Nilanjan Mukhopadyay

ಮೋದಿ-ಶಾ ಜೋಡಿಯ ಗಿಲೀಟು ಬಯಲು ಮಾಡಿದ ನಿತಿನ್ ನಬೀನ್ ಪದೋನ್ನತಿ


ಮೋದಿ-ಶಾ ಜೋಡಿಯ ಗಿಲೀಟು ಬಯಲು ಮಾಡಿದ ನಿತಿನ್ ನಬೀನ್ ಪದೋನ್ನತಿ
x
ಬಿಜೆಪಿ ಕಾರ್ಯಾಧ್ಯಕ್ಷರಾಗಿ ನಿತಿನ್ ನಬೀನ್ ಅವರ ಪ್ರತಿಷ್ಠಾಪನೆಯು ತುರ್ತಾಗಿ ನಡೆಸಬೇಕಿರುವ ಸಾಂಸ್ಥಿಕ ನವೀಕರಣಕ್ಕೆ ಯಾವುದೇ ಸಂಬಂಧವಿಲ್ಲ. ಮೋದಿ-ಶಾ ಜೋಡಿಯ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸುವುದಷ್ಟೇ ಇದರ ಹಿಂದಿನ ಉದ್ದೇಶವಾಗಿದೆ.
Click the Play button to hear this message in audio format

ಬಿಜೆಪಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಿತಿನ್ ನಬಿನ್ ಪ್ರಭಾವ ರಹಿತ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಮೋದಿ ಅವರ ಯುಗದಲ್ಲಿ ಪಕ್ಷದ ಅಧ್ಯಕ್ಷರ ಘನತೆ ಹಂತಹಂತವಾಗಿ ಕ್ಷೀಣಿಸುತ್ತಿದೆಯೇ?

ಏಕಾಏಕಿ ಬಿಜೆಪಿ ಕಾರ್ಯಾಧ್ಯಕ್ಷರ ಘೋಷಣೆಯಾಗಿದೆ. ಅದಾದ ಬಳಿಕ ರಾಜಕಾರಣಿಗಳು, ಪತ್ರಕರ್ತರು ಮತ್ತು ರಾಜಕೀಯ ಪಂಡಿತರು ಚರ್ಚಿಸುತ್ತಿರುವ ವಿಚಾರಗಳು ಮುಖ್ಯವಾಗಿ ವೈಯಕ್ತಿಕ ಸಂಗತಿಗಳ ಸುತ್ತಲೇ ಗಿರಕಿ ಹೊಡೆಯುತ್ತವೆ. ಇದರ ಪರಿಣಾಮವಾಗಿ ಸ್ವಾತಂತ್ರ್ಯೋತ್ತರ ಭಾರತೀಯ ರಾಜಕೀಯವನ್ನು ಕಾಡುತ್ತಿರುವ ಪ್ರಮುಖ ಪಿಡುಗಿನ ಚರ್ಚೆಗಳೇ ನಡೆಯುತ್ತಿಲ್ಲ. ನಡೆಯುತ್ತಿರುವ ಚರ್ಚೆಗಳೇನಿದ್ದರೂ ಸರ್ಕಾರ ಮತ್ತು ಆಡಳಿತ ಪಕ್ಷದ ನಡುವೆ ಅಸಮತೋಲಿತ ಸಂಬಂಧಗಳ ಬಗ್ಗೆ ಮಾತ್ರ.

ಇಂತಹ ಸಮತೋಲಿತ ಸಂಬಂಧವನ್ನು ರೂಪಿಸುವ ಬದಲು ಬಹುತೇಕ ಸಂದರ್ಭಗಳಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಸಂಪೂರ್ಣವಾಗಿ ನಿಯಂತ್ರಿಸುವ ವ್ಯಕ್ತಿಯೇ ಪಕ್ಷದ ಸಂಘಟನೆಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಾನೆ.

ಇದಕ್ಕೆ ವ್ಯತಿರಿಕ್ತವಾದ ಕೆಲವು ಅಪರೂಪದ ಉದಾಹರಣೆಗಳೂ ಇಲ್ಲವೆಂದೇನೂ ಅಲ್ಲ. ಅಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಕೇವಲ ನಾಮಮಾತ್ರಕ್ಕೆ ಎಂದು ಪಕ್ಷದ ಪದಾಧಿಕಾರಿಗಳು ಭಾವಿಸಿದ್ದರು. ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸಂಘಟನಾ ಶಕ್ತಿಯನ್ನು ಪಕ್ಷದ ಮುಖಂಡರೇ ನಿಯಂತ್ರಿಸುತ್ತಿದ್ದರು. ಇದು ಒಬ್ಬ ವರ್ಚಸ್ವೀ ನಾಯಕನಿಗೂ ಅಗತ್ಯವಿರುವ ಗುಣಲಕ್ಷಣವಾಗಿದೆ.

ಸರ್ಕಾರ ತಾತ್ಕಾಲಿಕ-ಪಕ್ಷವೇ ಶಾಶ್ವತ

ಒಂದು ಆದರ್ಶಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷವೇ ಶಾಶ್ವತವಾದುದು. ಸರ್ಕಾರ ತಾತ್ಕಾಲಿಕ. ಈ ಎರಡೂ ವ್ಯವಸ್ಥೆಗಳು ಪರಸ್ಪರರ ಕಾಳಜಿ ಮತ್ತು ಮಿತಿಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಸರ್ಕಾರದಲ್ಲಿ ಇರುವ ನಾಯಕರು ತಾವು ಒಂದು ನಿರ್ದಿಷ್ಟ ಅವಧಿಯ ತನಕ ಮಾತ್ರ ಅಧಿಕಾರ ಸೂತ್ರ ಹಿಡಿದವರು ಎಂಬ ಸಂಗತಿಯನ್ನು ಮರೆಯಬಾರದು.

‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ಸಿದ್ಧಾಂತವನ್ನು ಒತ್ತಟ್ಟಿಗಿಟ್ಟು ತಾವೇ ಸ್ವತಃ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಪಕ್ಷದ ಅಗ್ರ ಪದವಿಯನ್ನೂ ಅಲಂಕರಿಸಿದ್ದೇ ಹೌದಾದರೆ ಆಗ ಪಕ್ಷದ ಸಂಘಟನೆ ತನ್ನ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ ಪಕ್ಷವು ಸರ್ಕಾರದ ಇನ್ನೊಂದು ರೂಪದಂತೆ ಭಾಸವಾಗಿ ಕ್ರಮೇಣ ಮಕಾಡೆ ಮಲಗುತ್ತದೆ.

ಒಂದು ವೇಳೆ ಶಾಸಕಾಂಗದಲ್ಲಿ ಸಂಖ್ಯಾಬಲದ ಏರುಪೇರಿನ ಕಾರಣದಿಂದಾಗಿ ಅಥವಾ ಆಡಳಿತ ಪಕ್ಷದ ಒಳಜಗಳದ ಫಲವಾಗಿ ಸರ್ಕಾರದ ಅವಧಿ ಮುಗಿಯುವ ಮೊದಲೇ ಪತನ ಹೊಂದಿದರೆ ಅಂತಹ ಸಂದರ್ಭದಲ್ಲಿ ಮತ್ತೆ ಅಧಿಕಾರದ ಗದ್ದುಗೆಯನ್ನು ಹಿಡಿಯಲು ಬೇಕಾದ ಸಿದ್ಧತೆಗಳನ್ನು ಮಾಡುವ ಸಾಮರ್ಥ್ಯ ಇರುವುದು ಕೇವಲ ಪಕ್ಷದ ಸಂಘಟನೆಗೆ ಮಾತ್ರ.

ಭಾರತದಲ್ಲಿ ಸರ್ಕಾರ ಮತ್ತು ಆಡಳಿತ ಪಕ್ಷದ ನಡುವಿನ ಈ ಸಮತೋಲನವಿಲ್ಲದ ಸಂಬಂಧಗಳಿಗೆ ಬಹುಮುಖ್ಯ ಕಾರಣವೇನೆಂದರೆ ಭಾರತದ ರಾಜಕೀಯ ಅಧಿಕಾರ ಮತ್ತು ಆಡಳಿತ ರಚನೆ ಎಂಬುದು ಸುದೀರ್ಘವಾದ ವಸಾಹತುಶಾಹಿ ವಿರೋಧಿ ಹೋರಾಟದಿಂದ ರೂಪುಗೊಂಡಿದ್ದಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಮೊದಲ ಸರ್ಕಾರ ಹುಟ್ಟಿಕೊಂಡಿದ್ದಾದರೂ ರಾಷ್ಟ್ರೀಯ ಚಳವಳಿಯ ಮೂಲಕ. ಈ ನಿಟ್ಟಿನಲ್ಲಿ 1947ರಲ್ಲಿ ಅಸ್ತಿತ್ವಕ್ಕೆ ಬಂದ ಜವಾಹರ್ ಲಾಲ್ ನೆಹರೂ ಅವರ ಸಚಿವ ಸಂಪುಟವು ‘ರಾಷ್ಟ್ರೀಯ’ ಸ್ವರೂಪದ್ದಾಗಿತ್ತು ಎಂಬುದನ್ನು ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಯಾಕೆಂದರೆ ಅಂದು ಕಾಂಗ್ರೆಸ್ ಪಕ್ಷದ ಹೊರಗಿನ ನಾಯಕರನ್ನು ಕೂಡ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಯಾವಾಗ ಪಕ್ಷದ ನೇತೃತ್ವದಲ್ಲಿದ್ದ ಈ ಚಳವಳಿಯು ಯಾವಾಗ ‘ಸರ್ಕಾರ’ವಾಗಿ ರೂಪಾಂತರ ಹೊಂದಿತೋ ಆಗ ಸರ್ಕಾರದಲ್ಲಿ ಇದ್ದವರು ತಾವಿನ್ನೂ ಪಕ್ಷವೇ ಆಗಿದ್ದೇವೆ ಎಂಬ ತಪ್ಪು ಕಲ್ಪನೆಗೆ ಒಳಗಾದರು.

ಎರಡನೇ ಸ್ವಾತಂತ್ರ್ಯ ಚಳವಳಿ

ಕಾಂಗ್ರೆಸ್ ಪಕ್ಷದ ರೀತಿಯಲ್ಲಿಯೇ ಬಿಜೆಪಿಯ ಉಗಮವು ‘ಎರಡನೇ’ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಸಂಭವಿಸಿದ್ದಾಗಿದೆ ಎಂದು ಬಿಜೆಪಿ ನಾಯಕರು ವಿವಾದಾತ್ಮಕವಾಗಿ ಪ್ರತಿಪಾದಿಸಿದರು. ಈ ‘ಎರಡನೇ ಸ್ವಾತಂತ್ರ್ಯ ಚಳವಳಿ’ ಎಂಬ ಪದಗುಚ್ಛವೇನಿದ್ದರೂ ರಾಮಜನ್ಮಭೂಮಿ ಚಳವಳಿಯನ್ನು ಸಂಕೇತವಾಗಿಟ್ಟುಕೊಂಡು ಹೇಳಿದ ಮಾತಾಗಿತ್ತು.

ಅಷ್ಟಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಬೇಡಿಕೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಬಹುದೇ ಅಥವಾ ಇಲ್ಲವೇ ಎಂಬುದು ಚರ್ಚಾಸ್ಪದ ವಿಷಯ.

ಆದರೆ ಒಂದು ಮಾತಂತೂ ಸತ್ಯ; 1980ರ ದಶಕದ ಕೊನೆಯ ಕಾಲಘಟ್ಟ ಮತ್ತು 1990ರ ದಶಕದ ಆರಂಭದ ಅವಧಿಯಲ್ಲಿ ಬಿಜೆಪಿ ಈ ವಿಷಯವನ್ನು ಪ್ರಮುಖವಾಗಿ ಪ್ರತಿಪಾದಿಸುವ ಮೂಲಕ ಭಾರತದ ರಾಜಕೀಯದ ಯಾವುದೋ ಮೂಲೆಯಿಂದ ಮುಂಚೂಣಿಗೆ ಬಂದಿತು.

ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ಅವಧಿಯಲ್ಲಿ (198-2004) ರಾಮ ಮಂದಿರ ಮತ್ತು ಇತರ ಕಠಿಣ ಹಿಂದುತ್ವದ ಸಂಗತಿಗಳನ್ನು ಹಿನ್ನೆಲೆಗೆ ಸರಿಸಲಾಗಿತ್ತು ಎಂಬುದು ದಿಟ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಿದ್ದು ಅಭಿವೃದ್ಧಿ ಮತ್ತು ಹಿಂದುತ್ವದ ಎರಡನ್ನೂ ಚತುರತೆಯಿಂದ ಸಮತೋಲನಗೊಳಿಸಿದ ಸಮಗ್ರ ಪ್ಯಾಕೇಜ್ ಜಾರಿಗೆ ತರುವ ಭರವಸೆಯನ್ನು ನೀಡುವ ಮೂಲಕ.

ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಇತ್ತು. ಮತ್ತು ಪ್ರಧಾನಿಯವರು ಪ್ರತ್ಯೇಕವಾದಿ ಹಿಂದುತ್ವದ ಭರವಸೆಗಳನ್ನು ಈಡೇರಿಸುವ ಸ್ಥಿತಿಯಲ್ಲಿ ಇರಲಿಲ್ಲ. ತತ್ಪರಿಣಾಮವಾಗಿ ಅವರು ಬಿಜೆಪಿಯಿಂದ ಸಾಂದರ್ಭಿಕ ಒತ್ತಡಕ್ಕೆ ಗುರಿಯಾಗಬೇಕಾಯಿತು. ಜೊತೆಗೆ ಆಗಾಗ ಆರ್.ಎಸ್.ಎಸ್. ಮತ್ತು ಇತರ ಅಂಗ ಸಂಸ್ಥೆಗಳು ಕೂಡ ಸರ್ಕಾರದ ವಿರುದ್ಧ ನಿಲುವನ್ನು ತಳೆದಿದ್ದವು.

2014ರಲ್ಲಿ ಚುನಾವಣೆ ನಡೆಯುವುದಕ್ಕೂ ಮುನ್ನ ಬಿಜೆಪಿ ತನ್ನ ಈ ವಿಶಿಷ್ಟ ಗುರುತಿನ ಛಾಯೆಯನ್ನು ಉಳಿಸಿಕೊಂಡಿತ್ತು. ಆದರೆ ಯಾವಾಗ ನರೇಂದ್ರ ಮೋದಿ ಅವರು ಪ್ರಧಾನಿಯಾದರೋ ಅಲ್ಲಿಂದೀಚೆಗೆ ಪಕ್ಷದ ಧ್ವನಿ ಕ್ರಮೇಣ ಕ್ಷೀಣಿಸುತ್ತ ಬಂತು.

ಪ್ರಭಾವ ರಹಿತ ನಾಯಕ

ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ನಿತಿನ್ ನಬಿನ್ ಅವರು ತೀರಾ ಪ್ರಭಾವ ರಹಿತರಾದ ಒಬ್ಬ ನಾಯಕ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. (ಮುಂದಿನ ದಿನಗಳಲ್ಲಿ ನಡೆಯಲಿರುವ ಅವರ ಔಪಚಾರಿಕ ಆಯ್ಕೆ ಕೇವಲ ಒಂದು ಸಂಪ್ರದಾಯವಷ್ಟೇ ಎಂದು ನಾನಾದರೂ ಭಾವಿಸುತ್ತೇನೆ). ಆದರೆ ಮೋದಿ ಅವರ ಯುಗದಲ್ಲಿ ಪಕ್ಷದ ಅಧ್ಯಕ್ಷರ ಘನತೆಯು ಪಕ್ಷದೊಳಗೆ ಹಂತಹಂತವಾಗಿ ಕ್ಷೀಣಿಸುತ್ತ ಬಂದಿದೆ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು.

2014ರಲ್ಲಿ ಮತ್ತು 2019ರಲ್ಲಿ ಕ್ರಮವಾಗಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರೇನೂ ಪಕ್ಷದ ದಿಗ್ಗಜರಾಗಿರಲಿಲ್ಲ ಎಂಬುದು ನಿಜವಾದರೂ ಪ್ರಸ್ತುತ ಅಧಿಕಾರದಲ್ಲಿ ಇರುವವರಿಗಿಂತ ಅವರು ಪಕ್ಷದೊಳಗೆ ಹೆಚ್ಚು ಹಿರಿಯರು ಮತ್ತು ಚಿರಪರಿಚಿತರೂ ಆಗಿದ್ದರು.

ಆರಂಭದಿಂದಲೂ ಪಕ್ಷದ ಪ್ರಾಥಮಿಕ ಕೆಲಸ ಏನಿದ್ದರೂ ಮೋದಿ ಅವರಿಗೆ ಚಿಯರ್-ಲೀಡರ್ ಕೆಲಸ ಮಾಡುವುದು ಮತ್ತು ಈಗಾಗಲೇ ನಿರ್ಧರಿಸಿದ ಸಂಗತಿಗಳನ್ನು ಒಪ್ಪಿಕೊಳ್ಳುವುದು ಎಂದು ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷರಾಗಿ ಸ್ಪಷ್ಟಪಡಿಸಿದ್ದರು. ಹಾಗಿದ್ದೂ ಪಕ್ಷದ ಅಧ್ಯಕ್ಷ ಹುದ್ದೆಗೆ ಮತ್ತು ಅವರ ಕಚೇರಿಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿತ್ತು. ಅದಕ್ಕೆ ಮುಖ್ಯ ಕಾರಣ ಅಮಿತ್ ಶಾ ಅವರಿಗಿದ್ದ ವರ್ಚಸ್ಸು ಮತ್ತು ಅವರು ಮೋದಿ ಅವರೊಂದಿಗೆ ಹೊಂದಿದ್ದ ನಿಕಟ ಸಂಬಂಧ.

ಆದರೆ ಯಾವಾಗ ನಡ್ಡಾ ಅವರು ಅಧ್ಯಕ್ಷರಾಗಿ ಬಂದರೋ ಅಲ್ಲಿಂದ ಪಕ್ಷದ ಅಧ್ಯಕ್ಷರ ಈ ವಿಶಿಷ್ಟ ಗುರುತು ಕಡಿಮೆಯಾಯಿತು. ಯಾಕೆಂದರೆ ಮೋದಿ ಅವರ ನೇತೃತ್ವದ ಸಂಘಟನೆ ಮತ್ತು ಸರ್ಕಾರದಲ್ಲಿ ಅವರ ಸ್ಥಾನವು ಶಾ ಅವರಿಗಿಂತ ಕೆಳಮಟ್ಟದ್ದಾಗಿತ್ತು.

ಅದೇ ರೀತಿ ನಬಿನ್ ಅವರ ವ್ಯಕ್ತಿತ್ವ ಕನಿಷ್ಠ ಈ ಕ್ಷಣದಲ್ಲಿ ನಿರ್ಗಮಿತ ಪಕ್ಷದ ಅಧ್ಯಕ್ಷರಿಗಿಂತ ಮತ್ತು ಹಲವಾರು ಸಾಂಘಿಕ ನಾಯರಿಗಿಂತಲೂ ತಳಮಟ್ಟದಲ್ಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ನಬಿನ್ ಅವರು ಈವರೆಗೆ ತಮ್ಮ ವೃತ್ತಿಜೀವನದಲ್ಲಿ ನಾನಾ ಸಚಿವ ಸ್ಥಾನಗಳನ್ನು ಹೊಂದಿದ್ದ ಹಲವಾರು ಹಿರಿಯ ನಾಯಕರನ್ನು ನೋಡಿ ಬೆರಗಾಗಿದ್ದರು. ಪ್ರಮುಖವಾಗಿ ಮೋದಿ ಅವರು ತಮ್ಮ ‘ಗ್ಯಾರೆಂಟಿ’ಯ ಹೊರತಾಗಿಯೂ ಪಕ್ಷವನ್ನು ಸತತ ಮೂರನೇ ಬಾರಿ ಸಂಸದೀಯ ಬಹುಮತದತ್ತ ಮುನ್ನಡೆಸಲು ವಿಫಲರಾದ ಬಳಿಕ ಈ ಹಿರಿಯ ನಾಯಕರನ್ನು ಪಕ್ಷದ ಸಂಭಾವ್ಯ ಅಧ್ಯಕ್ಷರೆಂದು ಪರಿಗಣಿಸಲಾಗಿತ್ತು.

ಶಾ ಆಯ್ಕೆ ಹಿಂದಿನ ಉದ್ದೇಶ

2014ರಲ್ಲಿ ಅಮಿತ್ ಶಾ ಅವರನ್ನು ನೇಮಕ ಮಾಡಿದ ಬಲುಮುಖ್ಯ ಉದ್ದೇಶವೇನಿದ್ದರೂ ಅಲ್ಲಿಯ ವರೆಗೂ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ‘ಹಿರಿಯರನ್ನು’ ಹೊರಹಾಕುವುದು ಮತ್ತು ಅವರ ಸ್ಥಾನದಲ್ಲಿ ಮೋದಿ ನಿಷ್ಠಾವಂತರನ್ನು ಪ್ರತಿಷ್ಠಾಪಿಸುವುದಾಗಿತ್ತು. ಆ ಬಳಿಕ 2019ರಲ್ಲಿ ನಡ್ಡಾ ಅವರ ಪದೋನ್ನತಿಯಿಂದಾಗಿ ಅಮಿತ್ ಶಾ ಅವರು ಸರ್ಕಾರದ ಒಳಗೆ ಸೇರ್ಪಡೆಗೊಳ್ಳಲು ಮತ್ತು ಆಡಳಿತದಲ್ಲಿ ಅವರನ್ನು ವಾಸ್ತವವಾಗಿ ಎರಡನೇ ಸ್ಥಾನದ ನಾಯಕರನ್ನಾಗಿ ಸ್ಥಾಪಿಸಲು ಅನುವು ಮಾಡಿಕೊಟ್ಟಿತು. ಅದೇ ಸಮಯದಲ್ಲಿ ಮೋದಿ ಅವರು ತಮ್ಮ ಪರವಾಗಿ ಒಬ್ಬರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಹೊಂದುವುದನ್ನು ಖಚಿತಪಡಿಸಿತು.

ಅದೇ ರೀತಿ ನಬೀನ್ ಅವರನ್ನು ಪ್ರತಿಷ್ಠಾಪನೆ ಮಾಡಿರುವುದು ತುರ್ತಾಗಿ ನಡೆಸಬೇಕಿರುವ ಸಾಂಸ್ಥಿಕ ನವೀಕರಣಕ್ಕೆ ಯಾವುದೇ ಸಂಬಂಧವಿಲ್ಲ. ವಿಶೇಷವಾಗಿ ನಡ್ಡಾ ಅವರ ಅವಧಿಯನ್ನು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೇ ಸತತವಾಗಿ ವಿಸ್ತರಿಸಿ ಅಲ್ಲೊಂದು ‘ನಿಷ್ಕ್ರಿಯತೆ’ ಮನೆಮಾಡಿತ್ತು. ಇದನ್ನು ಹೋಗಲಾಡಿಸುವುದಕ್ಕೆ ಬದಲಾಗಿ ಮೋದಿ-ಶಾ ಜೋಡಿಯ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವ ಪ್ರಯತ್ನ ಇದಾಗಿದೆ. ನಬೀನ್ ಅವರ ಹೊಸ ನಾಮಫಲಕವನ್ನು ಬಳಸಿಕೊಂಡು ಮತ್ತೊಂದು ಸುತ್ತಿನ ‘ಶುದ್ಧೀಕರಣ’ ನಡೆಸುವುದು ಮಾತ್ರ ನಿಶ್ಚಿತ.

ವಾಜಪೇಯಿ ಅವರ ಕಾಲದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಸಂಘ ಪರಿವಾರದ ಹಿರಿಯರು ಸರ್ಕಾರದ ಗಾಲಿಗಳಿಗೆ ಕೀಲಿಯನ್ನು ಇಡುತ್ತಿದ್ದರು. ಆದರೆ ಅದಕ್ಕೆ ತದ್ವಿರುದ್ಧವಾಗಿ ಇಂದಿನ ಬಿಜೆಪಿಯ ಸಾಂಸ್ಥಿಕ ರಚನೆಯು ಅಂದಿನ ಕಾಂಗ್ರೆಸ್ ವ್ಯವಸ್ಥೆಯನ್ನು, ಅದರಲ್ಲೂ ವಿಶೇಷವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕಾಲದ ವ್ಯವಸ್ಥೆಯನ್ನು ಹೋಲುತ್ತದೆ.

ಇಂದಿರಾ ಕಾಲದ ಭಟ್ಟಂಗಿತನ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ದೇವ್ ಕಾಂತ್ ಬರೂವಾ ಅವರು ‘ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ” ಎಂದು ಹೇಳುವ ಮೂಲಕ ಭಟ್ಟಂಗಿತನದ ಪರಾಕಾಷ್ಠೆ ತಲುಪಿದ್ದರು. (ಜವಾಹರ್ ಲಾಲ್ ನೆಹರೂ ಮತ್ತು ಪಿ.ವಿ.ನರಸಿಂಹ ರಾವ್ ಅವರು ಕೂಡ ಹಲವಾರು ವರ್ಷಗಳ ಕಾಲ ಸರ್ಕಾರ ಮತ್ತು ಪಕ್ಷ ಎರಡನ್ನೂ ಅಧಿಕೃತವಾಗಿಯೇ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು). ಕಾಂಗ್ರೆಸ್ ಕಾಲದ ಈ ರೀತಿಯ ಅತಿರೇಕದ ಹೊಗಳು ಭಟ್ಟಂಗಿಗಳಿಗೆ ಸಮಾನವಾದ ಹತ್ತಾರು ಉದಾಹರಣೆಗಳು ಇಂದಿನ ಮೋದಿ ಯುಗದಲ್ಲಿಯೂ ಯಥೇಚ್ಛವಾಗಿ ಕಂಡುಬರುತ್ತಿವೆ.

ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಇರಿಸಿಕೊಂಡು ಪಕ್ಷ ಮತ್ತು ಸರ್ಕಾರದ ನಡುವೆ ದ್ವಿಸ್ವಾಮ್ಯ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸಲು ನಡೆಸಿದ ಪ್ರಯತ್ನವನ್ನು ಶ್ಲಾಘಿಸಲೇಬೇಕು. ರಾಷ್ಟ್ರೀಯ ಸಲಹಾ ಸಮಿತಿ (ಎನ್ಎಸಿ)ಯನ್ನು ರಚಿಸಿ ಅದಕ್ಕೆ ಅಧಿಕೃತ ಸ್ಥಾನಮಾನವನ್ನೂ ನೀಡುವ ಮೂಲಕ ಅದನ್ನು ಸಾಂಸ್ಥಿಕವಾಗಿ ಜಾರಿಗೆ ತರಲಾಯಿತು.

ಈ ಕ್ರಮದಿಂದ ‘ಪಕ್ಷಕ್ಕೆ ಯಾವತ್ತೂ ಅಗ್ರಪಂಕ್ತಿ” ಎಂಬುದನ್ನು ಸಾಬೀತುಪಡಿಸಿತು.ಬಿಜೆಪಿ ನೇತೃತ್ವದ ಒಕ್ಕೂಟವನ್ನು ಸೋಲಿಸಿ ಅಧಿಕಾರಕ್ಕೆ ಬರಲು ಕಾರಣವಾದ ಜನಾದೇಶ ಮತ್ತು ಭರವಸೆಗಳಿಂದ ಸರ್ಕಾರವು ದಾರಿ ತಪ್ಪದೇ ಇರಲಿ ಎಂಬುದು ಇದರ ಹಿಂದಿನ ಸದುದ್ದೇಶವಾಗಿತ್ತು.

ಆದರೆ ಎನ್ಎಸಿಯನ್ನು ‘ಸೂಪರ್ ಕ್ಯಾಬಿನೆಟ್’ ಎಂದು ಕರೆಯಲಾಯಿತು ಮತ್ತು ಅದರ ಅಧ್ಯಕ್ಷರಾಗಿದ್ದ ಸೋನಿಯಾ ಅವರಿಗೆ ‘ಸೂಪರ್ ಪ್ರಧಾನಿ’ ಎಂಬ ಹಣೆಪಟ್ಟಿ ಹಚ್ಚಲಾಯಿತು. ಅದೇ ತರ್ಕವನ್ನು ಇಲ್ಲಿಯೂ ಅನುಸರಿಸುವುದಾದರೆ ನರೇಂದ್ರ ಮೋದಿ ಅವರನ್ನು ಕೇವಲ ‘ಸೂಪರ್’ ಬಿಜೆಪಿ ಅಧ್ಯಕ್ಷರಾಗಿ ಮಾತ್ರವಲ್ಲದೆ ಸರ್ಕಾರ ಮತ್ತು ಪಕ್ಷದ ಎಲ್ಲಾ ಹುದ್ದೆಗಳ ಏಕೈಕ ನಿರ್ವಾಹಕರು ಎಂದು ಕರೆಯಬೇಕಾಗುತ್ತದೆ. ಯಾಕೆಂದರೆ ಭಾರತವು ಇದುವರೆಗೂ ಕಂಡಿರದ ಅತ್ಯಂತ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇದಾಗಿದೆ.

ಇತಿಹಾಸದ ಪುಟಗಳನ್ನು ನೋಡಿದಾಗ ಪ್ರಾಬಲ್ಯ ಹೊಂದಿರುವ ಪ್ರಧಾನಿಗಳ ನಿಯಂತ್ರಣದಲ್ಲಿದ್ದ ನಂತರ ಕಾಂಗ್ರೆಸ್ ಪಕ್ಷದ ರಚನೆಯು ತನ್ನದೇ ಆದ ಅಸ್ತಿತ್ವವನ್ನು ಮರಳಿ ಪಡೆಯಲು ಮತ್ತು ಸಾಂಸ್ಥಿಕ ಜಾಲವನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಸಮಯವನ್ನೇ ತೆಗೆದುಕೊಂಡಿತು ಎಂಬುದು ವೇದ್ಯವಾಗುತ್ತದೆ. ಅದೇ ರೀತಿ ಮೋದಿ ಯುಗಾನಂತರದ ಅವಧಿಯಲ್ಲಿಯೂ ಬಿಜೆಪಿಗೂ ಅಂತಹುದೇ ಪರಿಸ್ಥಿತಿ ಕಾದಿದೆಯೇ ಎಂಬುದನ್ನು ಭವಿಷ್ಯದ ಇತಿಹಾಸಕಾರರು ನಿರ್ಣಯಿಸಲಿದ್ದಾರೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story