿಜೆಪಿಯ ಹೊಸ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಯಾರು ಈ ನಿತಿನ್ ನಬಿನ್?
ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ 5 ಬಾರಿಯ ಶಾಸಕರಾಗಿರುವ 45 ವರ್ಷದ ನಿತಿನ್ ನಬಿನ್, ಬಿಜೆಪಿಯ ಹಿರಿಯ ನಾಯಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ಬಿಹಾರ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ಆರ್‌ಎಸ್‌ಎಸ್ (RSS) ಹಿನ್ನೆಲೆಯಿಂದ ಬಂದವರಾಗಿದ್ದು ಸಂಘಟನಾತ್ಮಕವಾಗಿ ಬಲಿಷ್ಠರಾಗಿದ್ದಾರೆ. ಇವರು ಅಧ್ಯಕ್ಷರಾಗಿ ಆಯ್ಕೆಯಾದರೆ ಬಿಜೆಪಿಯ ಅತಿ ಕಿರಿಯ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷರಲ್ಲಿ ಒಬ್ಬರಾಗಲಿದ್ದಾರೆ.
ಆಯ್ಕೆ ಪ್ರಕ್ರಿಯೆ ಹೀಗಿರಲಿದೆ
ಬಿಜೆಪಿಯ ಮುಖ್ಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಸೆಟ್ ನಾಮಪತ್ರಗಳನ್ನು ಸಲ್ಲಿಕೆ ಮಾಡಲಾಗುತ್ತದೆ:
1. ಮೊದಲ ಸೆಟ್‌ನಲ್ಲಿ 20ಕ್ಕೂ ಹೆಚ್ಚು ರಾಜ್ಯ ಘಟಕಗಳ ಅಧ್ಯಕ್ಷರ ಸಹಿ ಇರಲಿದೆ.
2. ಎರಡನೇ ಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಅವರ ಸಹಿ ಇರಲಿದೆ.
3. ಮೂರನೇ ಸೆಟ್‌ನಲ್ಲಿ ರಾಷ್ಟ್ರೀಯ ಮಂಡಳಿಯ ಸದಸ್ಯರ ಸಹಿ ಇರಲಿದೆ.

